ನಕಲಿ ಕೀ ಬಳಸಿ ಕಳವು: ಚಾಲಾಕಿ ಚಾಲಕ ಸೆರೆ
ಮೈಸೂರು: ನಕಲಿ ಕೀ ಬಳಸಿ ಎರಡು ಮನೆಗಳಲ್ಲಿ ಕಳವು ಮಾಡಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, 7.50 ಲಕ್ಷ ಮೌಲ್ಯದ 250 ಗ್ರಾಂ. ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಎಚ್.ಡಿ. ಕೋಟೆ ತಾಲೂಕು ಬಿ.ಬಿ. ಸರಗೂರು ನಿವಾಸಿ ಶಿವಣ್ಣ ಎಂಬವರ ಪುತ್ರ ಎಸ್. ಗೋಪಿ (24) ಬಂಧಿತ ಆರೋಪಿ. ಈತನನ್ನು ನಗರದ ಬಸ್ ನಿಲ್ದಾಣದ ಬಳಿ ಗುರುವಾರ ಬಂಧಿಸಿದ್ದಾರೆ. ಈತ ನೀಡಿದ ಮಾಹಿತಿ ಮೇರೆಗೆ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತನಿಂದ ಎರಡು ಕಳವು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿ ಗೋಪಿ ವೃತ್ತಿಯಲ್ಲಿ ಚಾಲಕ. ಕೆ.ಆರ್. ಮೊಹಲ್ಲಾ ಸುಣ್ಣದಕೇರಿ (ಸಿದ್ದಪ್ಪಚೌಕದ ಬಳಿ) ಅಪಾರ್ಟ್ಮೆಂಟ್ನಲ್ಲಿ ವಾಸವಾಗಿರುವ ದೇವಕಿ ಹಾಗೂ ಶೋಭಾ ಎಂಬವರನ್ನು ಪರಿಚಯ ಮಾಡಿಕೊಂಡಿದ್ದ.
ದೇವಕಿ ಅವರು ಮೊಬೈಲ್ ಅಂಗಡಿ ನಡೆಸುತ್ತಿದ್ದು, ಮೊಬೈಲ್ ರೀಚಾರ್ಜ್ ಮಾಡಿಸಲು ಗೋಪಿ ಆಗಾಗ ಬರುತ್ತಿದ್ದ. ದೇವಕಿ ಮೂಲಕ ಅವರ ಸ್ನೇಹಿತೆಯಾದ ಶೋಭಾ ಅವರನ್ನು ಸಹ ಗೋಪಿ ಪರಚಯ ಮಾಡಿಕೊಂಡಿದ್ದ. ಈ ಪರಿಚಯದಿಂದ ಶೋಭಾ ಅವರು ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಗೋಪಿಯನ್ನು ಮನೆಗೆ ಕರೆದು ಊಟ ಹಾಕಿದ್ದರು. ದೇವಕಿ ಮತ್ತು ಶೋಭಾ ಮನೆಗೆ ಆಗಾಗ ಬರುತ್ತಿದ್ದ ಗೋಪಿ, ಇಬ್ಬರ ಮನೆಯಲ್ಲಿದ್ದ ಕೀಗಳನ್ನು ಕಳವು ಮಾಡಿದ್ದ. ಕೀ ಎಲ್ಲೋ ಬಿದ್ದಿರಬೇಕು ಎಂದು ಮನೆ ಮಾಲೀಕರು ಬದಲಿ ಕೀ ಬಳಸುತ್ತಿದ್ದರು ಎಂದು ಡಿಸಿಪಿ ಎಂ.ಎಂ. ಮಹದೇವಯ್ಯ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂಗಡಿಯಿಂದ ಮನೆಗೆ ಯಾವಾಗ ಹೋಗುತ್ತೀರಿ ಮೊದಲಾದ ಮಾಹಿತಿಯನ್ನು ದೇವಕಿ ಅವರಿಂದಲೇ ಗೋಪಿ ತಿಳಿದುಕೊಂಡಿದ್ದ. ದೇವಕಿ ಮತ್ತು ಶೋಭಾ ಅವರು ಮನೆಯಲ್ಲಿ ಇಲ್ಲದಿದ್ದಾಗ ಪ್ರತ್ಯೇಕ ಸಂದರ್ಭಗಳಲ್ಲಿ ತನ್ನ ಬಳಿಯಿದ್ದ ಕೀಗಳನ್ನು ಬಳಸಿ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದ. ಈ ಸಂಬಂಧ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಎರಡು ಕಳವು ಪ್ರಕರಣ ದಾಖಲಾಗಿದ್ದವು. ಸಿಸಿಬಿ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ ಎಂದು ಅವರು ಹೇಳಿದರು. ಸಿಸಿಬಿ ಘಟಕದ ಎಸಿಪಿ ಕೆ.ಎನ್. ಮಾದಯ್ಯ ಅವರ ನೇತೃತ್ವದಲ್ಲಿ ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.
ಗೋಪಿ ನಮ್ಮ ಮೊಬೈಲ್ ಅಂಗಡಿಗೆ ಆಗಾಗ ರೀಚಾರ್ಜ್ ಮಾಡಿಸಿಕೊಳ್ಳಲು ಬರುತ್ತಿದ್ದಾಗ ಪರಿಚಯವಾಗಿತ್ತು. ಒಳ್ಳೆಯ ಹುಡುಗನೆಂದು ಭಾವಿಸಿ ಮನೆಯವರೆಗೆ ಕರೆದು ಊಟ ತಿಂಡಿ ಕೊಡುತ್ತಿದ್ದೆ. ಅಪಾರ್ಟ್ಮೆಂಟ್ನಲ್ಲಿರುವ ಸ್ನೇಹಿತೆ ಶೋಭಾ ಅವರನ್ನು ಸಹ ಹೇಗೊ ಪರಿಚಯ ಮಾಡಿಕೊಂಡು ಅವರ ಮನೆಯಲ್ಲಿ ಗೌರಿ ಹಬ್ಬದ ಊಟ ಸಹ ಮಾಡಿದ್ದ. ಆದರೆ, ನಮ್ಮ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಕೀ ತೆಗೆದುಕೊಂಡು ಕಳವು ಮಾಡಿದ್ದಾನೆ. ಇದನ್ನು ನಾವು ನಂಬಲು ಸಾಧ್ಯವಾಗಿಲ್ಲ. ಸಿಸಿಬಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ.
ದೇವಕಿ,
ಕೆ.ಆರ್. ಮೊಹಲ್ಲಾ ನಿವಾಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

