ತ್ರೈಮಾಸಿಕದಲ್ಲಿ ಇನ್ಫೋಸಿಸ್ಗೆ ಶೇ. 19.4 ಲಾಭ
ಮೈಸೂರು: ಐಟಿ ದಿಗ್ಗಜ ಖ್ಯಾತಿಯ ಮೈಸೂರಿನ ಇನ್ಫೋಸಿಸ್ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ.0.5 ರಷ್ಟು ಪ್ರಗತಿ ಸಾಧಿಸಿದ್ದು, ಶೇ.19.4 ಲಾಭ ಗಳಿಸಿದೆ.
ಕಳೆದ ವರ್ಷದ ಸೆಪ್ಟೆಂಬರ್- ಡಿಸೆಂಬರ್ ಅವಧಿಯಲ್ಲಿ 13,026 ಕೋಟಿ ಆದಾಯ ಗಳಿಸಿದ್ದು, ಅದರಲ್ಲಿ 2875 ಕೋಟಿ ನಿವ್ವಳ ಲಾಭ ದೊರಕಿದೆ. ಈ ಮೂಲಕ ಒಟ್ಟು ಲಾಭಾಂಶದಲ್ಲಿ ಶೇ.19.4 ರಷ್ಟು ಹೆಚ್ಚಳ ಕಂಡಿದೆ. ಪ್ರತಿ ಷೇರು ದರ 50.32 ಏರಿಕೆಯಾಗಿದ್ದು, ನಗದು ಹೂಡಿಕೆ, ಮಾರಾಟ, ವಿದೇಶಿ ವಹಿವಾಟು, ಮಾರಾಟಕ್ಕೆ ಯೋಗ್ಯ ಆರ್ಥಿಕ ಆಸ್ತಿ, ಸರ್ಕಾರಿ ಬಾಂಡ್ ಸೇರಿದಂತೆ 2440 ಕೋಟಿ ವಹಿವಾಟು ನಡೆಸಿದೆ. ಈ ಹಿಂದಿನ ತ್ರೈಮಾಸಿಕ ಅವಧಿಗಿಂತ 533 ಕೋಟಿಯಷ್ಟು ಹೆಚ್ಚಿದೆ ಎಂದು ಸಿಇಒ ಹಾಗೂ ಎಂಡಿ ಎಸ್.ಡಿ. ಶಿಬುಲಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಡಳಿತದಲ್ಲಿ ಬದಲಾವಣೆ: ಇನ್ನು ಮುಂದೆ ಇನ್ಫೋಸಿಸ್ ಸಂಸ್ಥೆಗೆ ಇಬ್ಬರು ನಿರ್ದೇಶಕರನ್ನು ನೇಮಿಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಅದರಂತೆ ಸಂಸ್ಥೆ ಅಧ್ಯಕ್ಷ ಯು.ಬಿ. ಪ್ರವೀಣ್ ರಾವ್ ಹಾಗೂ ಬಿ.ಜಿ. ಶ್ರೀನಿವಾಸ್ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ. ಮಂಡಲಿ ನಿರ್ದೇಶಕರಾಗಿ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ, ಪ್ರವೀಣ್ರಾವ್, ಬಿ.ಜಿ. ಶ್ರೀನಿವಾಸ್ ಅವರು ಎಂದಿನಂತೆ ಮಂಡಳಿ ನಿರ್ದೇಶಕರಾಗಿ ಅವಧಿ ಪೂರ್ಣಗೊಳಿಸಲಿದ್ದಾರೆ. ಇನ್ನು ಸ್ವತಂತ್ರ ನಿರ್ದೇಶಕರಾಗಿ ನೇಮಕವಾಗಿದ್ದ ಡೇವಿಡ್ ಎಲ್. ಬಾಯ್ಲ್ಸ್ ಜ.17ಕ್ಕೆ ನಿವೃತ್ತಿಯಾಗಲಿದ್ದಾರೆ ಎಂದರು. ಪ್ರಸಕ್ತ ವರ್ಷದಲ್ಲಿ 54 ಗ್ರಾಹಕ ಸಂಸ್ಥೆಗಳು ಸಂಸ್ಥೆಯ ಪಾಲುದಾರು ಆಗಿವೆ. ಸಂಸ್ಥೆಯಲ್ಲಿ ಕಂಡ ಬೆಳವಣಿಗೆಯಿಂದ ಉದ್ಯೋಗಾವಕಾಶಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಾಗಿ ತ್ರೈಮಾಸಿಕ ಅವಧಿಯಲ್ಲಿ 6682 ನೌಕರರನ್ನು ನೇಮಿಸಲಾಗಿದೆ. ಕಳೆದ ವರ್ಷದ ಅಂತ್ಯಕ್ಕೆ ಸಂಸ್ಥೆಯಲ್ಲಿ 1,58,404 ಉದ್ಯೋಗಿಗಳಿದ್ದಾರೆ. ಹಾಗೆಯೇ ನಾನಾ ಕಾಲೇಜುಗಳಲ್ಲಿ ಕ್ಯಾಂಪಸ್ ಸಂದರ್ಶನ ನಡೆಸಿ ಉದ್ಯೋಗಾವಕಾಶ ಒದಗಿಸಲಾಗುವುದು ಎಂದು ವಿವರಿಸಿದರು.
ಪ್ರಶಸ್ತಿ ಹಿರಿಮೆ: ಒರ್ಯಾಲಕಲ್ ಎಕ್ಸ್ಲೆನ್ಸ್ ಅವಾರ್ಡ್, ನ್ಯಾಷನಲ್ ಔಟ್ಸೋರ್ಸಿಂಗ್ ಅಸೋಸಿಯೇಶನ್ನ ಸಂಪರ್ಕ ಕ್ಷೇತ್ರ ಪ್ರಶಸ್ತಿ ಸಹಿತ ಹಲವು ವಿದೇಶಿ ಸಂಸ್ಥೆಗಳು ತಮ್ಮ ಸೇವೆ ಗುರುತಿಸಿವೆ. ಪ್ರಪಂಚದ ಪ್ರತಿಷ್ಠಿತ ಮೇಕ್ ಅವಾರ್ಡ್ ಒಂಬತ್ತು ಬಾರಿ ಹಾಗೂ ಏಸಿಯನ್ ಮೇಕ್ ಪ್ರಶಸ್ತಿಯನ್ನು 12 ಬಾರಿ ಪಡೆದಿದ್ದೇವೆ ಎಂದರು.
ಬಿಟ್ಟು ಹೋದವರ ಬಗ್ಗೆ ಹೆಮ್ಮೆ ಇದೆ: ನಾರಾಯಣಮೂರ್ತಿ
ಇಡೀ ವಿಶ್ವದಲ್ಲೇ ನಾಯಕತ್ವಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟ ಸಂಸ್ಥೆ ನಮ್ಮದಾಗಿದ್ದು, ಇನ್ಫೋಸಿಸ್ನಲ್ಲಿ ಕೆಲಸ ಮಾಡಿ ಬಿಟ್ಟು ಹೋದವರ ಬಗೆಗೆ ನನಗೆ ಹೆಮ್ಮೆ ಇದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ಎನ್.ಆರ್. ನಾರಾಯಣಮೂರ್ತಿ ಸ್ಮರಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವರು ಬಿಟ್ಟು ಹೋಗಿದ್ದಕ್ಕೆ ನನಗೆ ಬೇಸರವಿದೆ. ಆದರೆ, ಅವರ ಶ್ರಮವನ್ನು ನಾನು ಸ್ಮರಿಸುತ್ತೇನೆ. ಸಂಸ್ಥೆಯ ಬೆಳವಣಿಗೆಗೆ ಅವರದೇ ಆದ ಸೇವೆ ನೀಡಿದ್ದಾರೆ. ಸಂಸ್ಥೆಯನ್ನು ಮತ್ತಷ್ಟು ಬೆಳೆಸುವ ಸಲುವಾಗಿ ವಾಪಸ್ ಬಂದಿದ್ದೇನೆ. ನಾನು ಎಂದಿಗೂ ನಿವೃತ್ತಿಯಾಗುವುದಿಲ್ಲ. ಮಾಹಿತಿ ಕ್ಷೇತ್ರದಲ್ಲಿ ನಾವು ಸಾಧಿಸಬೇಕಾದದ್ದು ಸಾಕಷ್ಟಿದೆ. ಇದಕ್ಕಾಗಿ ಸಮೂಹ ಶ್ರಮದ ಅಗತ್ಯವಿದೆ. ಜತೆಗೆ ಶಿಕ್ಷಣ ತಜ್ಞರು, ವೃತ್ತಿಪರರ ಬೆಂಬಲ ಬೇಕಾಗಿದೆ ಎಂದರು. ಒಂದು ಸಂಸ್ಥೆ ಎಂದಾಗ ಮನಸ್ತಾಪಕ್ಕೆ ಎಡೆ ಇದ್ದೇ ಇರುತ್ತದೆ. ಕೆಲವರು ತಮ್ಮ ಆಸೆ, ಆಶಯ, ಆಕಾಂಕ್ಷೆಗೆ ಸಂಸ್ಥೆ ಸ್ಪಂದಿಸದಿದ್ದರೆ ಬಿಟ್ಟು ಹೋಗುವುದು ಸಹಜ. ನಮ್ಮ ಸಂಸ್ಥೆ ಇಂತಹ ಬೆಳವಣಿಗೆಗೆ ಹೊರತಾಗಿದ್ದು, ಎಲ್ಲರನ್ನು ಒತ್ತೊಟ್ಟಿಗೆ ಕರೆದುಕೊಂಡು ಹೋಗುವ ಗುಣ ಬೆಳೆಸಿಕೊಂಡಿದೆ. ಎಲ್ಲರೂ ಏಕಮನಸ್ಸಿನಿಂದ ಮುಂದುವರಿಯಲು ನಮ್ಮಲ್ಲಿ ಅವಕಾಶ ಕಲ್ಪಿಸಲಾಗಿದೆ.ಈಗ ಇಬ್ಬರು ನಿರ್ದೇಶಕರನ್ನು ನೇಮಿಸಲಾಗಿದೆ. ಇದರಿಂದ ಸಂಸ್ಥೆಯ ಕಾರ್ಯಕ್ಷಮತೆ ಹೆಚ್ಚಲಿದೆ. ಜನರಿಗೆ ಬೇಕಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುವುದೇ ನಮ್ಮ ಏಕೈಕ ಉದ್ದೇಶವಾಗಿದೆ. ಉದ್ಯೋಗ ಆಧಾರಿತ ಸಾಧನೆಯಿಂದ ಸಂಸ್ಥೆಯ ಸಾಧನೆಯನ್ನು ಅಳೆಯಬಾರದು. ಹಾಗೆಯೇ ನಮ್ಮದು ಉದ್ಯೋಗ ನೀಡುವ ಸಂಸ್ಥೆಯಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

