'ಭೌತಿಕಕ್ಕೆ ಸೀಮಿತವಾದ ಆಧುನಿಕ ಸಮಾನತೆ'
ಮೈಸೂರು: ಆಧುನಿಕ ಸಮಾನತೆ ಎಂದರೆ ದೇಹಸುಖವರ್ಧಕ ಎಂಬಂತಾಗಿದ್ದು ಎಲ್ಲ ಆಶಯಗಳು ಭೌತಿಕಕ್ಕೆ ಸೀಮಿತವಾಗಿಬಿಟ್ಟಿದೆ ಎಂದು ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ ವಿಷಾದಿಸಿದರು.
ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಭಾನುವಾರ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿ.ಶ್ರೀನಿವಾಸಕುಮಾರ್ ನೆನಪಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಕೃತಿಯಲ್ಲಿ ಸಮಾನತೆಗಿಂತ ಸಮತೋಲಿತ ಅಂಶಗಳಿಗೆ ಹೆಚ್ಚು ಒತ್ತು ನೀಡಬೇಕು. ಆಧುನಿಕ ಕಾಲದ ಆಶಯದ ದೊಡ್ಡ ತುಡಿತವೆಂದರೆ ಎಲ್ಲ ಫಲಾನುಭವಿಗಳಿಗೂ ಸಮಾನತೆ ದೊರಕಬೇಕು ಎಂಬುದಾಗಿದೆ. ಆದರೆ ಶ್ರೀಮಂತಿಕೆ ಆಶಯ ಉಳಿದಿದೆಯೇ ಹೊರತು ಸಮಾನತೆ ದೊರಕಿಲ್ಲ. ಈಗ ಶ್ರೀಮಂತಿಕೆಯನ್ನು ನಿರ್ಮೂಲನೆ ಮಾಡದ ಹೊರತು ಅಸಮಾನತೆ ತೊಲಗಿಸಲು ಸಾಧ್ಯವಿಲ್ಲ ಎಂದರು.
ಸಮಾನತೆ ಹೆಸರಿನಲ್ಲಿ ಮೋಸದ ರಾಜಕಾರಣ ಮಾಡಲಾಗುತ್ತಿದೆ. ಇದಕ್ಕೆ ಸಮಾಜವಾದದ ಹಿನ್ನೆಲೆಯಿಂದ ಬಂದವರೂ ಹೊರತಾಗಿಲ್ಲ. ರಾಷ್ಟ್ರ- ರಾಷ್ಟ್ರಗಳ ನಡುವೆ, ರಾಷ್ಟ್ರದೊಳಗೆ ಮತ್ತು ತಮ್ಮ ತಮ್ಮ ಮನಸ್ಸಿನೊಳಗೆ ಶಾಂತಿ, ಸಹನೆ, ನೆಮ್ಮದಿ ಬಯಸದ ಹೊರತು ಪರ್ಯಾಯ ಹುಡುಕಾಟಕ್ಕೆ ಮಾರ್ಗವಿಲ್ಲ. ಅಶ್ಲೀಲ ಶ್ರೀಮಂತಿಕೆಯ ಹುಚ್ಚು ಹೆಚ್ಚಾಗಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿರುವುದು ಹುಚ್ಚು ಶ್ರೀಮಂತಿಕೆಯ ಲಕ್ಷಣವಾಗಿದೆ ಎಂದು ಕಿಡಿ ಕಾರಿದರು.
ಈ ದೇಶ ಸಂಕೀರ್ಣ ಕಾನೂನಿನ ಕಗ್ಗಾಡಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಜನಪ್ರತಿನಿಧಿಗೆ ಸ್ಥಳೀಯ ಗ್ರಹಿಕೆ ತೀರಾ ಕಡಿಮೆಯಾಗಿದೆ. ದೇಶವನ್ನು ಲೂಟಿ ಹೊಡೆಯುವ ಜನ ಮಾತ್ರ ಇಲ್ಲಿ ಆಳಲು ಸಾಧ್ಯ. ಇಂತಹ ಆಧುನಿಕ ಜಾಲದಲ್ಲಿ ಬಿಡುಗಡೆ ಹೊಂದಬೇಕು ಎಂದರು.
ಸಾಹಿತಿ ದೇವನೂರ ಮಹಾದೇವ ಮಾತನಾಡಿ, ಸಮತೆ ಮತ್ತು ಸಮಾನತೆಯನ್ನು ಒಟ್ಟುಗೂಡಿಸಿ ಸ್ಥಳೀಯವಾಗಿ ತೆಗೆದುಕೊಂಡು ಹೋದಾಗ ಎಲ್ಲೆಡೆ ಸಮಾನತೆ ನೆಲೆಸುತ್ತದೆ. ಸಮಾಜದಲ್ಲಿ ರಕ್ಷಕನ ಮುಖವಾಡ ಧರಿಸಿ ಸುಲಿಗೆ ಮಾಡಲಾಗುತ್ತಿದೆ. ನಮ್ಮ ಶಾಸಕರು ವಿದೇಶಕ್ಕೆ ಹೋಗುವ ಬದಲು ನೆರೆ ರಾಜ್ಯವಾದ ತಮಿಳುನಾಡಿಗೆ ಹೋಗಿ ಅಲ್ಲಿನ ಅಭಿವೃದ್ಧಿ ನೋಡಿ ಬಂದರೆ ಸಾಕು ಎಂದರು.
ಕೈಮಗ್ಗಕ್ಕೆ ಬೆಂಬಲಿಸಿ: ಚಿಂತಕ ಪ್ರಸನ್ನ ಅವರು ಕೈಮಗ್ಗ ಉಳಿಸಲು ಚಳವಳಿ ರೂಪಿಸುತ್ತಿದ್ದಾರೆ. ಆದರೆ, ಕೈಮಗ್ಗ ಜಾಥಾ ನಡೆಯುವವರಗೆ ಸರ್ಕಾರ ಸುಮ್ಮನಿರಬಾರದು. ಜಾಥಾ ಯಾವ ಆಶಯ ಹೊಂದಿದೆಯೋ ಅದನ್ನು ಆದಷ್ಟು ಬೇಗ ಈಡೇರಿಸಿ ಕೈಮಗ್ಗ ಸಂಸ್ಕೃತಿಯನ್ನು ಉಳಿಸಬೇಕು. ಆಮ್ ಆದ್ಮಿ ಪಾರ್ಟಿಯು ಹೊಸ ಭರವಸೆ ಮೂಡಿಸಿದೆ. ರಾಜಕೀಯ ಸಾಧ್ಯತೆಯನ್ನು ಹುಟ್ಟಿಹಾಕಿದೆ ಎಂದರು.
ಪ.ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ ಮಲ್ಲಿಕಾ ಬಸವರಾಜು, ಉಪನ್ಯಾಸಕ ಬಿ. ಮಹೇಶ್ ಹರವೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

