ಮೈಸೂರು

ಜೆಡಿಎಸ್- ಕಾಂಗ್ರೆಸ್ ಸದಸ್ಯರ ಕೆಸರೆರಚಾಟ

Published On :

ಕ.ಪ್ರ.ವಾರ್ತೆ   ಮೈಸೂರು   ಜ. 24
ನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿದಿರುವ ಜೆಡಿಎಸ್ಗೆ ಸಮರ್ಪಕವಾಗಿ ಆಡಳಿತ ನಡೆಸಲು ಕಾಂಗ್ರೆಸ್ ಅವಕಾಶ ನೀಡುತ್ತಿಲ್ಲ ಎಂಬ ಆಡಳಿತ ಪಕ್ಷದ ಸದಸ್ಯರ ಆರೋಪದ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ಕೆಸರೆರಚಾಟಕ್ಕೆ ಪಾಲಿಕೆ ಸಾಮಾನ್ಯಸಭೆ ವೇದಿಕೆಯಾಯಿತು.
ನಗರಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ ಎಂಬ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಒಬ್ಬರಿಗೊಬ್ಬರು ಕಾಲೆಳೆದರು.
ನರ್ಮ್ ಯೋಜನೆಯಡಿ ನೀರು ವಿತರಣಾ ಜಾಲದ ಪೈಪ್ಲೈನ್ಗೆ ಸಂಬಂಧಿಸಿದಂತೆ ನಡೆದ ಚರ್ಚೆಯ ವೇಳೆ ಆಡಳಿತ ಪಕ್ಷದ ನಾಯಕ ಕೆ.ವಿ. ಮಲ್ಲೇಶ್ ಮತ್ತು ಮಾಜಿ ಮೇಯರ್ ಸಂದೇಶ್ ಸ್ವಾಮಿ ಮಾತನಾಡಿ, ಅಧಿಕಾರಿಗಳು ವರ್ಷಕ್ಕೊಂದು ನಿಯಮ ರೂಪಿಸುತ್ತಾರೆ. ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳನ್ನು ಪಾಲಿಕೆಯ ಕರ್ತವ್ಯದಿಂದ ಬಿಡುಗಡೆಗೊಳಿಸಿ ಎಂದರೂ, ಆಯುಕ್ತರು ನಮ್ಮ ಮಾತು ಕೇಳುತ್ತಿಲ್ಲ. ನನ್ನ ಮಾತನ್ನು ಯಾರೂ ಕೇಳುತ್ತಿಲ್ಲ ಎಂದು ಆಯುಕ್ತರೆ ಹೇಳುತ್ತಾರೆ. ಅಧಿಕಾರಿಗಳಿಗೆ ಕಲಸ ಮಾಡಲು ಇಷ್ಟವಿಲ್ಲದಿದ್ದರೆ ಪಾಲಿಕೆ ಬಿಟ್ಟು ಹೋಗಬಹುದು. ಪಾಲಿಕೆಯಲ್ಲಿ ಜೆಡಿಎಸ್ ಅಧಿಕಾರ ನಡೆಸುತ್ತಿದೆ. ಈ ವೇಳೆ ವಿವಿಧ ಯೋಜನೆಗಳು ಜಾರಿಗೆ ಬಂದರೆ ಅವರಿಗೆ ಒಳ್ಳೆಯ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಅಧಿಕಾರಿಗಳು ಕೆಲಸ ಮಾಡದಂತೆ ಕಾಂಗ್ರೆಸ್ ಸದಸ್ಯರು ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆಗಳನ್ನು ಕೊಟ್ಟಂತೆಯೂ ಆಗಬೇಕು. ಇತ್ತ ಕೊಟ್ಟರೂ ಮಾಡಲಾಗದಂತೆಯೂ ಆಗಬೇಕು ಎಂದು ಕಿಡಿಕಾರಿದರು.
ಸಲ್ಲದ ಆರೋಪ ಮಾಡಬೇಡಿ: ಇದಕ್ಕೆ ಉತ್ತರಿಸಿದ ಕಾಂಗ್ರೆಸ್ ಸದಸ್ಯ ಜೆ.ಎಸ್. ಜಗದೀಶ್, ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ನಿರ್ಣಯ ಕೈಗೊಳ್ಳಿ. ಅದು ಬಿಟ್ಟು ಸಲ್ಲದ ಆರೋಪ ಮಾಡಬೇಡಿ ಎಂದರು. ಪ್ರಶಾಂತ್ಗೌಡ ಮಾತನಾಡಿ, ಪುಕ್ಕಟೆ ಪ್ರಚಾರ ಬೇಡ. ತಾವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೆ ನಾವು ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ ಎಂದರು.
ಪ್ರತಿಪಕ್ಷ ನಾಯಕ ಡಿ.ನಾಗಭೂಷಣ್ ಮಾತನಾಡಿ, ಪಾಲಿಕೆ ಆಯುಕ್ತರಿಗೆ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವ ಅಧಿಕಾರ ಇಲ್ಲ. ಮೇಯರ್ ಅವರು ಇಂತಹ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಆಯುಕ್ತರಿಗೆ ಪತ್ರ ಬರೆದರೆ ಮಾತ್ರ, ಅವರ ವಿರುದ್ಧ ಸರ್ಕಾರಕ್ಕೆ ವರದಿ ಕಳುಹಿಸಬಹುದಷ್ಟೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಜೆಡಿಎಸ್ ಸದಸ್ಯ ಆರ್. ಲಿಂಗಪ್ಪ ಮಾತನಾಡಿ, ಕೆಲಸ ಮಾಡದ ಅಧಿಕಾರಿಗಳನ್ನು ತಾಕತ್ತಿದ್ದರೆ ವಜಾ ಮಾಡಿ. ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಿ ನಾವು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆವು. ಆದರೆ ಮತ್ತೆ ಕೆಲವು ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ವರ್ಗಾವಣೆ ಆಗದಂತೆ ನೋಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಮಾತಿಗೆ ಬೆಲೆ ನೀಡುತ್ತಿಲ್ಲ: ಸಾಮಾನ್ಯ ವಿಷಯ ಕುರಿತು ನಡೆದ ಚರ್ಚೆಯಲ್ಲಿ ಬಿಜೆಪಿ ಸದಸ್ಯ ಎಚ್.ಎಸ್.ನಂದೀಶ್ ಪ್ರೀತಂ ಅವರು, ನಗರ ಪಾಲಿಕೆ ಎಸ್ಇ ಕೃಷ್ಣ ಸೇರಿದಂತೆ ಕೆಲವು ಅಧಿಕಾರಿಗಳು ಪಾಲಿಕೆ ಸದಸ್ಯರ ಮಾತಿಗಾಗಲಿ ಅಥವಾ ಆಯುಕ್ತರ ಮಾತಿಗೆ ಕಿಮ್ಮತ್ತಿನ ಬೆಲೆ ನೀಡುತ್ತಿಲ್ಲ. ಸಂಜೆ 7 ಗಂಟೆ ಬಳಿಕ ಕಚೇರಿಗೆ ಬಂದು ಕೆಲಸ ಮಾಡುವುದು ಏನಿದೆ? ಅಲ್ಲದೆ ಆಯುಕ್ತರ ಜೊತೆ ರಸ್ತೆಯಲ್ಲಿ ನಿಂತು ಜಗಳವಾಡುತ್ತ ನಿಲ್ಲುತ್ತಾರೆ. ಅಂತವರ ಅಗತ್ಯ ನಮಗಿಲ್ಲ. ಕೂಡಲೇ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕು ಎಂದು ಪಟ್ಟು ಹಿಡಿದರು. ಡಿ.ನಾಗಭೂಷಣ್ ಅವರು, ಗುತ್ತಿಗೆದಾರರಿಗೆ ಹಿರಿತನದ ಆಧಾರದ ಮೇಲೆ ಹಳೆಯ ಬಿಲ್ಗಳನ್ನು ಪಾವತಿಸಬೇಕು, ಫುಟ್ಪಾತ್ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಮತ್ತು ಖಾತೆ ವರ್ಗಾವಣೆಯಲ್ಲಿ ಉಂಟಾಗುತ್ತಿರುವ ಲೋಪ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.