ವಿಮಾನ ಹಾರಾಟ ಸ್ಥಗಿತ ಬೇಡ: ಮನವಿ
ಮೈಸೂರು: ಸ್ಪೈಸ್ ಜೆಟ್ ಸಂಸ್ಥೆ ಯಾವುದೇ ಕಾರಣಕ್ಕೂ ಮೈಸೂರಿನಿಂದ ತನ್ನ ಸೇವೆಯನ್ನು ಹಿಂಪಡೆಯಬಾರದು, ಬದಲಿಗೆ ವಿಮಾನ ಹಾರಾಟದ ಸಮಯ ಬದಲಿಸಬೇಕು ಎಂದು ಮಾಜಿ ಸಂಸದ ಎಚ್. ವಿಶ್ವನಾಥ್ ಆಗ್ರಹಿಸಿದ್ದಾರೆ.
ಈ ಸಂಬಂಧ ಸ್ಪೈಸ್ಜೆಟ್ ಸಂಸ್ಥೆಯ ನೀಲ್ ರೇಮಂಡ್ ಮಿಲ್ಸ್ಗೆ ಪತ್ರ ಬರೆದಿರುವ ಅವರು, ಕಡಿಮೆ ಪ್ರಯಾಣಿಕರು ಇರುತ್ತಾರೆ ಎಂಬ ಕಾರಣಕ್ಕೆ ಸೆ.1 ರಿಂದ ಸ್ಪೈಸ್ ಜೆಟ್ ತನ್ನ ಸೇವೆ ಸ್ಥಗಿತಗೊಳಿಸಲಿದೆ ಎಂಬ ಸುದ್ದಿ ಬೇಸರ ತಂದಿದೆ. ಈ ಹಿಂದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ತೈಲದ ಮೇಲೆ ಶೇ.27 ತೆರಿಗೆ ವಿಧಿಸಿತ್ತು ಎಂಬ ಕಾರಣಕ್ಕೆ ಕಿಂಗ್ಫಿಶರ್ ತನ್ನ ಸೇವೆ ನಿಲ್ಲಿಸಿತ್ತು.
ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ತೈಲದ ಮೇಲಿನ ತೆರಿಗೆಯನ್ನು ಶೇ.27 ರಿಂದ ಶೇ.4ಕ್ಕೆ ಇಳಿಸಿದ ಬಳಿಕ ಸ್ಪೈಸ್ ಸಂಸ್ಥೆ ವಿಮಾನ ಸೇವೆ ಆರಂಭಿಸಿತು. ಆದರೆ, ಈಗ ಏಕಾಏಕಿ ಸೇವೆ ನಿಲ್ಲಿಸುವುದು ಸರಿಯಲ್ಲ. ವಿಮಾನವು ಮಧ್ಯಾಹ್ನ 2 ಗಂಟೆಗೆ ಮೈಸೂರು ಬಿಡುವುದರಿಂದ ಅನೇಕ ಪ್ರಯಾಣಿಕರು ಬದಲಿ ವ್ಯವಸ್ಥೆಯ ಮೂಲಕ ಬೆಂಗಳೂರಿಗೆ ತೆರಳಿ, ಅಲ್ಲಿಂದ ಬೇರೆ ವಿಮಾನದಲ್ಲಿ ತೆರಳುತ್ತಾರೆ. ಆದರೆ ತಾವು ಬೆಳಗಿನ ವೇಳೆಯೆ ವಿಮಾನ ಸೇವೆ ನೀಡಿದರೆ ಶೇ.100 ರಷ್ಟು ಪ್ರಯಾಣಿಕರು ದೊರಕುವುದಾಗಿ ಸಲಹೆ ನೀಡಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ನ ವರದಿ ಅನ್ವಯ ಇಡೀ ಪ್ರಪಂಚದಲ್ಲಿ ಅತಿ ಹೆಚ್ಚಿನ ಸಂಖ್ಯೆ ಪ್ರವಾಸಿಗರ ಭೇಟಿಯಲ್ಲಿ ಮೈಸೂರು ನಗರ 4ನೇ ಸ್ಥಾನ ಪಡೆದಿದೆ. ವರ್ಷಕ್ಕೆ ಸರಾಸರಿ 60 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. 5 ಲಕ್ಷ ಪ್ರವಾಸಿಗರು ಪ್ರಪಂಚದಾದ್ಯಂತ ಇತರೆ ದೇಶಗಳಿಂದ ಬರುತ್ತಾರೆ. ಅಲ್ಲದೆ ನಗರದ ಇನ್ಫೋಸಿಸ್ ಸಂಸ್ಥೆಯಲ್ಲಿ ವರ್ಷಕ್ಕೆ ಸುಮಾರು 4,500 ಮಂದಿಗೆ ತರಬೇತಿ ನೀಡಲಾಗುತ್ತದೆ. ವಾರವೊಂದಕ್ಕೆ ಈ ಕಂಪನಿಯಿಂದ ಸುಮಾರು 1,500 ಮಂದಿ ದೇಶ ಮತ್ತು ವಿದೇಶಕ್ಕೆ ಭೇಟಿ ನೀಡುತ್ತಾರೆ. ಇವರೆಲ್ಲರಿಗೂ ವಿಮಾನದ ಅಗತ್ಯವಿದೆ. ಆದ್ದರಿಂದ ತಾವು ಸಮಯ ಬದಲಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಯಾವುದೆ ಸೌಲಭ್ಯ ಬೇಕಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದ ವಿಮಾನಯಾನ ರಾಜ್ಯ ಸಚಿವ ಸಿದ್ದೇಶ್ವರ್ ಜೊತೆ ಚರ್ಚಿಸಲು ಬದ್ಧರಾಗಿದ್ದೇವೆ. ಅಲ್ಲದೆ ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಉದ್ದೇಶವೂ ರಾಜ್ಯ ಸರ್ಕಾರಕ್ಕೆ ಇದೆ. ಆದ್ದರಿಂದ ತಾವು ದಿನಾಂಕ ನಿಗದಿಪಡಿಸಿದರೆ ನಾವು ಸಭೆ ನಡೆಸಲು ಸಿದ್ಧ ಎಂದು ವಿಶ್ವನಾಥ್ ಸ್ಪೈಸ್ ಸಂಸ್ಥೆ ಮುಖ್ಯಸ್ಥರಿಗೆ ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

