ಸಾಹಿತ್ಯ ಕೃಷಿಗೆ ಉತ್ತಮ ಪ್ರೋತ್ಸಾಹ
ಕ.ಪ್ರ.ವಾರ್ತೆ ಮೈಸೂರು ಜೂ.1
ಸಾಹಿತ್ಯ ಕೃಷಿಗೆ ಉತ್ತಮ ಪ್ರೋತ್ಸಾಹ ದೊರಕಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಹೇಳಿದರು.
ಸಂವಹನ ಪ್ರಕಾಶನವು ರಂಗಾಯಣದ ಶ್ರೀರಂಗದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಜಿ. ಚಂದ್ರಶೇಖರ್ ಅವರು ಅನುವಾದಿಸಿರುವ ಮುಂಶಿ ಪ್ರೇಮಚಂದರ ಚದುರಂಗದ ಆಟಗಾರರು ಮತ್ತು ಇತರ ಹನ್ನೆರಡು ಕಥೆಗಳು ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮೈಸೂರಿನಲ್ಲಿ ಸಾಹಿತ್ಯ ಕೃಷಿಯು ಹೆಚ್ಚಾಗಿ ನಡೆದಿದ್ದು, ಅಂತೆಯೇ ಓದುಗರು ಹಾಗೂ ಪ್ರಕಾಶಕರು ಬರಹಗಾರರಿಗೆ ಉತ್ತಮ ಉತ್ತೇಜನ ನೀಡುತ್ತಿದ್ದಾರೆ. ದೃಶ್ಯ ಮಾಧ್ಯಮ ಬಂದ ಮೇಲೆ ವೃತ್ತ ಪತ್ರಿಕೆಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಇಂದು ಪತ್ರಿಕೆಗಳ ಸಂಖ್ಯೆ ಹೆಚ್ಚಾಗಿರುವುದು ಅದರ ಜನಪ್ರಿಯತೆಗೆ ಸಾಕ್ಷಿ. ಅಂತೆಯೇ ಪುಸ್ತಕ ಓದುಗರ ಸಂಖ್ಯೆಯೂ ಕಡಿಮೆಯಾಗಿಲ್ಲ. ಸಾಹಿತಿ ದೇವನೂರು ಮಹದೇವ ಅವರ ಎದೆಗೆ ಬಿದ್ದ ಅಕ್ಷರ 16ನೇ ಮುದ್ರಣ ಕಂಡಿರುವುದೇ ಇದಕ್ಕೆ ನಿದರ್ಶನ ಎಂದರು.
ಜಗತ್ತಿನ ಎಲ್ಲಾ ಶ್ರೇಷ್ಠ ಲೇಖಕರು ಬಹಳ ಸಂಕಷ್ಟ ಹಾಗೂ ಸಂಘರ್ಷ ಅನುಭವಿಸಿದವರು. ತಾಪತ್ರೆಗಳಲ್ಲಿಯೇ ಬೆಳದು ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ರಚಿಸಿದವರು. ಹಾಗೆಯೇ ಶ್ರೇಷ್ಠ ಕಲಾವಿದರು ಸಹ ಇದರಿಂದ ಹೊರತಾಗಿಲ್ಲ. ಅಂತೆಯೇ ಲೇಖಕ ಮುಂಶಿ ಪ್ರೇಮಚಂದರ ಬದುಕು ವೈಚಿತ್ರಗಳ ನಡುವೆ ಶ್ರೇಷ್ಠ ಕೃತಿಗಳನ್ನು ನೀಡಿದ್ದಾರೆ. ಅವರ ಕೃತಿಗಳು ಎಲ್ಲಾ ಭಾಷೆಗಳಿಗೆ ಅನುವಾದವಾಗಿದ್ದು, ಹಿಂದಿ ಬಾರದವರಿಗೆ ಕನ್ನಡದಲ್ಲಿ ಈ ಕೃತಿಯನ್ನು ಅನುವಾದಿಸಿ ಪ್ರೊ.ಚಂದ್ರಶೇಖರ್ ಉತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಪ್ರಕಾಶಕರ ಪಾತ್ರವೂ ಮುಖ್ಯ: ಲೇಖಕರಲ್ಲದವರನ್ನು ದೊಡ್ಡ ಲೇಖರಾಗಿ ರೂಪಿಸುವ ಪ್ರಯತ್ನ ಮಾಡುವಲ್ಲಿ ಪ್ರಕಾಶಕರ ಪಾತ್ರವೂ ಬಹುಮುಖ್ಯವಾದುದು. ಬೆಂಗಳೂರಿನಲ್ಲಿ ಶ್ರೀನಿವಾಸ ರಾಜು ಎಂಬವರು ಯಾವುದೇ ಹೊಸ ಬರಹಗಾರರು ಏನಾದರೂ ಬರೆದರೆ ಅದನ್ನು ಪ್ರಕಟಿಸಿ ಅವರನ್ನು ಸಾಹಿತ್ಯ ಕೃಷಿಯತ್ತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಅವರಿಂದ ಅನೇಕ ಲೇಖಕರು ಬೆಳಕು ಕಂಡಿದ್ದಾರೆ. ಅಂತೆಯೇ ಸಂವಹನ ಪ್ರಕಾಶನದ ಲೋಕಪ್ಪ ಹಾಗೂ ಧಾರವಾಡದ ಮನೋಹರ ಗ್ರಂಥಮಾಲಿಯೂ ಹೆಚ್ಚಿನ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕೃತಿ ಕುರಿತು ಜೆಎಸ್ಎಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಎಸ್. ಕುಮಾರ್ ಮಾತನಾಡಿದರು. ಕೃಷ್ಣರಾಜ ಶಾಸಕ ಎಂ.ಕೆ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಹಾಗೂ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಹಿಂದಿ ಪ್ರಾಧ್ಯಾಪಕ ಪ್ರೊ.ಜಿ.ಚಂದ್ರಶೇಖರ್ ಇದ್ದರು. ಸಂವಹನ ಪ್ರಕಾಶನದ ಮಾಲೀಕ ಡಿ.ಎನ್ ಲೋಕಪ್ಪ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

