ಸಾವಯವ ಗೊಬ್ಬರ ಬಳಸಲು ಉತ್ತೇಜನ ಅಗತ್ಯ: ದೇವರಾಜ್
ಮೈಸೂರು: ಮುಂದೊಂದು ದಿನ ರಸಗೊಬ್ಬರ ಬಳಸಬಾರದು ಎಂಬ ಕಾನೂನು ಬಂದರೂ ಬರಬಹುದು. ಆದ್ದರಿಂದ ಈಗಿನಿಂದಲೇ ಗೊಬ್ಬರ ಮಾರಾಟಗಾರರು ರೈತರಿಗೆ ಸಾವಯವ ಗೊಬ್ಬರ ಬಳಸುವಂತೆ ಉತ್ತೇಜನ ನೀಡುವುದು ಒಳಿತು ಎಂದು ಚಾಮರಾಜನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಡಾ.ಎಚ್.ಎಸ್. ದೇವರಾಜ್ ಕರೆ ನೀಡಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕ ಮಾರಾಟಗಾರರ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚು ರಸಗೊಬ್ಬರ ಬಳಸುತ್ತಿರುವುದು ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿದೆ. ಇದನ್ನು ತಪ್ಪಿಸಲು, ಮಣ್ಣಿನ ಸಂರಕ್ಷಣೆ ನಮ್ಮ ಹೊಣೆಯಾಗಿರುವುದರಿಂದ ರಸಗೊಬ್ಬರ ನಿಷೇಧದ ಕಾನೂನು ಬರುವ ಸೂಚನೆಯಿದೆ ಎಂದರು.
ರಸಗೊಬ್ಬರದಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರ ಆಗಿದ್ದಾಂಗ್ಗೆ ನಮ್ಮ ಬಳಿ ವರದಿ ಕೇಳುತ್ತಿದೆ. ಮೈಸೂರು ಮತ್ತು ಚಾಮರಾಜನಗರದಲ್ಲಿ 290 ರಸಗೊಬ್ಬರ, ಕ್ರಿಮಿನಾಶಕ ವಿತರಕರಿದ್ದಾರೆ. ಅವರೆಲ್ಲರ ಉತ್ತಮ ಕೆಲಸದಿಂದ ಯಾವುದೇ ನ್ಯೂನತೆ ಕಂಡುಬಂದಿಲ್ಲ. ಆದರೆ, ರಸಗೊಬ್ಬರ ಮಾರಾಟದ ಪ್ರಮಾಣ ಹೆಚ್ಚಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿ ಎಕರೆಗೆ 147 ಕೆ.ಜಿ. ಗೊಬ್ಬರ ಬಳಸಲಾಗುತ್ತಿದೆ. 1906 ರಲ್ಲಿ ದೇಶದಲ್ಲಿ 6 ಸಾವಿರ ಮೆಟ್ರಿಕ್ ಟನ್ ಆಹಾರ ಉತ್ಪಾದಿಸಲಾಗುತ್ತಿತ್ತು. ಸದ್ಯ 27 ಸಾವಿರ ಮೆಟ್ರಿಕ್ ಟನ್ ಆಹಾರ ಉತ್ಪಾದಿಸಲಾಗುತ್ತಿದೆ ಎಂದರು.
ಕಟ್ಟುನಿಟ್ಟಿನ ಕ್ರಮ ಅಗತ್ಯ: ಮೈಸೂರು ಜಿಲ್ಲೆ ಕೃಷಿ ಇಲಾಖೆಯ ಉಪನಿರ್ದೇಶಕ ಡಾ. ಶಿವಕುಮಾರ್ ಮಾತನಾಡಿ, ದೇಶದ ಶೇ. 70 ರಷ್ಟು ಮಂದಿ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಆಹಾರ ಉತ್ಪಾದನೆಯಿಂದ ದೇಶದ ಆರ್ಥಿಕತೆ ಸುಧಾರಣೆಯಾಗುತ್ತದೆ. ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಈ ಸಂದರ್ಭದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. 2025ರ ಹೊತ್ತಿಗೆ ದೇಶದಲ್ಲಿ ಆಹಾರ ಉತ್ಪಾದನೆ 400 ಮಿಲಿಯನ್ ಮೆಟ್ರಿಕ್ ಟನ್ ಮೀರಲಿದೆ. ಆದ್ದರಿಂದ ಆಹಾರ ಉತ್ಪಾದನೆಯ ಜತೆಗೆ ಮಣ್ಣಿನ ರಕ್ಷಣೆ, ಮನುಷ್ಯ- ಪ್ರಾಣಿಗಳ ಆರೋಗ್ಯದ ರಕ್ಷಣೆ ನಮ್ಮ ಜವಾಬ್ದಾರಿಯಾಗಿರುವುದರಿಂದ ನೀವು ನಮ್ಮೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಂಘದ ಅಧ್ಯಕ್ಷ ಶಾಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ನಾಗರಾಜಪ್ಪ, ಕೆ.ವಿ. ಸತ್ಯಪ್ರಕಾಶ್, ಸಂಘದ ಗೌರವಾಧ್ಯಕ್ಷ ಕೆ.ಜಿ. ರಾಮನಾಥನ್, ಪದಾಧಿಕಾರಿಗಳಾದ ಟಿ. ಮಹಂತೇಶ್, ಬಿ.ಪಿ. ಶಿವಪ್ರಕಾಶ್ ಇದ್ದರು. ಮಾಜಿ ಅಧ್ಯಕ್ಷ ಪ್ರಕಾಶ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

