3ಸಿಎಂ ತವರು ಜಿಲ್ಲೆಯಲ್ಲೂ ಅತ್ಯಾಚಾರ ಪ್ರಕರಣ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲೂ ಮೂರು ಅತ್ಯಾಚಾರ ಮತ್ತು ಅತ್ಯಾಚರಕ್ಕೆ ಯತ್ನ ಪ್ರಕರಣಗಳು ವರದಿಯಾಗಿದೆ.
ಬುದ್ದಿಮಾಂಧ್ಯ ಯುವತಿಯ ಮೇಲೆ ವಿವಾಹಿತನಿಂದ ಅತ್ಯಾಚಾರ, ಡ್ರಾಪ್ ಕೊಡುವ ನೆಪದಲ್ಲಿ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನ ಹಾಗೂ ಬಾಲಕಿಯನ್ನು ಅಪಹರಿಸಿ ಮದುವೆಯಾಗಿ ಅತ್ಯಾಚಾರ ಎಸಗಿರುವುದಲ್ಲದೆ ಬಾಲಕಿ ತಾಯಿ ಮತ್ತು ಸಹೋದರಿಯ ಮೇಲೆ ಬಲಾತ್ಕಾರ ಎಸಗಿರುವ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಈ ಎರಡು ಪ್ರಕರಣಗಳ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಅಪಹರಿಸಿ ಮದುವೆಯಾಗಿ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬುದ್ದಿಮಾಂಧ್ಯ ಯುವತಿ
ಪಕ್ಕದ ಮನೆಯಲ್ಲಿದ್ದ 23 ವರ್ಷದ ಬುದ್ದಿಮಾಂಧ್ಯ ಯುವತಿಯ ಮೇಲೆ ವಿವಾಹಿತನೊಬ್ಬ ಅತ್ಯಾಚಾರ ಎಸಗಿರುವ ಘಟನೆ ನಂಜನಗೂಡು ತಾಲೂಕು ತಾಯೂರು ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಯೂರು ನಿವಾಸಿ ಮಾಧು(25) ಬಂಧಿತ ಆರೋಪಿ. ಈತನಿಗೆ ಮದುವೆಯಾಗಿ ಒಂದು ಮಗು ಸಹ ಇದೆ. ಈತನ ಪಕ್ಕದ ಮನೆಯಲ್ಲಿದ್ದ ಬುದ್ದಿಮಾಂಧ್ಯ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬದನವಾಳು ಠಾಣೆ ಪೊಲೀಸರು ಆರೋಪಿ ಮಾಧುನನ್ನು ಶನಿವಾರ ಬಂಧಿಸಿ, ವೈದ್ಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ
ಮತ್ತೊಂದು ಪ್ರಕರಣದಲ್ಲಿ 14 ವರ್ಷದ ಬಾಲಕಿಗೆ ಡ್ರಾಪ್ ಕೊಡುವ ನೆಪದಲ್ಲಿ ಆಟೊ ಹತ್ತಿಸಿಕೊಂಡ ಇಬ್ಬರು ಅತ್ಯಾಚಾರಕ್ಕೆ ಯತ್ನಿಸಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ತಾಲೂಕು ಕೆ.ಎಂ. ಹಳ್ಳಿ ನಿವಾಸಿ ಹಾಗೂ ಆಟೊ ಚಾಲಕ ಗಂಗಾಧರ್(26) ಮತ್ತು ಮೈಸೂರಿನ ಲಷ್ಕರ್ ಮೊಹಲ್ಲಾದ ಮಹದೇವ(25) ಬಂಧಿತರು. ಬೆಂಗಳೂರು ಮೂಲದ 14 ವರ್ಷದ ಬಾಲಕಿ ಗುರುವಾರ ಸಂಜೆ ರೈಲಿನಲ್ಲಿ ಮೈಸೂರಿಗೆ ಬಂದಿದ್ದಾರೆ. ರೈಲು ನಿಲ್ದಾಣದ ಬಳಿ ಚಿಕ್ಕಪ್ಪನಿಗಾಗಿ ಕಾಯುತ್ತಿದ್ದಾಗ, ಆಟೊ ಚಾಲಕ ಗಂಗಾಧರ್ ಮತ್ತು ಇತನ ಸ್ನೇಹಿತ ಮಹದೇವ ತಮಗೆ ನಿಮ್ಮ ಚಿಕ್ಕಪ್ಪ ಪರಿಚಿತರು ಎಂದು ಹೇಳಿ ಆಟೊ ಹತ್ತಿಸಿಕೊಂಡಿದ್ದಾರೆ.
ಬಳಿಕ ಆಟೊದಲ್ಲಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಕೂಗಿಕೊಂಡ ಬಾಲಕಿ, ತಪ್ಪಿಸಿಕೊಂಡು ಸಮೀಪದಲ್ಲಿದ್ದ ಮನೆಯೊಂದಕ್ಕೆ ನುಗ್ಗಿದ್ದಾಳೆ. ಆ ಮನೆಯಲ್ಲಿದ್ದ ರಾಜು ಎಂಬವರು ಬಾಲಕಿಯನ್ನು ರಕ್ಷಿಸಿದ್ದಾರೆ. ಇದನ್ನು ಗಮನಿಸಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಸಂಬಂಧ ಶುಕ್ರವಾರ ರಾತ್ರಿ ಪ್ರಕರಣ ದಾಖಲಿಸಿಕೊಂಡ ಮೈಸೂರು ದಕ್ಷಿಣ ಠಾಣೆ ಪೊಲೀಸರು, ಆರೋಪಿಗಳಾದ ಗಂಗಾಧರ್ ಮತ್ತು ಮಹದೇವನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಅಪಹರಣ, ಮದುವೆ ಅತ್ಯಾಚಾರ
16 ವರ್ಷದ ಬಾಲಕಿಯನ್ನು ಅಪಹರಿಸಿ ಮದುವೆಯಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಬಾಲಕಿಯ ತಾಯಿ ಮತ್ತು ಸಹೋದರಿಯನ್ನು ಬಲಾತ್ಕಾರಕ್ಕೆ ಯತ್ನಿಸಿರುವ ಘಟನೆ ಮೈಸೂರಿನ ಏಕಲವ್ಯ ನಗರದಲ್ಲಿ ನಡೆದಿದೆ.
ಏಕಲವ್ಯ ನಗರ ನಿವಾಸಿ ಅಲೆಮಾರಿ ಜನಾಂಗದ ಲೋಕೇಶ್ ಎಂಬಾತ ಈ ಕೃತ್ಯ ಎಸಗಿದ ಪ್ರಮುಖ ಆರೋಪಿ. ಈತನು ಇತ್ತೀಚೆಗೆ 16 ವರ್ಷದ ಬಾಲಕಿಯನ್ನು ಅಪಹರಿಸಿ ಮದುವೆಯಾಗಿ ಅತ್ಯಾಚಾರ ಎಸಗಿದ್ದ. ಏಕಲವ್ಯನಗರದಲ್ಲಿರುವ ಅಲೆಮಾರಿ ಜನಾಂಗದವರು ಪಂಚಾಯಿತಿ ಮಾಡಿ ಬಾಲಕಿ ಮತ್ತು ಲೋಕೇಶನನ್ನು ದೂರ ಮಾಡಿದ್ದರು. ಬಾಲಕಿ 18 ವರ್ಷ ತುಂಬಿದ ಬಳಿಕ ಮರು ಮದುವೆ ಮಾಡಿಸಲು ತೀರ್ಮಾನಿಸಿದ್ದರು. ಪಂಚಾಯಿತಿ ತೀರ್ಪಿನಂತೆ ಬಾಲಕಿ ತಾಯಿ ಮನೆಯಲ್ಲಿ ಉಳಿದಿಕೊಂಡಿದ್ದಳು. ಜು.12 ರಂದು ಲೋಕೇಶ್ ಮತ್ತು ಬೆಂಬಲಿಗರು ಮನೆಗೆ ನುಗ್ಗಿ ಬಾಲಕಿಯನ್ನು ತನ್ನೊಂದಿಗೆ ಕಳುಹಿಸಿಲು ಕೇಳಿದ್ದಾರೆ. ಇದಕ್ಕೆ ಒಪ್ಪದಿದ್ದಕ್ಕೆ ತಾಯಿ ಮತ್ತು ಸಹೋದರಿಯನ್ನು (14 ವರ್ಷ ಬಾಲಕಿ) ಬಲತ್ಕಾರಕ್ಕೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ.
ಬಾಲಕಿ ಪೋಷಕರು ಜು.14 ರಂದು ನೀಡಿರುವ ದೂರಿನನ್ವಯ ಮೇಟಗಳ್ಳಿ ಠಾಣೆ ಪೊಲೀಸರು, ಲೋಕೇಶ್, ಲಕ್ಷ್ಮಣ, ಭರತ, ಅನ್ನಪೂರ್ಣ ಮತ್ತು ಮೋಹನ ಎಂಬು ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಎಲ್ಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

