ಮೈಸೂರು

ಚುಂಚನಕಟ್ಟೆಯಲ್ಲಿ ವೈಭವದ ಶ್ರೀರಾಮ ರಥೋತ್ಸವ

Published On :

ಕೆ.ಆರ್. ನಗರ: ತಾಲೂಕಿನ ಚುಂಚನಕಟ್ಟೆಯ ಇತಿಹಾಸ ಪ್ರಸಿದ್ಧ ಶ್ರೀರಾಮ ದೇವರ ಬ್ರಹ್ಮ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಹರ್ಷೋದ್ಘಾರದ ನಡುವೆ ವೈಭವದಿಂದ ನೆರವೇರಿತು.
ಬೆಳಗ್ಗೆ 11.40 ರಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಶಾಸಕ ಸಾ.ರಾ. ಮಹೇಶ್, ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ದೇವಾಲಯದ ಆಗಮಿಕರು ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಇದೇ ವೇಳೆ ನೆರೆದಿದ್ದ ಭಕ್ತ ಸಮೂಹ ಜೈ ಶ್ರೀರಾಂ ಎಂದು ಘೋಷಣೆ ಕೂಗಿ ರಥ ಎಳೆದರು.
ಭಕ್ತರು ರಥಕ್ಕೆ ಹಣ್ಣು-ಧವನ ಎಸೆದು ಹರಕೆ ತೀರಿಸಿದರಲ್ಲದೆ, ರಥ ಎಳೆದು ಕೃತಾರ್ಥರಾದರು. ದೇವಾಲಯದ ಸುತ್ತ ಒಂದು ಸುತ್ತು ರಥವನ್ನು ಎಳೆದು ತರಲಾಯಿತು. ಬೆಳಗ್ಗೆಯಿಂದಲೆ ಭಕ್ತರು ದೇವಾಲಯಕ್ಕೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಬೆಳಗ್ಗಿನ ಜಾವ 5 ರಿಂದ ಶ್ರೀರಾಮನಿಗೆ ವಿಶೇಷ ಪೂಜೆ ಹೋಮ ಹವನ ನಡೆಸಲಾಯಿತಲ್ಲದೆ, ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ದೇವಾಲಯದಿಂದ ರಥಕ್ಕೆ ತಂದು ಪ್ರತಿಷ್ಠಾಪಿಸಲಾಯಿತು.
ಉಚಿತ ಪ್ರಸಾದ: ಜಾತ್ರೆಗೆ ಆಗಮಿಸಿದ್ದ ಎಲ್ಲ ಭಕ್ತರಿಗೆ ಶಾಸಕ ಸಾ.ರಾ. ಮಹೇಶ್ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಪ್ರಸಾದದ ವ್ಯವಸ್ಥೆ ಮಾಡಿದ್ದರು.
ರಥೋತ್ಸವದ ಪ್ರಯುಕ್ತ ಶ್ರೀರಾಮ ದೇವಾಲಯಕ್ಕೆ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್ 80 ಸಾವಿರ ವೆಚ್ಚದಲ್ಲಿ ಮಾಡಿಸಿದ್ದ ವಿಶೇಷ ಹೂವಿನ ಅಲಂಕಾರ ಎಲ್ಲರ ಗಮನ ಸೆಳೆಯಿತು.
ಜಾತ್ರೆಗೆ ಬೆಳಗ್ಗೆಯಿಂದ-ಸಂಜೆಯವರೆಗೆ 50 ಸಾವಿರಕ್ಕೂ ಹೆಚ್ಚು ಭಕ್ತರು, ಸಾವಿರಾರು ವಾಹನಗಳು ಆಗಮಿಸಿದ್ದರಿಂದ ಕೆ.ಆರ್. ನಗರ ರಾಮನಾಥಪುರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡ ಬೇಕಾಯಿತು. ಡಿವೈಎಸ್ಪಿ ಶ್ರೀ ಹರಿಬರಗೂರು ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.  
ಗಾವಡಗೆರೆ ನಟರಾಜ ಶ್ರೀಗಳು, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಶ್ರೀಗಳು, ಬೆಟ್ಟದಪುರದ ಬಸವದೇಶಿಕೇಂದ್ರ ಶ್ರೀಗಳು, ಭವಾನಿ ರೇವಣ್ಣ, ತಾಪಂ ಅಧ್ಯಕ್ಷೆ ಶಶಿಕಲಾ ರಮೇಶ್, ಉಪಾಧ್ಯಕ್ಷೆ ಶಕುಂತಲಾ ರಮೇಶ್, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಸದಸ್ಯೆ ಕಲ್ಪನಾ ಧನಂಜಯ, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ಎಪಿಎಂಸಿ ನಿರ್ದೇಶಕರಾದ ಬಂಡಳ್ಳಿ ಕುಚೇಲ, ಕುಪ್ಪಳ್ಳಿ ಸೋಮು, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಟಿ. ಕೀರ್ತಿ, ದಲಿತ ಮುಖಂಡ ಹನಸೋಗೆ ನಾಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.