ಮೈಸೂರು

ತಹಸೀಲ್ದಾರ್ ಅರುಣಪ್ರಭ ಅಮಾನತಿಗೆ ದಸಂಸ ಆಗ್ರಹ

Published On :

ಟಿ. ನರಸೀಪುರ: ಕೊತ್ತೇಗಾಲ ಜೀತದಾಳು ಆತ್ಮಹತ್ಯೆ ಪ್ರಕರಣದಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿದ್ದನ್ನು ಖಂಡಿಸಿ, ಹೋರಾಟ ನಡೆಸಿದ ದಲಿತ ಮುಖಂಡರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿರುವ ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ ಅವರನ್ನು ಸರ್ಕಾರ ಕರ್ತವ್ಯದಿಂದ ಅಮಾನತು ಮಾಡಬೇಕೆಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗಸ್ವಾಮಿ ಒತ್ತಾಯಿಸಿದರು.
ದಲಿತ ಸಮುದಾಯ ಜೀತದಾಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಕರ್ತನಾದ ಆರೋಪಿಯನ್ನು ರಕ್ಷಿಸಲು ಆತನೊಂದಿಗೆ ಶಾಮೀಲಾಗಿರುವ ತಹಸೀಲ್ದಾರರು, ಇದರ ವಿರುದ್ಧ ಹೋರಾಟ ನಡೆಸಿದ ದಸಂಸ ಸಂಘಟನೆಯ ನಾಲ್ವರು ಮುಖಂಡರ ಮೇಲೆ ಹತ್ತು ದಿನಗಳ ನಂತರ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಜ.4ರಂದು ಕೊತ್ತೇಗಾಲದಲ್ಲಿ ಜೀತಕ್ಕೆ ಹಣ ನೀಡಿದ್ದ ಸುಬ್ಬಣ್ಣ ಎಂಬವರ ಕಿರುಕುಳ ತಾಳಲಾರದೆ ಜೀತದಾಳು ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ 6ರಂದು ಮೃತಪಟ್ಟಿದ್ದು ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ ಅವರು ಮೃತದೇಹದ ಮಹಜರು ನಡೆಸಲು ಬಾರದಿದ್ದನ್ನು ಖಂಡಿಸಿ, ಅಂದೇ ತಾಲೂಕು ಕಚೇರಿ ಎದುರು ಶವದೊಂದಿಗೆ ಆಹೋರಾತ್ರಿ ಧರಣಿ ನಡೆಸಲಾಯಿತು. ಜಿಲ್ಲಾಡಳಿತ ಧರಣಿ ಸ್ಥಳಕ್ಕಾಗಮಿಸಿ ನೀಡಿದ್ದ ಭರವಸೆಯನ್ನು ಈವರೆಗೂ ಈಡೇರಿಸಿಲ್ಲ. ಅಲ್ಲದೆ, ಜ.17ರಂದು ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದರು.
ನಾಳೆ ಪ್ರತಿಭಟನೆ: ಜೀತದಾಳು ಪ್ರಕರಣದ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಹಾಗೂ ದಲಿತ ಮುಖಂಡರ ಮೇಲೆ ಸುಳ್ಳು ಮೊಕದ್ದಮೆ ಹೂಡಿರುವ ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ ಅವರನ್ನು ಕರ್ತವ್ಯದಿಂದಲೇ ಅಮಾನತುಗೊಳಿಸಬೇಕೆಂದು ಆಗ್ರಹಿಸಿ, ಜ.25 ರಿಂದ ತಾ. ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಶಂಭುಲಿಂಗಸ್ವಾಮಿ ತಿಳಿಸಿದರು.
ಸರ್ಕಾರ ಕೂಡಲೇ ದಲಿತ ಮುಖಂಡರ ಮೇಲಿನ ಸುಳ್ಳು ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಬೇಕು. ದಲಿತ ವಿರೋಧಿ ತಹಸೀಲ್ದಾರರನ್ನು ಅಮಾನತಿನಲ್ಲಿಡಬೇಕು. ಜೀತದಾಳು ಶಿವಕುಮಾರ್ ಆತ್ಮಹತ್ಯೆ ಪ್ರಕರಣ ಆರೋಪಿ ಸುಬ್ಬಣ್ಣನನ್ನು ಬಂಧಿಸಿ, ದಲಿತ ದೌರ್ಜನ್ಯದಡಿ 5 ಲಕ್ಷ ಪರಿಹಾರ ನೀಡುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಚ್ಚರಿಕೆ ನೀಡಿದರು.
ದಸಂಸ ತಾಲೂಕು ಸಂಚಾಲಕರಾದ ರಾಜು, ಭೀಮರಾಜ್, ಸಂಘಟನಾ ಸಂಚಾಲಕರಾದ ಮಹದೇವಯ್ಯ, ಸೋಮಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.