ಪುತ್ಥಳಿ ಸಂಸ್ಕೃತಿಗೆ ಪ್ರೋತ್ಸಾಹ ಬೇಡ
ಮೈಸೂರು ನಗರದಲ್ಲಿ ಹೆಚ್ಚು ಪ್ರತಿಮೆಗಳನ್ನು ನಿಲ್ಲಿಸುವುದು ಒಳ್ಳೆಯದೇ? ಪ್ರತಿಮೆಗಳಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಪುಂಡರು ಮತ್ತು ಪಾನಮತ್ತರು ಆಗಾಗ ಅವುಗಳಿಗೆ ಅವಮಾನ ಮಾಡುತ್ತಾರೆ ಮತ್ತು ಇದರಿಂದ ಕಾನೂನು ಸಮಸ್ಯೆಗಳು ಉದ್ಭವವಾಗುತ್ತವೆ. ರಸ್ತೆ ಸಂಚಾರ ಹೆಚ್ಚಾಗಿ ವೃತ್ತಗಳನ್ನು ತೆಗೆದು, ಅವುಗಳ ಬದಲು ಸಂಚಾರ ದೀಪಗಳನ್ನು ಅಳವಡಿಸಬೇಕಾಗಿ ಬಂದರೆ ವೃತ್ತ ಮತ್ತು ಅದರಲ್ಲಿರುವ ಪ್ರತಿಮೆಯನ್ನು ತೆಗೆಯಲು ವಿರೋಧ ಬರುವುದು ಖಂಡಿತ. ಪ್ರತಿಮೆಗಳು ಯಾವ ಗಣ್ಯರದಾಗಿರುತ್ತವೆಯೋ ಅವರ ಜನ್ಮದಿನ ಅಥವಾ ಮರಣದಿನದಂದು ಅವರ ಅಭಿಮಾನಿಗಳೆಲ್ಲ ಪ್ರತಿಮೆಗೆ ಗೌರವ ಅರ್ಪಿಸುತ್ತಾರೆ. ಆ ದಿನಗಳಂದು ವೃತ್ತಗಳಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತದೆ. ಅಪಘಾತಗಳಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಈ ಎಲ್ಲ ಕಾರಣಗಳಿಗಾಗಿ, ಪುತ್ಥಳಿ ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದು ಒಳ್ಳೆಯದಲ್ಲ.
ಆರ್. ಚಂದ್ರ ಪ್ರಕಾಶ್, ಅಧ್ಯಕ್ಷರು, ಮೈಸೂರು ಗ್ರಾಹಕರ ಪರಿಷತ್.
ರಸ್ತೆ ಸಂಪರ್ಕ ಕಲ್ಪಿಸಿ
ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಇಟ್ಟಿಗೆಗೂಡು ಬಡಾವಣೆ ಕೇಂದ್ರ ಭಾಗದ ರಸ್ತೆ ಸಂಪರ್ಕ ಕಡಿದು ಹೋಗಿದ್ದು, ಇಟ್ಟಿಗೆಗೂಡು ಬಡಾವಣೆಗೆ ನಗರದ ವಿವಿಧ ಬಡಾವಣೆಯಿಂದ ಬರುವ ಜನರಿಗೆ ರಸ್ತೆ ಇಲ್ಲದೆ ದಾರಿ ತಪ್ಪುವಂತಾಗಿದೆ. ಅಲ್ಲದೆ ಅರಮನೆಯಿಂದ ಬರುವ ಪ್ರವಾಸಿಗರು ಹಾಗೂ ಮೃಗಾಲಯದಿಂದ ಬರುವ ಪ್ರವಾಸಿಗರಿಗೆ ಎರಡು ಕಡೆ ರಸ್ತೆ ಸಂಪರ್ಕ ಇಲ್ಲದೆ ಆದಾಯ ಕುಂಠಿತವಾಗಿದೆ. ಇಟ್ಟಿಗೆಗೂಡು ಬಡಾವಣೆಗೆ ದೊಡ್ಡಕೆರೆಗೆ ಮಧ್ಯಭಾಗದಲ್ಲಿರುವ ರಸ್ತೆ ಸಂಪರ್ಕ ಇದ್ದು, ಇದು ಕಸ ಕಡ್ಡಿ ಡೆಬ್ರರಿಸನಿಂದ ಮುಚ್ಚಿ ಹೋಗಿದೆ. ಇದನ್ನು ಸಮತಟ್ಟ ಮಾಡಿ, ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಬದಲಿ ರಸ್ತೆ ಸಂಪರ್ಕವನ್ನು ಕೇಂದ್ರ ಭಾಗಕ್ಕೆ ಒದಗಿಸಿಕೊಟ್ಟು ಸಹಾಯ ಮಾಡಿಕೊಡಬೇಕು. ಇಲ್ಲವಾದರೆ ಮೊಹಲ್ಲಾದ ನಾಗರಿಕರು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ.
ಎಂ.ಎಸ್.ಹರಿಕೃಷ್ಣ, ಇಟ್ಟಿಗೆಗೂಡು.
ಅರ್ಹ ಫಲಾನುಭವಿಗಳಿಗೆ ಮನೆ ನೀಡಿ
ನರ್ಮ್ ಯೋಜನೆಯಡಿ ಅಲೀಂ ನಗರದಲ್ಲಿ ಸುಮಾರು 12ರಿಂದ 40ರವರೆಗೆ ಅರ್ಹ ಫಲಾನುಭವಿಗಳು ಮನೆಯನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಅವರಿಗೆ ಈವರೆಗೆ ಮನೆ ನೀಡಿಲ್ಲ. ನರ್ಮ್ ಯೋಜನೆಯಲ್ಲಿ ಪಟ್ಟಿ ಮಾಡುವಾಗ ಸುಮಾರು ಫಲಾನುಭವಿಗಳನ್ನು ಕೈಬಿಟ್ಟಿದ್ದು, ಮಂಡಳಿಯ ಅಧಿಕಾರಿಗಳಿಗೆ ಹಲವಾರು ಬಾರಿ ಅರ್ಜಿ ಸಲ್ಲಿಸಲಾಗಿದೆ. ಮನೆ ನೀಡುವುದಾಗಿ ಭರವಸೆ ನೀಡಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗುಡಿಸಲುಗಳನ್ನು ತೆರವುಗೊಳಿಸಿ, ಈ ಎಲ್ಲ ಕುಟುಂಬ ನಡು ಬೀದಿಗೆ ಬಂದು ತೊಂದರೆ ಅನುಭವಿಸಿದೆ. ಅಲೀಂ ನಗರದಲ್ಲಿ ನಿರ್ಮಿಸಿರುವ ಮನೆಗಳಲ್ಲಿ ಕೆಲ ಮಂಡಳಿಯ ಸಿಬ್ಬಂದಿ ಬ್ಲಾಕ್ ನಂ.18ರಿಂದ 20ರವರೆಗೆ ಸುಮಾರು 30 ಮನೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ನಮ್ಮ ಗಮನಕ್ಕೆ ಬಂದಿದೆ. ಇಲ್ಲಿ ಸುಮಾರು 1 ವರ್ಷ 4 ತಿಂಗಳಿಂದ ವಾಸ ಮಾಡಿಕೊಂಡಿದ್ದೇವೆ. ಆದರೆ ಈಗ ಮಂಡಳಿಯ ಸಿಬ್ಬಂದಿ ನಮ್ಮ ಮೇಲೆ ದಬ್ಬಾಳಿಕೆ ಮಾಡಲು ಮುಂದಾಗಿದ್ದಾರೆ. ನಾವು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಸಂಗ್ರಹಿಸಿದಾಗ ಇಲ್ಲಿ ವಾಸ ಮಾಡುತ್ತಿರುವ ಅನೇಕರು ಮಂಡಳಿಯ ಸಿಬ್ಬಂದಿ ಹೆಸರು ಮತ್ತು ಮಾರಾಟವಾದ ಮೇಲೆ ಮನೆ ಹಂಚಿಕೆ ಮಾಡಿರುವುದು ಕಂಡು ಬಂದಿದೆ. ಜಿಲ್ಲಾಧಿಕಾರಿಗಳು ಮತ್ತು ನಗರಪಾಲಿಕೆ ಆಯುಕ್ತರು ಮನವಿ ಪತ್ರ ಸಲ್ಲಿಸಿ ನಮಗೆ ಮನೆ ಸಿಗುವಂತೆ ಮನವಿ ಮಾಡಲಾಗಿದೆ.
ಪದಾಧಿಕಾರಿಗಳು, ವಿಶ್ವಜ್ಯೋತಿ ಭವ್ಯ ಭಾರತ ಡಾ.ಬಿ.ಆರ್. ಅಂಬೇಡ್ಕರ್ ವಿವಿಧ ಇಲಾಖೆ ಕಾರ್ಮಿಕರ ಯುವಕರ ಅಭಿವೃದ್ಧಿ ಮಹಾಸಂಘ.
ಮೋರಿ ಸ್ವಚ್ಛಗೊಳಿಸಿ, ಡೆಂಘಿಯಿಂದ ರಕ್ಷಿಸಿ
ಮೈಸೂರಿನ ಮೇಟಗಳ್ಳಿಯ ಹಳೆ ಪೊಲೀಸ್ ಠಾಣೆ ರಸ್ತೆಯಲ್ಲಿ ಹಲವು ದಿನಗಳಿಂದ ಮೋರಿ ಕಟ್ಟಿಕೊಂಡಿದ್ದು, ಸೊಳ್ಳೆಗಳ ವಾಸಸ್ಥಾನವಾಗಿದೆ. ಈ ಮೋರಿಯ ದುರ್ವಾಸನೆಯಿಂದ ವಾಸ ಮಾಡುವುದಕ್ಕೆ ಆಗುತ್ತಿಲ್ಲ. ಸೊಳ್ಳೆಗಳ ಕಾಟದಿಂದಾಗಿ ರಾತ್ರಿ ವೇಳೆ ಮಲಗುವುದಕ್ಕೆ ಆಗುತ್ತಿಲ್ಲ. ಮೋರಿಯನ್ನು ಸ್ವಚ್ಛಗೊಳಿಸಿ ನಮಗೆ ಸೊಳ್ಳೆಗಳಿಂದ ಮುಕ್ತಿಗೊಳಿಸುವಂತೆ ಹಲವಾರು ಬಾರಿ ಆರೋಗ್ಯ ಅಧಿಕಾರಿಗಳು, ಸ್ಥಳೀಯ ನಗರಪಾಲಿಕೆ ಸದಸ್ಯರಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸೊಳ್ಳೆಗಳಿಂದ ಕಚ್ಚಿಸಿಕೊಂಡಿರುವ ಈ ರಸ್ತೆಯ ನಿವಾಸಿಗಳು, ಅದರಲ್ಲೂ ಮಕ್ಕಳು ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರಿಗೆ ಡೆಂಘಿ ಬಗ್ಗೆ ವೈದ್ಯರು ಸಂಶಯ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಆರೋಗ್ಯಾಧಿಕಾರಿಗಳು ಕೂಡಲೆ ಇತ್ತ ಗಮನ ಹರಿಸಿ ನಮ್ಮನ್ನು ಡೆಂಘಿ ಜ್ವರದಿಂದ ಮುಕ್ತಿಗೊಳಿಸುವಂತೆ ಕೋರಿಕೆ.
ಉದಯಕುಮಾರ್, ಮೇಟಗಳ್ಳಿ
ರಸ್ತೆ ಡುಬ್ಬಕ್ಕೆ ಬಣ್ಣ ಬಳಿದು, ಅಪಘಾತ ತಪ್ಪಿಸಿ
ಮೈಸೂರಿನ ಪ್ರತಿಷ್ಠಿತ ರಸ್ತೆಗಳಲ್ಲೊಂದಾದ ಕೆಆರ್ಎಸ್ ರಸ್ತೆಯಲ್ಲಿ ಇತ್ತೀಚೆಗೆ ಸಂಚರಿಸುವುದಕ್ಕೆ ಭಯವಾಗುತ್ತದೆ. ಅದರಲ್ಲೂ ಸ್ಯಾನಿಟೋರಿಯಂನಿಂದ ಇಎಸ್ಐ ಆಸ್ಪತ್ರೆಯನ್ನು ದಾಟುವುದೇ ದೊಡ್ಡ ಸವಾಲಾಗಿದೆ. ಏಕೆಂದರೆ ಇಎಸ್ಐ ಎದುರಿನ ರಸ್ತೆ ಡುಬ್ಬವಂತೂ ಯಾರಿಗೂ ಕಾಣುವುದಿಲ್ಲ. ಈ ಸ್ಥಳದಲ್ಲಿ ಬೀದಿ ದೀಪವೂ ಇಲ್ಲ. ಇಲ್ಲಿ ದಿನಕ್ಕೆ ಎಷ್ಟು ಮಂದಿ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ ಎಂದು ಹೇಳುವುದಕ್ಕೆ ಲೆಕ್ಕವಿಲ್ಲ. 2 ತಿಂಗಳ ಹಿಂದೆ ಇದೆ ಸ್ಥಳದಲ್ಲಿ ಕೆಎಸ್ಆರ್ಟಿಸಿ ಚಾಲಕರೊಬ್ಬರು ಸ್ಕೂಟರ್ನಲ್ಲಿ ಹೋಗುವಾಗ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೆ ಮೃತಪಟ್ಟಿದ್ದರು. ಅದರಲ್ಲೂ ಒಂಟಿಕೊಪ್ಪಲಿನಿಂದ ಮೇಟಗಳ್ಳಿವರೆಗಿನ ಈ ಜೋಡಿ ರಸ್ತೆಯಲ್ಲಿ ಹಲವು ವಿದ್ಯುತ್ ಕಂಬಗಳಲ್ಲಿ ದೀಪವೆ ಇಲ್ಲ. ಆದ್ದರಿಂದ ಸಂಚಾರಿ ಪೊಲೀಸರು ಕೂಡಲೆ ಈ ಡುಬ್ಬಕ್ಕೆ ಬಿಳಿ ಬಣ್ಣ ಬಳಿದು, ನಗರಪಾಲಿಕೆಯವರು ಈ ಬೀದಿ ದೀಪದ ವ್ಯವಸ್ಥೆ ಕಲ್ಪಿಸಿ ಅಪಘಾತಗಳನ್ನು ತಪ್ಪಿಸಿ.
ರಾಮ್ಪ್ರಸಾದ್, ಬೃಂದಾವನ ಬಡಾವಣೆ.
ಪೋಲಿ-ಪುಂಡರ ಹಾವಳಿ ತಪ್ಪಿಸಿ
ಹುಣಸೂರಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಇಲ್ಲಿ ಕಳ್ಳರ ಕೈಚಳಕದಿಂದ ಬೇಸತ್ತ ಸಾರಿಗೆ ಸಂಸ್ಥೆ ಅಧಿಕಾರಿಗಳು ಪೊಲೀಸ್ ಚೌಕಿಯನ್ನು ನಿರ್ಮಿಸಿದ್ದಾರೆ. ಆದರೆ ಇಲ್ಲಿಗೆ ಪೊಲೀಸರನ್ನೇ ಈವರೆಗೂ ನೇಮಿಸಿಲ್ಲ. ಈಗ ಪಿಕ್ ಪಾಕೆಟ್, ಹೇಸಿಗೆ ಎರಚಿ ಹಣ ದೋಚುತ್ತಿದ್ದವರ ಸಂಖ್ಯೆ ಏನೋ ಕಡಿಮೆಯಾಗಿದೆ. ಆದರೆ ಬೆಳಿಗ್ಗೆ ಹೊತ್ತು ಮೈಸೂರಿಗೆ ತೆರಳುವ ಶಾಲಾ ವಿದ್ಯಾರ್ಥಿನಿಯರನ್ನು ಚುಡಾಯಿಸುವ ಪೋಲಿ-ಪುಂಡರ ಸಂಖ್ಯೆ ಹೆಚ್ಚಾಗಿದೆ. ಸಂಜೆಯಾಗುತ್ತಿದ್ದಂತೆ ಗ್ರಾಮೀಣ ಪ್ರದೇಶಕ್ಕೆ ತೆರಳುವ ಮಹಿಳೆಯರೊಂದಿಗೆ ಕೆಲ ಯುವಕರು ಯಾವುದೇ ಭಯವಿಲ್ಲದೆ ಅಸಭ್ಯವಾಗಿ ವರ್ತಿಸುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದ ಸಾರಿಗೆ ಇಲಾಖೆ ಅಧಿಕಾರಿಗಳಿಗೂ ಬೆದರಿಕೆಯೊಡ್ಡುತ್ತಿದ್ದಾರೆ. ಪೊಲೀಸರು ಇತ್ತ ಗಮನ ಹರಿಸಿ ಕೂಡಲೆ ನಿಲ್ದಾಣದಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ಪೊಲೀಸರನ್ನು ನೇಮಿಸಿ ಪುಂಡರ ಹಾವಳಿ ತಪ್ಪಿಸುವಂತೆ ಮನವಿ.
ಪಾಂಡುಕುಮಾರ್, ಕರ್ನಾಟಕ ಪ್ರಜಾ ವೇದಿಕೆ ಜಿಲ್ಲಾಧ್ಯಕ್ಷ, ಹುಣಸೂರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

