ಕಳಪೆ ಕಾಮಗಾರಿ ತಡೆದು ಪ್ರತಿಭಟನೆ
ಕೆ.ಆರ್. ನಗರ: ಕಳಪೆ ಡಾಂಬರೀಕರಣ ಕಾಮಗಾರಿಯನ್ನು ತಡೆದು ನಂತರ ಗುಣಮಟ್ಟದ ಕೆಲಸ ಮಾಡಿಸಿದ ಪ್ರಸಂಗ ಪಟ್ಟಣದಲ್ಲಿ ಜರುಗಿತು.
ಇಲ್ಲಿನ 10ನೇ ವಾರ್ಡಿಗೆ ಸೇರಿದ ಬಜಾರ್ ರಸ್ತೆಗೆ ವಾಸವಿ ವೃತ್ತದ ಬಳಿ ಮುಖ್ಯಮಂತ್ರಿಗಳ ಅನುದಾನದಲ್ಲಿ ಡಾಂಬರೀಕರಣ ಕಾಮಗಾರಿ ಮಾಡಲಾಗುತಿತ್ತು. ಆದರೆ ಗುತ್ತಿಗೆದಾರರ ಕಡೆಯವರು ಅಂದಾಜು ಪಟ್ಟಿಯಂತೆ ಕಾಮಗಾರಿ ನಿರ್ವಹಿಸದೆ ತಮಗಿಷ್ಟ ಬಂದಂತೆ ಡಾಂಬರು ಹಾಕುತ್ತಿದ್ದರು.
ಇದನ್ನು ಗಮನಿಸಿದ ವಾರ್ಡಿನ ಪುರಸಭಾ ಸದಸ್ಯ ಉಮೇಶ್, ಸಾರ್ವಜನಿಕರೊಂದಿಗೆ ಕಾಮಗಾರಿಯನ್ನು ತಡೆದು ಕಳಪೆ ಕಾಮಗಾರಿಯ ಬಗ್ಗೆ ಪ್ರಶ್ನಿಸಿದಾಗ, ಉಡಾಫೆಯ ಉತ್ತರ ನೀಡಿದ ಗುತ್ತಿಗೆದಾರರ ಕಡೆಯ ಎಂಜಿನಿಯರ್ ರಾಜು ನಾವು ಸರಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸಮಜಾಯಿಸಿ ನೀಡಿದರು.
ಇದರಿಂದ ಆಕ್ರೋಶಗೊಂಡ ಉಮೇಶ್ ಮತ್ತು ಸಾರ್ವಜನಿಕರು ಪುರಸಭಾ ಎಂಜಿನಿಯರ್ ಲೋಕೇಶ್ ಅವರನ್ನು ಸ್ಥಳಕ್ಕೆ ಕರೆಯಿಸಿ ತರಾಟೆಗೆ ತೆಗೆದುಕೊಂಡು, ಕಾಮಗಾರಿ ನಡೆಯುವಾಗ ಸ್ಥಳದಲ್ಲಿ ಹಾಜರಿರದೆ ಎಲ್ಲಿ ಹೋಗಿದ್ದೀರಿ? ಂದು ಪ್ರಶ್ನಿಸಿದರಲ್ಲದೆ, ಸರ್ಕಾರದ ಹಣ ಪೋಲಾಗಲು ನೀವು ಕಾರಣರಾಗುತ್ತಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದರು. ಜನ ಪ್ರತಿನಿಧಿ ಮತ್ತು ಸಾರ್ವಜನಿಕರ ತರಾಟೆಯಿಂದ ಎಚ್ಚೆತ್ತುಕೊಂಡ ಎಂಜಿನಿಯರ್ ಲೋಕೇಶ್ ಕಾಮಗಾರಿಯನ್ನು ಪರಿಶೀಲಿಸಿದಾಗ 50 ಮಿಲಿ ಮೀಟರ್ ಬದಲು 20 ರಿಂದ 37 ಮಿಲಿ ಮೀಟರ್ ಡಾಂಬರು ಹಾಕಿರುವುದು ಕಂಡು ಬಂತು. ಕೂಡಲೇ ತಮ್ಮ ತಪ್ಪು ಒಪ್ಪಿಕೊಂಡ ಎಂಜಿನಿಯರ್ ಗುತ್ತಿದಾರರಿಗೆ ನೋಟಿಸ್ ನೀಡುವುದರ ಜತೆಗೆ ನಾನೇ ಸ್ಥಳದಲ್ಲಿ ನಿಂತು ಗುಣಮಟ್ಟದ ಕಾಮಗಾರಿ ಮಾಡಿಸಿ, ಕಳಪೆಯಾಗಿರುವ ಸ್ಥಳದಲ್ಲಿ ಮತ್ತೆ ಡಾಂಬರು ಹಾಕಿಸುತ್ತೇನೆ ಎಂದು ತಿಳಿಸಿದ ಹಿನ್ನೆಲೆ ಸಾರ್ವಜನಿಕರು ಡಾಂಬರೀಕರಣ ಮಾಡಲು ಅವಕಾಶ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್, ಪಟ್ಟಣದಾದ್ಯಂತ ಮುಖ್ಯಮಂತ್ರಿಗಳ ಅನುದಾನದ ಕೋಟ್ಯಾಂತರ ರು.ಗಳ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಪುರಸಭಾ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಉತ್ತಮ ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ ಎಂದು ದೂರಿದರಲ್ಲದೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮುಖಂಡರಾದ ಅಶೋಕ್, ಲೋಕೇಶ್, ರಾಘವೇಂದ್ರ, ಗೋಪಾಲ್, ಈಶ, ದೇವರಾಜು, ಹರಿಬ್ರಾಯ್, ಕೃಷ್ಣಶೆಟ್ಟಿ, ರಾಜಣ್ಣ ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

