ಸಂಸದರು ಸಾಧನೆ ಬಹಿರಂಗಪಡಿಸಲಿ
ಕ.ಪ್ರ.ವಾರ್ತೆ , ಪಿರಿಯಾಪಟ್ಟಣ , ಜ. 16
ಸಂಸದ ಎಚ್. ವಿಶ್ವನಾಥ್ ತಮ್ಮ ಅಧಿಕಾರಾವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಹಾಗೂ ತಮ್ಮ 5 ವರ್ಷಗಳ ಅವಧಿಯಲ್ಲಿ ಬಂದ 25 ಕೋಟಿ ಸಂಸದರ ನಿಧಿ ಬಳಕೆಯ ಬಗ್ಗೆ ಬಹಿರಂಗ ಚರ್ಚೆಯಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಸವಾಲು ಹಾಕಿದರು.
ಪಟ್ಟಣದ ಪಕ್ಷದ ಕಚೇರಿಯಲ್ಲಿ ಪಕ್ಷದ ಬಿಎಲ್‌ಎ-2 ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ಬಿಎಲ್‌ಎ-1, ಬಿಎಲ್‌ಎ-2 ಹಾಗೂ ಬಿಎಲ್‌ಒ ವ್ಯವಸ್ಥೆಯನ್ನು ಪ್ರಥಮ ಬಾರಿಗೆ ಜಾರಿಗೆ ತರುತ್ತಿರುವ ಪಕ್ಷ ಬಿಜೆಪಿಯಾಗಿದ್ದು, ಕೇಂದ್ರ ಚುನಾವಣಾ ಆಯೋಗದ ನೂತನ ವ್ಯವಸ್ಥೆಯು ಸ್ವಾಗತಾರ್ಹವಾಗಿದೆ. ಇದರಿಂದಾಗಿ ಸಾರ್ವಜನಿಕರು ಮತದಾನದಿಂದ ವಂಚಿತರಾಗುವುದು ತಪ್ಪುತ್ತದೆ. ಪಕ್ಷದಿಂದ ನೇಮಿಸಲಾಗುವ ಬಿಎಲ್‌ಎ-2 ಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಮತದಾರರು ಮತದಾನದಿಂದ ವಂಚಿತರಾಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದರು.
ತಮ್ಮ ವಿಧಾನ ಪರಿಷತ್ ಸದಸ್ಯರ ನಿಧಿಯ ಬಳಕೆ ಬಗ್ಗೆ ಹಾಗೂ ತಾವು ಈ ಹಿಂದೆ ಸಂಸದರಾಗಿದ್ದಾಗ ಬಿಡುಗಡೆಯಾಗಿದ್ದ ಸಂಸದರ ನಿಧಿಯ ಖರ್ಚು ವೆಚ್ಚದ ಬಗ್ಗೆ ಶೀಘ್ರ ಬಹಿರಂಗಪಡಿಸುವುದಾಗಿ ತಿಳಿಸಿದ ಅವರು, ಹಾಲಿ ಸಂಸದರು ಕ್ಷೇತ್ರಕ್ಕೆ ಮಾಡಿರುವುದಾದರೂ ಏನು ಎಂದು ಪ್ರಶ್ನಿಸಿದರಲ್ಲದೆ, ಸಂಸದರು ತಮ್ಮ ಸಂಸದರ ಅನುದಾನದ ಬಳಕೆಯ ಬಗ್ಗೆ ಮಾಹಿತಿ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.
ತಾವು ಸಂಸದರಾಗಿದ್ದಾಗ ಮೈಸೂರಿನ ರೇಲ್ವೆ ನಿಲ್ದಾಣದಲ್ಲಿ ಹೆಚ್ಚುವರಿಯಾಗಿ ಪ್ಲಾಟ್‌ಫಾರ್ಮ್‌ಗಳನ್ನು ಮಾಡಲಾಯಿತು. ಅಲ್ಲದೆ ವಿಮಾನ ನಿಲ್ದಾಣದ ಉನ್ನತೀಕರಣ ಕ್ರಮ ಕೈಗೊಳ್ಳಲಾಗಿತ್ತು. ತರುವಾಯ ಆ ಯೋಜನೆಗಳೆಲ್ಲ ಮುಂದುವರಿಯಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸುರೇಶ್‌ಬಾಬು, ಪದಾಧಿಕಾರಿಗಳಾದ ಪಿ.ವಿ. ಬಸವರಾಜಪ್ಪ, ಆರ್.ಟಿ. ಸತೀಶ್, ಸಿ.ಕೆ. ಪ್ರಸನ್ನಕೇಶವ, ಪುಟ್ಟಸ್ವಾಮಿ, ಎಂ.ಎಂ. ರಾಜೇಗೌಡ, ಲೋಕಪಾಲಯ್ಯ, ಜೆ.ಸಿ. ವಿಕ್ರಂರಾಜ್, ಪಿ.ಬಿ. ಶ್ರೀನಿವಾಸಗೌಡ, ಕೃಷ್ಣೇಗೌಡ, ಶಶಿ, ಪಿ.ಟಿ. ವೇಣುಗೋಪಾಲ್, ಕೃಷ್ಣಪ್ರಸಾದ್, ಟಿ. ರಮೇಶ್, ಶಿವಸ್ವಾಮಿ, ಪಿ.ಜೆ. ರವಿ, ಕೃಷ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

