ಮೈಸೂರು

ವಚನ ಸಾಹಿತ್ಯ ಸಂಸ್ಕಾರದ ಪ್ರತಿಬಿಂಬ: ಪರಮೇಶ್ವರಪ್ಪ

Published On :

ಹುಣಸೂರು: ವಚನ ಸಾಹಿತ್ಯವು ಉತ್ತಮ ನಡೆ-ನುಡಿ, ಸಂಸ್ಕೃತಿ, ಸಂಸ್ಕಾರಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಗೋ.ರು. ಪರಮೇಶ್ವರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಬ್ರಿಲಿಯನ್ಸ್ ಎಜುಕೇಷನ್ ಟ್ರಸ್ಟ್ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಂತರ ಶಾಲಾ ಮಟ್ಟದ ವಚನ ಪಠಣ, ಚಿನ್ನರಿಗೆ ಚೆನ್ನುಡಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದ ವಚನ ಸಾಹಿತ್ಯ ಇಂದಿಗೂ ಪ್ರಸ್ತುತವೆನಿಸಿದೆ ಎಂದರು.
ಪ್ರವಚನ ನೀಡಿದ ಪ್ರೊ. ಎಸ್.ಜಿ. ಶಿವಶಂಕರ, ಗುರುಪುರ ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀಶೈಲ ಬಿಳಗಿ, ಮುಖಂಡರಾದ ಗುರುಸ್ವಾಮಿ, ಎಂ.ಬಿ.ಅರಸು, ಶಾಲೆ ಕಾರ್ಯದರ್ಶಿ ಟಿ.ಬಿ. ಪರಮೇಶರಯ್ಯರ ಇದ್ದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ವಚನ ಪಠಣ ಮಾಡಿ ಬಹುಮಾನ ಪಡೆದರು.
ಕರಾವಳಿ ಯಕ್ಷಗಾನ ಕೇಂದ್ರದ ವಾರ್ಷಿಕೋತ್ಸವ
ಮೈಸೂರು: ಕರಾವಳಿ ಯಕ್ಷಗಾನ ಕೇಂದ್ರದ 5ನೇ ವಾರ್ಷಿಕೋತ್ಸವ ಸಮಾರಂಭವನ್ನು ಇತ್ತೀಚೆಗೆ ಮಹಾಜನ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಕೇಂದ್ರದ ಬಡಗುತಿಟ್ಟು ಯಕ್ಷಗಾನ ಕಲಿಕಾರ್ಥಿಗಳಿಂದ ಚಕ್ರವ್ಯೂಹ, ಜಾಂಬವತಿ ಕಲ್ಯಾಣ ಹಾಗೂ ತೆಂಕುತಿಟ್ಟು ಕಲಿಕಾರ್ಥಿಗಳಿಂದ ಸುದರ್ಶನ ಗರ್ವಭಂಗ, ಹಿರಣ್ಯಾಕ್ಷ ವಧೆ ಎಂಬ ಎರಡು ಪ್ರಸಂಗಗಳನ್ನು ಪ್ರದರ್ಶಿಸಲಾಯಿತು.
ಯಕ್ಷಗಾನ ತಜ್ಞ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಸಾಹಿತಿ ಡಾ. ಜಿ.ಎಸ್.ಭಟ್, ಲ್ಯಾಬ್‌ಲ್ಯಾಂಡ್ ಬಯೋಟೆಕ್ ಅಧ್ಯಕ್ಷ ಡಾ. ಸುಧೀರ್ ಶೆಟ್ಟಿ, ವಿಜಯ ವಿಠಲ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್.ವಾಸುದೇವಭಟ್, ಮಹಾಜನ ವಿದ್ಯಾಸಂಸ್ಥೆ ಅಧ್ಯಕ್ಷ ಆರ್.ವಾಸುದೇವಮೂರ್ತಿ, ದಕ್ಷಿಣ ಕನ್ನಡ ಜಿಲ್ಲಾ ಸಂಘದ ಅದ್ಯಕ್ಷ ವಿ.ಶ್ರೀನಿವಾಸರಾವ್, ಲೆಕ್ಕ ಪರಿಶೋಧಕ ಜಿ.ಎನ್.ಅನಂತವರ್ಧನ್ ಅತಿಥಿಯಾಗಿ ಭಾಗವಹಿಸಿದ್ದರು.
ಕೇಂದ್ರದ ನಿಕಟಪೂರ್ವ ಅಧ್ಯಕ್ಷ ಅಚ್ಲಾಡಿ ಬಾಲಕೃಷ್ಣಶೆಟ್ಟಿ, ಕೇಂದ್ರದ ಹಿರಿಯ ಸದಸ್ಯರಾದ ಮಂಜುನಾಥ ಪುರುಷ, ಪ್ರೊ.ಕೆ.ವಿ. ಪ್ರಭಾಕರ್, ಡಾ. ಸಂಜಯ್ ರಾಜಶೇಖರ್, ಡಾ. ಗೀತಾಸಂಜಯ್ ಇದ್ದರು. ಚಿನ್ಮಯ ಪ್ರಾರ್ಥಿಸಿದರು. ಅಮರಜಾ ಹೆಗಡೆ ಸ್ವಾಗತಿಸಿದರು. ರಾಜ ಜಿ. ಕಾಂಚನ್ ವಂದಿಸಿದರು. ವಿ. ಪ್ರದೀಪ್ ಸಾಮಗ ನಿರೂಪಿಸಿದರು.
ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟವಿಲ್ಲ: ಬಿಇಒ
ಕೆ.ಆರ್. ನಗರ: ತಾಲೂಕಿನ ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದ್ದು, ಇದನ್ನು ಹೋಗಲಾಡಿಸಲು ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ, ಸಮುದಾಯದ ಸಹಭಾಗಿತ್ವ ಹಾಗೂ ಜನಪ್ರತಿನಿಧಿಗಳ ಸಹಕಾರ ಪಡೆಯಬೇಕು ಎಂದು ಬಿಇಒ ಎಸ್.ಟಿ.ಜವರೇಗೌಡ ಹೇಳಿದರು.
ಪಟ್ಟಣದ ಬಳೆ ವಿದ್ಯಾ ಸಂಸ್ಥೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಲ್ಲಿರುವುದರಿಂದ ಖಾಸಗಿ ಶಾಲೆಗಳು ಮಕ್ಕಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಶಿಕ್ಷಣ ನೀಡಬೇಕಾಗಿದೆ. ಆದ್ದರಿಂದ ಎಟಿಜಟಿ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಒಂದನೇ ತರಗತಿಗೆ ಅತಿ ಹಿಂದುಳಿದ ದುರ್ಬಲ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಇಲಾಖೆಯ ಕಚೇರಿ ಹಾಗೂ ಎಲ್ಲಾ ಶಾಲೆಗಳಲ್ಲಿ ವಿತರಿಸಲಾಗುತ್ತಿದ್ದು, ಫೆ. 8ರವರೆಗೆ ಅಜಿ ಸಲ್ಲಿಸಲು ಕಾಲಾವಕಾಶವಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಡಾ.ಬಿ.ಸಿ. ದ್ಘೊಜ್ಘಡಗೌಡ, ಪುರಸಭಾ ಸದಸ್ಯ ಕೆ.ಎಲ್.ಜಗದೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಯದುಗಿರೀಶ್, ಸಂಸ್ಥೆಯ ಅಧ್ಯಕ್ಷ ಬಿ.ಎಂ. ಯೋಗೀಶ್, ಮುಖ್ಯ ಶಿಕ್ಷಕ ಸಿ.ಎಂ. ಕಿರಣ್, ಶಿಕ್ಷಕರಾದ ಜಿ.ಬಿ. ಶ್ವೇತಾ, ಸಿ.ಪಿ. ಆನಂದ, ರಾಜೇಶ್ವರಿ, ಜಗದಾಂಬ, ದಿನೇಶ್, ಡಿ. ರಾಜೇಶ್ವರಿ, ರಾಜಶೇಖರಮೂರ್ತಿ, ಮದನ್‌ಕುಮಾರ್, ಡಿ.ಲಕ್ಷ್ಮಿ, ಯೋಗೇಶ್‌ಕುಮಾರ್ ಇದ್ದರು.
ರಾಗಿ ಮೆದೆಗೆ ಬೆಂಕಿ: ನಷ್ಟ
ಹುಣಸೂರು: ಆಕಸ್ಮಿಕ ಬೆಂಕಿ ತಗುಲಿ ಒಕ್ಕಣೆಗೆ ಸಿದ್ದವಾಗಿದ್ದ ರಾಗಿ ಮೆದೆಯೊಂದು ಆಹುತಿಯಾದ ಘಟನೆ ಹನಗೋಡು ಸಮೀಪದ ಸಿಂಡೇನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಕೃಷ್ಣೇಗೌಡರ ಮಗ ನಾಗೇಂದ್ರ ಎಂಬವರಿಗೆ ಸೇರಿದ 5 ಎಕರೆ ಜಮೀನಿನಲ್ಲಿ ರಾಗಿ ಬೆಳೆ ಒಕ್ಕಣೆ ಮಾಡಲು ಕಣದಲ್ಲಿ ಹಾಕಿದ್ದು, ಶುಕ್ರವಾರ ಮಧ್ಯಾಹ್ನ 12.30ಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಇಡಿ ರಾಗಿ ಮೆದೆ ಆಹುತಿಯಾಗಿದೆ. ಅಗ್ನಿಶಾಮಕ ದಳದ ವಾಹನದಲ್ಲಿ ನೀರು ಮುಗಿದಿದ್ದರಿಂದ ಗ್ರಾಮಸ್ಥರು ಹನಗೋಡು ವಿದ್ಯುತ್ ಇಲಾಖೆ ಅವರಿಗೆ ವಿಷಯ ತಿಳಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ಸ್ಥಳಕ್ಕೆ ಅಗ್ನಿಶಾಮಕ ಠಾಣಾಧಿಕಾರಿ ಪುಟ್ಟಯ್ಯಶೆಟ್ಟಿ ಗ್ರಾಮ ಲೆಕ್ಕಿಗ ಶ್ರೀನಿವಾಸ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಸರ್ಕಾರಿ ನೌಕರರ ಸಂಘದ ಕಟ್ಟಡ ಉದ್ಘಾಟನೆ
ಕೆ.ಆರ್. ನಗರ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ ನವೀಕೃತ ಕಟ್ಟಡ ಉದ್ಘಾಟನೆ, ಸಂಘದ ಮಾಜಿ ಅಧ್ಯಕ್ಷರಿಗೆ ಸನ್ಮಾನ, 2007-12ನೇ ಸಾಲಿನ ಪದಾಧಿಕಾರಿಗಳ ಅಭಿನಂದನೆ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಜ.17ರಂದು ನಡೆಯಲಿದೆ.
ಶಾಸಕ ಸಾ.ರಾ.ಮಹೇಶ್ ಕಟ್ಟಡದ ಉದ್ಘಾಟನೆ ನೇರವೆರಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಆಗಮಿಸುವರು. ಸಂಸದರಾದ ರಮ್ಯಾ, ಎಚ್.ವಿಶ್ವನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ.ರಾಮು ಕ್ಯಾಲೆಂಡರ್ ಬಿಡುಗಡೆಗೊಳಿಸುವರು. ಆಹ್ವಾನಿತರಾಗಿ ತಾಪಂ ಅಧ್ಯಕ್ಷೆ ಶಶಿಕಲಾ ರಮೇಶ್, ತಾಲೂಕು ದಂಡಾಧಿಕಾರಿ ಬಿ.ಎನ್.ವೀಣಾ ಕುಮಾರ್ ಭಾಗವಹಿಸುವರು ಎಂದು ಸಂಘದ ಅಧ್ಯಕ್ಷ ಯಧುಗಿರೀಶ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಸದಸ್ಯರಿಗೆ ಆರೋಗ್ಯ ಶಿಬಿರ, ಪ್ರತಿಭಾ ಪುರಸ್ಕಾರ, ಕ್ರೀಡಾಕೂಟ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಪದಾಧಿಕಾರಿಗಳು ಮತ್ತು ಸದಸ್ಯರ ನೆರವಿನಿಂದ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು. ರಾಜ್ಯ ಪರಿಷತ್ ಸದಸ್ಯ ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಪ್ರಸನ್ನ, ಖಜಾಂಚಿ ಬಾಸ್ಕರ್, ನಿರ್ದೇಶಕರಾದ ದೇವೇಂದ್ರ, ಮಂಜುನಾಥ್ ಇದ್ದರು.
ಪಟ್ಟಣ ಪಂಚಾಯ್ತಿ ಎಂಜಿನಿಯರ್ ಮೇಲೆ ಆರೋಪ
ಪಿರಿಯಾಪಟ್ಟಣ: ಪಪಂ ಎಂಜಿನಿಯರ್ ದೀಪಕ್‌ಶೆಟ್ಟಿ ಅವರು ಪಪಂ ಸದಸ್ಯರೊಂದಿಗೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಪಪಂ ಸದಸ್ಯ ಸಣ್ಣಪ್ಪನಾಯಕ ಆರೋಪಿಸಿದರು.
ಪಟ್ಟಣದ ವಾರ್ಡ್ ನಂ. 3ರಲ್ಲಿ ನಡೆಯುತ್ತಿರುವ ನೀರಿನ ಪೈಪ್‌ಲೈನ್ ಕಾಮಗಾರಿಯ ಬಗ್ಗೆ ವಿಚಾರಿಸಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಕಾಮಗಾರಿಗೂ ನಿಮಗೂ ಸಂಬಂಧವಿಲ್ಲ. ನಮ್ಮಿಷ್ಟ ಬಂದ ಹಾಗೆ ಕೆಲಸ ಮಾಡಿಸುತ್ತೇವೆ. ನಿಮಗೆ ಮಾಹಿತಿ ನೀಡುವ ಅವಶ್ಯಕತೆ ಇಲ್ಲ, ನೀಡುವುದೂ ಇಲ್ಲ. ಏನು ಮಾಡುತ್ತೀರೋ ಮಾಡಿಕೊಳ್ಳಿ ಎಂಬ ಬೇಜವಾಬ್ದಾರಿ ಉತ್ತರ ನೀಡುವ ಮೂಲಕ ನನಗೆ ಅವಮಾನಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಗುತ್ತಿಗೆ ಕಾಮಗಾರಿ ಕಳಪೆಯಾಗಿದ್ದು, ಕಾಮಗಾರಿ ಹಣ ದುರುಪಯೋಗದ ಬಗ್ಗೆ ಅನುಮಾನವಿದ್ದು ಕೂಡಲೇ ಕಾಮಗಾರಿಯನ್ನು ನಿಲ್ಲಿಸಬೇಕು. ಈ ಬಗ್ಗೆ ತನಿಖೆ ನಡೆಸಬೇಕು. ದುರ್ನಡತೆ ಪ್ರದರ್ಶಿಸಿದ ಎಂಜಿನಿಯರ್ ದೀಪಕ್‌ಶೆಟ್ಟಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಕಾಲೇಜು ದೇಶದ ಭವಿಷ್ಯ ರೂಪಿಸುವ ಕೇಂದ್ರ: ಜವರಯ್ಯ
ಹುಣಸೂರು: ಕಾಲೇಜು ಮೋಜು- ಮಸ್ತಿಯ ತಾಣವಲ್ಲ. ಬದಲಿಗೆ ದೇಶ ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರ ಎಂದು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜವರಯ್ಯ ಹೇಳಿದರು.
ಕಾಲೇಜಿನಲ್ಲಿ ನಡೆದ ಶಾರದಪೂಜೆ ಹಾಗೂ ಹೊಸ ವರ್ಷಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ಹಾದಿ ತಪ್ಪುತ್ತಿದೆ. ಶಾರದಪೂಜೆ, ವರ್ಷಾಚರಣೆ ಸಂದರ್ಭದಲ್ಲಿ ತಾವು ಉತ್ತಮ ಅಂಕ ಪಡೆದು ಕಾಲೇಜಿಗೆ, ತಾಲೂಕಿಗೆ ಕೀರ್ತಿ ತರುತ್ತೇವೆ ಎಂಬ ಸಂಕಲ್ಪ ಮಾಡಿ ಎಂದು ಸಲಹೆ ನೀಡಿದರು. ಜೀವಶಾಸ್ತ್ರ ಉಪನ್ಯಾಸಕಿ ಡಾ. ಸಂಧ್ಯಾರಾಣಿ, ಉಪನ್ಯಾಸಕ ಬೋರಪ್ಪ, ಎ.ಎಸ್. ಬಾಲಸುಬ್ರಮಣ್ಯಂ, ಸಿ.ಎಸ್. ಪ್ರಕಾಶ್ ಅವರು ವಿದ್ಯಾರ್ಥಿಗಳಿಗೆ ಓದುವ, ಅಭ್ಯಾಸ ಮಾಡುವ, ಪರೀಕ್ಷೆ ಎದುರಿಸುವ ಕುರಿತು ಅಗತ್ಯ ಮಾಹಿತಿ ನೀಡಿದರು. ವಿದ್ಯಾರ್ಥಿ ಮುಖಂಡರಾದ ಸೈಯಿದಾ ಜೋಹರಾ, ಶಾಲಿನಿ, ಶೈನಿ ಜಾರ್ಜ್, ಚೈತ್ರ ಅಭಿಪ್ರಾಯ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.