ಮೈಸೂರು

ಲಯನ್ಸ್ ಸೇವಾ ಪ್ರತಿಷ್ಠಾನ ದಿನ

Published On :

ಮೈಸೂರು: ಜಿಲ್ಲಾ ಲಯನ್ಸ್ ಸೇವಾ ಪ್ರತಿಷ್ಠಾನದ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯು ಜೆಎಸ್‌ಎಸ್ ಪಾಲಿಟೆಕ್ನಿಕ್‌ನ 50 ಮಂದಿ ಬಡ ಅಂಗವಿಕಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವನ್ನು ಜ.18ರ ಬೆಳಗ್ಗೆ 11ಕ್ಕೆ ಆಯೋಜಿಸಿದೆ. 50 ಮಂದಿ ವಿದ್ಯಾರ್ಥಿಗಳಿಗೆ ಸುಮಾರು 2 ಲಕ್ಷಕ್ಕೂ ಹೆಚ್ಚು ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗುವುದು. ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಲಯನ್ಸ್‌ನ ಜಿಲ್ಲಾ ಗೌವರ್ನರ್ ಪ್ರೊ.ಟಿ.ಜೆ. ರಾಮಮೂರ್ತಿ ಅತಿಥಿಯಾಗಿ ಆಗಮಿಸುವರು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವ ನಿರ್ಗಮಿತ ಗೌವರ್ನರ್ ಎಂ.ವಿ. ದೇವಿಪ್ರಸಾದ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜೆಎಸ್‌ಎಸ್ ಅಂಗವಿಕಲ ಪಾಲಿಟೆಕ್ನಿಕ್ ಜೊತೆಗೆ ಸಾಯಿರಂಗ ವಿದ್ಯಾಸಂಸ್ಥೆಯ ಕಿವುಡ ಮತ್ತು ಮೂಕ ಮಕ್ಕಳಿಗೆ ವಿಶೇಷ 1 ಲಕ್ಷ ಮೌಲ್ಯದ ಉಪಕರಣ ವಿತರಣೆ, 104 ಲಯನ್ಸ್ ಸಂಸ್ಥೆಗಳಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರ ನಡೆಸುವ ಉದ್ದೇಶ ಹೊಂದಿದೆ ಎಂದರು. ಕಾರ್ಯಕ್ರಮದ ಸಹ ಸಂಯೋಜಕ ಎಂ.ಎನ್. ಜೈಪ್ರಕಾಶ್, ಬಿ. ವಾಸುದೇವ್, ಕೆ.ಎಸ್. ಮಹದೇವಸ್ವಾಮಿ ಇದ್ದರು.
ನಮೋ ಭಾರತ್ ಕಾರ್ಯಕ್ರಮ
ಮೈಸೂರು: ನಮೋ ಬ್ರಿಗೇಡ್ ಮೈಸೂರು ಸಂಸ್ಥೆಯು ಜ.18ರ ಸಂಜೆ 5ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ನಮೋ ಭಾರತ್ ಕಾರ್ಯಕ್ರಮ ಆಯೋಜಿಸಿದೆ. ಚಕ್ರವರ್ತಿ ಸೂಲಿಬೆಲೆ ಮತ್ತು ತಂಡದವರು ನಮೋ ಭಾರತ್ ಕಾರ್ಯಕ್ರಮ ನೀಡುವರು.
ಸ್ವಾತಂತ್ರ್ಯ ನಂತರದ ಭಾರತ ಮತ್ತು ವಿಶ್ವಗುರು ಭಾರತದ ಪರಿಕಲ್ಪನೆ ಕುರಿತು ಸಂಗೀತ ರೂಪಕ ಕಾರ್ಯಕ್ರಮ ನಡೆಸಿಕೊಡುವರು ಎಂದು ಹಿರಿಯ ವಕೀಲ ಓ. ಶ್ಯಾಂಭಟ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಧಾರವಾಡದ ಶ್ರೀ ಗುರು ಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಪೀಠಾಧಿಪತಿ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಶ್ರೀ ಯೋಗಾ ನರಸಿಂಹಸ್ವಾಮಿ ದೇವಸ್ಥಾನದ ಭಾಷ್ಯಂ ಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಎಲ್ಲರಿಗೂ ಉಚಿತ ಪ್ರವೇಶವಿದ್ದು, ಆಸಕ್ತರೆಲ್ಲರೂ ಭಾಗವಹಿಸಬಹುದು ಎಂದು ಅವರು ಹೇಳಿದರು. ಡಾ.ಮಂಜುನಾಥ್, ಪ್ರಣಯ್, ಹರೀಶ್‌ಬಾಬು, ಮುಕಂದ್ ಪೇಶ್ವೆ ಇದ್ದರು.
ಯುವಕ ನಾಪತ್ತೆ
ಹುಣಸೂರು: ತಂದೆಯೊಂದಿಗೆ ಜಗಳವಾಡಿಕೊಂಡು ಯುವಕ ನಾಪತ್ತೆಯಾಗಿದ್ದಾನೆ. ಹುಣಸೂರು ತಾಲೂಕು ಗೆರಸನಹಳ್ಳಿ ಗ್ರಾಮದ ನಿವಾಸಿ ದಾಸಪ್ಪ ಎಂಬವರ ಪುತ್ರ ಅನಂತ (28) ನಾಪತ್ತೆಯಾದವರು. ಜಮೀನಿನಲ್ಲಿ ಕೆಲಸ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ತಂದೆಯೊಂದಿಗೆ ಜಗಳವಾಡಿ ಮನೆ ಬಿಟ್ಟಿದ್ದ. 5.6 ಅಡಿ ಎತ್ತರ, ಕೆಂಪು ಬಣ್ಣ, ಕೋಲುಮುಖ ಹೊಂದಿರುವ ಈತನ ಹಣೆ ಮೇಲೆ ಗಂಟು ಇದೆ. ಈತನ ಬಗ್ಗೆ ಸುಳಿವು ದೊರೆತರೆ ಬಿಳಿಕೆರೆ ಪೊಲೀಸ್ ಠಾಣೆ ಅಥವಾ ಮೊ. 9743366001 ಸಂಪರ್ಕಿಸಬಹುದು.

19 ರಿಂದ ಪಲ್ಸ್ ಪೋಲಿಯೋ
ಎಚ್.ಡಿ. ಕೋಟೆ: ತಾಲೂಕಿನಲ್ಲಿ ಜ.19 ರಿಂದ 21 ರವರೆಗೆ ಮೊದಲನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮವು ಜರುಗಲಿದೆ ಎಂದು ತಾಲೂಕು ವೈದ್ಯಾಧಿಕಾರಿ ರವಿ ಹೇಳಿದರು. ತಾಲೂಕಿನ ಎಲ್ಲಾ ಗ್ರಾಮದಲ್ಲಿಯೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ 398 ಹಳ್ಳಿಗಳಲ್ಲಿ 5 ವರ್ಷದ  27,611 ಮಕ್ಕಳು ಇದ್ದು, ಇವರಿಗೆ ಲಸಿಕೆ ಹಾಕಲು ತಾಲೂಕಿನ ಒಟ್ಟು 800 ಸಿಬ್ಬಂದಿ, ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಾರಿ ವಿಶೇಷವಾಗಿ ವಲಸೆ ಮತ್ತು ಹೊರಗಿನಿಂದ ಬಂದಿರುವ ಮಕ್ಕಳನ್ನು ಹುಡುಕಿ ಲಸಿಕೆ ಹಾಕುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.ತಾಲೂಕಿನ ಎಲ್ಲ ಪೋಷಕರು ತಮ್ಮ 5 ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸುವಂತೆ ವೈದ್ಯಾಧಿಕಾರಿ ತಿಳಿಸಿದ್ದಾರೆ.
ರಸ್ತೆ ನಿಯಮ ಪಾಲಿಸಿ ಅಪಘಾತ ನಿಯಂತ್ರಿಸಿ
ಬೈಲಕುಪ್ಪೆ: ವಾಹನ ಚಾಲಕರು ರಸ್ತೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಮಾತ್ರ ಅಪಘಾತಗಳನ್ನು ತಡೆಹಿಡಿಯಬಹುದೆಂದು ಬೈಲುಕುಪ್ಪೆ ಪೊಲೀಸ್ ಠಾಣಾಧಿಕಾರಿ ಮುದ್ದುಮಹದೇವ ಹೇಳಿದರು. ಪೊಲೀಸ್ ಇಲಾಖೆ ವತಿಯಿಂದ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಆಟೋ ಚಾಲಕರಿಗೆ ನಿಯಮ ಪಾಲನೆ ಅರಿವು ಮೂಡಿಸುವ ಬಗ್ಗೆ ಆಟೋ ನಿಲ್ದಾಣದ ಆವರಣದಲ್ಲಿ ಅವರು ಮಾತನಾಡಿದರು. ಆಟೋ ಚಾಲಕರು ಶಾಲಾ ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು
ಮಿತಿ ಮೀರಿ ತುಂಬುವುದು ಪ್ರಯಾಣಿಕರನ್ನು ಚಾಲಕನ ಆಸನದಲ್ಲಿ ಕುಳ್ಳಿರಿಸಿಕೊಂಡು ಚಾಲನೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು. ಆಟೋ ಚಾಲಕರು ಹಾಗೂ ಶಾಲಾ ಮಕ್ಕಳು ಪ್ರೌಢಶಾಲೆಯ ಆವರಣದವರೆಗೂ ಜಾಥಾ ನಡೆಸಿದರು. ಪ್ರೌಢಶಾಲೆ ಮುಖ್ಯ ಶಿಕ್ಷಕಿ ಭಾಗ್ಯಮ್ಮ, ಬೈಲಕುಪ್ಪೆ ಠಾಣೆ ಸಿಬ್ಬಂದಿ ಮಹದೇವಸ್ವಾಮಿ, ಭಾಸ್ಕರ್, ಜಗದೀಶ, ಆಟೋ ಚಾಲಕರಾದ ಸ್ವಾಮಿ, ರಘು, ಮಂಜು, ರೆಹಮಾನ್ ಇದ್ದರು.
ಸಂಕ್ರಾಂತಿ ಆಚರಣೆ
ಟಿ. ನರಸೀಪುರ: ಮಕರ ಸಂಕ್ರಾಂತಿ ಸಂಭ್ರಮದ ಹಬ್ಬದ ಹಿನ್ನೆಲೆ ಪಟ್ಟಣದಲ್ಲಿ ಬುಧವಾರ ರಾಸುಗಳಿಗೆ ಕಿಚ್ಚು ಹಾಯಿಸಲಾಯಿತು.  ಪಟ್ಟಣದೆಲ್ಲೆಡೆ ಸಂಕ್ರಾಂತಿ ಹಬ್ಬದ ಸಡಗರ ಕಳೆಗಟ್ಟಿತ್ತು. ಖಾಸಗಿ ಬಸ್ ನಿಲ್ದಾಣದ ಬಳಿ ಲಿಂಕ್ ರಸ್ತೆಯಲ್ಲಿ ರಾಸುಗಳನ್ನು ಕಿಚ್ಚು ಹಾಯಿಸಲು ರೈತರು ವಿವಿಧ ಬಡಾವಣೆಗಳಿಂದ ರಾಸುಗಳನ್ನು ಅಲಂಕರಿಸಿಕೊಂಡು ಆಗಮಿಸಿದ್ದರು. ರಸ್ತೆಗೆ ಹಾಕಲಾಗಿದ್ದ ಹುಲ್ಲಿನ ರಾಸಿಗೆ ಪೂಜೆ ಸಲ್ಲಿಸಿದ ಬೆಂಕಿ ಸ್ಪರ್ಶಿಸಲಾಯಿತು. ಹೆಚ್ಚಿನ ಉತ್ಸುಕತೆಯಿಂದಲೇ ರೈತರು ತಮ್ಮ ಎತ್ತುಗಳನ್ನು ಕಿಚಾಯಿಸಿದರು.
ಸುತ್ತೂರು ಜಾತ್ರೆಗೆ ದನಗಳ ಪರಿಷೆ ಇಲ್ಲ
ಮೈಸೂರು: ರಾಸುಗಳಲ್ಲಿ ಕಾಣಿಸಿಕೊಂಡಿರುವ ಕಾಲು- ಬಾಯಿ ಜ್ವರಕ್ಕೆ ಜಾತ್ರೆಗಳು ಬಲಿಯಾಗುತ್ತಿವೆ. ಎಚ್.ಡಿ. ಕೋಟೆ ತಾಲೂಕಿನ ಕೋದಂಡಸ್ವಾಮಿ, ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ, ಕೆ.ಆರ್. ನಗರ ತಾಲೂಕಿನ ಚುಂಚನಕಟ್ಟೆ ದನಗಳ ಜಾತ್ರೆಯ ನಂತರ ಇದೀಗ ನಂಜನಗೂಡು ತಾಲೂಕು ಸುತ್ತೂರು ಜಾತ್ರೆಯ ಸರದಿ. ಅಲ್ಲಿ ಕೂಡ ಈ ಬಾರಿಯ ಜಾತ್ರೆಯಲ್ಲಿ ದನಗಳ ಪರಿಷೆ ಇರುವುದಿಲ್ಲ. ಪಶುಸಂಗೋಪನಾ ಇಲಾಖೆಯ ಸಲಹೆ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದ್ದು, ರೈತರು ಸಹಕರಿಸುವಂತೆ ಸುತ್ತೂರು ಜಾತ್ರಾ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಎಸ್. ಶಿವಕುಮಾರಸ್ವಾಮಿ ಕೋರಿದ್ದಾರೆ.
ಇಂದಿನಿಂದ ಹಾಲು ಕರೆಯುವ ಸ್ಪರ್ಧೆ
ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯನ್ನು ಜ.17 ರಿಂದ 19 ರವರೆಗೆ ನಗರದ ಜೀವಣ್ಣ ರಾಯನಕಟ್ಟೆ ಆವರಣದಲ್ಲಿ ಆಯೋಜಿಸಲಾಗಿದೆ. 17 ರಂದು ಸಂಜೆ 4ಕ್ಕೆ ಪಶುಸಂಗೋಪನಾ ಇಲಾಖೆ ಮುಂಭಾಗದಲ್ಲಿ ನಡೆಯುವ ಗೋಪೂಜೆ ಹಾಗೂ ಗೋವುಗಳ ಮೆರವಣಿಗೆಯನ್ನು ಮೇಯರ್ ಎನ್.ಎಂ ರಾಜೇಶ್ವರಿ ಉದ್ಘಾಟಿಸುವರು ಎಂದು ಮೈಸೂರು ನಗರ ಗೋಪಾಲಕರ ಸಂಘದ ಅಧ್ಯಕ್ಷ ಪಾಲಿಕೆ ಪ್ರತಿಪಕ್ಷ ನಾಯಕ ಡಿ. ನಾಗಭೂಷಣ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 18 ರಂದು ಬೆಳಗ್ಗೆ 6.30 ಮತ್ತು ಸಂಜೆ 5.30ಕ್ಕೆ ಹಾಗೂ 19 ರಂದು ಬೆಳಗ್ಗೆ 6.30 ಮತ್ತು ಸಂಜೆ 5.30ಕ್ಕೆ ಹಾಲು ಕರೆಯುವ ಸ್ಪರ್ಧೆ ನಡೆಯಲಿದ್ದು, ರಾಜ್ಯದ ನಾನಾ ಭಾಗಗಳಿಂದ ಗೋಪಾಲಕರು ಭಾಗವಹಿಸಲಿದ್ದಾರೆ. ಅವರಲ್ಲಿ ಅತ್ಯಧಿಕ ಹಾಲು ಕರೆಯುವವರನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗುವುದು ಎಂದರು. ಅಧಿಕ ಹಾಲು ಕರೆದು ವಿಜೇತರಾದವರಿಗೆ ಪ್ರಥಮ ಬಹುಮಾನ 1 ಲಕ್ಷ ಹಾಗೂ 2 ಕೆಜಿ ಬೆಳ್ಳಿ ಕಿರೀಟ, ದ್ವಿತೀಯ ಬಹುಮಾನ 75 ಸಾವಿರ ನಗದು ಹಾಗೂ 1 ಕೆಜಿ ಬೆಳ್ಳಿ ಕಿರೀಟ, ತೃತೀಯ ಬಹುಮಾನ 50 ಸಾವಿರ 1 ಕೆಜಿ ಬೆಳ್ಳಿ ಕಿರೀಟ ಹಾಗೂ ನಾಲ್ಕನೇ ಬಹುಮಾನ 25 ಸಾವಿರ ಹಾಗೂ ಬೆಳ್ಳಿ ಕಿರೀಟ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ನಾಳೆ ನೀರು ಪೂರೈಕೆ ವ್ಯತ್ಯಯ
ನಗರಕ್ಕೆ ನೀರು ಪೂರೈಸುವ ಯಾದವಗಿರಿಯ ಎಚ್‌ಎಲ್‌ಆರ್ ಜಲಸಂಗ್ರಹಾಗಾರದಲ್ಲಿ ದುರಸ್ತಿ ಕಾರ್ಯ ಕೈಗೊಂಡಿರುವುದರಿಂದ ಜ.18 ರಂದು ಕೆಲವು ವಾರ್ಡ್‌ಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಪಾಲಿಕೆಯ ವಾರ್ಡ್ ನಂ.30, 31, 34, 35, 36, 37, 38, 39 ಮತ್ತು 40ನೇ ವಾರ್ಡ್‌ಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ನೀರು ಬಂದ ಸಮಯದಲ್ಲಿ ಸಂಗ್ರಹಿಸಿಕೊಳ್ಳುವಂತೆ ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರದ ಕಾರ್ಯಪಾಲಕ ಎಂಜಿನಿಯರ್ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.