ಮೈಸೂರು

ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಜಾಗೃತಿ

Published On :

ಕ.ಪ್ರ.ವಾರ್ತೆ    ಎಚ್.ಡಿ.ಕೋಟೆ    ಜ.29
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ನಿಸರ್ಗ ಫೌಂಡೇಷನ್ ವತಿಯಿಂದ ತಾಲೂಕಿನ ಅಣ್ಣೂರು ಗ್ರಾಮದಲ್ಲಿರುವ ರಾಷ್ಟ್ರೀಯ ಬಾಲಕಾರ್ಮಿಕ ಪುನರ್ವಸತಿ ಶಾಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಜನ ಜಾಗೃತಿ ಸಪ್ತಾಹ ಕಾರ್ಯಕ್ರಮ ಬುಧವಾರ ನಡೆಯಿತು.
ಜಾಥಾಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಜಾಥಾದಲ್ಲಿ ದುಡಿಮೆ ಬೇಡ ಶಿಕ್ಷಣ ಬೇಕು, ಕೂಲಿ ಸಾಕು ಶಾಲೆ ಬೇಕು, ಬಾಲಕಾರ್ಮಿಕ ಪದ್ಧತಿಗೆ ಧಿಕ್ಕಾರ... ಎಂಬ ಘೋಷಣೆಗಳೊಂದಿಗೆ ಕರ ಪತ್ರಗಳನ್ನು ಸಾರ್ವಜನಿಕರಿಗೆ ಹಂಚುವುದರ ಮೂಲಕ ಜಾಗೃತಿ ಮೂಡಿಸಲಾಯಿತು.
ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಮಾವೇಶಗೊಂಡು ಮಾತನಾಡಿದ ಕಾರ್ಮಿಕ ನಿರೀಕ್ಷಕ ಶಶಿಧರ್, ಬಾಲಕಾರ್ಮಿಕ ಪದ್ಧತಿ ಸಮಾಜದ ಒಂದು ಅನಿಷ್ಠ ಪಿಡುಗಾಗಿದೆ. ಇದನ್ನು ಬುಡಸಮೇತ ಕಿತ್ತು ಹಾಕಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಇದನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ ಎಂದರು.
ಸ್ವಯಂ ಘೋಷಣೆ ಮಾಡಿ: ಶಿಶು ಅಭಿವೃದ್ಧಿ ಯೋಜನಾಧಿಕಾರಿ ಈ. ರಾಮಕೃಷ್ಣಯ್ಯ ಮಾತನಾಡಿ, ಪ್ರತಿ ಮನೆಯಲ್ಲೂ ಸಹ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವುದಿಲ್ಲವೆಂದು ಸ್ವಯಂ ಘೋಷಣೆ ಮಾಡಬೇಕು. ನಮ್ಮ ಇಲಾಖೆಯೂ ಸಹ ಮಕ್ಕಳ ಸಹಾಯವಾಣಿ ಜತೆಗೂಡಿ ತಾಲೂಕಿನಲ್ಲಿ ಹಲವಾರು ಬಾಲಕಾರ್ಮಿಕರು ಮತ್ತು ಬಾಲ್ಯವಿವಾಹಗಳ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಕಾರ್ಯನಿರತರಾಗಿದ್ದೇವೆ. ತಾವು ಸಹ ನಮ್ಮ ಜತೆ ಕೈಜೋಡಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಿಸರ್ಗ ಫೌಂಡೇಷನ್ ಸಂಸ್ಥೆಯ ನಿರ್ದೇಶಕ ನಂಜುಂಡಯ್ಯ, ಬಾಲಕಾರ್ಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಿ. ಮಹದೇವೇಗೌಡ, ಮಕ್ಕಳ ಸಹಾಯವಾಣಿ ಕಾರ್ಯಕರ್ತ ಮಹದೇವಪ್ಪ, ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಪುಟ್ಟಸ್ವಾಮಿ, ಬಾಲಕಾರ್ಮಿಕ ಯೋಜನಾ ಸೊಸೈಟಿಯ ನಂಜುಂಡಸ್ವಾಮಿ, ನಿಸರ್ಗ ಸಂಸ್ಥೆಯ ರಾಘವೇಂದ್ರ, ದಿಲ್ ಶಾದ್, ಸುನೀತಾ, ಚಿಕ್ಕತಿಮ್ಮನಾಯಕ, ಎಸ್ಡಿಎಂಸಿ ಅಧ್ಯಕ್ಷ ರಾಜೇಶ್, ಬಾಲ ಕಾರ್ಮಿಕ ಶಾಲೆಯ ಸಿಬ್ಬಂದಿ ವರ್ಗದ ಗಿರಿಜಾ, ಭಾಗ್ಯರತ್ನ, ಆಶಾ ಇದ್ದರು.



ವಾರ್ಷಿಕೋತ್ಸವ
ಕೆ.ಆರ್. ನಗರ: ಪಟ್ಟಣದ ಗುರುಕುಲ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಫೆ.1 ರಂದು ಬಸವೇಶ್ವರ ಬಡಾವಣೆಯ ಶಿವಾನುಭವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಅಂದು ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜೇಅರಸ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಬಿ.ಎನ್. ವೀಣಾಕುಮಾರ್, ಅರಸು ಧ್ವನಿ ಪತ್ರಿಕೆಯ ಸಂಪಾದಕ ಶ್ರೀಧರ ರಾಜೇಅರಸ್ ಭಾಗವಹಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಜವರೇಗೌಡ ಅಧ್ಯಕ್ಷತೆ ವಹಿಸುವರು.
ನಾಳೆ ಪ್ರತಿಭಟನೆ
ಕೆ.ಆರ್. ನಗರ: ಗ್ರೀನ್ ಬಡ್ಸ್ ಆಗ್ರೋ ಫಾರಂ ಲಿಮಿಟೆಡ್ಗೆ ಕೆ.ಆರ್. ನಗರ ತಾಲೂಕಿನ ಪ್ರತಿನಿಧಿಗಳು ಸಂಗ್ರಹಿಸಿ ಕಟ್ಟಿರುವ ಹಣವನ್ನು ಸಕಾಲದಲ್ಲಿ ವಾಪಸ್ ಪಾವತಿಸದಿರುವ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಪ್ರತಿಭಟನಾ ಧರಣಿಯನ್ನು ಜ.31ರ ಬೆಳಿಗ್ಗೆ 10ಕ್ಕೆ ಪಟ್ಟಣದ ತಾಲೂಕು ಕಚೇರಿಯ ಮುಂದೆ ಹಮ್ಮಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.