ವೈದ್ಯರ ನಿರ್ಲಕ್ಷ್ಯ: ಮಗು ಸಾವು
ಕ.ಪ್ರ.ವಾರ್ತೆ , ಎಚ್.ಡಿ.ಕೋಟೆ , ಜ.12
ಪಟ್ಟಣದ ಸಂತ ಮೇರಿಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ 3 ತಿಂಗಳ ಮಗುವೊಂದು ಮೃತಪಟ್ಟ ಹಿನ್ನೆಲೆಯಲ್ಲಿ ವಿಶ್ವಕರ್ಮ ಸಮಾಜದವರು, ಕಾವಲುಪಡೆ, ಜಯ ಕರ್ನಾಟಕ ಸಂಘಟನೆಗಳು ಹಾಗೂ ಮೃತ ಮಗುವಿನ ಪೋಷಕರು ಆಸ್ಪತ್ರೆ ಮುಂಭಾಗ ಭಾನುವಾರ ಪ್ರತಿಭಟಿಸಿದರು.
ತಾಲೂಕಿನ ಸರಗೂರು ಹೋಬಳಿಯ ಮೂರ್ಬಂದ್ ಗ್ರಾಮದ ಸಿದ್ದಪ್ಪಾಜಿ ಹಾಗೂ ಚಂದ್ರಕಲಾ ದಂಪತಿಯ ಮೂರು ತಿಂಗಳ ಮಗು ಮೃತ ದುರ್ದೈವಿ. ಮಗುವಿಗೆ ಜ್ವರ ಇದ್ದ ಕಾರಣ ಡಿ.31ರಂದು ಸಂತ ಮೇರಿಸ್ ಆಸ್ಪತ್ರೆಗೆ ಕರೆ ತಂದಾಗ ಅಲ್ಲಿನ ವೈದ್ಯೆ ಹಿಲ್ಡಾ ಆರ್.ಲೊಬೋ ಮಗುವನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಿದ್ದರು. ನಂತರ ಜ.11ರಂದು ಮತ್ತೆ ಜ್ವರ ಕಾಣಿಸಿಕೊಂಡ ಕಾರಣ ಮಗುವನ್ನು 10 ಗಂಟೆ ಸುಮಾರಿಗೆ ಆಸ್ಪತ್ರೆಗೆ ಕರೆ ತರಲಾಯಿತು. ಪರೀಕ್ಷಿಸಿದ ವೈದ್ಯೆ ಹಿಲ್ಡಾ ಆರ್. ಲೊಬೋ ಸೂಕ್ಷ್ಮ ನಿಗಾ ಘಟಕದಲ್ಲಿ ಇರಿಸಿದ್ದರು. ನಂತರ ವೈದ್ಯರು ಗಮನಿಸದೆ ಭಾನುವಾರ ಬೆಳಗ್ಗೆ 6.30ರ ವೇಳೆಯಲ್ಲಿ ಆಸ್ಪತ್ರೆಯ ದಾದಿಯರು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಅಷ್ಟರಲ್ಲಾಗಲೇ ಮಗು ಮರಣ ಹೊಂದಿತ್ತು ಎಂದು ಮಗುವಿನ ತಂದೆ ಸಿದ್ದಪ್ಪಾಜಿ ತಿಳಿಸಿದರು.
ಸ್ಥಳಕ್ಕೆ ತಡವಾಗಿ ಬಂದ ವೈದ್ಯರು: ಮಗು ಮೃತಪಟ್ಟಿರುವ ವಿಷಯವನ್ನು 7 ಗಂಟೆಗೆ ವೈದ್ಯರಾದ ಹಿಲ್ಡಾ ಆರ್. ಲೊಬೋಗೆ ಆಸ್ಪತ್ರೆ ಸಿಬ್ಬಂದಿ ತಿಳಿಸಿದರು. ಅಲ್ಲದೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರಿಂದ ಆಸ್ಪತ್ರೆ ಸಿಬ್ಬಂದಿ ಪೊಲೀಸರೊಂದಿಗೆ ಆಗಮಿಸಿದರು. ಈ ವೇಳೆ ವೈದ್ಯರು ಹಾಗೂ ಮೃತ ಮಗುವಿನ ಸಂಬಂಧಿಕರ ನಡುವೆ ಮಗುವಿಗೆ ನೀಡಿರುವ ಔಷಧಿಗಳ ವಿಚಾರವಾಗಿ ವಾಗ್ವಾದ ನಡೆಯಿತು. ನಂತರ ಸ್ಥಳಕ್ಕೆ ಪಿಎಸ್ಐ ಶಿವಸ್ವಾಮಿ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಆ್ಯಂಬುಲೆನ್ಸ್ ಸೇವೆ ಇಲ್ಲ: ಖಾಸಗಿ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ಗಳು ಕಡ್ಡಾಯವಾಗಿ ಇರಬೇಕು. ಆದರೆ ಈ ಆರೋಗ್ಯ ಸಂಸ್ಥೆ 10 ವರ್ಷಗಳಿಂದ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇದುವರೆಗೂ ಒಂದು ಆ್ಯಂಬುಲೆನ್ಸ್ ಹೊಂದಿಲ್ಲ. ಆ್ಯಂಬುಲೆನ್ಸ್ ಬರುವವರೆಗೂ ಈ ಆಸ್ಪತ್ರೆಯ ಮಾನ್ಯತೆಯನ್ನು ರದ್ದುಪಡಿಸಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ತಾತ್ಸಾರದ ಉತ್ತರ: ತಾಲೂಕು ದಂಡಾಧಿಕಾರಿ ಕೆ.ಕೃಷ್ಣ ಅವರಿಗೆ ಪೋನ್ ಮಾಡಿ ವಿಷಯವನ್ನು ತಿಳಿಸಿ ಪರಿಹಾರ ಸೂಚಿಸುವಂತೆ ಕೋರಿದರೆ ಪೊಲೀಸ್ ಠಾಣೆಗೆ ದೂರು ದಾಖಲಿಸಿ. ಅವರು ನಿಮಗೆ ಮಾರ್ಗದರ್ಶನ ನೀಡುತ್ತಾರೆ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ರಾಜು, ಕಾರ್ಯದರ್ಶಿ ತಿರುಮಲಾಚಾರ್, ನಾಗರಾಜು, ಸೋಮಾಚಾರ್, ಚನ್ನಾಚಾರ್, ನಿಂಗರಾಜು, ವೆಂಕಟೇಶ್, ದಾಸಾಚಾರ್, ಕಾವಲು ಪಡೆಯ ಅಧ್ಯಕ್ಷ ಸೋಮಸಾರಥಿ, ಜಯ ಕರ್ನಾಟಕದ ಕಾರ್ತಿಕ್, ಆಟೋ ರಮೇಶ್, ಗೋಪಾಲಾಚಾರ್, ಮೂರ್ತಿ, ವೆಂಕಟೇಶ್, ಶ್ರೀನಿವಾಸಸ, ನಿಂಗರಾಜು, ಸುಂದರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

