ಕ್ಷೇತ್ರದ ಅಭಿವೃದ್ಧಿಗೆ ಅವಿರತ ಪ್ರಯತ್ನ
ಕೆ.ಆರ್. ನಗರ: ನಾನು ಕ್ಷೇತ್ರದ ಶಾಸಕನಾದ ನಂತರ ಈವರೆಗೆ ಸರ್ಕಾರದಿಂದ ಅನುದಾನ ತಂದು ಆರಂಭಿಸಿದ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಮುಂದೆಯು ಕ್ಷೇತ್ರದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಪಟ್ಟಣದಲ್ಲಿ ಸರ್ಕಾರಿ ನೌಕರರ ಸಂಘದವರು ನಿರ್ಮಿಸಿರುವ ನವೀಕೃತ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಾಸಕರ ನಿಧಿಯಿಂದ ಡೈನಿಂಗ್ ಹಾಲ್ ನಿರ್ಮಾಣಕ್ಕೆ ಎರಡು ಕಂತುಗಳಲ್ಲಿ 10 ಲಕ್ಷ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಜತೆ ಕೆಲಸ ಮಾಡುವ ಸಿಬ್ಬಂದಿಯನ್ನು ಗೌರವಿಸಿ, ಅವರ ಸೇವಾ ಕಾರ್ಯವನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಆ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ನನ್ನೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು ಎಂದ ಶಾಸಕರು, ಸರ್ಕಾರಿ ನೌಕರರ ಹಿತ ಕಾಯಲು ನಾನು ಸದಾ ಬದ್ಧನಾಗಿದ್ದೇನೆ ಎಂದು ಅವರು ತಿಳಿಸಿದರು.
ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಯಧುಗಿರೀಶ್, ಗೌರವಾಧ್ಯಕ್ಷೆ ಭಾಗ್ಯ, ಉಪಾಧ್ಯಕ್ಷ ಕುಚೇಲ, ಪ್ರಭಾಕರ, ನಂಜಮ್ಮ, ಸಂಘಟನಾ ಕಾರ್ಯದರ್ಶಿ ಉಮೇಶ್, ತಹಸೀಲ್ದಾರ್ ಬಿ.ಎನ್. ವೀಣಾಕುಮಾರ್, ರಾಜ್ಯ ಪರಿಷತ್ ಸದಸ್ಯ ಶ್ರೀಕಾಂತ್, ತಾಲೂಕು ಆರೋಗ್ಯಾಧಿಕಾರಿ ಡಾ. ಶಿವಪ್ರಸಾದ್, ನಿರ್ದೇಶಕ ಕೆ.ಎನ್. ದೇವೇಂದ್ರ ಇದ್ದರು.
ಕೊಳವೆಬಾವಿ ಕೊರೆಸಲು ಆಗ್ರಹಿಸಿ ಪ್ರತಿಭಟನೆ
ಎಚ್.ಡಿ. ಕೋಟೆ: ಗಂಗಾಕಲ್ಯಾಣ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯುವಂತೆ ಒತ್ತಾಯಿಸಿ ಶುಕ್ರವಾರ ದಸಂಸ ವತಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2011-12ನೇ ಸಾಲಿನಲ್ಲಿ ಅಧ್ಯಕ್ಷರ ವಿವೇಚನಾ ಕೋಟಾದಲ್ಲಿ 136 ಫಲಾನುಭವಿಗಳಿಗೆ ಸೌಲಭ್ಯ ದೊರಕಿದ್ದು, ಅದರಲ್ಲಿ 16 ಮಂದಿಗೆ ಮಾತ್ರ ಕೊಳವೆ ಬಾವಿ ಕೊರೆಯಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ದಾಖಲಾತಿಗಳನ್ನು ಸಹ ನೀಡಲಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕೊಳವೆ ಬಾವಿ ಸೌಲಭ್ಯವನ್ನು ಬಡವರಿಗೆ ನೀಡದಿದ್ದರೆ, ಹಂತ ಹಂತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದು, ಈ ಸಂಬಂಧ ಜ.27 ರಂದು ಮೈಸೂರು ವ್ಯವಸ್ಥಾಪಕರ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಪ್ರತಿಭಟನೆಯಲ್ಲಿ ತಾಲೂಕು ಸಂಚಾಲಕ ದೊಡ್ಡಸಿದ್ದು, ಪುಟ್ಟರಾಜು, ದೇವರಾಜು, ಚಾ. ಶಿವಕುಮಾರ್, ರಾಜಣ್ಣ, ಸಣ್ಣಕುಮಾರ್, ಪುಟ್ಟಮಾದು, ಪುಟ್ಟರಾಜು, ಗೋವಿಂದರಾಜು, ಸೋಮಣ್ಣ, ಮಹದೇವು, ಬಸವಯ್ಯ, ಶಿವಲಿಂಗಯ್ಯ ಭಾಗವಹಿಸಿದ್ದರು.
ಲೋಕಾಯುಕ್ತರಿಗೆ ದೂರು ಸಲ್ಲಿಕೆ
ಹುಣಸೂರು: ಭ್ರಷ್ಟಾಚಾರ ಇತ್ಯಾದಿಗಳ ಬಗ್ಗೆ ಸಾರ್ವಜನಿಕರು ಕರ್ನಾಟಕ ಲೋಕಾಯುಕ್ತ ಅವರಿಗೆ ದೂರು ಅರ್ಜಿಗಳನ್ನು ಸಲ್ಲಿಸಲು, ನೋಂದಾಯಿಸಿ ವಿಚಾರಣೆಗೆ ಒಳಪಡಿಸುವ ಕಾರ್ಯಕ್ರಮವು ಜ.27 ರಿಂದ 29 ರವರೆಗೆ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಪಟ್ಟಣದ ಲೋಕೋಪಯೋಗಿ ಇಲಾಖಾ ಅತಿಥಿ ಗೃಹದಲ್ಲಿ ಏರ್ಪಡಿಸಿದೆ. ರಾಜ್ಯದ ಉಪ ಲೋಕಾಯುಕ್ತ-2 ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಅವರು ಜ. 30ರ ಬೆಳಗ್ಗೆ 10 ರಿಂದ ಸಂಜೆಯವೆರೆಗೆ ಪಟ್ಟಣದ ಪುರಸಭಾ ಕಚೇರಿಯ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಮೂನೆ 1 ಮತ್ತು 2 ರಲ್ಲಿ ಸಲ್ಲಿಸಲಾಗಿರುವ ಹಾಗೂ ವಿಚಾರಣಾ ಹಂತಗಳಲ್ಲಿರುವ ಹುಣಸೂರು, ಕೆ.ಆರ್. ನಗರ, ಪಿರಿಯಾಪಟ್ಟಣ ಹಾಗೂ ಎಚ್.ಡಿ. ಕೋಟೆ ತಾಲೂಕುಗಳ ವ್ಯಾಪ್ತಿಯ ಅರ್ಜಿಗಳ ವಿಚಾರಣೆ ನಡೆಯಲಿದೆ.
ಚರ್ಚಾ ಸ್ಪರ್ಧೆ
ಟಿ. ನರಸೀಪುರ: ತಾಲೂಕಿನ ತಲಕಾಡು ಗ್ರಾಮದಲ್ಲಿರುವ ಸಮರ್ಪಣಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜ. 25ರ ಬೆಳಗ್ಗೆ 10ಕ್ಕೆ ಜಿಲ್ಲಾಮಟ್ಟದ ಅಂತರ ಪ್ರೌಢಶಾಲಾ ಚರ್ಚಾ ಸ್ಪರ್ಧೆ ನಡೆಯಲಿದೆ. ದಿ. ರಮೇಶ್ ಸ್ಮರಣಾರ್ಥ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಚರ್ಚಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಪ್ರತಿ ಶಾಲೆಯಿಂದ ಚರ್ಚಾ ವಿಷಯದ ಬಗ್ಗೆ ಪರ ಮತ್ತು ವಿರೋಧ ಮಾತನಾಡಲು ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಆಸಕ್ತ ವಿದ್ಯಾರ್ಥಿಗಳು ಜ.23 ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ದೂ. 08227-273410, ಮೊ. 9740502423ಗೆ ಕರೆ ಮಾಡಿ ಸಂಪರ್ಕಿ.
ನಾಳೆ ಪೂರ್ವಭಾವಿ ಸಭೆ
ಎಚ್.ಡಿ. ಕೋಟೆ: ಪಟ್ಟಣದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಫೆಬ್ರವರಿಯಲ್ಲಿ ಎರಡು ದಿನಗಳ ಕೃಷಿ ಉತ್ಸವ ನಡೆಸಲು ತೀರ್ಮಾನಿಸಿದ್ದು, ಈ ಸಂಬಂಧ ಜ.21 ರಂದು ಕಚೇರಿ ಆವರಣದಲ್ಲಿ ಕೃಷಿ ಉತ್ಸವದ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಯೋಜನಾಧಿಕಾರಿ ಉಮಾರಬ್ಬ ಹೇಳಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳೇ ಕೀಳರಿಮೆ ಬಿಡಿ
ಮೈಸೂರು: ಗ್ರಾಮೀಣ ಮತ್ತು ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕೀಳರಿಮೆ ಹೊಂದುವ ಅಗತ್ಯವಿಲ್ಲ ಎಂದು ಪತ್ರಕರ್ತ ಮುಳ್ಳೂರು ರಾಜು ಹೇಳಿದರು. ತಾಲೂಕಿನ ವರುಣ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 2013-14ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಗ್ರಾಮೀಣ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಬತ್ತ ಬೆಳೆಯುವ ಗದ್ದೆಗಳಂತೆ. ಆದರೆ ನಗರ ಪ್ರದೇಶದ ಖಾಸಗಿ ಕಾಲೇಜುಗಳು ಬತ್ತ ತುಂಬುವ ಚೀಲದಂತೆ. ಆದರೆ ಶಿಕ್ಷಣದ ನಿಜವಾದ ಆಶಯ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಈಡೇರುತ್ತಿದೆ. ಉದ್ಯೋಗ ಮತ್ತು ಹಣ ಸಂಪಾದನೆಯಷ್ಟೇ ಶಿಕ್ಷಣದ ಗುರಿ ಆಗಬಾರದು. ಶಿಕ್ಷಣದಿಂದ ಜೀವನ ಪಾಠ ಕಲಿಯುವಂತೆ ಆಗಬೇಕು. ವಿದ್ಯಾರ್ಥಿಗಳು ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದರು.
ಇಂದಿನ ಕೆಡಿಪಿ ಸಭೆ ಮುಂದಕ್ಕೆ
ಮೈಸೂರು: ಮೈಸೂರು ಜಿಪಂ ಸಭಾಂಗಣದಲ್ಲಿ ಜ.18 ರಂದು ಬೆಳಗ್ಗೆ 11ಕ್ಕೆ ನಡೆಯಬೇಕಿದ್ದ ಕೆಡಿಪಿ ಸಭೆಯನ್ನು ಜ.22ಕ್ಕೆ ಮುಂದೂಡಲಾಗಿದೆ ಎಂದು ಜಿಪಂ ಅಧ್ಯಕ್ಷ ಎಂ. ಮಹದೇವು ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಅಮಿತಾಪ್ರಸಾದ್ ಅವರು ಅಧಿಕಾರಿಗಳ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಕೆಡಿಪಿ ಸಭೆ ಮುಂದೂಡಲ್ಪಟ್ಟಿದೆ.
ಅಂತರ್ಜಲ ಜನಜಾಗೃತಿ ಶಿಬಿರ
ಗಣಿ ಮತ್ತು ಭೂವಿಜ್ಞಾನ ಇಲಾಖೆ ವತಿಯಿಂದ ಜ.24ರ ಬೆಳಗ್ಗೆ 10ಕ್ಕೆ ತಾಲೂಕಿನ ದೊಡ್ಡಹುಂಡಿ ಗ್ರಾಮದಲ್ಲಿರುವ ಶ್ರೀ ಮೊರಾರ್ಜಿ ವಸತಿ ಶಾಲೆಯ ಆವರಣದಲ್ಲಿ ಹಾಗೂ ಜ.30ರ ಬೆಳಗ್ಗೆ 10ಕ್ಕೆ ಕೆ.ಆರ್. ನಗರ ತಾಲೂಕಿನ ಭೇರ್ಯ ಗ್ರಾಮದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಅಂತರ್ಜಲ ಜನಜಾಗೃತಿ ಶಿಬಿರ ಏರ್ಪಡಿಸಿದೆ. ಶಿಬಿರದಲ್ಲಿ ವಿಷಯ ಪರಿಣಿತರಿಂದ ಅಂತರ್ಜಲದ ಪ್ರಾತಕ್ಷಿಕೆಯೊಂದಿಗೆ ಉಪನ್ಯಾಸಗಳನ್ನು ನೀಡಲಾಗುವುದು.
4 ದಿನ ತುಂತುರು ಮಳೆ ಸಾಧ್ಯತೆ
ಜಿಲ್ಲೆಯಲ್ಲಿ ಜ.18 ರಿಂದ 21 ರವರೆಗೆ ಮೋಡ ಕವಿದ ವಾತಾವರಣವಿದ್ದು, ಚದುರಿದಂತೆ ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಸಮಗ್ರ ಕೃಷಿ ಹವಾಮಾನ ವಿಭಾಗ ತಿಳಿಸಿದೆ. ಗರಿಷ್ಠ 29 ರಿಂದ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 17 ರಿಂದ 18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಬೆಳಗಿನ ಗಾಳಿಯ ತೇವಾಂಶ ಶೇ.74 ರಿಂದ 76 ವರೆಗೆ ಮತ್ತು ಮಧ್ಯಾಹ್ನದ ತೇವಾಂಶ ಶೇ.37 ರಿಂದ 51 ಮತ್ತು ಗಾಳಿಯು ಗಂಟೆಗೆ ಸರಾಸರಿ 4 ರಿಂದ 7 ಕಿ.ಮೀ. ವೇಗದಲ್ಲಿ ಬೀಸಲಿದೆ.ಈ ವೇಳೆ ಬಾಳೆ ಬೆಳೆಗೆ ಕಾಯಿ ಬಿಡುವ ಸಂದರ್ಭದಲ್ಲಿ ಎಲೆ ಚುಕ್ಕೆ ರೋಗ ಬರಬಹುದು. ಇದರ ನಿಯಂತ್ರಣಕ್ಕೆ ಬ್ಲೈಟ್ಯಾಕ್ಸ್ 3 ಗ್ರಾಂ ಔಷಧವನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣಮಾಡಿ ಸಿಂಪಡಿಸಬೇಕು. ಎಲೆಗೆ ದ್ರಾವಣ ಅಂಟಿಕೊಳ್ಳಲು ಸೋಪಿನ ದ್ರಾವಣ ಮಿಶ್ರಣಮಾಡಿ ಸಿಂಪಡಿಸಬೇಕು. ದವಸ ಧಾನ್ಯಗಳನ್ನು ಸರಿಯಾಗಿ ಒಣಗಿಸಬೇಕು. ಅಂದರೆ ಏಕದಳ ದಾನ್ಯಗಳು ತೇವಾಂಶ ಶೇ.11 ರಿಂದ 12, ದ್ವಿದಳ ದಾನ್ಯಗಳ ತೇವಾಂಶ ಶೇ.9, ಎಣ್ಣೆಕಾಳುಗಳು ಶೇ. 8 ಮತ್ತು ತರಕಾರಿ ಬೀಜಗಳು ಶೇ.5 ರಿಂದ 6 ರಷ್ಟಿರಬೇಕು. ಇದರಿಂದ ಹೆಚ್ಚು ದಿನ ಕೆಡದಂತೆ ಬೀಜಗಳನ್ನು ಸಂರಕ್ಷಿಸಬಹುದು. ಜೊತೆಗೆ ಉಗ್ರಾಣ ಕೀಟದ ಬಾಧೆಯನ್ನು ಕಡಿಮೆ ಮಾಡಬಹುದು. ಮಾವು ಹೂ ಬಿಡುವ ವೇಳೆ ಜಿಗಿಹುಳು ಮತ್ತು ಬೂದಿ ರೋಗ ಕಾಡುತ್ತದೆ. ಇದರ ನಿಯಂತ್ರಣಕ್ಕೆ ಗಿಡಗಳಿಗೆ 1.5 ಮಿ.ಲೀ. ರೋಗರ್ ಜೊತೆಗೆ 3 ಗ್ರಾಂ. ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗೆ ದೂ. 0821- 2591267 ಅಥವಾ 8095227713.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

