ಮೈಸೂರು

ಕ್ರಾಂತಿಕಾರಿ ಬದಲಾವಣೆ ಯುವಕರಿಂದ ಸಾಧ್ಯ

Published On :

ಮೈಸೂರು: ಯಾವುದೇ ಕ್ರಾಂತಿಕಾರಿ ಬದಲಾವಣೆಯು ಯುವಕರಿಂದ ಮಾತ್ರ ಸಾಧ್ಯ ಎಂದು ಹೆಸರಾಂತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಹೇಳಿದರು.
ಗೋವಿಂದರಾವ್ ಸ್ಮಾರಕ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಹದಿನೈದನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ನೂತನ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಕ್ರಾಂತಿ ಮಾಡಿರುವವರೆಲ್ಲಾ ಯುವಕರು ಹಾಗೂ ಯುವ ಮನಸ್ಸು ಇರುವವರು. ಯುವಕರಾಗಿದ್ದಾಗ ಮೊಳೆತ ವಿಚಾರಧಾರೆಗಳು, ನಂತರ ಬೆಳೆದು ಇಂತಹ ಕ್ರಾಂತಿಗೆ ಕಾರಣವಾಗಿರುವುದು ಉಂಟು. ಸುಭಾಷ್ ಚಂದ್ರಬೋಸ್ ದೇಶಬಿಟ್ಟು ಮತ್ತೊಂದು ಸೈನ್ಯ ಕಟ್ಟಿ, ಬ್ರಿಟಿಷರ ವಿರುದ್ಧ ಹೋರಾಟ ಮಾಡಬೇಕಾದರೆ ಅಂತಹ ಕೆಚ್ಚು ಬಂದದ್ದು ಅವರ ಪ್ರಾಯದಲ್ಲಿ. ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಇವರೆಲ್ಲಾ ಯುವಕರು ಎಂಬುದನ್ನು ಮರೆಯುವಂತಿಲ್ಲ ಎಂದರು.
ದೇಶದ ಅಭಿವೃದ್ಧಿಯಾಗಲಿ ಅಥವಾ ಬದಲಾವಣೆಯಾಗಲಿ ಯುವಕರಿಂದ ಸಾಧ್ಯ. ಕಳೆದ ಚುನಾವಣೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಿದ್ದರಿಂದ ರಾಷ್ಟ್ರದಲ್ಲಿ ಈ ಬದಲಾವಣೆ ತರಲು ಸಾಧ್ಯವಾಯಿತು ಎಂದು ತಿಳಿಸಿದರು.
ಅರ್ಜಿ ಹಾಕುವುದನ್ನು ನಿಲ್ಲಿಸಿ: ಯುವಕರು ಉದ್ಯೋಗಕ್ಕಾಗಿ ಸರ್ಕಾರಕ್ಕೆ ಅರ್ಜಿ ಹಾಕುವುದನ್ನು ಮೊದಲು ನಿಲ್ಲಿಸಬೇಕು. ಹೊಸ ಆಲೋಚನೆಯತ್ತ ಸಾಗುವ ಮೂಲಕ ಸ್ವಾವಲಂಬಿಯಾಗಿ ಬದುಕಬೇಕು. ನಿಮ್ಮ ಅನ್ನವನ್ನು ನೀವೇ ದುಡಿದು ತಿನ್ನುವಂತಾಗಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ, ಕಾರ್ಗಿಲ್ ಯುದ್ಧದಲ್ಲಿ ಹುತ್ಮಾತರಾದ ಮೈಸೂರಿನ ವೀರಯೋಧ ಹೇಮಚಂದು ಅವರ ತಂದೆ ಹಾಗೂ ಹೋರಾಟದಲ್ಲಿ ಮಡಿದ ಮಂಡ್ಯದ ವೀರಯೋಧ ಸತೀಶ್ ಅವರ ತಾಯಿ ಅವರನ್ನು ಗೌರವಿಸಲಾಯಿತು. ಬರೆಹಗಾರ ಚಕ್ರವರ್ತಿ ಸೂಲಿಬೆಲೆ ಮುಖ್ಯ ಭಾಷಣ ಮಾಡಿದರು. ಪತ್ರಿಕೋದ್ಯಮಿ ಕೆ.ಬಿ.ಗಣಪತಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಂಸ್ಥಾಪಕ ಡಾ.ಆರ್. ಬಾಲಸುಬ್ರಹಣ್ಯಂ, ಉದ್ಯಮಿಗಳಾದ ಎಸ್.ಕೆ.ದಿನೇಶ್, ಶ್ರೀಹರಿ, ಆರ್.ವಾಸುದೇವ ಭಟ್, ಮ. ವೆಂಕಟರಾಮ್, ವಕೀಲರಾದ ಓ. ಶ್ಯಾಮ್‌ಭಟ್, ಪಿ.ಡಿ. ಮೇದಪ್ಪ, ಡಾ.ಬಿ.ಎಚ್. ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.