ಮೈಸೂರು

ಜಾಗತೀಕರಣದಿಂದ ಕೆಲಸದ ಅವಕಾಶ ಹೆಚ್ಚು

Published On :

ಕ.ಪ್ರ.ವಾರ್ತೆ ಮೈಸೂರು ಜೂ.1
ಜಾಗತೀಕರಣದಿಂದ ಎಲ್ಲ ವರ್ಗದವರಿಗೂ ಬೆಳೆಯುವ ಅವಕಾಶ ಸಿಕ್ಕಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಮರಿಸ್ವಾಮಿ ಹೇಳಿದರು.
ಬಹುಜನ ವಿದ್ಯಾರ್ಥಿ ಸಂಘವು (ಬಿವಿಎಸ್) ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಭಾನುವಾರ ಆಯೋಜಿಸಿದ್ದ 2013-14ನೇ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅಂಬೇಡ್ಕರ್ ಕ್ಲಾಸ್ (ಶೇ.75 ಹೆಚ್ಚು) ಪಡೆದ ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾಗತೀಕರಣ ಬಂದಾಗ ಜನರಲ್ಲಿ ತುಂಬಾ ಆಘಾತ ಉಂಟಾಗಿತ್ತು. ಆದರೆ, ಜಾತಿ ವ್ಯವಸ್ಥೆ ಸೇರಿದಂತೆ ಎಲ್ಲವನ್ನು ಜಾಗತೀಕರಣ ಮೂಲಕ ಸಂಪೂರ್ಣ ಬದಲಾವಣೆ ಮಾಡಲು ಸಾಧ್ಯವಿದೆ. ಕೆಲವು ಕ್ಷೇತ್ರಗಳಲ್ಲಿ ದುಡಿಯುವವರು ಸಿಗುತ್ತಿಲ್ಲ. ಹೀಗಾಗಿ ದುಡಿಯುವವರಿಗೆ ನೀಡುವ ಸಂಬಳ ಹೆಚ್ಚಾಗಿದೆ ಎಂದರು.
ಹಿಂದೆ ಎಲ್ಲ ಕೆಲಸವು ಜಾತಿ ಆಧಾರವಾಗಿ ನಡೆಯುತ್ತಿತ್ತು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಅದು ಹೋಗುತ್ತಿದೆ. ಜಾಗತೀಕರಣದಿಂದ ನಮ್ಮ ಸಾಂಸ್ಕೃತಿಕ ಗುಣ ಹೋಗಬಹುದು. ನಮ್ಮ ನಂಬಿಕೆಗಳನ್ನು ಹಾಳು ಮಾಡಬಹುದು. ಆದರೆ, ಎಲ್ಲ ವರ್ಗದವರಿಗೂ ಬೆಳೆಯುವ ಅವಕಾಶ ಇರುವ ಜಾಗತೀಕರಣ ಒಪ್ಪಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.
ಸ್ಪರ್ಧೆ ಇರುವುದರಿಂದ ದಲಿತರು, ಹಿಂದುಳಿದ ವರ್ಗದ ಮಕ್ಕಳು ಸಹ ಶೇ.90 ಅಂಕ ಪಡೆಯುತ್ತಿದ್ದಾರೆ. ಜಾಗತೀಕರಣದಿಂದ ದಲಿತರು, ಹಿಂದುಳಿದವರಿಗೆ ದೊಡ್ಡ ಬಿಡುಗಡೆಯಾಗಿದೆ. ಇದರಿಂದಲೇ ಶಕ್ತಿವಂತರಾಗಿ ಸಾಧನೆ ಮಾಡುತ್ತಿದ್ದಾರೆ. ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಅವರು ಎಂದೂ 2ನೇ ವರ್ಗದವರಾಗಿಲ್ಲ. ಎಲ್ಲದರಲ್ಲೂ ಅವರು ಉತ್ತಮ ಆಗಿದ್ದರು. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಹಿಂದಿರುಗಿಸುವ ಬದ್ಧತೆಯನ್ನು ಎಲ್ಲರು ತೋರಬೇಕು ಎಂದು ಕರೆ ನೀಡಿದರು.
ಹೆಚ್ಚುತ್ತಿರುವ ವಿದ್ಯಾವಂತರ ಸಂಖ್ಯೆ: ಬಿಎಸ್ಪಿ ಮುಖಂಡ ಎನ್.ಮಹೇಶ್ ಮಾತನಾಡಿ, ಹಿಂದುಳಿದವರು, ದಲಿತರ ಕುಟುಂಬಗಳಲ್ಲಿ ತಲೆಮಾರಿನಿಂದ ತಲೆಮಾರಿಗೆ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಮೂರನೇ ತಲೆಮಾರಿನವರು ಉತ್ತಮ ಸಾಧನೆ ಮಾಡುತ್ತಿದ್ದು, ಇದರ ಪ್ರಮಾಣ ಹೆಚ್ಚಾಗಬೇಕು ಎಂದು ಆಶಿಸಿದರು.
ಶೇ.75 ಹೆಚ್ಚು ಅಂಕ ಪಡೆದ ಎಸ್ಸೆಸ್ಸೆಲ್ಸಿಯ 89 ಹಾಗೂ ದ್ವಿತೀಯ ಪಿಯುಸಿಯ 75 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಟಿ.ನರಸೀಪುರದ ನಳಂದ ಬುದ್ಧ ವಿಹಾರದ ಬಂತೆ ಬೋದಿರತ್ನ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಮಹದೇವಯ್ಯ, ಬಿವಿಎಸ್ ಸಂಚಾಲಕ ಸೋಸಲೆ ಸಿದ್ದರಾಜು, ಡಾ. ಶಿವಕುಮಾರ್, ಬಿಎಸ್ಪಿ ಮುಖಂಡ ವೆಂಕಟರಾಜು ಇದ್ದರು. ನಾಗಸೇನ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.