ಕಂಪ್ಯೂಟರ್ ಕಳವು: ಆರೋಪಿಗಳ ಬಂಧನ
ಮೈಸೂರು: ಶಾಲಾ- ಕಾಲೇಜುಗಳಲ್ಲಿ ಕಳ್ಳತನ ಮಾಡುತ್ತಿದ್ದ ಮೂವರನ್ನು ನರಸಿಂಹರಾಜ ಠಾಣೆ ಪೊಲೀಸರು ಬಂಧಿಸಿ, 9 ಕಂಪ್ಯೂಟರ್ ವಶಪಡಿಸಿಕೊಂಡಿದ್ದಾರೆ.
ಕೆಸರೆ 1ನೇ ಹಂತ, ರಾಜೇಂದ್ರನಗರ ನಿವಾಸಿ ಸಲ್ಮಾನ್ ಷರೀಫ್ (19) ಬಂಧಿತ ಆರೋಪಿ. ಈತನ ಜೊತೆಗೆ ಇಬ್ಬರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎನ್.ಆರ್. ಠಾಣೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಕೆಸರೆ 1ನೇ ಹಂತದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಲು ಮುಂದಾದಾಗ, ಓರ್ವ ತಪ್ಪಿಸಿಕೊಂಡಿದ್ದಾನೆ. ಬಳಿಕ ಇಬ್ಬರು ಬಾಲಕರು ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ್ದ ಕಂಪ್ಯೂಟರನ್ನು ಆಟೋದಲ್ಲಿ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಕೆಸರೆ 2ನೇ ಹಂತದ ವಿವಿಧೆಡೆ ಕಳ್ಳತನ ನಡೆಸಿದ್ದ 1.35 ಲಕ್ಷ ವೆಚ್ಚದ 9 ಕಂಪ್ಯೂಟರ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎನ್.ಆರ್. ಠಾಣೆ ಇನ್ಸ್ಪೆಕ್ಟರ್ ಎಸ್.ಪರಶಿವಮೂರ್ತಿ, ಎಸ್ಐ ಮುಸ್ತಾಕ್ ಪಾಷ, ಬಿ. ಪರಶುರಾಮ್, ಎಎಸ್ಐ ಸಣ್ಣಬೈರ, ಸಿಬ್ಬಂದಿ ವಸಂತ್, ಲಿಂಗರಾಜಪ್ಪ, ನಾರಾಯಣಗೌಡ ಅವರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
ವರದಕ್ಷಿಣೆ ಕಿರುಕುಳ: ಪತಿಗೆ ಸಜೆ
ಮೈಸೂರು: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ ನಗರದ 4ನೇ ಹೆಚ್ಚುವರಿ ಮತ್ತು ಸಿಜೆಎಂ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿದೆ. ಕೆ.ಜಿ. ಕೊಪ್ಪಲು ನಿವಾಸಿ, ಆಟೋ ಚಾಲಕ ಮಹದೇವ ಶಿಕ್ಷೆಗೆ ಒಳಗಾದವನು. ಜಯಪುರ ಹೋಬಳಿ ಕೆಲ್ಲಹಳ್ಳಿ ಗ್ರಾಮದ ಚಾಮುಂಡೇಗೌಡರ ಪುತ್ರಿ ಲಕ್ಷ್ಮಿ ಅವರನ್ನು ಮಹದೇವನಿಗೆ ವಿವಾಹ ಮಾಡಿಕೊಡಲಾಗಿತ್ತು. ಇವರಿಗೆ ಒಂದು ಗಂಡು ಮಗು ಸಹ ಇತ್ತು. ನಂತರದ ದಿನಗಳಲ್ಲಿ ಆರೋಪಿಯು ಕುಡಿದು ಬಂದು ಹೆಂಡತಿಗೆ ಹಿಂಸೆ ನೀಡಿ, ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದನು. ಒಮ್ಮೆ ಕುಡಿದು ಬಂದು ದೈಹಿಕ ಹಿಂಸೆ ನೀಡಿ ಪ್ರಾಣ ಬೆದರಿಕೆ ಹಾಕಿದ್ದ. ಈ ಸಂಬಂಧ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ಮತ್ತು ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಹೆಗಡೆ ಅವರು ವಾದ- ಪ್ರತಿವಾದ ಆಲಿಸಿ ಆರೋಪಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿದ್ದಾರೆ. ಸರ್ಕಾರಿ ಪರ ಸಹಾಯಕ ಅಭಿಯೋಜಕ ಎಸ್. ಶಿವಕುಮಾರ್ ವಾದಿಸಿದ್ದರು.
ನಿತ್ರಾಣಗೊಂಡಿದ್ದ ಹೆಣ್ಣಾನೆ ಸಾವು
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಹೊರಬಂದು ಮತ್ತೆ ಕಾಡಿಗೆ ಹೋಗಲಾಗದೆ ತೀವ್ರ ಪೆಟ್ಟು ತಿಂದು ಅಸ್ವಸ್ಥಗೊಂಡು ನಾಗಾಪುರ ಪುನರ್ವಸತಿ ಕೇಂದ್ರದ ಕೆಂಚನಕಟ್ಟೆಯಲ್ಲಿ ಆಶ್ರಯ ಪಡೆದಿದ್ದ ಹೆಣ್ಣಾನೆ ಗುರುವಾರ ಮಧ್ಯರಾತ್ರಿ ಮೃತಪಟ್ಟಿದೆ.
ಕಾಡಾನೆಗಳೆರಡು ಬುಧವಾರ ಇಡೀ ದಿನ ಅನೇಕ ಅವಾಂತರಗಳನ್ನು ಸೃಷ್ಟಿಸಿದಾಗ ಸಾರ್ವಜನಿಕರ ಕಲ್ಲೇಟು ಹಾಗೂ ಅರಣ್ಯ ಇಲಾಖೆಯವರ ಬೆದರು ಗುಂಡೇಟಿಗೆ ಹೆದರಿ ಸಲಗವೊಂದು ಕಾಡಿಗೆ ಸೇರಿದ್ದರೆ, ಮತ್ತೊಂದು ಹೆಣ್ಣಾನೆ ಕಲ್ಲೇಟು ಮತ್ತು ಗುಂಡೇಟಿಗೆ ಅಸ್ವಸ್ಥಗೊಂಡು ಕಾಡಿಗೆ ಮರಳಲಾಗದೆ ಕಾಡಂಚಿನಲ್ಲಿರುವ ನಾಗಾಪುರ 3ನೇ ಘಟಕದ ಕೆಂಚನಕಟ್ಟೆಯಲ್ಲಿ ನೀರು ಕುಡಿಯಲು ಹೋಗಿ ನಿತ್ರಾಣಗೊಂಡು ಅಲ್ಲೇ ಕುಸಿದು ಬಿದ್ದಿತ್ತು. ಆನೆಯ ಶವವನ್ನು ಕಟ್ಟೆಯಿಂದ ಟ್ಯ್ರಾಕ್ಟರ್ ಸಹಾಯದೊಂದಿಗೆ ಹೊರತೆಗೆದು ಶವಪರೀಕ್ಷೆ ನಡೆಸಿ ಸುಡಲಾಯಿತು. ಹುಣಸೂರಿನ ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ.ನಾಗರಾಜ್ ಮರಣೋತ್ತರ ಪರೀಕ್ಷೆ ನಡೆಸಿದರು. ಎಸಿಎಫ್ ಶಿವಶಂಕರಸ್ವಾಮಿ, ಆರ್ಎಫ್ಒ ಎನ್.ಪಿ. ರಾಜಪ್ಪ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

