ದೊಡ್ಡಹೆಜ್ಜೂರಿನಲ್ಲಿ ವಿಜೃಂಭಣೆಯ ರಥೋತ್ಸವ
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ದೊಡ್ಡಹೆಜ್ಜೂರು ಗ್ರಾಮದಲ್ಲಿ ವೀರಾಂಜನೇಯ ಜಾತ್ರೆ ಹಾಗೂ ಶ್ರೀರಾಮ ದೇವರ ರಥೋತ್ಸವವು ಗುರುವಾರ ವಿಜೃಂಭಣೆಯಿಂದ ನೆರವೇರಿತು.
ತಾಲೂಕಿನ ಹನಗೋಡು ಹೋಬಳಿಯ ದೊಡ್ಡಹೆಜ್ಜೂರು ಗ್ರಾಮದ ಲಕ್ಷ್ಮಣತೀರ್ಥ ನದಿ ತಟದಲ್ಲಿ ವಿರಾಜಮಾನವಾಗಿರುವ ವೀರಾಂಜನೇಯಸ್ವಾಮಿ ಜಾತ್ರೆಗೆ ಅಕ್ಕಪಕ್ಕ ಊರಿನಿಂದ ಬಂದಿದ್ದ ಭಕ್ತರ ಸಮೂಹ ಹಣ್ಣು, ಧವನ ಎಸೆದು ಜಯಘೋಷ ಮೊಳಗಿಸಿ, ಪುನೀತರಾದರು.
ಮಧ್ಯಾಹ್ನ 12.30 ರಿಂದ ಜರುಗಿದ ರಥೋತ್ಸವಕ್ಕೂ ಮುನ್ನ ಅರ್ಚಕರಾದ ಸಂಪತ್ ಹಾಗೂ ಕೆ. ಮೂರ್ತಿ ಪೂಜಾ ವಿಧಿ ವಿಧಾನ, ಹವನ, ಹೋಮ, ಬಲಿಹರಣ ನೆರವೇರಿಸಿದ ನಂತರ ಶ್ರೀರಾಮ, ಲಕ್ಷ್ಮಣ, ಸೀತೆ, ಆಂಜನೇಯ ವಿಗ್ರಹ ಹೊತ್ತು ತಂದ ಭಕ್ತರ ಸಮೂಹ ದೇವರು ರಥದ ಮೇಲೇರುತ್ತಿದ್ದಂತೆ ಹೂವು, ಹಣ್ಣು, ಧವನ ಎಸೆದರು. ಭಕ್ತ ಸಮೂಹ ದೇವಸ್ಥಾನದ ಸುತ್ತ ರಥ ಎಳೆಯುತ್ತಿದ್ದಂತೆ ಜಯಘೋಷ ಮುಗಿಲು ಮುಟ್ಟಿದರೆ, ಮತ್ತೊಂದೆಡೆ ನವದಂಪತಿಗಳು ಹಣ್ಣು ಧವನ ಎಸೆದು ಪೂಜೆ ಸಲ್ಲಿಸಿದರು.
ದೇವರಿಗೆ ಹರಕೆ ಹೊತ್ತ ನೂರಾರು ಮಂದಿ ನದಿಯಲ್ಲಿ ಮಿಂದು ದೇವಾಲಯದ ಸುತ್ತ ಉರುಳುಸೇವೆ ನಡೆಸಿದರೆ, ಕೆಲವರು ದೇವಾಲಯದ ಮುಂಭಾಗವಿರುವ ಕೆರೆಯಂಗಳದಲ್ಲಿ ಮುಡಿ ಹರಕೆ ನೀಡಿದರು. ಮತ್ತೊಂದೆಡೆ ತಾವೇ ತಯಾರಿಸಿದ ಅಡುಗೆಯನ್ನು ಕುಟುಂಬಸ್ಥರೊಂದಿಗೆ ಊಟ ಮಾಡಿದರು.
ಈ ವರ್ಷದಲ್ಲಿ ಮದುವೆಯಾದ ಆದಿವಾಸಿ ಗಿರಿಜನ ನವ ದಂಪತಿಗಳು ಜಾತ್ರೆಗೆ ಹಾಜರಾಗಿ ಪೂಜೆ ಸಲ್ಲಿಸುವುದು ಹಿಂದಿನಿಂದಲೂ ನಡೆದು ಬಂದ ಪದ್ದತಿ.
ಜಾತ್ರಾ ಮಹೋತ್ಸವದಲ್ಲಿ ಶಾಸಕ ಎಚ್.ಪಿ. ಮಂಜುನಾಥ್, ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್, ತಾಪಂ ಸದಸ್ಯರಾದ ರಮೇಶ, ಸರೋಜಮ್ಮ, ಗ್ರಾಪಂ ಅಧ್ಯಕ್ಷ ಶಿವಕುಮಾರ್, ಮಂಜುಳಾ ಮಹೇಶ್, ಮುತ್ತಮ್ಮರಾಮಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು ಇದ್ದರು. ಗ್ರಾಮಾಂತರ ಠಾಣೆ ಎಸ್ಐ ರಾಘವೇಂದ್ರಗೌಡ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

