3 ಪಕ್ಷಗಳಿಂದ ಪ್ರಮೋದಾದೇವಿ ಜಪ
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದಿಂದ ಮೂರು ಪ್ರಮುಖ ಪಕ್ಷಗಳು ಏಕ ಅಭ್ಯರ್ಥಿಯ ಹೆಸರನ್ನೇ ಜಪ ಮಾಡುತ್ತಿವೆ!
ಇತ್ತೀಚೆಗೆ ನಿಧನರಾದ ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್ ಪತ್ನಿ ಪ್ರಮೋದಾದೇವಿ ಒಡೆಯರ್ ಹೆಸರು ಎಲ್ಲ ಪಕ್ಷಗಳಿಂದಲೂ ಕೇಳಿ ಬರುತ್ತಿ ಒಡೆಯರ್ ನಿಧನರಾದಾಗ ಮೈಸೂರು ರಾಜವಂಶಸ್ಥರ ಮೇಲೆ ಈ ಭಾಗದ ಜನತೆ ತೋರಿದ ಪ್ರೀತಿ, ಗೌರವ, ಜತೆಗೆ ಅನುಕಂಪವೂ ಕೆಲಸ ಮಾಡುವುದರಿಂದ ಪ್ರಮೋದಾದೇವಿ ಒಡೆಯರ್ ಅವರು ಅಭ್ಯರ್ಥಿಯಾದರೆ ಸಾಕು, ಗೆಲವು ಖಚಿತ ಎಂಬುದು ಮೂರೂ ಪಕ್ಷಗಳ ಲೆಕ್ಕಾಚಾರ.
ಒಡೆಯರ್ ಅವರು ಬದುಕಿದ್ದಾಗಲೇ ಜೆಡಿಎಸ್ ಒಡೆಯರ್ ಅಥವಾ ಪ್ರಮೋದಾದೇವಿ ಅವರನ್ನು ಅಭ್ಯರ್ಥಿಯಾಗಿಸಲು ಸಿದ್ಧತೆ ನಡೆಸಿತ್ತು. ಆದರೆ ಒಡೆಯರ್ ನಿಧನದ ನಂತರ ಯಾವಾಗ ಈ ವಿಚಾರ ಬಹಿರಂಗವಾಯಿತೋ ಕ್ಷೇತ್ರದ ಹಾಲಿ ಸಂಸದರಾದ ಕಾಂಗ್ರೆಸ್ನ ಎಚ್. ವಿಶ್ವನಾಥ್ ಅವರು ಪ್ರಮೋದಾದೇವಿ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದರೆ ಅವರ ಪರ ಕೆಲಸ ಮಾಡುವುದಾಗಿ ಘೋಷಿಸಿದರು.
ಈ ಎರಡು ಪಕ್ಷಗಳಿಗೆ ತಾನೇನು ಕಮ್ಮಿ ಇಲ್ಲ ಎಂಬಂತೆ ಬಿಜೆಪಿಯೂ ಪ್ರಮೋದಾದೇವಿ ಅವರನ್ನು ಸೆಳೆಯಲು ಯತ್ನಿಸುತ್ತಿದೆ.
ಪ್ರಮೋದಾದೇವಿಯನ್ನು ಭೇಟಿ ಮಾಡಿದ ರಾಹುಲ್: ಕಳೆದ ವಾರ ಬೆಂಗಳೂರಿಗೆ ಬಂದಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಅಲ್ಲಿನ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದ ಪ್ರಮೋದಾದೇವಿ ಅವರನ್ನು ಭೇಟಿ ಮಾಡಿ, ಸಾಂತ್ವನ ಹೇಳಿರುವುದು ಬಿಜೆಪಿಯ ಆಸೆಗೆ ತಣ್ಣೀರು ಎರಚಿದೆ. ಆದರೆ ಜೆಡಿಎಸ್ ಇನ್ನೂ ತನ್ನ ಪ್ರಯತ್ನ ಬಿಟ್ಟಿಲ್ಲ. ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಮೋದಾದೇವಿ ಅವರ ಭೇಟಿಗಾಗಿ ಯತ್ನಿಸುತ್ತಿದ್ದಾರೆ.
ಹೀಗೆ ಮೂರು ಪಕ್ಷಗಳು ಪ್ರಮೋದಾದೇವಿ ಒಡೆಯರ್ ಅವರ ಹೆಸರನ್ನು ಜಪ ಮಾಡುವುದರ ಜೊತೆಗೆ ಒಳಗೊಳಗೆ ಲೋಕಸಭಾ ಕದನಕ್ಕಾಗಿ ಸಜ್ಜಾಗುತ್ತಿವೆ.
ಕಾಂಗ್ರೆಸ್ನಲ್ಲಿ ಹಾಲಿ ಸಂಸದ ಎಚ್. ವಿಶ್ವನಾಥ್ ಅವರು ಹೆಸರು ಮಾತ್ರ ಕೆಪಿಸಿಸಿಯಿಂದ ಎಐಸಿಸಿಗೆ ಶಿಫಾರಸು ಆಗಿದೆ. ಪ್ರಮೋದಾದೇವಿ ಅವರು ರಾಜಕೀಯಕ್ಕೆ ಬಂದಲ್ಲಿ ಮಾತ್ರ ಬದಲಾಗಬಹುದು. ಆದರೆ ಆ ಸಾಧ್ಯತೆ ತೀರಾ ಕಡಿಮೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಹೀಗಾಗಿ ವಿಶ್ವನಾಥ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.
ದಾಸ್ಗೆ ದೆಹಲಿ ತಲುಪು ಆಸೆ: ಬಿಜೆಪಿಯಿಂದ 1998 ಹಾಗೂ 2004ರಲ್ಲಿ ಗೆದ್ದಿದ್ದ, 1999, 2009 ರಲ್ಲಿ ಸೋತಿರುವ ಸಿ.ಎಚ್. ವಿಜಯಶಂಕರ್ ಅವರ ಹೆಸರು ಪ್ರಬಲವಾಗಿತ್ತು. ಆದರೆ ರಾಜ್ಯದಲ್ಲಿ ಮೈಸೂರಿನವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದರಿಂದ ಈ ಬಾರಿ ಅಭ್ಯರ್ಥಿ ಬದಲಿಸುವ ಯತ್ನ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವ ಎಸ್.ಎ. ರಾಮದಾಸ್ ಮೋದಿ ಅಲೆಯಲ್ಲಿ ದೆಹಲಿ ತಲುಪುವ ಕನಸು ಕಾಣುತ್ತಿದ್ದಾರೆ. ಕೇಂದ್ರದಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದಲ್ಲಿ ಮಂತ್ರಿಯಾಗಬೇಕು ಎಂದುಕೊಂಡಿರುವ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಬೆಂಗಳೂರು ಉತ್ತರ, ಉಡುಪಿ- ಚಿಕ್ಕಮಗಳೂರು ಜತೆಗೆ ಇಲ್ಲಿಯೂ ಒಂದು ಟವೆಲ್ ಹಾಕಿ, ಕಾಯುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕೆಜೆಪಿಯಿಂದ ಬಿಜೆಪಿಗೆ ಮರಳಿದ ನಂತರ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರೂ ಕೇಳಿ ಬರುತ್ತಿದೆ.
ಆರಂಭದಲ್ಲಿ ಇದು ಕಾಂಗ್ರೆಸ್ ಭದ್ರಕೋಟೆ
ಆರಂಭದ ಒಂದು ಚುನಾವಣೆಯಲ್ಲಿ ಕಿಸಾನ್ ಮಜ್ದೂರ್ ಪ್ರಜಾಪಾರ್ಟಿಯ ಎಂ.ಎಸ್. ಗುರುಪಾದಸ್ವಾಮಿ ಅವರು ಆಯ್ಕೆಯಾಗಿದ್ದನ್ನು ಹೊರತುಪಡಿಸಿದರೆ ಮೈಸೂರು ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆ ಎನಿಸಿತ್ತು. ಇಂಥ ಕಡೆ ಎರಡು ಬಾರಿ ಬಿಜೆಪಿ ತಮ್ಮ ಬಾವುಟ ಹಾರಿಸಿದೆ. ಆದರೆ ಜನತಾ ಪರಿವಾರ ಒಮ್ಮೆಯೂ ಗೆದ್ದಿಲ್ಲ. ಕಳೆದ ಬಾರಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ಕೊಡಗು ಜಿಲ್ಲೆಯೂ ಕ್ಷೇತ್ರಕ್ಕೆ ಸೇರಿದ ಮೇಲೆ ಆ ಪಕ್ಷದ ಸ್ಥಿತಿ ಇನ್ನೂ ಗಂಭೀರವಾಗಿದೆ. ಜೆಡಿಎಸ್ಗೆ ರಾಜಿನಾಮೆ ನೀಡಿ, ಸೈಕಲ್ ಏರಲು ಹೋಗಿ, ಮನೆಯಲ್ಲಿ ಕುಳಿತಿರುವ ಮಾಜಿ ಸಚಿವ ಎಂ. ಮಹದೇವ್ ಅವರ ಮನವೊಲಿಸಿ, ಅಭ್ಯರ್ಥಿಯಾಗಿಸಿ, ವೀರಶೈವ- ಒಕ್ಕಲಿಗ ಮತ ಬ್ಯಾಂಕ್ನೊಂದಿಗೆ ಹೋರಾಡುವ ಯತ್ನ ನಡೆದಿದೆ. ಮಹದೇವ್ ಒಪ್ಪದಿದ್ದಲ್ಲಿ ಹಾಲಿ ಬಿಜೆಪಿಯಲ್ಲಿರುವ, ವೀರಶೈವ ಜನಾಂಗದ ಮಾಜಿ ಶಾಸಕರೊಬ್ಬರನ್ನು ಸೆಳೆದು, ಅಭ್ಯರ್ಥಿಯಾಗಿಸುವ ಪ್ರಯತ್ನಕ್ಕೂ ಚಾಲನೆ ನೀಡಲಾಗಿದೆ ಎನ್ನಲಾಗಿದೆ.
-ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

