ಮೈಸೂರು

ಡಾ.ಬಿ.ಜೆ. ವಿಜಯಕುಮಾರ್ ಕೃತಿ 14ರಂದು ಬಿಡುಗಡೆ

Published On :

ಮೈಸೂರು: ಮೈಸೂರು ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಬಿ.ಜೆ ವಿಜಯಕುಮಾರ್ ಅವರ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಯೂತ್ಸ್ ಆಫ್ ಮೈಸೂರ್ ಎಂಬ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಜ.14 ರಂದು ನಡೆಯಲಿದೆ. ಅಂದು ಸಂಜೆ 4.30ಕ್ಕೆ ಗಾಂಧಿಚೌಕದ ಮುಂಭಾಗ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃತಿ ಲೋಕಾರ್ಪಣೆಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅಧ್ಯಕ್ಷತೆ ವಹಿಸುವರು ಎಂದು ಡಾ.ಬಿ.ಜೆ ವಿಜಯಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದೇಶದ ರಾಜಕೀಯ ದಿಕ್ಕು ಬದಲಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಆ ರಂಗದ ವ್ಯವಸ್ಥೆಯನ್ನು ಜನರಿಗೆ ತಲುಪಿಸುವ ಸಲುವಾಗಿ ಈ ಕೃತಿ ರಚಿಸಲಾಗಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಸನ್ಮಾನಿಸಲಾಗುವುದು ಎಂದರು.

18, 19 ರಂದು ಸಾಹಿತ್ಯ ಸಂಭ್ರಮ, ಜನಪದೋತ್ಸವ
ಮೈಸೂರು: ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ನೆನಪಿಗಾಗಿ ಸಾಹಿತ್ಯ ಸಂಭ್ರಮ ಹಾಗೂ ಜನಪದೋತ್ಸವವನ್ನು ಜ.18 ಮತ್ತು 19 ರಂದು ಏರ್ಪಡಿಸಿದೆ. ಮೇಯರ್ ಎನ್.ಎಂ. ರಾಜೇಶ್ವರಿ ಉದ್ಘಾಟಿಸುವರು ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಎಚ್,ಎಸ್. ಯಮುನಾ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ನಿರ್ಮಲಾ ಮಠಪತಿ, ಸ್ಟ್ಯಾನ್ಲಿ ಆಲ್‌ಮೆಡ್, ಸುಧಾ ಫಣೀಶ್, ಡಾ. ಲಕ್ಷ್ಮೀದೇವಿ, ಡಾ.ಕೆ.ಅನುಸೂಯ ಗೋಪಾಲ್, ಭಾನುಮೋಹನ್, ಸುಜಾತಾ ದುರ್ಗೇಶ್ ಹಾಗೂ ಡಾ.ಅನುಸೂಯ ಕೆಂಪನಹಳ್ಳಿ ಅವರಿಗೆ ಭೂಮಿಕಾ ಸೇವಾಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. 19 ರಂದು ಸಂಜೆ 5ಕ್ಕೆ ಹೊಸಮಠದ ಅಧ್ಯಕ್ಷ ಚಿದಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಟ್ಯಾಂಕ್ ಬಂಡ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ
ಮೈಸೂರು: ನಗರದ ದಸರಾ ವಸ್ತುಪ್ರದರ್ಶನದ ಮುಂಭಾಗ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಸೇತುವೆ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಅಲ್ಲಿಯವರೆಗೆ ಟ್ಯಾಂಕ್ ಬಂಡ್ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದ್ದಾರೆ. ವಾಹನ ಸವಾರರು ಈ ಕೆಳಕಂಡಂತೆ ಸಂಚರಿಸಲು ತಿಳಿಸಿದೆ. ಬಿ.ಎನ್. ರಸ್ತೆಯಿಂದ ಇಟ್ಟಿಗೆಗೂಡಿಗೆ ಹೋಗಲು ಹಾರ್ಡಿಂಜ್ ವೃತ್ತ- ಬಲ ತಿರುವು- ಮಿರ್ಜಾ ರಸ್ತೆ- ಮಿರ್ಜಾ ವೃತ್ತ- ಬಲತಿರುವು- ಶಾಲಿವಾಹನ ರಸ್ತೆ ಮುಖಾಂತರ ಸಂಚರಿಸಬೇಕು. ಜ್ವಾಲಾಮುಖಿ ವೃತ್ತದಿಂದ ಮಾನಸರ ರಸ್ತೆಯಲ್ಲಿ ನೇರವಾಗಿ ಲೋಕರಂಜನ್ ರಸ್ತೆ ಎಡ ತಿರುವು- ಹಾರ್ಡಿಂಜ್ ವೃತ್ತದ  ಮುಖಾಂತರ ಬಿ.ಎನ್. ರಸ್ತೆಗೆ ಸಾಗಬೇಕು.

ಪ್ಯಾಕೇಜಿಂಗ್ ಎಕ್ಸ್‌ಪೋಗೆ ಡಾ.ಬಾತ್ರಾ ಚಾಲನೆ
ಮೈಸೂರು: ಸೇವನಾ ಕಂಪನಿ ಆಯೋಜಿಸಿರುವ ಮೂರು ದಿನಗಳ ಪ್ಯಾಕೇಜಿಂಗ್ ಎಕ್ಸ್ ಪೋ ಶನಿವಾರ ರಾಮಾನುಜರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ಆರಂಭವಾಯಿತು. ಈ ವಸ್ತು ಪ್ರದರ್ಶನವನ್ನು ರಕ್ಷಣಾ ಆಹಾರ ಸಂಶೋಧನಾಲಯದ ನಿರ್ದೇಶಕ ಡಾ.ಎಚ್.ವಿ. ಬಾತ್ರಾ ಉದ್ಘಾಟಿಸಿ ಶುಭ ಕೋರಿದರು. ಕಂಪನಿಯ ಅಧಿಕಾರಿಗಳಾದ ರಾಜೀವ್ ನಾಯರ್, ಶೋಬಿ ಮಾಥ್ಯೂ, ಜ್ಯೋತಿರಾಜ್, ಬಿನೀಶ್, ಬಿ. ಚೌದರಿ ಹಾಗೂ ರಾದೇಶ್ ಇದ್ದರು. ಪ್ರದರ್ಶನದಲ್ಲಿ ಎಲ್ಲ ರೀತಿಯ ಪ್ಯಾಕೇಜ್ ಯಂತ್ರಗಳನ್ನು ಸಾದರಪಡಿಸಲಾಗಿದ್ದು, ಇದರ ಕಾರ್ಯ ವಿಧಾನ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. 1,500 ನಿಂದ 5 ಲಕ್ಷದವರೆಗಿನ ಸಾಧನಗಳು ಇಲ್ಲಿ ಮಾರಾಟಕ್ಕಿಡಲಾಗಿದೆ.

ಪಡಿತರದಾರರಿಗೆ ಸೀಮೆಎಣ್ಣೆ ಬಿಡುಗಡೆ
ಮೈಸೂರು: ಜಿಲ್ಲೆಯ ಅನಿಲರಹಿತ ಪಡಿತರ ಚೀಟಿದಾರರಿಗೆ 2013ರ ಡಿಸೆಂಬರ್ ಮಾಹೆಗೆ ಈ ಕೆಳಕಂಡ ಪ್ರಮಾಣದಲ್ಲಿ ಸೀಮೆಎಣ್ಣೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಹೇಳಿದ್ದಾರೆ. ಎಲ್ಲ ಪ್ರದೇಶದ ಎಎವೈ, ಬಿಪಿಎಲ್ ಏಕ ಸದಸ್ಯ ಮತ್ತು ದ್ವಿ ಸದಸ್ಯ ಅನಿಲ ರಹಿತ ಪಡಿತರ ಚೀಟಿಗಳಿಗೆ 3 ಲೀಟರ್ ಮತ್ತು 3 ಮತ್ತು ಹೆಚ್ಚಿನ ಸದಸ್ಯರಿರುವ ಅನಿಲರಹಿತ ಪಡಿತರ ಚೀಟಿದಾರರಿಗೆ 5 ಲೀಟರ್ ಸೀಮೆಎಣ್ಣೆಯನ್ನು ಜಿಲ್ಲೆಯಲ್ಲಿ ಏಕರೂಪ ದರ ಪ್ರತಿ ಲೀ.ಗೆ 17.50ರಲ್ಲಿ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಸೀಮೆಎಣ್ಣೆ ವಿತರಣೆಗೆ ಸಂಬಂಧಿಸಿದಂತೆ ಯಾವುದೆ ದೂರುಗಳಿದ್ದಲ್ಲಿ ಕಾರ್ಡುದಾರರು ಸಂಬಂಧಿಸಿದ ಗ್ರಾಪಂ, ತಾಲೂಕು ಮಟ್ಟದ ಅಧಿಕಾರಿಗಳು ಅಥವಾ ತಹಸೀಲ್ದಾರ್ ಅವರನ್ನು ಸಂಪರ್ಕಿಸಬಹುದು. ಅಥವಾ ಡಾ.ಕೆ. ರಾಮೇಶ್ವರಪ್ಪ, ಹಿರಿಯ ಉಪನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಮೈಸೂರು, ಇವರನ್ನು ದೂ.2422107, ಶುಲ್ಕ ರಹಿತ ಸಹಾಯವಾಣಿ 1800-425-9339ಗೆ ದೂರು ಸಲ್ಲಿಸಬಹುದು.

ಜೆಎಸ್‌ಎಸ್ ಕಾಲೇಜಲ್ಲಿ ಸಿಎಂಇ ಕಾರ್ಯಕ್ರಮ
ಮೈಸೂರು: ಬನ್ನಿಮಂಟಪದಲ್ಲಿರುವ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರಿಗೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೂರು ದಿನಗಳ ರಾಜ್ಯಮಟ್ಟದ ಸಿಎಂಇ (ಮುಂದುವರಿದ ವೈದ್ಯಕೀಯ ಶಿಕ್ಷಣ) ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಜೆಎಸ್‌ಎಸ್ ವಿವಿಯ ಕುಲಸಚಿವ ಡಾ.ಬಿ. ಮಂಜುನಾಥ್ ಮಾತನಾಡಿ, ವೈದ್ಯಕೀಯ ವೃತ್ತಿಯಲ್ಲಿರುವವರು ಆಗಾಗ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಸ್ಕರಣೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಎಂಸಿಐನ ಪ್ರಚಲಿತ ನಿರ್ದೇಶನದಂತೆ ಐದು ವರ್ಷದಲ್ಲಿ 30 ಸಿಎಂಇ ಕಾರ್ಯಕ್ರಮ ನಡೆಸಬೇಕಾಗುತ್ತದೆ ಎಂದರು. ಎಂಪಿಎಂಆರ್‌ಟಿ ಮುಖ್ಯಸ್ಥ ಡಾ.ಸಿ.ಡಿ. ಶ್ರೀನಿವಾಸಮೂರ್ತಿ, ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಡಾ.ಎಚ್. ಹನುಮಂತಪ್ಪ, ಡಾ.ಎಚ್. ಬಸವನಗೌಡಪ್ಪ, ಡಾ.ಗುರುಸ್ವಾಮಿ ಇದ್ದರು.

ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಾಧ್ಯಕ್ಷ ಜಿ.ಎಸ್.ಭಟ್ಟ
ಮೈಸೂರು: ಒಂಬತ್ತನೇ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನವನ್ನು ಫೆ.14, 15 ಹಾಗೂ 16 ರಂದು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದೆ. ಸಮ್ಮೇಳನದ ಅಧ್ಯಕ್ಷರಾಗಿ ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಕ್ಷ ಸಂಸ್ಥೆಯ ಕನ್ನಡ ವಿಶ್ವಕೋಶ ಸಂಪಾದಕರಾಗಿದ್ದ ಸಾಹಿತಿ ಜಿ.ಎಸ್. ಭಟ್ಟ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಂ. ಪಂಜಾಜೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ರಂಗದಲ್ಲಿ ಸಾಧನೆ ಮಾಡಿರುವ ಡಾ.ಭಾಸ್ಕರಾನಂದ ಕುಮಾರ್, ಬೇಗೂರ್ ಶಿವಕುಮಾರ್, ಹನುಮಂತಪ್ಪ ಸಿರಿಮಂತಪ್ಪ ದಂಡಿಗದಾಸರ, ಬಸವಣ್ಣಿ ಕುಂಬಾರ, ರೇವಣ್ಣ ಸಿದ್ದಯ್ಯ ಬಸವಯ್ಯ ಪುರಾಣಿಕಮಠ, ವೀರಭದ್ರಪ್ಪ, ಸತ್ಯನಂದರಾವ್ ಪೇಜಾವರ ಹಾಗೂ ಡಿ. ನಾಗರಾಜ್ ಅವರನ್ನು ಸನ್ಮಾನಿಸಲಾಗುವುದು ಎಂದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ವಿ.ಶ್ರೀನಿವಾಸ ಪ್ರಸಾದ್,  ಉಮಾಶ್ರೀ, ವಿ. ರಮಾನಾಥ್ ರೈ  ಭಾಗವಹಿಸುವರು ಎಂದರು.

ಕನಕದಾಸ ಹಿತರಕ್ಷಣಾ ಸಮಿತಿಯಿಂದ ಕನಕ ಜಯಂತಿ
ಮೈಸೂರು: ಕನಕದಾಸ ಹಿತರಕ್ಷಣಾ ಸಮಿತಿಯಿಂದ ಹೆಬ್ಬಾಳಿನಲ್ಲಿರುವ ಸಿಐಟಿಬಿ ಕಲ್ಯಾಣ ಮಂಪಟದಲ್ಲಿ ಕನಕ ಜಯಂತಿ ಮಹೋತ್ಸವ ಏರ್ಪಡಿಸಲಾಯಿತು. ಇದೇ ವೇಳೆ ಡಿಸಿಪಿ ಕೆ.ಎನ್. ರಾಜಣ್ಣ, ಉಪ ಅರಣ್ಯಾಧಿಕಾರಿ ಬಿ. ಹುಚ್ಚಪ್ಪ ಅವರನ್ನು ಸನ್ಮಾನಿಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ಕಾರ್ಯಕ್ರಮ ಉದ್ಘಾಟಿಸುವರು. ಪ್ರಾಧ್ಯಾಪಕ ಎಂ.ಶಿವಣ್ಣ, ಸಹಾಯಕ ಪ್ರಾಧ್ಯಾಪಕ ಡಾ.ಡಿ.ರವಿ, ಚೆಲುವೇಗೌಡ, ಮಾಜಿ ಉಪಮೇಯರ್ ಮಹದೇವಪ್ಪ, ಪಾಲಿಕೆ ಮಾಜಿ ಸದಸ್ಯ ಎಂ.ಶಿವಣ್ಣ, ಶಿವಮಾಧು, ರಮೇಶ್, ಸಂಘದ ಅಧ್ಯಕ್ಷ ಜಿ.ಬಿ. ಮಹದೇವು, ಆರ್. ಕುಮಾರ್ ಇದ್ದರು.

ಶೈಕ್ಷಣಿಕ ಶುಲ್ಕ ಮರು ಪಾವತಿಸಲು ಅರ್ಜಿ ಆಹ್ವಾನ
ಮೈಸೂರು: 2013-14ನೇ ಸಾಲಿನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳ ವಿದ್ಯಾಭ್ಯಾಸದ ಶೈಕ್ಷಣಿಕ ಶುಲ್ಕವನ್ನು ಮರು ಪಾವತಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ವಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಪ್ರಥಮ ಪಿಯುಸಿಯಿಂದ ವೃತ್ತಿಪರ ಕೋರ್ಸ್‌ಗಳನ್ನು ಒಳಗೊಂಡಂತೆ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕೇಂದ್ರ, ರಾಜ್ಯ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಅರ್ಹ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕವನ್ನು ಮರು ಪಾವತಿಸಲಾಗುವುದು. ಉತ್ತಮ ಸಾಧನೆ ಮಾಡಿದ ಅರ್ಹ ಕ್ರೀಡಾಪಟುಗಳು ನಿಗದಿತ ನಮೂನೆಯ ಅರ್ಜಿಗಳನ್ನು ಪಡೆದು ಜ.25ರೊಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‌ಬಾದ್, ಮೈಸೂರು ಇಲ್ಲಿಗೆ ಸಲ್ಲಿಸುವುದು. ದೂ.2564179 ಸಂಪರ್ಕಿಸಬಹುದು.

ಮಂಗಳೂರು ಮೂಲದದಂಪತಿ ಆತ್ಮಹತ್ಯೆಗೆ ಯತ್ನ
ಮೈಸೂರು: ಸಾಲಬಾಧೆ ಹಿನ್ನೆಲೆಯಲ್ಲಿ ಮಂಗಳೂರಿನ ದಂಪತಿ ಮೈಸೂರಿನ ಲಾಡ್ಜ್‌ವೊಂದರಲ್ಲಿ ಇಂಜೆಕ್ಷನ್ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ. ಮಂಗಳೂರಿನ ತಳಪಾಡಿ ನಿವಾಸಿ ವಿಜೇಶ್ (35) ಮತ್ತು ನಿತ್ಯಾ ವಿಜೇಶ್ (30) ಎಂಬವರೆ ಆತ್ಮಹತ್ಯೆಗೆ ಯತ್ನಿಸಿದವರು. ಇವರು ಶುಕ್ರವಾರ ಬೆಳಗ್ಗೆ ಮೈಸೂರು- ಬೆಂಗಳೂರು ರಸ್ತೆಯಲ್ಲಿರುವ ರಾಯಲ್ ಹೆರಿಟೇಜ್ ಲಾಡ್ಜ್‌ನ ಕೊಠಡಿ ಬಾಡಿಗೆಗೆ ಪಡೆದಿದ್ದರು. ಕೊಠಡಿ ಸಂಖ್ಯೆ 104 ರಲ್ಲಿದ್ದ ಈ ದಂಪತಿ ರಾತ್ರಿ ಇನ್ಸುಲಿನ್ ತೆಗೆದುಕೊಂಡು, ತಮ್ಮ ಸಹೋದರ ವಿನೋದ್ ಎಂಬವರ ಮೊಬೈಲ್‌ಗೆ ಕರೆ ಮಾಡಿ ಹೇಳಿದ್ದಾರೆ. ವಿನೋದ್ ನೀಡಿದ್ದ ಮಾಹಿತಿ ಮೇರೆಗೆ ಲಷ್ಕರ್ ಠಾಣೆ ಪೊಲೀಸರು ಲಾಡ್ಜ್‌ಗೆ ಧಾವಿಸಿ, ಅಸ್ವಸ್ಥಗೊಂಡಿದ್ದ ದಂಪತಿಯನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವೇಕಾನಂದ ಜನ್ಮದಿನ ಸಂದೇಶಕ್ಕಾಗಿ  ಸಾಮೂಹಿಕ ಓಟ
ಮೈಸೂರು: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ವಿವಿ ವಿದ್ಯಾರ್ಥಿ ಕ್ಷೇಮ ಪಾಲನಾ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ, ನೆಹರು ಯುವ ಕೇಂದ್ರ, ಅರಣ್ಯ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ಜ.12ರ ಬೆಳಗ್ಗೆ 6.30ಕ್ಕೆ ರಾಷ್ಟ್ರೀಯ ಯುವದಿನ ಸ್ವಾಮಿ ವಿವೇಕಾನಂದರ ಜನ್ಮದಿನ ಮಕರ ಸಂಕ್ರಾಂತಿ ಹಾಗೂ ಈದ್ ಮಿಲಾದ್ ಸಾರುವ ಸಾಮೂಹಿಕ ಓಟವನ್ನು ಏರ್ಪಡಿಸಿದೆ. ಈ ಸಾಮೂಹಿಕ ಓಟದಲ್ಲಿ ಯುವಕ, ಯುವತಿಯರು ಭಾಗವಹಿಸಲು ಮುಕ್ತ ಅವಕಾಶವಿರುತ್ತದೆ. ಸಾಮೂಹಿಕ ಓಟವು ಬೆಳಗ್ಗೆ 6.30ಕ್ಕೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟು ಸ್ಟ್ಯಾಚು ವೃತ್ತ, ಕೆ.ಆರ್. ವೃತ್ತ, ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಹತ್ತಿರದ ಮೈಸೂರು ವಿವಿ ಓವಲ್ ಮೈದಾನದಲ್ಲಿ ಮುಕ್ತಾಯವಾಗಲಿದೆ.

ನೀರಿನ ಕಂದಾಯ ಬಾಕಿ ಪಾವತಿಗೆ ಸೂಚನೆ
ಮೈಸೂರು: ನೀರಿನ ಕಂದಾಯ ಬಾಕಿದಾರರು 7 ದಿನಗಳೊಳಗಾಗಿ ಬಾಕಿ ಹಣ ಪಾವತಿಸದಿದ್ದಲ್ಲಿ, ಯಾವುದೇ ಮುನ್ಸೂಚನೆ ನೀಡದೆ, ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಹಾಗೂ ಬಾಕಿ ವಸೂಲಾತಿಗಾಗಿ ಕಾನೂನಿನ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ನಗರಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಹೇಳಿದ್ದಾರೆ. ನಗರ ನೀರು ಸರಬರಾಜು ನಿರ್ವಹಣೆ ವ್ಯವಸ್ಥೆಯಡಿ ನೀರಿನ ಕಂದಾಯವನ್ನು ಗ್ರಾಹಕರು ಕಾಲಕಾಲಕ್ಕೆ ಪಾವತಿಸದೇ ಇರುವುದರಿಂದ ಪಾಲಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಬಾಕಿ ಉಳಿದಿರುತ್ತದೆ. ಈ ಕುರಿತು ಹಿಂದೆಯೇ ಸಾರ್ವಜನಿಕ ಪ್ರಕಟಣೆ ನೀಡಿ ಕೂಡಲೇ ಬಾಕಿ ಹಣ ಪಾವತಿಸಿ ಪಾಲಿಕೆಯೊಂದಿಗೆ ಸಹಕರಿಸಲು ಕೋರಲಾಗಿತ್ತು. ಆದರೆ ಇಲ್ಲಿಯವರೆಗೆ ಬಾಕಿದಾರರಿಂದ ಬಾಕಿ ಪಾವತಿಸುವ ಬಗ್ಗೆ ಉತ್ತಮ ಪ್ರತಿಕ್ರಿಯೆ ಬಂದಿರುವುದಿಲ್ಲ. ಇದರಿಂದಾಗಿ ನೀರು ಸರಬರಾಜು ನಿರ್ವಹಣೆ ಸಂಬಂಧಿತ ವೆಚ್ಚಗಳನ್ನು ಭರಿಸಲು ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಪಾಲಿಕೆಗೆ ದುಸ್ತರವಾಗಿದೆ ಎಂದು ಅವರು ಹೇಳಿದ್ದಾರೆ.

ಸಿಎಫ್‌ಟಿಆರ್‌ಐ ನಿರ್ದೇಶಕರ ವಿರುದ್ಧ ಇಂದು ಪ್ರತಿಭಟನೆ
ಮೈಸೂರು: ನಗರದ ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ರಾಮ ರಾಜಶೇಖರನ್ ಅವರ ಕನ್ನಡ ವಿರೋಧಿ ನೀತಿ ಖಂಡಿಸಿ ಮೈಸೂರು ಕನ್ನಡ ವೇದಿಕೆಯವರು ಜ.12ರ ಬೆಳಗ್ಗೆ 11ಕ್ಕೆ ನ್ಯಾಯಾಲಯದ ಎದುರಿನ ಗಾಂಧಿ ಪತ್ಥಳಿ ಬಳಿ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಸಿಎಫ್‌ಟಿಆರ್‌ಐ ನಿರ್ದೇಶಕರನ್ನು ಅಮಾನತುಗೊಳಿಸಬೇಕು ಹಾಗೂ ಬಂಧಿತ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಲು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ ತಿಳಿಸಿದ್ದಾರೆ. ಸಿಎಫ್‌ಟಿಆರ್‌ಐ ನಿರ್ದೇಶಕ ಡಾ. ರಾಮ ರಾಜಶೇಖರ್ ಅವರ ಮೇಲೆ ಮಸಿ ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರೆಸಲಾಗಿದ್ದು, ಶೀಘ್ರದಲ್ಲೆ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.

ಕನಸುಗಳು ಮಕ್ಕಳ
ಯಶಸ್ಸಿಗೆ ಭದ್ರಬುನಾದಿ
ಮೈಸೂರು: ಕನಸುಗಳು ಮಕ್ಕಳ ಯಶಸ್ಸಿನ ಹಾದಿಗೆ ಭದ್ರ ಬುನಾದಿ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ ಸಲೀಂ ಹೇಳಿದರು. ಜ್ಞಾನಸರೋವರ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ಕಲಾ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ನೈತಿಕ ಮೌಲ್ಯ, ಉತ್ಸಾಹ, ಆತ್ಮಸ್ಥೈರ್ಯ, ಉತ್ತಮ ಗುಣಗಳನ್ನು ಮಕ್ಕಳಿಗೆ ಕಲಿಸಿಕೊಡುತ್ತಿರುವ ಶಿಕ್ಷಕರ ಸೇವೆಯನ್ನು ಶ್ಲಾಘಿಸಿದರು. ಕೈಗಾರಿಕೋದ್ಯಮಿ ಚಿದಾನಂದ್ ರಾಜಮನಿ ಮಾತನಾಡಿ, ಹಿಂದಿನ ಮತ್ತು ಇಂದಿನ ಶಿಕ್ಷಣದಲ್ಲಿರುವ ವ್ಯತ್ಯಾಸಗಳನ್ನು ಹಾಗೂ ಹಿಂದಿನ ಶಿಕ್ಷಣದ ಸೌಕರ್ಯಗಳ ಬಗ್ಗೆ ತಿಳಿಸಿಕೊಟ್ಟರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಸುಖಲತಾ ಶೆಟ್ಟಿ, ಪವನ್ ಕುಮಾರ್ ಶೆಟ್ಟಿ, ಪ್ರಾಚಾರ್ಯ ಸ್ಟ್ಯಾನ್ಲಿ ಆಂಟೋನಿ ಇದ್ದರು.

ವಾಯುದಳದ ವೈ ಗುಂಪಿನ ವಿವಿಧ ಹುದ್ದೆಗಳ ನೇಮಕಾತಿ
ಮೈಸೂರು: ಭಾರತೀಯ ವಾಯುದಳದಲ್ಲಿ ಪಿಯುಸಿ ವಿದ್ಯಾರ್ಹತೆಗೆ ಅನುಗುಣವಾಗಿ ವೈ ಗುಂಪಿನ ವಿವಿಧ ಹುದ್ದೆಗಳಿಗೆ ಅರ್ಹ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್, ಮೆಡಿಕಲ್ ಅಸಿಸ್ಟೆಂಟ್, ಲಾಜಿಸ್ಟಿಕ್ ಅಸಿಸ್ಟೆಂಟ್, ಮೆಟಿರಿಯೋಲಾಜಿಕಲ್ ಅಸಿಸ್ಟೆಂಟ್, ಪರಿಸರ ಸೇವಾ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪಿಯುಸಿ ಪರೀಕ್ಷೆಯಲ್ಲಿ ಶೇ.50 ಹಾಗೂ ಆಂಗ್ಲ ಭಾಷೆಯಲ್ಲಿ ಶೇ.50 ರಷ್ಟು ಅಂಕ ಗಳಿಸಿರುವ 21 ವರ್ಷದೊಳಗಿನ ಅಭ್ಯರ್ಥಿಗಳು ಸೂಕ್ತ ದಾಖಲೆಯೊಂದಿಗೆ ಜ. 27 ರೊಳಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ದೂ.0821- 2516844, ಮೊ. 94496 86641 ಅಥವಾ ವೆಬ್‌ಸೈಟ್ ಢಿಢಿಢಿ.್ಝಟಿಜ್ಝಛಟಿಛ್ಝ್ಠಜ್ಟ್ಠ್ಛಿಜ.ಟ್ಝ್ಛಿ.್ಝಟಿ ಸಂಪರ್ಕಿಸಬಹುದು.

ಪರಿಸರ ಉಳಿಸುವಲ್ಲಿ
ವಿದ್ಯಾರ್ಥಿಗಳ ಪಾತ್ರ ಮಹತ್ವ
ಮೈಸೂರು: ಅರಣ್ಯವನ್ನು ಅತಿಕ್ರಮವಾಗಿ ಒತ್ತುವರಿ ಮಾಡಿಕೊಂಡ ಪರಿಣಾಮ ಇಂದು ಮಾನವ- ವನ್ಯಜೀವಿ ಸಂಘರ್ಷ ಏರ್ಪಟ್ಟಿದೆ. ಹೀಗಾಗಿ ವಿದ್ಯಾರ್ಥಿಗಳು ಪರಿಸರ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ಉರಗರ್ತಸ್ನೇಕ್ ಶ್ಯಾಮ್ ಕರೆ ನೀಡಿದರು. ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನೇಚರ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವನ್ಯಜೀವಿಗಳು ಪರಿಸರ ಸಮಾತೋಲನವಾಗಿರಲು ಕಾರಣವಾಗಿವೆ. ಅವುಗಳಿಗೂ ಬದುಕಲು ನಾವು ಅನುವು ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು. ಕಾಲೇಜಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರೊ.ಬಿ.ವಿ. ಸಾಂಬಶಿವಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ.ಎಂ.ಬಿ. ಮಲ್ಲಿಕಾರ್ಜುನ ಪಂಡಿತ್ ಸ್ವಾಗತಿಸಿದರು. ಅಭಿಜಿತ್ ಎಂ. ಸಿಂಗ್, ಡಾ. ಅನುಪಮಾ ರಮೇಶ್, ಪ್ರೊ. ಮಹದೇವಪ್ಪ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.