ಮಲ ಹೊರುವ ಪದ್ಧತಿ ಸಂಪೂರ್ಣ ನಿಷೇಧಿಸಿ
ಮೈಸೂರು: ಮಲ ಹೊರುವ ವೃತ್ತಿಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಿ. ಈ ವೃತ್ತಿಯನ್ನು ಅನುಸರಿಸುತ್ತಿರುವವರನ್ನು ಬೇರೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಸರ್ಕಾರದ ವತಿಯಿಂದ 40 ಸಾವಿರ ಸಹಾಯಧನ ನೀಡಲಾಗುವುದು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಹೇಳಿದರು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆಯ ಅನುಷ್ಠಾನ ಕುರಿತು ಅಧಿಕಾರಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಲ ಹೊರುವ ಪದ್ಧತಿಯನ್ನು ಅನುಸರಿಸುತ್ತಿರುವವರ ಬಗ್ಗೆ ಮಾಹಿತಿ ಪಡೆಯಲು 2013 ಮಾರ್ಚ್ನಲ್ಲಿ ಗಣತಿ ಕೈಗೊಂಡಿದ್ದು, ಗಣತಿಯಲ್ಲಿ 557 ಮ್ಯಾನ್ಯುಯಲ್ ಸ್ಕಾವೆಂಜರ್ಸ್ ಇರುವುದಾಗಿ ತಿಳಿದು ಬಂದಿದೆ. ಇವರಿಗೆ ಈ ವೃತ್ತಿಯನ್ನು ತ್ಯಜಿಸಿ ಜೀವನಕ್ಕೆ ಬೇರೆ ವೃತ್ತಿ ಮಾಡಲು 40 ಸಾವಿರ ಸಹಾಯಧನ ವಿತರಿಸಲಾಗುವುದು. ಸಹಾಯಧನ ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು ಎಂಬ ನಿಟ್ಟಿನಲ್ಲಿ ಅವರ ಹೆಸರಿನಲ್ಲೇ ಬ್ಯಾಂಕ್ಗಳಲ್ಲಿ ಖಾತೆ ತೆರೆಯುವ ಕೆಲಸ ಪ್ರಾರಂಭಿಸಿದ್ದು, ಈಗಾಗಲೇ 302 ಫಲಾನುಭವಿಗಳ ಖಾತೆ ತೆರೆಯಲಾಗಿದೆ ಎಂದು ತಿಳಿಸಿದರು.
ಮ್ಯಾನ್ಯುಯಲ್ ಸ್ಕಾವೆಂಜಿಂಗ್ ಕೆಲಸ ಮಾಡಿಸುವವರಿಗೆ 1 ರಿಂದ 5 ವರ್ಷದವರೆಗೆ ಕಾರಾಗೃಹ ಶಿಕ್ಷೆ ಹಾಗೂ 1 ರಿಂದ 5 ಲಕ್ಷದವರೆಗೆ ಜುಲ್ಮಾನೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ವಿವಿಧ ಜಿಲ್ಲೆಗಳಲ್ಲಿ ಇಂತಹ 5 ಪ್ರಕರಣಗಳು ಕಂಡುಬಂದಿದ್ದು, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ವೃತ್ತಿ ತರಬೇತಿ: ಈ ವೃತ್ತಿಯಲ್ಲಿ ತೊಡಗಿರುವವರಿಗೆ ಪುನರ್ವಸತಿ ಕಲ್ಪಿಸಲು ಅವರಿಗೆ ಎಲೆಕ್ಟ್ರೀಷಿಯನ್, ಫಿಟ್ಟರ್, ಹೊಲಿಗೆ ಮುಂತಾದ ತರಬೇತಿ ನೀಡಿ ಅವರಿಗೆ ವೃತ್ತಿ ಕಲ್ಪಿಸಲಾಗುವುದು. ಅವರ ಮಕ್ಕಳನ್ನು ವಿದ್ಯಾಭ್ಯಾಸದಲ್ಲಿ ತೊಡಗಿಸಲು ವಿಶೇಷ ವಿದ್ಯಾರ್ಥಿವೇತನ, ಉನ್ನತ ವಿದ್ಯಾಭ್ಯಾಸಕ್ಕಾಗಿ 5 ರಿಂದ 10 ಲಕ್ಷದವರಗೆ ಹಾಗೂ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ 25 ಲಕ್ಷದವರಗೆ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹರಿಯಾಣ ಸರ್ಕಾರವು ಬಾಹ್ಯ ಮೂಲದಿಂದ ಸಫಾಯಿ ಕರ್ಮಚಾರಿಗಳನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಿದೆ. ಅದರ ಬದಲಿಗೆ ಅವರಿಗೆ 8,400 ಸಂಚಿತ ವೇತನ ನಿಗದಿಗೊಳಿಸಿದೆ. ಈ ಮಾದರಿಯನ್ನು ನಮ್ಮ ರಾಜ್ಯದಲ್ಲೂ ಅನುಸರಿಸುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಎಸ್ಐಯುಡಿಯ ನಿರ್ದೇಶಕ ವೆಂಕಟೇಶ ಕಡಗದಕೈ, ಜಿಲ್ಲಾ ತರಬೇತಿ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಮಲ್ಲೇಶಪ್ಪ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

