ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ
ರಮೇಶ ಬನ್ನೂರು
ಬನ್ನೂರು: ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಬನ್ನೂರಿನಲ್ಲಿ ನಡೆಯುತ್ತಿರುವ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾದ ಬಿ.ಎಸ್.ಸಣ್ಣಯ್ಯ ಅವರನ್ನು ಅದ್ಧೂರಿ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು.
ಭಾನುವಾರ ಪಟ್ಟಣದ ಗಣಪತಿ ದೇವಸ್ಥಾನದ ಮುಂಭಾಗ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ರಾಷ್ಟ್ರಧ್ವಜ, ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್ ಪರಿಷತ್ತಿನ ಧ್ವಜ ಹಾಗೂ ಪುರಸಭೆ ಅಧ್ಯಕ್ಷ ಅಜೀಜುಲ್ಲಾ ಅವರು ನಾಡ ಧ್ವಜಾರೋಹಣ ನೆರವೇರಿಸಿದರು. ಬಳಿಕ ಆರಂಭವಾದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಿಪಂ ಅಧ್ಯಕ್ಷೆ ಡಾ.ಪುಷ್ಪಾವತಿ ಅಮರನಾಥ್ ಚಾಲನೆ ನೀಡಿದರು. ಪುಷ್ಪಗಳಿಂದ ಅಲಂಕರಿಸಿದ್ದ ತೆರೆದ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ಬಿ.ಎಸ್.ಸಣ್ಣಯ್ಯ ಅಲಂಕರಿಸಿದರು. ಅವರಿಗೆ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಡಾ.ಪುಷ್ಪಾವತಿ, ಎಂ.ಚಂದ್ರಶೇಖರ್, ತಾಲೂಕು ಅಧ್ಯಕ್ಷ ನಾಗೇಂದ್ರಕುಮಾರ್ ಅವರು ಸಾಥ್ ನೀಡಿದರು. ವಾಹನದ ಮುಂಭಾಗ ನಗಾರಿ ತಂಡ, ಪೂಜಾ ಕುಣಿತ, ಸಾಹಸ ಕ್ರೀಡಾ ತಂಡ, ಕೋಲಾಟ ತಂಡದವರು ಸರಸರನೆ ಹೆಜ್ಜೆ ಹಾಕಿದರು. ಸ್ತ್ರೀಶಕ್ತಿ ಸಂಘದ ಸದಸ್ಯರು ಪೂರ್ಣಕುಂಭದೊಂದಿಗೆ ಸಾಗಿದರು. ಮೆರವಣಿಗೆ ಸಾಗಿ ಬಂದ ಮಾರ್ಗದುದ್ದಕ್ಕೂ ಶಾಲಾ ಮಕ್ಕಳು ಸಮವಸ್ತ್ರ ಧರಿಸಿ ಶಿಸ್ತಿನ ಸಿಪಾಯಿಗಳಂತೆ ಹೆಜ್ಜೆ ಹಾಕಿದರು.
ಮಹಾಪುರುಷರು
ಹೆಜ್ಜೆ ಹಾಕಿದರು
ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಮಹಾಪುರುಷರು ಕಾಣಿಸಿಕೊಂಡರು! ಅಚ್ಚರಿಯಾದರೂ ಸತ್ಯ. ರಾಷ್ಟ್ರ ನಾಯಕರ ವೇಷ ಧರಿಸಿದ್ದ ಶಾಲಾ ಬಾಲಕ- ಬಾಲಕಿಯರು ನೋಡುಗರನ್ನು ಗಮನ ಸೆಳೆದರು. ಮಹಿಷಾಸುರ, ಒನಕೆ ಓಬವ್ವ, ಪುರಂದರದಾಸರು, ಕನಕದಾಸರು, ವ್ಯಾಸರಾಜರು, ತಾಯಿ ಚಾಮುಂಡಿ, ಭುವನೇಶ್ವರಿ, ಕಾವೇರಿ, ಕುವೆಂಪು, ಬೇಂದ್ರೆ, ಸುಭಾಷ್‌ಚಂದ್ರ ಬೋಸ್, ಸ್ವಾಮಿ ವಿವೇಕಾನಂದ, ಸರ್.ಎಂ. ವಿಶ್ವೇಶ್ವರಯ್ಯ ಹಾಗೂ ಪಟ್ಟಣದ ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳಂತು ಇಡೀ ಮಾರ್ಗದುದ್ದಕ್ಕೂ ಮನೆ ಮಾತಾದರು.
ಪುಸ್ತಕ ಪ್ರದರ್ಶನಕ್ಕೆ ಸಾಹಿತ್ಯಾಸಕ್ತರ ಲಗ್ಗೆ
ಪಟ್ಟಣದ ಫುಟ್ಬಾಲ್ ಮೈದಾನದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ವೇದಿಕೆಯ ಸುತ್ತಮುತ್ತ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು. ರಾಜ್ಯದ ಪ್ರಮುಖ ಪುಸ್ತಕ ಪ್ರಕಾಶನಗಳಾದ ಸ್ವಪ್ನ ಪ್ರಕಾಶನ, ಅಭಿರುಚಿ ಪ್ರಕಾಶನ, ಹಳ್ಳಿ ಹಕ್ಕಿ ಪ್ರಕಾಶನ ಹಾಗೂ ಸ್ಥಳೀಯ ಪ್ರಕಾಶನಗಳು ಪುಸ್ತಕ ಪ್ರದರ್ಶನ ಏರ್ಪಡಿಸಿದ್ದವು. ನಾಡಿನ ಖ್ಯಾತನಾಮ ಸಾಹಿತಿಗಳ ಪುಸ್ತಕಗಳತ್ತ ಸಾಹಿತ್ಯಾಸಕ್ತರ ಲಕ್ಷ್ಯ ಹೋಯಿತು. ತಮಗೆ ಬೇಕಾದ ಪುಸ್ತಕಳನ್ನು ಆರಿಸಿಕೊಳ್ಳುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

