ದಲಿತರು ಹಿಂದುಳಿಯಲು ಮಾಹಿತಿ ಕೊರತೆ ಕಾರಣ
ಮೈಸೂರು: ದಲಿತರು ಹಿಂದುಳಿಯಲು ಮಾಹಿತಿ ಕೊರತೆಯೇ ಪ್ರಮುಖ ಕಾರಣವಾಗಿದೆ. ಸರ್ಕಾರದಿಂದ ಸಾಕಷ್ಟು ಯೋಜನೆಗಳನ್ನು ರೂಪಿಸಿದರೂ ಕೆಲವೇ ಕೆಲವು ಮಂದಿ ತಿಳಿದುಕೊಳ್ಳಲು ಹಾಗೂ ಬಳಸಿಕೊಳ್ಳಲು ಆಸಕ್ತಿ ವಹಿಸುತ್ತಾರೆ ಎಂದು ಧೀಪ್ ಸಂಸ್ಥೆಯ ಅಧ್ಯಕ್ಷ ಎಚ್. ಸತೀಶ್ಕುಮಾರ್ ವಿಷಾದಿಸಿದರು.
ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮವು ಅಂಬೇಡ್ಕರ್ ವಿವಿಧೋದ್ದೇಶ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ಶುಕ್ರವಾರ ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಏರ್ಪಡಿಸಿದ್ದ ಎನ್ಎಸ್ಐಸಿಯ ಯೋಜನೆಗಳ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮಗೆ ಸಿಕ್ಕ ಅವಕಾಶವನ್ನು ಕ್ರಮಬದ್ಧವಾಗಿ ಬಳಸಿಕೊಳ್ಳುವಲ್ಲಿ ದಲಿತರು ಸೋತಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಪ್ರಚಾರ ನೀಡಿದ್ದರೂ, ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿಲ್ಲ. ಭಾಗವಹಿಸಿರುವವರು ಕೂಡ ಪೂರ್ವಸಿದ್ಧತೆ ಇಲ್ಲದೆ ಬಂದಿರುವುದು ನಿರಾಸಕ್ತಿಯನ್ನು ತೋರ್ಪಡಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರ ಖಾಸಗೀಕರಣಕ್ಕೆ ತನ್ನನ್ನು ಒಳಪಡಿಸಿಕೊಂಡಾಗಲೆ ಸರ್ಕಾರಿ ನೌಕರರಿಗೆ ಅರ್ಧಚಂದ್ರ ಬಿತ್ತು. ಈಗ ಯಾರೂ ಸಹ ಸರ್ಕಾರಿ ನೌಕರಿ ಗಿಟ್ಟಿಸಬೇಕು ಎಂದು ಕುಳಿತಿಲ್ಲ. ತಮ್ಮ ಸ್ವಂತ ಶಕ್ತಿ ಮೇಲೆ ಬೆಳವಣಿಗೆ ಹೊಂದುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಹಿಂದುಳಿದವರು, ದಲಿತರು ಸರ್ಕಾರವನ್ನು ನಂಬಿ ಕೂರಬಾರದು. ಸರ್ಕಾರವು ಸಹ ಎಲ್ಲ ವಿಭಾಗಗಳನ್ನು ಖಾಸಗೀಕರಣ ಮಾಡುತ್ತಿದೆ. ಅದಕ್ಕಾಗಿ ಈಗಿನಿಂದಲೇ ಸ್ವಂತ ಉದ್ಯೋಗ ಕಂಡುಕೊಳ್ಳಲು ಉತ್ತಮ ಯೋಜನೆ ರೂಪಿಸುತ್ತಿದೆ. ಈಗ ಬಳಸಿಕೊಳ್ಳದವರು ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ ಎಂದರು.
ಅನುದಾನ ಪ್ರತಿಯೊಬ್ಬರು ಬಳಸಿಕೊಳ್ಳಿ: ಅಂಬೇಡ್ಕರ್ ಅವರ ಚಿಂತನೆಗೆ ಧಕ್ಕೆ ಬಾರದ ಹಾಗೆ, ಅವರ ಸಾಮಾಜಿಕ ನ್ಯಾಯ ತತ್ವಕ್ಕೆ ದ್ರೋಹ ಬಗೆಯದೆ ಅತ್ಯಂತ ಜಾಗರೂಕತೆಯಿಂದ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಅದಕ್ಕಾಗಿ ಅನುದಾನ ಒದಗಿಸುತ್ತಿರುವ ಸರ್ಕಾರದ ಸವಲತ್ತನ್ನು ಪ್ರತಿಯೊಬ್ಬರು ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ನಂತರ ನಡೆದ ಅಧಿವೇಶನದಲ್ಲಿ ಎನ್ಎಸ್ಐಸಿ ಯೋಜನೆಗಳ ಬಗ್ಗೆ ಎನ್ಎಸ್ಐಸಿ ಪ್ರಧಾನ ವ್ಯವಸ್ಥಾಪಕ ಎಂ.ಎಲ್. ಪ್ರಕಾಶ, ಕರ್ನಾಟಕದ ಮುಖ್ಯಸ್ಥ ಉಮೇಶ್ ಪಿ. ಠಾಕೂರ್, ಉಪವ್ಯವಸ್ಥಾಪಕಿ ಎ. ಕೋಕಿಲಾ, ಡಿಐಸಿ ಸಹಾಯಕ ನಿರ್ದೇಶಕ ಎ.ಎಸ್. ರಮೇಶ್, ಅಲಹಾಬಾದ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ದಾಮೋದರ ಮೋಗಾರ್, ಅರ್ಥಶಾಸ್ತ್ರಜ್ಞ ಷಣ್ಮುಗಂ ತಿಳಿಸಿಕೊಟ್ಟರು. ಎವಿಎಸ್ಎಸ್ ಅಧ್ಯಕ್ಷ ರಾಮಣ್ಣ ಸ್ವಾಗತಿಸಿದರು. ಉದ್ಯಮಿ ಎಂ.ಕೆ. ಮಹದೇವಸ್ವಾಮಿ ವಂದಿಸಿದರು.
ಚರ್ಚಿತ ವಿಷಯಗಳು
ಎನ್ಎಸ್ಐಸಿಯು 1955 ರಿಂದಲೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಕರ್ನಾಟಕದಲ್ಲಿ ಸಹಕಾರ ನೀಡುತ್ತ ಬರಲಾಗಿದೆ. ಇದು ತನ್ನ ವಿವಿಧ ಕಚೇರಿಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನ ಪೀಣ್ಯ ಕಚೇರಿಯ ಮೂಲಕ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದೆ.
1. ಎನ್ಎಸ್ಐಸಿಯಲ್ಲಿ ನೋಂದಣಿಯಾದರೆ ಟೆಂಡರ್ ಪತ್ರಗಳನ್ನು ಉಚಿತವಾಗಿ ಪಡೆಯುವುದು, ಡಿಜಿಎಸ್ ಆ್ಯಂಡ್ ಡಿ ನಿಂದ ವಿತರಿಸುವ ಟೆಂಡರ್ಗಳ ಬಗ್ಗೆ ಮುನ್ಸೂಚನೆ, ಠೇವಣಿ ಹಣ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ.
2. ಟೆಂಡರ್ ಮಾರ್ಕೆಟಿಂಗ್ ಯೋಜನೆಯಡಿ ನೋಂದಾಯಿತರಿಗೆ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ, ಗುಂಪಾಗಿ ದೊಡ್ಡ ದೊಡ್ಡ ಟೆಂಡರ್ನಲ್ಲಿ ಭಾಗವಹಿಸಲು ಅವಕಾಶ, ಈ ಮೂಲಕ ದೊಡ್ಡ ಕೆಲಸಗಳನ್ನು ಮಾಡಿ ತಮ್ಮ ಉದ್ದಿಮೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶ, ಹಣಕಾಸು ಮತ್ತು ಇತರೆ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
3. ಎನ್ಎಸ್ಐಸಿಯು 14 ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸಾಲ ಒದಗಿಸಲಾಗುತ್ತದೆ. ಸಾಲಕ್ಕೆ ಬೇಕಾಗುವ ಕಾಗದ ಪತ್ರಗಳನ್ನು ತಾನೇ ತಯಾರಿಸಿ, ವಿವಿಧ ಹಂತಗಳನ್ನು ತಾನೆ ನಿರ್ವಹಿಸಿಕೊಂಡು ಎಂಎಸ್ಎಂಇಗಳ ಸಮಯವನ್ನು ಉಳಿತಾಯ ಮಾಡಲಾಗುತ್ತದೆ.
4. ಕಚ್ಚಾ ಪದಾರ್ಥಗಳ ಸರಬರಾಜಿಗೆ ಹಣಕಾಸು ಸಹಾಯ ಮಾಡಲಾಗುತ್ತದೆ. ಕಚ್ಚಾ ಪದಾರ್ಥ ತಯಾರಕರ ಬೆಲೆಯಲ್ಲಿ ಸಿಗುವುದರಿಂದ ಹೆಚ್ಚು ವ್ಯಯಿಸುವ ಅಗತ್ಯವಿಲ್ಲ. ಚಿಕ್ಕ ಪ್ರಮಾಣದಲ್ಲೂ ಸಹ ಕಚ್ಚಾ ಪದಾರ್ಥವು ದೊರೆಯುತ್ತದೆ. ವಿವಿಧ ಪದಾರ್ಥಗಳ ಮೇಲೆ ರಿಯಾಯಿತಿ ದೊರೆಯುತ್ತದೆ. ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ 90 ದಿನಗಳ ಮಿತಿಯಲ್ಲಿ ಕಚ್ಚಾ ಪದಾರ್ಥಗಳನ್ನು ಸಾಲಕ್ಕೂ ಸಹ ಪಡೆಯಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ
ಎಂ.ಎಲ್. ಪ್ರಕಾಶ್, ಹಿರಿಯ ಶಾಖಾ ವ್ಯವಸ್ಥಾಪಕರು, ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ, ವಿಭಾಗೀಯ ಕಚೇರಿ, ಪೀಣ್ಯ, ಬೆಂಗಳೂರು-58. ದೂ. 080- 28374676, ಮೊ. 93411 58399 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

