ಮೈಸೂರು

ರಸ್ತೆಗೆ ಮದರ್ ತೆರೆಸಾ ಹೆಸರಿಡಿ: ವಿಶ್ವನಾಥ್ ಮನವಿ

Published On :

ಮೈಸೂರು: ಮೈಸೂರು-ನೀಲಗಿರಿ ರಸ್ತೆಯನ್ನು ಮದರ್ ತೆರೆಸಾ ರಸ್ತೆ ಎಂದು ನಾಮಕರಣ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಂಸದ ಎಚ್.ವಿಶ್ವನಾಥ್ ಅವರು ಮೇಯರ್‌ಗೆ ಮನವಿ ಮಾಡಿದ್ದಾರೆ. ಕ್ರೈಸ್ತರ ಧರ್ಮಗುರುಗಳಾದ ಡಾ. ಥಾಮಸ್ ಅಂತೋಣಿ ವಾಜಪಿಳ್ಳೆ ಅವರು 10 ವರ್ಷದಿಂದ ನಗರದ ಹೃದಯ ಭಾಗದಲ್ಲಿರುವ ಮೈಸೂರು-ನೀಲಗಿರಿ ರಸ್ತೆಯನ್ನು ಮದರ್ ತೆರೆಸಾ ರಸ್ತೆ ಎಂದು ನಾಮಕರಣ ಮಾಡಬೇಕೆಂದು ಪ್ರಯತ್ನಿಸುತ್ತಿದ್ದರೂ ಫಲಿಸದಿರುವುದು ನಮ್ಮೆಲ್ಲರಿಗೂ ಮುಜುಗರ ತರುವ ವಿಷಯವಾಗಿದೆ. ಮದರ್ ತೆರೆಸಾ ಅವರು ಭಾರತದ ಪ್ರಜೆಯಾಗಿದ್ದು, ಇಡಿ ಪ್ರಪಂಚವೇ ಇವರ ಸೇವೆಯನ್ನು ಅತಿ ಶ್ರೇಷ್ಠವೆಂದು ಗುರುತಿಸಿ ನೋಬೆಲ್ ಪ್ರಶಸ್ತಿ ನೀಡಿದೆ. ಭಾರತ ಕೂಡ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಆದ್ದರಿಂದ ಈ ಬಗ್ಗೆ ಪಾಲಿಕೆಯು ತ್ವರಿತವಾಗಿ ನಿರ್ಧರಿಸಬೇಕು ಎಂದು ಆಗ್ರಹಿಸಿದ್ದಾರೆ.

ವೈ.ಜಿ.ವಿಜೇಂದ್ರ ಜಿಲ್ಲಾ ಚೆಸ್ ಚಾಂಪಿಯನ್
ಮೈಸೂರು: ಜಿಲ್ಲಾ ಚದುರಂಗ ಸಂಘದ ವತಿಯಿಂದ ನಡೆದ ಕೆ.ಆರ್.ಸತ್ಯನಾರಾಯಣ ಅಯ್ಯರ್ ಸ್ಮಾರಕ ಮೈಸೂರು ಜಿಲ್ಲಾ ಚದುರಂಗ ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ಅಗ್ರ ಶ್ರೇಯಾಂಕಿತ ಆಟಗಾರ ವೈ.ಜಿ.ವಿಜೇಂದ್ರ 9 ಸುತ್ತುಗಳ ಪಂದ್ಯಾವಳಿಯಲ್ಲಿ 8 ಅಂಕ ಗಳಿಸಿ, ಅಗ್ರಸ್ಥಾನ ಗಳಿಸಿದ್ದಾರೆ. ಏಳೂವರೆ ಅಂಕ ಗಳಿಸಿದ ಎಚ್.ಎ.ಅಮೋಘ ದ್ವಿತೀಯ ಸ್ಥಾನ ಮತ್ತು 7 ಅಂಕ ಗಳಿಸಿದ ಕೇದಾರ್ ಉಮೇಶ್ ವಾಜ್ ತೃತೀಯ ಸ್ಥಾನ ಪಡೆದಿದ್ದಾರೆ. ನಗರಪಾಲಿಕೆ ಸದಸ್ಯ ನಂದೀಶ್ ಪ್ರೀತಮ್, ಹೊಯ್ಸಳ ಕರ್ನಾಟಕ ಸಂದ ಅಧ್ಯಕ್ಷ ಪಿ.ವಿ.ಭಾರಧ್ವಾಜ್, ವಿಜಯವಿಠಲ ಪದವಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಸತ್ಯಪ್ರಸಾದ್ ಮತ್ತು ಜಿಲ್ಲಾ ಚದುರಂಗ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಆನಂದತೀರ್ಥ ಬಹುಮಾನ ವಿತರಿಸಿದರು.

ಡಾ. ನಾಗೇಗೌಡರ ಸಮಗ್ರ ಕೃತಿಗಳ ಪುನರ್ ಮುದ್ರಣ
ಮೈಸೂರು: ನಾಡಿನ ಜಾನಪದ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಡಾ. ಎಚ್.ಎಲ್.ನಾಗೇಗೌಡರ ಸಮಗ್ರ ಕೃತಿಗಳನ್ನು ಪುನರ್ ಮುದ್ರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಾಗಿ ನಾಡೋಜ ಎಚ್.ಎಲ್.ನಾಗೇಗೌಡ ಜನ್ಮ ಶತಮಾನೋತ್ಸವ ಸಮಿತಿ ಅಧ್ಯಕ್ಷ ಟಿ.ತಿಮ್ಮೇಗೌಡ ಹೇಳಿದರು. ನಾಗೇಗೌಡ ಸಾಧನೆಯನ್ನು ಜನರಿಗೆ ತಿಳಿಸುವ ಸಲುವಾಗಿಯೇ ಫೆಬ್ರವರಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಾಡಿನ ನೂರು ಶ್ರೇಷ್ಠ ಜನಪದ ಕಲಾವಿದರನ್ನು ಸನ್ಮಾನಿಸಿ, ಅವರ ಜೀವನ ವೃತ್ತಾಂತ ಒಳಗೊಂಡ ಸಂಪುಟ ಹೊರತರಲಾಗುವುದು. ನಾಗೇಗೌಡರ ಹೆಸರಿನಲ್ಲಿ ಪ್ರತಿವರ್ಷ ದೇಶದ ಒಬ್ಬ ಶ್ರೇಷ್ಠ ಜಾನಪದ ಕಲಾವಿದ ಅಥವಾ ಜಾನಪದಕ್ಕೆ ಅಸಾಧಾರಣ ಕೊಡುಗೆ ನೀಡಿದ ಮಹನೀಯರನ್ನು ಗುರುತಿಸಿ 1 ಲಕ್ಷ ಗೌರವಧನದೊಂದಿಗೆ ಸನ್ಮಾನಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿವಿಯಲ್ಲಿ ನಾಗೇಗೌಡರ ಪೀಠ ಸ್ಥಾಪಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

ನಾಳೆ ಬೋಸ್ ಜನ್ಮದಿನ; ಜಗುಲ್‌ಬಂದಿ ಕಾರ್ಯಕ್ರಮ
ಮೈಸೂರು: ನೇತಾಜಿ ಸುಭಾಷ್ ಚಂದ್ರಬೋಸ್ ಅವರ 117ನೇ ಜನ್ಮ ದಿನೋತ್ಸವದ ಅಂಗವಾಗಿ ಕೃಷ್ಣಮೂರ್ತಿಪುರಂನ ಸ್ಪಿರಿಟ್ ಇವೆಂಟ್ಸ್ ವತಿಯಿಂದ ಜ.20ರ ಸಂಜೆ 6ಕ್ಕೆ ಜೆಎಲ್‌ಬಿ ರಸ್ತೆಯಲ್ಲಿರುವ ಶ್ರೀ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ದೇಶಭಕ್ತಿಗೀತೆಗಳ ಗಾಯನ ಹಾಗೂ ಸ್ಯಾಕ್ಸಫೋನ್, ಕೊಳಲು ವಾದ್ಯಗಳೊಂದಿಗೆ ಜುಗಲ್ ಬಂದಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದೇ ವೇಳೆ ನೇತಾಜಿಯವರ ಆದರ್ಶ- ತತ್ವ-  ಸಿದ್ಧಾಂತಗಳ ವ್ಯಕ್ತಿತ್ವದ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ದೇಶಭಕ್ತಿ ಗೀತೆ ಗಾಯನವನ್ನು ಸ್ನೇಹದಾಸ್ ತಂಡದವರಿಂದ ಹಾಗೂ ಜುಗಲ್‌ಬಂದಿ ಕಾರ್ಯಕ್ರಮವನ್ನು ನಗರದ ಹರೀಶ್ ಪಾಂಡವ ತಂಡದವರಿಂದ ಆಯೋಜಿಸಿದೆ. ಹೆಚ್ಚಿನ ಮಾಹಿತಿಗೆ ಮೊ. 7829067769 ಸಂಪರ್ಕಿಸಬಹುದು.

ಅರಮನೆಗೆ ಪವನ ವಿದ್ಯುತ್ ಬಳಕೆ ಸೂಕ್ತ
ಮೈಸೂರು: ಮೈಸೂರು ಅರಮನೆಗೆ ಅಗತ್ಯವಿರುವ ವಿದ್ಯುತ್ ಅನ್ನು ಪವನ ಸಾಧನ ಮೂಲಕ ಪಡೆಯುವ ಯೋಜನೆಯನ್ನು ಸೇಂಟ್ ಜೋಸೆಫ್ ಸೆಂಟ್ರಲ್ ಶಾಲೆಯ ವಿಪಿನ್ ಲೋಕೇಶ್ ರೂಪಿಸಿದ್ದಾರೆ. ಅರಮನೆಗೆ 96 ಸಾವಿರ ಬಲ್ಬ್‌ಗಳನ್ನು ಬಳಸಲಾಗಿದೆ. ಇದಕ್ಕಾಗಿ ಸಾಕಷ್ಟು ವಿದ್ಯುತ್‌ಶಕ್ತಿಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಮೇಲೆ ಪವನ ವಿದ್ಯುತ್ ಸಾಧನ ಅಳವಡಿಸಿ ಅರಮನೆಗೆ ಅಗತ್ಯವಿರುವ ವಿದ್ಯುತ್ ತಯಾರಿಸಬಹುದು. ಪರಿಸರ ಸ್ನೇಹಿಯಾದ ಈ ಯೋಜನೆಯು ಮುಂದೆ ಮೈಸೂರು ನಗರಕ್ಕೆ ವಿದ್ಯುತ್ ಪೂರೈಸುವ ಒಂದು ಪ್ರಾಥಮಿಕ ಹಂತವಾಗಬಹುದು ಎಂದು ವಿಪಿನ್ ಯೋಜಿಸಿದ್ದಾರೆ. ಅರಮನೆಯಲ್ಲಿ ಕಡಿಮೆ ವಿದ್ಯುತ್ ಉಪಯೋಗಿಸುವ ಎಲ್‌ಇಡಿ ಬಲ್ಬ್‌ಗಳ ಬಳಕೆ ಮಾಡಿದಲ್ಲಿ ಪವನ ವಿದ್ಯುತ್ ಬಳಸಬಹುದು. ಬ್ರೈನ್‌ಕೆಫೆ ಸಂಸ್ಥೆಯು ಇಂತಹ ಹೊಸ ತಂತ್ರಜ್ಞಾನ ಮತ್ತು ಹೊಸ ಅವಕಾಶ  ಹುಡುಕುವ ಪ್ರತಿಭೆಗಳಿಗಾಗಿ ಸ್ಥಾಪಿತವಾಗಿದ್ದು, ಉತ್ತಮ ಪ್ರತಿಭೆಗಳಿಗೆ 5 ಲಕ್ಷ ನಗದು ಬಹುಮಾನ ನೀಡಲಿದೆ.

ಹಾಲು ಕರೆವ ರಾಜ್ಯ ಮಟ್ಟದ ಸ್ಪರ್ಧೆ; ರಾಸುಗಳ ಮೆರವಣಿಗೆ
ಮೈಸೂರು: ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ ಅಂಗವಾಗಿ ಏರ್ಪಡಿಸಿದ್ದ ಗೋ ಪೂಜೆ ಕಾರ್ಯಕ್ರಮವನ್ನು ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಕರಗಂ ಯೋಗನರಸಿಂಹನ್ ಶುಕ್ರವಾರ ನೆರವೇರಿಸಿದರು. ಮೈಸೂರು ನಗರ ಗೋಪಾಲಕರ ಸಂಘವು ಪಶುಸಂಗೋಪನಾ ಇಲಾಖೆ ಮುಂಭಾಗದಲ್ಲಿ ಏರ್ಪಡಿಸಿದ್ದ ಗೋಪೂಜೆ ನಂತರ ಆರಂಭವಾದ ಗೋವುಗಳ ಮೆರವಣಿಗೆಯು ಅಲ್ಲಿಂದ ಸಾಗಿ ಜೀವಣ್ಣರಾಯನಕಟ್ಟೆ ಆವರಣ ತಲುಪಿತು. ಶಾಸಕ ಎಂ.ಕೆ. ಸೋಮಶೇಖರ್, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ನಗರ ಪಾಲಿಕೆ ಸದಸ್ಯ ಪಿ. ಪ್ರಶಾಂತಗೌಡ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ದೇವದಾಸ್, ಸಹನಿರ್ದೇಶಕ ಡಾ.ಸುರೇಶ್, ಉದ್ಯಮಿ ಎಸ್.ಕೆ ದಿನೇಶ್ ಮುಖ್ಯ ಅತಿಥಿಗಳಾಗಿದ್ದರು. ಸಂಘದ ಅಧ್ಯಕ್ಷ ಡಿ.ನಾಗಭೂಷಣ್, ಸಂಘದ ಗೌರವಾಧ್ಯಕ್ಷ ದೇಶೀಗೌಡ ಇದ್ದರು.

ಸಂಚಾರ ದೀಪ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ
ಮೈಸೂರು: ನಂಜನಗೂಡು ರಸ್ತೆಯ ಜೆಎಸ್‌ಎಸ್ ಕಾಲೇಜು ವೃತ್ತ ಸಮೀಪ ಕೆಟ್ಟಿರುವ ಸಂಚಾರ ದೀಪ ಸರಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟಿಸಿದರು. ಜೆಎಸ್‌ಎಸ್ ಕಾಲೇಜು ಸಮೀಪ ಹೆಚ್ಚು ವಾಹನ ದಟ್ಟಣೆ ಇರುವುದರಿಂದ ಮತ್ತು ಹೆದ್ದಾರಿ ಆಗಿರುವುದರಿಂದ ಹೆಚ್ಚಿನ ವಾಹನಗಳು ಸಂಚರಿಸುತ್ತವೆ. ಆದ್ದರಿಂದ ಕೂಡಲೇ ಸಂಚಾರ ದೀಪ ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು. ಪ್ರತಿನಿತ್ಯ ಈ ವೃತ್ತದ ಮೂಲಕ ಗಣಪತಿ ಸಚ್ಚಿದಾನಂದ ಆಶ್ರಮ, ಚಾಮುಂಡಿಬೆಟ್ಟದ ಪಾದ, ಸುತ್ತೂರು ಮಠಕ್ಕೆ ಹೋಗುವವರು ಮತ್ತು ಕಾಲೇಜಿಗೆ ತೆರಳುವ ಸಾವಿರಾರು ಮಂದಿ ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಇಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಕೂಡಲೆ ಸಿಗ್ನಲ್ ದೀಪ ಅಳವಡಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸೇನಾಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಶ್ರೀನಿವಾಸಗೌಡ ಇತರರು ಇದ್ದರು.

ಖಾಲಿ ಹುದ್ದೆ ಭರ್ತಿಗೆ ಆಗ್ರಹಿಸಿ ಎಸ್‌ಡಿಪಿಐ ಪ್ರತಿಭಟನೆ
ಮೈಸೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1.80 ಲಕ್ಷ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜ.21ರಂದು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದರು. ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಹುದ್ದೆಗಳನ್ನು ಭರ್ತಿ ಮಾಡಿ ನಿರುದ್ಯೋಗ ಅಳಿಸುವುದಾಗಿ ವಚನ ಕೊಟ್ಟು, ಈಗ ಮರೆತಿದೆ. ಹೀಗಾಗಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಜ.21ರ ಮಧ್ಯಾಹ್ನ 12.30ಕ್ಕೆ ಪ್ರತಿಭಟಿಸುವಂತೆ ಜನತೆಗೆ ಕರೆ ನೀಡಲಾಗುವುದು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೈಸೂರು ಜಿಪಂನಲ್ಲಿ ಒಟ್ಟು 30 ಹುದ್ದೆಗಳು ಖಾಲಿ ಉಳಿದಿವೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸಪ್ರಸಾದ್ ಗಮನಹರಿಸಿ ಶೀಘ್ರವೇ ಭರ್ತಿಗೆ ಸರ್ಕಾರವನ್ನು ಒತ್ತಾಯಿಸಬೇಕು ಎಂದರು. ಲೋಕಸಭೆ ಚುನಾವಣೆಯಲ್ಲಿ ಎಸ್‌ಡಿಪಿಐ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಯಾರ ಜತೆಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸುತ್ತೂರಿನಲ್ಲಿ ಸ್ತ್ರೀಶಕ್ತಿ ಸಂಘಗಳ ವಾರ್ಷಿಕೋತ್ಸವ
ಸುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ತ್ರೀಶಕ್ತಿ ಸಂಘಗಳ ವಾರ್ಷಿಕೋತ್ಸವ ಏರ್ಪಡಿಸಲಾಗಿತ್ತು. ಸಂಸ್ಥೆಯ ಅಧಿಕಾರಿ ಈಶ್ವರ್ ಮಾತನಾಡಿ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಿಗುವ ಸೌಲಭ್ಯಗಳು ಹಾಗೂ ಪುರುಷರ ಸಂಘಗಳನ್ನು ಬೆಳೆಸುವ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಮುಖ್ಯಶಿಕ್ಷಕ ಎ.ಮಹದೇವು ಮಾತನಾಡಿ, ಪ್ರತಿಯೊಬ್ಬರು ಒಗ್ಗಟ್ಟಿನಿಂದ ಸೌಲಭ್ಯಗಳನ್ನು ಪಡೆದು, ಆರ್ಥಿಕವಾಗಿ ಮುಂದೆ ಬರಲು ಪ್ರಯತ್ನಿಸುವಂತೆ ಕೋರಿದರು. ಸುತ್ತೂರು ವಲಯಾಧಿಕಾರಿ ಜಯಲಕ್ಷ್ಮೀ, ಸುಬ್ಬಲಕ್ಷ್ಮೀ ಇದ್ದರು. ಸಂಘದ ಅಧ್ಯಕ್ಷೆ ಸುಮತಿ ಸ್ವಾಗತಿಸಿದರು. ಉಪಾಧ್ಯಕ್ಷೆ ಶೋಭಾ ನಿರೂಪಿಸಿದರು. ಸುಮಾರು 28 ಸ್ವಸಹಾಯ ಮಹಿಳಾ ಸಂಘಗಳು ಇದ್ದವು.

ಕಗ್ಗೆರೆ ಕಾಲೇಜು ವತಿಯಿಂದ ವಿವೇಕಾನಂದ ಜಯಂತಿ
ಕೆ.ಆರ್. ನಗರ: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ರಾಷ್ಟ್ರದ ಉದ್ಧಾರ ಹಾಗೂ ಭಾರತೀಯ ಏಳಿಗೆಗಾಗಿ ಮೌಢ್ಯತೆ ಮತ್ತು ಜಾತೀಯತೆಯನ್ನು ಬಹಿಷ್ಕರಿಸಿದ ಮಹಾನ್ ಚೇತನ ಎಂದು ಪ್ರಾಂಶುಪಾಲ ನಿಂಗರಾಜು ಹೇಳಿದರು. ತಾಲೂಕಿನ ಕೆಗ್ಗೆರೆ ಪದವಿ ಪೂರ್ವ ಕಾಲೇಜಿನ ವತಿಯಿಂದ ಶನಿವಾರ ಪಟ್ಟಣದ ಹೊರ ವಲಯದಲ್ಲಿರುವ ಹಳೆ ಎಡತೊರೆ ಅರ್ಕೇಶ್ವರಸ್ವಾಮಿ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ವಿವೇಕಾನಂದರ 150ನೇ ಜಯಂತಿಯನ್ನು ವಿದ್ಯಾರ್ಥಿಗಳಿಂದ ಶ್ರಮದಾನದ ಮೂಲಕ ಆಚರಿಸಿ, ನಂತರ ಮಾತನಾಡಿದರು. ಎಲ್ಲ ವಿದ್ಯಾರ್ಥಿಗಳಿಗೂ ವಿವೇಕಾನಂದರ ಜೀವನ ಚರಿತ್ರೆಯ ಪುಸ್ತಕ ನೀಡಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಿರೀಶ್, ಸದಸ್ಯರಾದ ರಾಜಣ್ಣ, ಶಶಿಧರ್, ತ್ಯಾಗರಾಜ್, ಉಪನ್ಯಾಸಕರಾದ ಪ್ರಕಾಶ್, ರಾಮಕೃಷ್ಣೇಗೌಡ, ದಯಾಕರ್, ಡಾ. ಬಿ.ಟಿ.ನಾಗರಾಜು, ಬಸವರಾಜು, ದೊರೆಸ್ವಾಮಿಗೌಡ, ಶಿಕ್ಷಕ ಮಹದೇವಪ್ರಸಾದ್, ಗ್ರಾಮಸ್ಥರಾದ ರಮೇಶ್, ಮಂಜುನಾಥ್ ಇದ್ದರು.

ಸಿಲಿಂಡರ್ ಸಂಖ್ಯೆ ಹೆಚ್ಚಳ ಚುನಾವಣೆ ಗಿಮಿಕ್; ಟೀಕೆ
ಮೈಸೂರು: ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್ ಸಂಖ್ಯೆ ಹೆಚ್ಚಳ ಮಾಡಿರುವುದು ಕೇವಲ ಚುನಾವಣೆಯ ಗಿಮಿಕ್ ಎಂದು ನಿವೃತ್ತ ಎಂಜಿನಿಯರ್ ಹಾಗೂ ಹಿರಿಯ ನಾಗರಿಕ ಎಚ್.ವಿ.ಕೃಷ್ಣಮೂರ್ತಿ ಟೀಕಿಸಿದ್ದಾರೆ. ಇತ್ತೀಚಿಗೆ ನಡೆದ ಎಐಸಿಸಿ ಸಭೆಯಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸಮ್ಮುಖದಲ್ಲಿ ರಾಹುಲ್‌ಗಾಂಧಿ ಅವರು 12 ಸಿಲಿಂಡರ್ ಘೋಷಿಸುವಂತೆ ಒತ್ತಡ ಹೇರಿದ್ದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನತ್ತ ಜನರನ್ನು ಸೆಳೆಯುವ ತಂತ್ರವಾಗಿದೆ ಎಂದಿದ್ದಾರೆ. ದೇಶದ ಅಲ್ಪ ಸಂಖ್ಯಾತರು, ಕೂಲಿಕಾರ್ಮಿಕರು, ನಗರ ವಾಸಿಗಳು ಹಾಗೂ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಜನರು ದಿನನಿತ್ಯದ ಅಡುಗೆಗಾಗಿ ಅನಿಲ್ ಸಿಲಿಂಡರ್ ಪಡೆಯಲು ಕಷ್ಟ ಪಡುತ್ತಿದ್ದಾರೆ. ಸಿಲಿಂಡರ್ ಸರಬರಾಜು ಮಿತಿಯನ್ನು ಪುನರ್ ನವೀಕರಿಸಿರುವ ಕಾಂಗ್ರೆಸ್ ಸರ್ಕಾರ 12 ಸಿಲಿಂಡರ್ ಕೊಡುವುದಾಗಿ ಘೋಷಿಸಿದೆ. ಈ ಪದ್ಧತಿ ಹೊಸದೇನು ಅಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರನ್ನು ಕೊಂಡಾಡುವ ಅಗತ್ಯವೂ ಇಲ್ಲ ಎಂದಿದ್ದಾರೆ.

ಭೇರ್ಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ
ಭೇರ್ಯ: ಇಲ್ಲಿನ ಉರ್ದು ಶಾಲೆಯ ಆವರಣದಲ್ಲಿ ಸಾಲಿಗ್ರಾಮ ಮತ್ತು ಭೇರ್ಯದ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರಿಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ನಡೆಯಿತು. ಸಬ್ ಇನ್‌ಸ್ಪೆಕ್ಟರ್ ಮಹೇಶ್ ಮಾತನಾಡಿ, ವಾಹನ ಚಾಲಕರು ಮತ್ತು ಆಟೋ ಚಾಲಕರು ರಸ್ತೆಯಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಬಾರದು. ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಬೇಕು. ಕಡ್ಡಾಯವಾಗಿ ಓಡಿಸುವ ವಾಹನಕ್ಕೆ ವಿಮೆ ಮತ್ತು ವಾಹನದ ದಾಖಲೆ ಹಾಗೂ ಚಾಲಕನಿಗೆ ಪರವಾನಗಿ ಚಾಲ್ತಿಯಲ್ಲಿಟ್ಟುಕೊಳ್ಳಬೇಕು ಎಂದರು. ಎಪಿಎಂಸಿ ನಿರ್ದೇಶಕ ಒಬೇಗೌಡ, ನಟರಾಜ್, ಪ್ರಕಾಶ್, ಚಂದು, ಮುಖ್ಯಪೇದೆ ಪಾಪೇಗೌಡ, ಸಿಬ್ಬಂದಿ ಆನಂದ್, ನಾಗೇಗೌಡ, ಸೋಹನ್ ಮತ್ತು ಫುಟ್‌ಪಾತ್ ವ್ಯಾಪಾರಿಗಳು ಮತ್ತು ಆಟೋ ಚಾಲಕರು ಮತ್ತು ಮಾಲೀಕರು ಇದ್ದರು.

ಮಾಂಸದ ಅಂಗಡಿ ತೆರವುಗೊಳಿಸಲು ಒತ್ತಾಯ
ಅಂತರಸಂತೆ: ಗ್ರಾಮದ ಮುಖ್ಯರಸ್ತೆ, ಮೈಸೂರು- ಮಾನಂದವಾಡಿ ರಸ್ತೆಯ ಮಧ್ಯ ಭಾಗದಲ್ಲಿ ಅಂತರಸಂತೆ ಗ್ರಾಮದ ಅಂಗಡಿ ಬೀದಿಯ ಮಧ್ಯ ಭಾಗದಲ್ಲಿರುವ ಮಾಂಸದ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಮಾಂಸದ ಅಂಗಡಿಗಳಿಂದ ಸಾರ್ವಜನಿಕರಿಗೆ ಹಲವಾರು ರೀತಿಯ ತೊಂದರೆಗಳಾಗಿದ್ದು, ಅಂಗಡಿಗಳ ಮುಂದೆ ಬೀದಿ ನಾಯಿಗಳು ಗುಂಪು ಕಟ್ಟಿ ನಿಂತಿರುತ್ತವೆ. ರಸ್ತೆ ಮಧ್ಯೆ ಹಲವಾರು ಅಪಘಾತಗಳಾಗಿವೆ. ಈ ಪ್ರದೇಶದಲ್ಲಿ ಓಡಾಡುವುದು ಕಷ್ಟವಾಗಿದೆ. ಆದ್ದರಿಂದ ಈ ಅಂಗಡಿಗಳನ್ನು ಗ್ರಾಮದ ಹೊರಗಡೆ ನಡೆಸಲು ಸ್ಥಳೀಯ ಪಂಚಾಯಿತಿಯವರು ಅವಕಾಶ ಮಾಡಿಕೊಡಬೇಕಾಗಿ ರ್ಸಾಜನಿಕರು ಕೋರಿದ್ದಾರೆ. ಇಲ್ಲವಾದಲ್ಲಿ ಪಂಚಾಯಿತಿ ಆವರಣದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಲೆ ಏರಿಕೆ ವಿರೋಧಿಸಿ ಯುವಸೇನೆ ಪ್ರತಿಭಟನೆ
ಮೈಸೂರು: ಪಡಿತರ ಚೀಟಿ ವಿತರಣೆಯಲ್ಲಿನ ಅವ್ಯವಸ್ಥೆ, ಪೆಟ್ರೋಲ್, ಡೀಸೆಲ್, ಅನಿಲ ಬೆಲೆ ಏರಿಕೆ ವಿರೋಧಿಸಿ ಕರ್ನಾಟಕ ರಾಜ್ಯ ಜನಜಾಗೃತಿ ಸಿಂಹಗರ್ಜನೆ ಯುವಸೇನೆ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತಮಟೆ ಬಾರಿಸಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬಿಪಿಎಲ್ ಪಡಿತರ ಚೀಟಿದಾರರು 1 ರಂತೆ ಅಕ್ಕಿ ಪಡೆದು ಕಾಳಸಂತೆಯಲ್ಲಿ ಮಾರುತ್ತಿದ್ದಾರೆ. ಇದನ್ನು ತಪ್ಪಿಸಿ, ಒಂದೆ ಬೆಲೆಯಲ್ಲಿ ಅಕ್ಕಿ ವಿತರಣೆ ಆಗಬೇಕು. ಪಡಿತರ ಚೀಟಿಗೆ ಹಣ ವಸೂಲಿ ಮಾಡಲಾಗುತ್ತಿದೆ. ಬೆಲೆ ಇಳಿಸಬೇಕು ಎಂದು ಒತ್ತಾಯಿಸಿದರು. ಯುವಸೇನೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಭಾನು ಮೋಹನ್, ವಿನೋದ್‌ಕುಮಾರ್, ಪ್ರಕಾಶ್ ಇದ್ದರು.

ಬಾಲಜಗತ್ ಶಾಲೆಥ್ರೋಬಾಲ್‌ನಲ್ಲಿ ಪ್ರಥಮ
ಕೆ.ಆರ್. ನಗರ: ಮೈಸೂರಿನಲ್ಲಿ ನಡೆದ 17ನೇ ರಾಜ್ಯ ಮಟ್ಟದ ಶ್ರೀ ಆದಿಚುಂಚನಗಿರಿ ಮೈಸೂರು ವಿಭಾಗ ಮಟ್ಟದ ಶಾಲಾ ಕಾಲೇಜುಗಳ ಕ್ರೀಡಾಕೂಟದಲ್ಲಿ ತಾಲೂಕಿನ ಚುಂಚನಕಟ್ಟೆ ಬಾಲಜಗತ್ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.ಹಾಸನದ ಬಿಜಿಎಸ್ ಪ್ರೌಢಶಾಲೆಯ ತಂಡವನ್ನು ಸೋಲಿಸಿ ಥ್ರೋಬಾಲ್‌ನಲ್ಲಿ ಚುಂಚನಕಟ್ಟೆ ಬಾಲಜಗತ್ ಕ್ರೀಡಾಪಟುಗಳು ಪ್ರಥಮ ಸ್ಥಾನ ಗಳಿಸಿದರು. ಡಿಸ್ಕಸ್ ಥ್ರೋ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ 23 ಜಿಲ್ಲೆಗಳ ಕ್ರೀಡಾಪಟುಗಳನ್ನು ಸೋಲಿಸುವ ಮೂಲಕ ಶಾಲೆಯ ವಿದ್ಯಾರ್ಥಿನಿ ಸುಷ್ಮ ಪ್ರಥಮ ಸ್ಥಾನ ಪಡೆದರು. ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆಯನ್ನು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ಚುಂಚನಕಟ್ಟೆ ಶಾಖಾ ಮಠದ ಶಿವಾನಂದ ಸ್ವಾಮೀಜಿ ಅಭಿನಂದಿಸಿದ್ದಾರೆ.  

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ರಾವಂದೂರು: ಪ್ರತಿ ತಿಂಗಳು ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರ ಸಕ್ಕರೆ ನಿಯಂತ್ರಣವನ್ನು ತೆಗೆದು ಹಾಕಿರುವುದು ಬೆಲೆ ಏರಿಕೆಯ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ಕೆ.ಪಿ.ಕಾವೇರಮ್ಮ ಹೇಳಿದರು. ಗ್ರಾಮದಲ್ಲಿ  ಸಿಐಟಿಯು ನೇತೃತ್ವದಲ್ಲಿ ಎಸ್ಮಾ ಕಾಯ್ದೆ ವಿರೋಧಿಸಿ, ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು. ಸಿಐಟಿಯು ಸಂಘಟನೆ ಅಸಂಘಟಿತ ಕಾರ್ಮಿಕರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದೆ. ಆದರೆ ಸರ್ಕಾರಗಳು ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಇತ್ತೀಚೆಗೆ ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿ ಖಂಡನೀಯ ಎಂದರು. ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಜಯರಾಂ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರು ಮುಖ್ಯ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಜಾಥಾ ನಡೆಸಿದರು.

ಶಿಕ್ಷಣ, ದಾಸೋಹ ಕ್ಷೇತ್ರದಲ್ಲಿ ಆದಿಶ್ರೀ ಅಪ್ರತಿಮ ಸಾಧನೆ
ಟಿ. ನರಸೀಪುರ: ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರು ಶಿಕ್ಷಣ ಹಾಗೂ ದಾಸೋಹ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ಮಹಾನ್ ಸಂತ ಎಂದು ಶ್ರೀ ಚೌಡೇಶ್ವರಿ ಯುವಕರ ಸೇವಾ ಸಮಿತಿ ಅಧ್ಯಕ್ಷ ಪಿ.ಪುಟ್ಟರಾಜು ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಬಾಲಗಂಗಾಧರನಾಥ ಸ್ವಾಮೀಜಿ ಜಯಂತಿ ಪ್ರಯುಕ್ತ ರೋಗಿಗಳಿಗೆ ಹಣ್ಣು, ಹಾಲು ವಿತರಿಸಿ ಮಾತನಾಡಿ, ಬಾಲಗಂಗಾಧರ ಶ್ರೀಗಳು ಎಂದೊಡನೆ ಚುಂಚನಗಿರಿ ಮಠದಲ್ಲಿ ನಿತ್ಯವೂ ನಡೆಯುವ ದಾಸೋಹ, ಉನ್ನತ ಶಿಕ್ಷಣ ನೀಡುತ್ತಿರುವ ಶೈಕ್ಷಣಿಕ ಕೇಂದ್ರಗಳು ನೆನಪಿಗೆ ಬರುತ್ತವೆ. ಅವರ ಕೈಂಕರ್ಯ ಜನಮೆಚ್ಚುವಂತಹದ್ದು ಎಂದರು. ಕಾಂಗ್ರೆಸ್ ಮುಖಂಡ ಪಿ.ಸ್ವಾಮಿನಾಥ್‌ಗೌಡ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ದಾರ್ಥ, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕರುಣಾಕರ್, ಆದಿಚುಂಚನಗಿರಿ ರಜಥೋತ್ಸವ ಭವನ ವ್ಯವಸ್ಥಾಪಕ ಬಸವರಾಜು, ಬಾಲಜಗತ್ ಶಾಲೆಯ ಆಡಳಿತಾಧಿಕಾರಿ ಸೋಮಣ್ಣ, ಡಿಸಿಸಿ ಕಾರ್ಯದರ್ಶಿ ಬಸವಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.