ಚನ್ನಪ್ಪ ಸ್ವಾಮಿ ತಪಸ್ಸಿಗೆ ಅವನೊಲಿವನೇ?
ಭೇರ್ಯ: ಪುರಾಣ, ಕಥೆ, ಸಿನಿಮಾಗಳಲ್ಲಿ ಮುನಿಗಳು ತಪಸ್ಸು ಮಾಡುತ್ತಿದ್ದನ್ನು ಕೇಳಿದ್ದೇವೆ, ನೋಡಿದ್ದೇವೆ. ಇಂದಿನ ಆಧುನಿಕ ಯುಗದಲ್ಲೂ ವೈರಾಗಿಗಳು, ಸ್ವಾಮೀಜಿಗಳು ಮನಃ ಶಾಂತಿ ಇಲ್ಲವೇ ವರ ಬೇಡಲೆಂದೋ ತಪಸ್ಸು ಮಾಡುವುದುಂಟೇ? ಇಲ್ಲೊಬ್ಬರು ಸ್ವಯಂಘೋಷಿತ ಸ್ವಾಮೀಜಿ ಕಳೆದೊಂದು ವಾರದಿಂದ ನೀರು, ಆಹಾರ ಇತ್ಯಾದಿ ತ್ಯಜಿಸಿ, ಗ್ರಾಮಾಭಿವೃದ್ಧಿಗೆ ಮತ್ತು ಜನರ ಕಲ್ಯಾಣಕ್ಕಾಗಿ ತಪಸ್ಸಿಗೆ ಶರಣಾಗಿದ್ದಾರೆ.
ಕೆ.ಆರ್.ನಗರ ತಾ. ಕರ್ತಾಳು ಗ್ರಾಮದ ಕಾವೇರಿ ತಟದಲ್ಲಿರುವ ಸಣ್ಣದೊಂದು ಗುಡಿಯಲ್ಲಿ ಚನ್ನಪ್ಪ ಎಂಬವರು ತಪಸ್ಸಿಗೆ ಕುಳಿತಿದ್ದಾರೆ. ತಂಡೋಪತಂಡವಾಗಿ ಆಗಮಿಸುತ್ತಿರುವ ಜನತೆ ಆಶ್ಚರ್ಯ ಮಿಶ್ರಿತ ಭಕ್ತಿಭಾವ ಮೆರೆಯುತ್ತಿದ್ದಾರೆ. ಅಲ್ಲದೆ ಇವರ ಪಾದುಕೆಗಳಿಗೆ ನಮಸ್ಕರಿಸಿ ಕೈಲಾದಷ್ಟು ಕಾಣಿಕೆ ಸಮರ್ಪಿಸುತ್ತಿದ್ದಾರೆ. ಸುಮಾರು 70 ವರ್ಷ ವಯಸ್ಸಿನ ಚನ್ನಪ್ಪ ಸ್ವಾಮೀಜಿ ಗಡ್ಡಧಾರಿಯಾಗಿದ್ದು, ಮೈತುಂಬಾ ಕಾವಿ ತೊಟ್ಟಿದ್ದಾರೆ. ಗುಡಿಯ ಒಂದು ಬದಿ ತಪಸ್ಸಿಗೆ ಕುಳಿತಿದ್ದು, ಇಲ್ಲಿಗೆ ಆಗಮಿಸುವ ಭಕ್ತರು ನಿಶ್ಯಬ್ದದಿಂದ ಕೈಮುಗಿದು ವಾಪಸ್ಸಾಗುತ್ತಿದ್ದಾರೆ.
ತಪಸ್ಸಿಗೆ ಕುಳಿತಿದ್ದು ಯಾವಾಗ?: ಜ.8ರ ಮಧ್ಯಾಹ್ನ ಕರ್ತಾಳು ಗ್ರಾಮಕ್ಕೆ ಟಿವಿಎಸ್ ಮೊಪೆಡ್ನಲ್ಲಿ ಬಂದ ಇವರು, ಗ್ರಾಮದ ಯೋಗೀಶ್ ಎಂಬವರ ಮನೆಯಲ್ಲಿ ಮೊಪೆಡ್ ನಿಲ್ಲಿಸಿ ಹೊರಗಡೆ ಹೋಗಿ ಬರುವುದಾಗಿ ಹೇಳಿದ್ದಾರೆ. ಅಲ್ಲಿಂದ ಗ್ರಾಮದ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಹಿರೇಮಠಕ್ಕೆ ತೆರಳಿ ಅಲ್ಲಿನ ಸ್ವಾಮೀಜಿಯೊಂದಿಗೆ ಕೆಲಕಾಲ ಮಾತನಾಡಿದ್ದಾರೆ. ಬಟ್ಟೆ ತೊಳೆದುಕೊಂಡು ಬರುವುದಾಗಿ ಹೇಳಿ ತೆರಳಿದ ಇವರು ಸಂಜೆಯಾದರೂ ವಾಪಸ್ ಬಾರದಿದ್ದಾಗ ಗಾಬರಿಯಾದ ಯೋಗೀಶ್ ಹಾಗೂ ಗ್ರಾಮಸ್ಥರು ಊರೆಲ್ಲಾ ಹುಡುಕಾಡಿದರೂ ಪತ್ತೆಯಾಗಿಲ್ಲ. ಕೊನೆಗೆ ಗ್ರಾಮದ ಹೊರಭಾಗದ ಕಾವೇರಿ ನದಿದಂಡೆಯ ಶ್ರೀ ಮಹದೇಶ್ವರ ಗುಡಿಯಲ್ಲಿ ಕಣ್ಮುಚ್ಚಿ ಕುಳಿತ ಭಂಗಿಯಲ್ಲಿ ಪತ್ತೆಯಾದರು ಎಂದು ಗ್ರಾಮಸ್ಥರು ತಿಳಿಸಿದರು. ಮರುದಿನ ಗುಡಿಯ ಬಳಿ ತೆರಳಿದ ಕೆಲ ಗ್ರಾಮಸ್ಥರು ಇಲ್ಲೇಕೆ ಕುಳಿತಿದ್ದೀರಿ ಎಂದು ಕೇಳಿದಾಗ ಸೋಮವಾರ (ಜ. 13) ಬೆಳಗ್ಗೆ 9 ಗಂಟೆಗೆ ತಿಳಿಸುತ್ತೇನೆ ಎಂದಷ್ಟೆ ಹೇಳಿ ಚನ್ನಪ್ಪಸ್ವಾಮೀಜಿ ತಪಸ್ಸು ಮುಂದುವರಿಸಿದರು. ಅಂತೆಯೇ ಸೋಮವಾರ ಬೆಳಗ್ಗೆ ಸರಿಯಾಗಿ 9ಕ್ಕೆ ಕಣ್ಮುಚ್ಚಿದ್ದ ಸ್ಥಿತಿಯಲ್ಲಿ ಬಾಯ್ತೆರೆದ ಸ್ವಾಮೀಜಿ ಗ್ರಾಮದ ಅಭಿವೃದ್ಧಿಗೆ ಕೆಲ ಅಡೆತಡೆಗಳಿವೆ. ಅಡೆತಡೆ ನಿವಾರಣೆ ಹಾಗೂ ಜನರ ಕಲ್ಯಾಣಕ್ಕಾಗಿ ತಾನು ತಪಸ್ಸು ಮಾಡುತ್ತಿದ್ದೇನೆ. ಮುಂಬರುವ ಶುಕ್ರವಾರ(ಜ.17) ಬೆಳಗ್ಗೆ ತನ್ನ ತಪಸ್ಸು ಅಂತ್ಯವಾಗಲಿದ್ದು, ಅಂದು ಮುಂಜಾನೆ 5.30 ರೊಳಗೆ ಕನ್ಯೆಯರಿಂದ ಕಳಶ ಹಾಗೂ ಮುತ್ತೈದೆಯರಿಂದ ಬಾಗಿನವನ್ನು ಊರಿನ ರಾಜಬೀದಿಯಲ್ಲಿ ಮೆರವಣಿಗೆ ಮೂಲಕ ತಂದು ಪೂಜೆ ಸಲ್ಲಿಸಿ ನದಿಯಲ್ಲಿ ವಿಸರ್ಜಿಸಿ ಎಂದು ಆಜ್ಞಾಪಿಸಿದರು ಎನ್ನುತ್ತಾರೆ ಗ್ರಾಮದ ಮುಖಂಡರು.
ಯಾರಿವರು?: ಚನ್ನಪ್ಪ ಮೂಲತಃ ಹೊಳೇನರಸೀಪುರ ತಾ. ಹಳ್ಳಿ ಮೈಸೂರು ಹೋಬಳಿ ತೇಜೂರು ಗ್ರಾಮದ ಪುಟ್ಟಸ್ವಾಮಪ್ಪ ಹಾಗೂ ಅವ್ವಯ್ಯಮ್ಮ ಎಂಬವರ ಪುತ್ರ ಎನ್ನಲಾದ ಇವರು, ತಮ್ಮ 35ನೇ ವಯಸ್ಸಲ್ಲಿ ಸ್ವಯಂ ಪ್ರೇರಣೆಯಿಂದ ಸನ್ಯಾಸ ಸ್ವೀಕರಿಸಿದರಂತೆ. ಬಳಿಕ ಮುಕ್ಕುಂದೂರು ಬೆಟ್ಟದಲ್ಲಿನ ಆಶ್ರಮದಲ್ಲಿ ಧಾರ್ಮಿಕ ವಿಚಾರಗಳಲ್ಲಿ ತಲ್ಲೀನರಾದ ಚನ್ನಪ್ಪ ಕುದುರೆ ಮೇಲೆ ಸವಾರಿ ಮಾಡುತ್ತಾ ನಾನಾ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದರು ಎನ್ನುತ್ತಾರೆ ಇವರನ್ನು ಹತ್ತಿರದಿಂದ ಬಲ್ಲ ಗ್ರಾಮಸ್ಥರೊಬ್ಬರು.
ಚನ್ನಪ್ಪ ಸ್ವಾಮೀಜಿ ತಪಸ್ಸಿಗೆ ಕುಳಿತ ಮೂರು ದಿನದ ಬಳಿಕ ಅವರನ್ನು ನೋಡಿ ಮಾತನಾಡಿಸಲೆತ್ನಿಸಿದೆ. ಶುಕ್ರವಾರ ತಿಳಿಸುತ್ತೇನೆ ಎಂದಷ್ಟೆ ಹೇಳಿ ಬಾಯಿ ಮುಚ್ಚಿದರು. ಆಗಾಗ್ಗೆ ಮಠಕ್ಕೆ ಭೇಟಿ ನೀಡುತ್ತಿದ್ದರು. ಅವರಿಗೂ, ಕರ್ತಾಳು ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ.
ರೇಣುಕಾ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಕರ್ತಾಳು.
-ಭೇರ್ಯ ಮಹೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

