ಪರಿಸರ ನಾಶ ಮುಂದುವರಿದರೆ ಜೀವ ಸಂಕುಲಕ್ಕೆ ಅಪಾಯ
ಪಿರಿಯಾಪಟ್ಟಣ: ಪರಿಸರ ನಾಶ ಹೀಗೆ ಮುಂದುವರೆದರೆ ಜೀವ ಸಂಕುಲಕ್ಕೆ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ನ್ಯಾ. ವಿ. ಹನುಮಂತಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆ ಹಾಗೂ ಕಾನೂನು ಸೇವಾ ಸಮಿತಿ ವತಿಯಿದ ಹಮ್ಮಿಕೊಂಡಿದ್ದ ಲಕ್ಷ ವೃಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ಇಂದು ಕಲುಷಿತಗೊಳ್ಳುತ್ತಿದ್ದು, ಇದಕ್ಕೆ ಹಲವಾರು ಕಾರಣಗಳಿವೆ. ನಾವು ಪರಿಸರ ಸಂರಕ್ಷಣೆಗೆ ಪಣತೊಡಬೇಕಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಸಸಿ ನೆಟ್ಟು ತನ್ನ ವಿದ್ಯಾರ್ಥಿ ಜೀವನದವರೆಗೆ ಅದನ್ನು ಪೋಷಿಸಿ ಬೆಳೆಸಿ ಆರೈಕೆ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಎಸಿಎಫ್ ಪ್ರಸನ್ನಕುಮಾರ್, ಪ್ರಾಂಶುಪಾಲ ಪ್ರೊ. ರಂಗಸ್ವಾಮಿ ಮಾತನಾಡಿದರು. ವಲಯ ಅರಣ್ಯಾಧಿಕಾರಿ ಎಂ.ಎಸ್. ಚಿನ್ನಪ್ಪ, ಉಪವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ, ಅರಣ್ಯ ರಕ್ಷಕ ರವಿನಾಯಕ, ಉಪನ್ಯಾಸಕರಾದ ಬಸವರಾಜ್, ಶಶಿಧರ್, ಜಯಣ್ಣ, ಗಿರೀಶ್, ಸೋಮಣ್ಣ, ಪುಟ್ಟಮಾದಯ್ಯ, ಮಹೇಶ್ ಇದ್ದರು.
ನಾನಾ ತರಬೇತಿ, ಶಿಬಿರಗಳಿಗೆ ಅರ್ಜಿ
ಮೈಸೂರು: ಇಂಪ್ಲಸ್ ಡಾಟಾಬೇಸ್ ಸಲ್ಯೂಷನ್ಸ್ ವತಿಯಿಂದ ಎಸ್ಸೆಸ್ಸೆಲ್ಸಿ ಪಾಸಾಗಿರುವ 18 ವರ್ಷ ಮೇಲ್ಪಟ್ಟ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಮೂರು ತಿಂಗಳ ಕಂಪ್ಯೂಟರ್ ಉಚಿತ ತರಬೇತಿ ನೀಡಲಿದ್ದು, ಆಸಕ್ತರು ಜು.25 ರೊಳಗೆ ಮೊ. 91644 62435 ಸಂಪರ್ಕಿಸಬಹುದು.
ಚಾಮರಾಜ ಮೊಹಲ್ಲಾದಲ್ಲಿರುವ ಶ್ರೀ ವಿದ್ಯಾರ್ಥ್ ಪ್ರಗತಿ ಫೌಂಡೇಷನ್ ಸ್ಪರ್ಧಾತ್ಮಕ ತರಬೇತಿ ಕೇಂದ್ರದಲ್ಲಿ ಎಂಬಿಎ, ಸಿ- ಮ್ಯಾಟ್ ಪರೀಕ್ಷೆಗೆ ತರಬೇತಿ ನೀಡಲಿದ್ದು, ಆಸಕ್ತರು ಜು.25 ರೊಳಗೆ ಮೊ. 98862 52355 ಸಂಪರ್ಕಿಸಬಹುದು.
ಚಾಮರಾಜ ಮೊಹಲ್ಲಾದಲ್ಲಿರುವ ನವೋದಯ ಫೌಂಡೇಷನ್ನಲ್ಲಿ ಐಬಿಪಿಎಸ್ ಕ್ಲರಿಕಲ್, ಪ್ರೊಬೇಷನರಿ ಆಫೀಸರ್ಸ್, ಮಲ್ಟಿಟಾಸ್ಕ್ ಆಫೀಸರ್ಸ್, ಸ್ಟಾಫ್ ಸೆಲೆಕ್ಷನ್ ಕಮೀಷನ್ ಪರೀಕ್ಷೆಗೆ ತರಬೇತಿ ನೀಡಲಿದ್ದು, ಮೊ. 78490 15566 ಸಂಪರ್ಕಿಸಬಹುದು.
ಕುವೆಂಪುನಗರದಲ್ಲಿರುವ ದಿ ಆರ್ಟ್ ಆಫ್ ಲಿವಿಂಗ್ನ ವ್ಯಕ್ತಿ ವಿಕಾಸ ಕೇಂದ್ರದಲ್ಲಿ ಜು. 26 ಮತ್ತು 27 ರಂದು ನಾಡಿ ಪರೀಕ್ಷೆ ಏರ್ಪಡಿಸಿದ್ದು, ಮೊ. 98459 63387 ಸಂಪರ್ಕಿಸಬಹುದು.
ರಾಮಕೃಷ್ಣನಗರದಲ್ಲಿರುವ ಅರಿವು ಶಾಲೆಯಲ್ಲಿ ಜು. 27 ರಂದು ಹಾರ್ಮೋನಿಕಾ (ಮೌತ್ ಆರ್ಗನ್) ಕಲಿಕಾ ಕಾರ್ಯಾಗಾರವನ್ನು ವಿದ್ವಾನ್ ಸಾಯಿ ತೇಜಸ್ ಚಂದ್ರಶೇಖರ್ ನಡೆಸಿಕೊಡುವರು. ಕನಿಷ್ಠ 8 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು. ಮೊ. 94822 77872 ಸಂಪರ್ಕಿಸಬಹುದು.
ಕುವೆಂಪುನಗರದಲ್ಲಿರುವ ಮೈಸೂರು ಇಂಟೀರಿಯರ್ಸ್ ಅಂಡ್ ಡಿಸೈನ್ಸ್ ಅಕಾಡೆಮಿಯಲ್ಲಿ ಆ.4 ರಿಂದ ಗೃಹಿಣಿಯರಿಗೆ ಒಳಾಂಗಣ ವಿನ್ಯಾಸದ ಡಿಪ್ಲೊಮಾ ತರಗತಿ ಆರಂಭಿಸಲಿದ್ದು, ಮೊ. 94488 50502 ಸಂಪರ್ಕಿಸಬಹುದು.
ಡಿ. ಬನುಮಯ್ಯ ರಸ್ತೆಯಲ್ಲಿರುವ ವೈಜಯಂತಿ ಚಿತ್ರಕಲಾ ಮಹಾವಿದ್ಯಾಲಯವು ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಂದ ಎರಡು ವರ್ಷದ ದೃಶ್ಯಕಲಾ ಮೂಲ ಹಾಗೂ ಬಿವಿಎ ಪದವಿ ಚಿತ್ರಕಲಾ ತರಗತಿಗೆ ಅರ್ಜಿ ಆಹ್ವಾನಿಸಿದ್ದು, ಮೊ. 99456 13828 ಸಂಪರ್ಕಿಸಬಹುದು.
ಚಾಮರಾಜಪುರಂನಲ್ಲಿರುವ ಕೆಎಡಿಜೆ ಕೋಚಿಂಗ್ ಸೆಂಟರ್ನಲ್ಲಿ ಐಬಿಪಿಎಸ್ ಪ್ರೊಬೇಷನರಿ ಅಫೀಸರ್ಸ್ ಅಥವಾ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ತರಬೇತಿ ನೀಡಲಿದ್ದು, ಮೊ. 97429 74258 ಸಂಪರ್ಕಿಸಬಹುದು.
ವಿವೇಕಾನಂದ ವೃತ್ತದ ಬಳಿ ಇರುವ ಎಂಐಜಿ- 30 ಕಟ್ಟಡದಲ್ಲಿ ಬ್ರಿಡ್ಜ್ ಕೋರ್ಸ್ ಆರಂಭಿಸಲಿದ್ದು, ಎಂಬಿಎ ಪದವೀಧರರಿಗೆ ಸಾಫ್ಟ್ಸ್ಕಿಲ್ಸ್ ಹೇಳಿಕೊಡಲಾಗುತ್ತದೆ. ಮೊ. 98803 64121 ಸಂಪರ್ಕಿಸಬಹುದು.
ಯಶಸ್ವಿನಿ ಯೋಜನೆಗೆ ನೋಂದಣಿ
ಮೈಸೂರು: ರಾಮಾನುಜ ರಸ್ತೆಯಲ್ಲಿರುವ ಶ್ರೀ ಗುರು ಮಲ್ಲೇಶ್ವರ ಪದವೀಧರರ ಪತ್ತಿನ ಸಹಕಾರ ಸಂಘದಲ್ಲಿ ಯಶಸ್ವಿನಿ ಯೋಜನೆಗೆ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ದೂ. 0821- 2445515 ಸಂಪರ್ಕಿಸಬಹುದು.
ದಿ ಮೈಸೂರು ಸಿಟಿ ಶ್ರೀ ಶಿವಜಿ ಛತ್ರಪತಿ ಕೋ- ಆಪರೇಟಿವ್ ಸಹಕಾರ ಸಂಘದ ಸದಸ್ಯರು ಯಶಸ್ವಿನಿ ನಗರ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕೆ. ನಾಗೇಂದ್ರರಾವ್ ತಿಳಿಸಿದ್ದಾರೆ.
ಕೆ.ಆರ್. ಮೊಹಲ್ಲಾದಲ್ಲಿರುವ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಸದಸ್ಯರು ಯಶಸ್ವಿನಿ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಬಹುದು. ದೂ. 99012 64755 ಸಂಪರ್ಕಿಸಬಹುದು.
ಕಚೇರಿ ವೇಳೆ ಬದಲು
ಕುವೆಂಪುನಗರದಲ್ಲಿರುವ ಶ್ರೀ ಶಾರದಾ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ವ್ಯವಹಾರದ ವೇಳೆ ಬದಲಾಗಿದ್ದು, ಆ.1 ರಿಂದ ಜಾರಿಗೆ ಬರುವಂತೆ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಹಾಗೂ ಸಂಜೆ 4.30 ರಿಂದ ಸಂಜೆ 6.30 ಗಂಟೆಯೊಳಗೆ ಕಚೇರಿ ವ್ಯವಹರಿಸಲಿದೆ.
ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿ ಇಟ್ಟ ಪತಿ
ಟಿ. ನರಸೀಪುರ: ತವರು ಮನೆಯಿಂದ ವರದಕ್ಷಿಣೆ ತರಲಿಲ್ಲವೆಂದು ಹಿಂಸೆ ನೀಡಿ ತಾಯಿಯೊಡನೆ ಸೇರಿಕೊಂಡು ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಅರೆಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಮನಗರ ತಾಲೂಕಿನ ಬಿಡದಿಯ ಹೆಗ್ಗಡಗೆರೆ ಗ್ರಾಮದ ತಿಮ್ಮಯ್ಯ ಎಂಬುವರ ಪುತ್ರಿ ಲಕ್ಷ್ಮೀದೇವಿ(22) ಮೃತರು. ಈಕೆಯ ಪತಿ ಆನಂದ ಹಾಗೂ ಆತನ ತಾಯಿ ಮುತ್ತೇಲಮ್ಮ ಇಬ್ಬರೂ ಸೇರಿಕೊಂಡು ಕಳೆದ ಸೋಮವಾರ ರಾತ್ರಿ ಅರೆಬೊಮ್ಮನಹಳ್ಳಿ ಗ್ರಾಮದಲ್ಲಿ ಸಿಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಕೊಲೆ ಮಾಡಿ, ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಲಕ್ಷ್ಮೀದೇವಿ ಮತ್ತು ಆನಂದ್ ಪ್ರೇಮ ವಿವಾಹವಾಗಿದ್ದರು. ನಾಲ್ಕು ವರ್ಷದ ಮತ್ತು ಎರಡೂವರೆ ವರ್ಷದ ಹೆಣ್ಣು ಮಕ್ಕಳಿದ್ದಾರೆ. ಪತಿ ಆನಂದ್ ಹಾಗೂ ಅತ್ತೆ ಮುತ್ತೇಲಮ್ಮ ಪ್ರತಿನಿತ್ಯ ಕುಡಿದು ಬಂದು ವರದಕ್ಷಿಣೆಗೆ ಪೀಡಿಸುತ್ತ ಕಿರುಕುಳ ನೀಡುತ್ತಿದ್ದರು ಎಂದು ಮೃತ ಲಕ್ಷ್ಮೀದೇವಿ ಅವರ ತಾಯಿ ಮಂಜುಳ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಅರೆಬೊಮ್ಮನಹಳ್ಳಿ ಗ್ರಾಮಕ್ಕೆ ನಂಜನಗೂಡು ಉಪವಿಭಾಗದ ಎಎಸ್ಪಿ ಡಾ.ಪಿ. ರಾಜಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ಕುಮಾರ್ ಹಾಗೂ ಸಬ್ಇನ್ಸ್ಪೆಕ್ಟರ್ ಶಶಿಕುಮಾರ್ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಬ್ಬರನ್ನೂ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹಳೆ ಲೆಕ್ಕ ಚುಕ್ತಾ ಮಾಡಿ
ಮೈಸೂರು: ಕಳೆದ ಬಾರಿ ದಸರಾ ಮಹೋತ್ಸವ ಆಚರಣೆಗಾಗಿ ನಾನಾ ಉಪಸಮಿತಿಗಳಿಗೆ ಬಿಡುಗಡೆಯಾಗಿದ್ದ ಅನುದಾನದ ಖರ್ಚು ವೆಚ್ಚದ ಮಾಹಿತಿ ನೀಡುವಂತೆ ಪ್ರಭಾರ ಜಿಲ್ಲಾಧಿಕಾರಿ ಎಸ್. ಪಾಲಯ್ಯ ಖಡಕ್ ಸೂಚನೆ ನೀಡಿದ್ದಾರೆ.
ಈ ಸಂಬಂಧ ಮಂಗಳವಾರ ನಾನಾ ಉಪಸಮಿತಿಗಳ ಜವಾಬ್ದಾರಿ ಹೊತ್ತಿದ್ದ ಅಧಿಕಾರಿಗಳ ಸಭೆ ನಡೆಸಿದ ಅವರು, ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ 10 ಕೋಟಿಯಲ್ಲಿ 8.5 ರಿಂದ 9 ಕೋಟಿ ರು. ಖರ್ಚಾಗಿದೆ. ಯಾವುದಕ್ಕೆ ಖರ್ಚಾಗಿದೆ, ಎಷ್ಟು ಉಳಿದಿದೆ ಎಂಬುದರ ಬಗ್ಗೆ ಸಾಕಷ್ಟು ಉಪಸಮಿತಿ ಪದಾಧಿಕಾರಿಗಳು ಮಾಹಿತಿ ನೀಡಿಲ್ಲ. ಕ್ರೀಡೆ, ಕುಸ್ತಿ, ಮಕ್ಕಳ ದಸರಾ ಉಪಸಮಿತಿ, ಗ್ರಾಮೀಣ ದಸರಾ ಉಪಸಮಿತಿ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನಡೆಸಿದ ಕಾರ್ಯಕ್ರಮಕ್ಕೆ ಖರ್ಚಾದ ಲೆಕ್ಕವೂ ಸಮರ್ಪಕವಾಗಿ ಬಂದಿಲ್ಲ ಎಂದರು.
ತುರ್ತು ಸಭೆ 28ಕ್ಕೆ: ದಸರಾ ತುರ್ತು ಸಭೆ ಜು.28 ರಂದು ನಡೆಯಲಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮುಖರ್ಜಿ ಆಗಮಿಸುವರು. ಅಧಿಕಾರಿಗಳು ಅಂದಿನ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಪಾಲಯ್ಯ ತಿಳಿಸಿದರು. ಹೆಚ್ಚುವರಿ ಡಿಸಿ ಎಂ.ಎಸ್. ಅರ್ಚನಾ, ಉಪವಿಭಾಗಾಧಿಕಾರಿ ಬಸವರಾಜು, ಡಿಸಿಪಿ ಎಂ.ಎಂ. ಮಹದೇವಯ್ಯ, ಪಾಲಿಕೆ ಕಂದಾಯ ಅಧಿಕಾರಿ ರಾಜು ಹಾಗೂ ವಿವಿಧ ಇಲಾಖೆಯ ಉಪನಿರ್ದೇಶಕರು ಹಾಜರಿದ್ದರು.
ಯಾವುದೇ ಸಮಸ್ಯೆ ಇದ್ದರೆ ಹೇಳಿ
ಈ ಬಾರಿ ದಸರಾ ಮಹೋತ್ಸವನ್ನು ಮತ್ತಷ್ಟು ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಹಣ ಮೀಸಲಿಟ್ಟಿದೆ. ಆದ್ದರಿಂದ ಕಳೆದ ಬಾರಿ ದಸರಾ ವೇಳೆ ಅನುಭವಿಸಿದ ಸಮಸ್ಯೆಗಳು, ಅದಕ್ಕಾಗಿ ಈ ಬಾರಿ ಕಂಡುಕೊಳ್ಳಬಹುದಾದ ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನೆಹರು ಯುವ ಕೇಂದ್ರದ ನಿರ್ದೇಶಕ ಎಂ.ಎನ್. ನಟರಾಜ್ ಯುವ ಸಂಭ್ರಮ, ಯುವ ದಸರಾದಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ತಿಳಿಸಿದರು.
ಪುರಸಭೆ ಮೇಲ್ದರ್ಜೆಗೇರಿಸಲು ಒತ್ತಾಯ
ಹುಣಸೂರು: ಹುಣಸೂರು ಪುರಸಭೆಯನ್ನು ಮೇಲ್ದರ್ಜೆಗೇರಿಸುವುದಾಗಿ ಭರವಸೆ ನೀಡಿದ್ದ ರಾಜ್ಯ ಸರ್ಕಾರ, ಪಟ್ಟಣದ ಜನತೆಗೆ ನಿರಾಸೆ ಮೂಡಿಸಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ, ದ್ವಿಚಕ್ರ ವಾಹನ ದುರಸ್ತಿಗಾರರ ಸಂಘ ಹಾಗೂ ದಸಂಸ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪುರಸಭಾ ಮೈದಾನದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಮೊದಲು ಪುರಸಭೆ ಎದುರು ಅಧಿಕಾರಿಶಾಹಿ ವರ್ಗ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ದಿಕ್ಕಾರ ಮೊಳಗಿಸಿದರು.
ಕರವೇ ತಾಲೂಕು ಅಧ್ಯಕ್ಷ ಪುರುಶೋತ್ತಮ್ ಮಾತನಾಡಿ, ಸರ್ಕಾರ ಈ ಹಿಂದೆ 16 ಪುರಸಭೆಗಳನ್ನು ಮೇಲ್ದರ್ಜೆಗೇರಿಸಿ ನಗರಸಭೆಯನ್ನಾಗಿ ಮಾರ್ಪಡಿಸಿ ಅಭಿವೃದ್ಧಿ ಪಡಿಸಲಾಗುವುದೆಂಬ ಭರವಸೆ ಹುಸಿಯಾಗಿದ್ದು ಪಟ್ಟಣದ ಜನತೆ ನಿರಾಶರಾಗಿದ್ದಾರೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂದು ಜರಿದರು. ಡಿಎಸ್ಎಸ್ನ ಕೆಂಪರಾಜು ಮಾತನಾಡಿ, ಪಟ್ಟಣದಲ್ಲಿ 19 ಸ್ಲಂ ವಾರ್ಡ್ಗಳಿವೆ. ಪುರಸಭೆ ವತಿಯಿಂದ ಕಳೆದ ಮೂರು ದಶಕಗಳಿಂದಲೂ ನಿವೇಶನ ವಿತರಿಸದೆ ಜನತೆ ಹಂದಿಗೂಡಿನಂತೆ 4-5 ಕುಟುಂಬಗಳು ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಇದೇ ವೇಳೆ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಮುಖ್ಯಾಧಿಕಾರಿ ಎ. ರಮೇಶ್ ಮಾತನಾಡಿ, ಸರ್ಕಾರ ಮೊದಲ ಆದ್ಯತೆಯಾಗಿ 10 ಪುರಸಭೆಗಳನ್ನು ಮೇಲ್ದರ್ಜೆಗೇರಿಸಿದೆ. ತಾವು ಈಗಾಗಲೇ ಶಾಸಕರೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಶಾಸಕರು ಸಹ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿದ್ದಾರೆ. ನಗರಸಭೆಗೆ ಬೇಕಾಗಿರುವ ಎಲ್ಲ ಅರ್ಹತೆಗಳು ಹುಣಸೂರು ಪುರಸಭೆಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

