ಇಂದಿನಿಂದ ಕಬ್ಬಿಗರೂರಲ್ಲಿ ಅಕ್ಷರ ಜಾತ್ರೆ
ಬನ್ನೂರು: ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 13ನೇ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲು ಟಿ.ನರಸೀಪುರ ತಾಲೂಕು ಬನ್ನೂರು ಪಟ್ಟಣದ ಫುಟ್ಬಾಲ್ ಕ್ರೀಡಾಂಗಣ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ.
ವಹ್ನೀಪುರವೆಂದು ಪುರಾಣ ಪ್ರಸಿದ್ಧ ಪ್ರಾಚೀನ ಇತಿಹಾಸ ಹೊಂದಿರುವ ಹಸಿಬತ್ತ- ಬಿಸಿಬೆಲ್ಲದ ನಾಡು ಬನ್ನೂರಿನಲ್ಲಿ 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ. ಸುಮಾರು 20 ವರ್ಷಗಳ ಹಿಂದೆ ತಾಲೂಕು ಮಟ್ಟದ ಹಾಗೂ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನಗಳು ಜರುಗಿದ್ದವು. ಬನ್ನೂರು ಕಾವೇರಿ ತಟಿಯಲ್ಲಿ ನಿತ್ಯ ಹಸಿರಿನಿಂದ ಕಂಗೊಳಿಸುತ್ತಿರುವ ರಮಣೀಯ ಸ್ಥಳವಾಗಿದೆ. ದಾಸ ಶ್ರೇಷ್ಠರಾದ ವ್ಯಾಸರಾಯರ ಜನ್ಮಸ್ಥಳ ಅವಧೂತರಾದ ಶ್ರೀ ಕರಿಯಪ್ಪ ಸ್ವಾಮಿಯವರ ಸಾಧನ ಕ್ಷೇತ್ರವಾಗಿದೆ. ಮಹಾಭಾರತ ಕಾಲದಿಂದಲೂ ಮಯೂರ ವಹ್ನಿಪುರ, ವಣ್ಣಿಯೂರು ಎಂಬ ಹೆಸರಿನಿಂದ ಪುರಾಣ ಪ್ರಸಿದ್ಧ ಸ್ಥಳವಾಗಿದೆ. ವಿಜಯನಗರ ಸಾಮ್ರಾಜ್ಯದ ರಾಜಗುರು ಶ್ರೀ ವಿದ್ಯಾರಣ್ಯರಿಂದ ಪೂಜಿತ ಸಪ್ತ ಮಾತೃಕೆಯರಲ್ಲಿ ಒಬ್ಬರಾದ ಶ್ರೀ ಹೇಮಾದ್ರಾಂಬ ದೇವಿಯ ಆರಾಧನ ಕ್ಷೇತ್ರ ಇದಾಗಿದೆ. ಇಂದು ಸುತ್ತಲ ನೂರಾರು ಗ್ರಾಮಗಳಿಗೆ ಇಂದು ಶೈಕ್ಷಣಿಕವಾಗಿ ಮಾದರಿ ವಿದ್ಯಾಕೇಂದ್ರವಾಗಿದೆ.
ಮೊದಲು ಏನೇನು?: ಜು.27ರ ಬೆಳಗ್ಗೆ 8.30ಕ್ಕೆ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಚಂದ್ರಶೇಖರ್ ಪರಿಷತ್ತಿನ ಧ್ವಜವನ್ನೂ, ಬನ್ನೂರು ಪುರಸಭಾ ಅಧ್ಯಕ್ಷ ಅಜೀಜುಲ್ಲಾ ನಾಡ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 9ಕ್ಕೆ ಎಸ್ಆರ್ಪಿ ರಸ್ತೆಯ ಶ್ರೀ ಮಹಾಶಕ್ತಿ ಗಣಪತಿ ದೇವಸ್ಥಾನದಿಂದ ಸಮ್ಮೇಳನಾಧ್ಯಕ್ಷ ಬಿ.ಎಸ್.ಸಣ್ಣಯ್ಯ ಅವರ ಮೆರವಣಿಗೆಗೆ ಜಿಪಂ ಅಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್ ಚಾಲನೆ ನೀಡುವರು.
ಅಂದು ಬೆಳಗ್ಗೆ 10.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸಾಹಿತಿ ಡಾ.ದೇಜಗೌ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸುವರು. ಸಂಸದ ಆರ್.ಧ್ರುವನಾರಾಯಣ್, ಮಾಜಿ ಶಾಸಕರಾದ ಜೆ. ಸುನೀತಾ ವೀರಪ್ಪಗೌಡ, ಎಸ್. ಕೃಷ್ಣಪ್ಪ, ಕೆ.ಎಂ. ಚಿಕ್ಕಮಾದನಾಯಕ, ಕೆ. ಮಾದೇಗೌಡ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು.
ರಮೇಶ್ ಬನ್ನೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

