ಮೈಸೂರು

ಕ್ರೈಸ್ತ ಅಭಿವೃದ್ಧಿ ಯೋಜನೆ ಬಳಸಿಕೊಳ್ಳಿ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಜ. 19
ಕ್ರೈಸ್ತರ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಕವಾಗಿ ಬಳಿಸಿಕೊಳ್ಳಲು ಮುಂದಾಗವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಸಮುದಾಯಕ್ಕೆ ಕರೆ ನೀಡಿದರು.
ನರಸಿಂಹರಾಜ ಮೊಹಲ್ಲಾದ ಸಂತ ಫಿಲೋಮಿನಾ ಚರ್ಚ್ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಚರ್ಚ್ ದುರಸ್ತಿ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸರ್ಕಾರವು ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಡಿ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಯೋಜನೆಯನ್ನು ಜಾರಿಗೊಳಿಸಿದ್ದು, ಚರ್ಚ್‌ಗಳ ನವೀಕರಣ, ಸಮುದಾಯ ಭವನ ನಿರ್ಮಾಣ, ಕೌಶಲ ಅಭಿವೃದ್ಧಿ ಯೋಜನೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆದರೆ ಅಲ್ಪಸಂಖ್ಯಾತರ ಯೋಜನೆಗೆ ಮೀಸಲಿರಿಸಿರುವ ಹಣ ಖರ್ಚಾಗುತ್ತಿಲ್ಲ. ಆದ್ದರಿಂದ ಸಮುದಾಯ ಇದರ ಬಳಕೆಯನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಹೆಚ್ಚು ನೆರವು: ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಈ ಚರ್ಚ್ ಸುಮಾರು 65 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಇಂಥ ಸುಂದರ ಹಾಗೂ ಪಾರಂಪರಿಕ ಕಟ್ಟಡವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ. ಈಗಾಗಲೇ ಇದರ ದುರಸ್ತಿಗೆ ಸರ್ಕಾರ 2 ಕೋಟಿ ಘೋಷಿಸಿದ್ದು, 1 ಕೋಟಿ ಬಿಡುಗಡೆ ಮಾಡಿದೆ. ಇದರ ಅಂದಾಜು ವೆಚ್ಚ 5 ಕೋಟಿ. ಬಾಕಿ ಅಗತ್ಯವಿರುವ 3 ಕೋಟಿಯನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಲಾಗುವುದು ಎಂದರು.  
ಅಲ್ಪಸಂಖ್ಯಾತರನ್ನು ಯಾವ ರೀತಿ ನಡೆಸಿಕೊಂಡಿದ್ದೀರಾ ಎಂಬುದರ ಮೇಲೆ ಆ ನಾಗರಿಕ ಸಮಾಜವನ್ನು ಗುರುತಿಸಲಾಗುತ್ತದೆ ಎಂದು ಮಹಾತ್ಮ ಗಾಂಧೀಜಿ ಹೇಳಿರುವಂತೆ, ಅಲ್ಪಸಂಖ್ಯಾತರ ಅಭಿವೃದ್ಧಿಯೂ ಸರ್ಕಾರದ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಬಹುಸಂಖ್ಯಾತರು ಹಾಗೂ ಅಲ್ಪಸಂಖ್ಯಾತರು ಪರಸ್ಪರ ಸಮಾನತೆಯಿಂದ ಕಾಂಡಾಗ ಮಾತ್ರ ಸಾಮರಸ್ಯ ಹಾಗೂ ಸೋದರತ್ವದ ಬದುಕು ನಿರ್ಮಾಣವಾಗಲಿದೆ ಎಂದು ಅವರು ಆಶಿಸಿದರು.
ನಂತರ ದುರಸ್ತಿ ಕಾಮಗಾರಿ ಫಲಕ ಅನಾವರಣಗೊಳಿಸಿದರು. ಬಿಷಪ್ ಡಾ. ಥಾಮಸ್ ಅಂತೋಣಿ ವಾಳಪಿಳ್ಳಿ ಆಶೀರ್ವದಿಸಿದರು.
ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಎಚ್.ವಿಶ್ವನಾಥ್, ಚಾಮರಾಜ ಕ್ಷೇತ್ರದ ಶಾಸಕ ವಾಸು, ನಗರ ಪಾಲಿಕೆ ಸದಸ್ಯ ರವೀಂದ್ರಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
ಜಿಲ್ಲಾಧಿಕಾರಿ ಸಿ.ಶಿಖಾ, ನಗರ ಪಾಲಿಕೆ ಆಯುಕ್ತ ಪಿ.ಜಿ.ರಮೇಶ್, ಪ್ರಾಚ್ಯ ಮತ್ತು ಪರಂಪರೆ ಇಲಾಖೆ ಆಯುಕ್ತ ಡಾ. ಸಿ.ಜಿ.ಬೆಟ್‌ಸೂರ್ ಮಠ್, ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿ ಪುಟ್ಟರಾಜು, ಎಸ್‌ಜೆಸಿಇ ಪ್ರಾಂಶುಪಾಲ ಡಾ. ಶಕೀಬ್ ಉರ್ ರೆಹಮಾನ್, ಫಾ. ಮರಿಜೋಸೆಫ್ ಇದ್ದರು. ಸಂಗೀತ ಸ್ವಾಗತಿಸಿದರು. ಫಾ. ವಿಜಯರಾಜ್ ಪ್ರಾಸ್ತಾವಿಕ ಮಾತುಗಳಾಡಿದರು. ನಂತರ ಮಕ್ಕಳು ಸಮೂಹ ನೃತ್ಯ ಪ್ರದರ್ಶಿಸಿದರು.   
2006 - 07ರಲ್ಲಿಯೇ ಚರ್ಚ್ ದುರಸ್ತಿಗೆ 3.12 ಕೋಟಿ ಎಂದು ಅಂದಾಜು ವೆಚ್ಚ ತಯಾರಿಸಲಾಗಿತ್ತು. ಆದರೆ ಇಂದು ಕಾಮಗಾರಿ ವಸ್ತುಗಳ ಬೆಲೆ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಇದರ ಸಂರ್ಪೂಣ ದುರಸ್ತಿಗೆ 5- 6 ಕೋಟಿ ಅಗತ್ಯವಿದೆ. ಕಾಮಗಾರಿ ವೇಳೆ ಪ್ರವಾಸಿಗರ ಸುರಕ್ಷತೆಗೆ ಕ್ರಮ ವಹಿಸಬೇಕು. ಅಲ್ಲದೆ ಚರ್ಚ್‌ನ ಸುತ್ತ ಇರುವ ರಸ್ತೆಯೂ ದುರಸ್ತಿಯಾಗಬೇಕು.
 ತನ್ವೀರ್‌ಸೇಠ್, ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.