ಬಣ್ಣಾರಿ ಕಾರ್ಖಾನೆ ಬಾಕಿ ಹಣ ಕೊಡಿಸಲು ಆಗ್ರಹ
ಮೈಸೂರು: ನಂಜನಗೂಡಿನ ಅಳಗಂಚಿಯಲ್ಲಿರುವ ಬಣ್ಣಾರಿ ಕಾರ್ಖಾನೆಯಿಂದ ರೈತರಿಗೆ ಬರಬೇಕಾದ ಬಾಕಿ ಹಣವನ್ನು ಕೊಡಿಸುವಂತೆ ಕಬ್ಬು ಬೆಳೆಗಾರರು ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಬಣ್ಣಾರಿ ಕಾರ್ಖಾನೆಗೆ ಸರಬರಾಜು ಮಾಡಿದ ಕಬ್ಬ ಬೆಳೆಗಾರರಿಗೆ ಕಾನೂನು ಬದ್ಧವಾಗಿ 15 ದಿನಗಳ ಒಳಗಾಗಿ ಹಣ ಪಾವತಿಸಬೇಕಾಗಿತ್ತು. ಆದರೆ ಸಕ್ಕರೆ ಕಾರ್ಖಾನೆಯವರು 2013ರ ಕಾನೂನು ನಿಯಮ ಪಾಲಿಸದೆ ವಿಳಂಬವಾಗಿ ರೈತರಿಗೆ ಹಣ ಪಾವತಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಿಳಂಬ ಪಾವತಿಗೆ ಶೇ.15ರ ಬಡ್ಡಿಯಂತೆ ವಿಳಂಬದ ಅವಧಿಗೆ ಲೆಕ್ಕ ಹಾಕಿ ಹಣ ಕೊಡಿಸಬೇಕು. ಕಾರ್ಖಾನೆಯವರು ರೈತರಿಗೆ ಹಣ ಪಾವತಿ ವಿಳಂಬ ಮಾಡಿರುವುದರಿಂದ ಸಹಕಾರ ಸಂಘ ಹಾಗೂ ಬ್ಯಾಂಕ್ಗಳಲ್ಲಿ ಸಾಲ ಪಡೆದ ರೈತರು ಹೆಚ್ಚು ಬಡ್ಡಿ ಪಾವತಿಸುವಂತಾಗಿದೆ. ಜೊತೆಗೆ ಸಾಲ ಕಟ್ಟದೆ ಸುಸ್ತಿಯಾಗಿದೆ. ಆದ್ದರಿಂದ ತಾವು ಕಾನೂನು ಕ್ರಮ ಕೈಗೊಂಡು ಬಡ್ಡಿ ಹಣ ಕೊಡಿಸಬೇಕು ಎಂದು ಮನವಿ ಮಾಡಿದರು.
2013- 14ನೇ ಸಾಲಿನ ಕಬ್ಬು ಸರಬರಾಜು ರೈತರಿಗೆ ಬಡ್ಡಿ ಹಣ ಕೊಡಿಸಬೇಕು. ಈಗಾಗಲೇ ರಾಜ್ಯ ಕಬ್ಬು ಅಭಿವೃದ್ಧಿ ಆಯುಕ್ತರು ಈ ಬಗ್ಗೆ ತಮಗೆ ಸೂಚನೆ ನೀಡಿ ಬಾಕಿ ನೀಡದ ಕಾರ್ಖಾನೆಗಳ ಸಕ್ಕರೆ ಜಪ್ತಿ ಮಾಡಿ ಹಣ ಕೊಡಿಸುವಂತೆ ಸೂಚನೆ ನೀಡಿರುವುದನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಕೆಂಪುಕಬ್ಬು ಬೇಡ: ಬಣ್ಣಾರಿ ಕಾರ್ಖಾನೆಯು ರೈತರಿಗೆ ಕೆಂಪುಕಬ್ಬು ಬೆಳೆಯುವಂತೆ ಒತ್ತಡ ಹೇರುತ್ತಿರುವುದನ್ನು ತಪ್ಪಿಸಬೇಕು. ಈ ಕಬ್ಬು ಬೆಳೆಯುವ ರೈತರು ಗೊಣ್ಣೆಹುಳ, ಬಿಳಿಹೇನು ರೋಗ ಬಾಧೆಯನ್ನು ಅನುಭಿಸಬೇಕಾಗುತ್ತದೆ. ಆದ್ದರಿಂದ ಕೂಡಲೆ ಇಂತಹ ಕ್ರಮ ಕೈಬಿಡುವಂತೆ ತಿಳಿವಳಿಕೆ ನೀಡಬೇಕು. ರೈತರ ಹಿತ ಕಾಪಾಡಬೇಕು ಎಂದರು.
ರಾಜ್ಯ ಸರ್ಕಾರ ಕಳೆದ ಸಾಲಿನ ಕಬ್ಬು ಸರಬರಾಜು ರೈತರಿಗೆ ನೀಡುತ್ತಿರುವ 150 ಸಹಾಯಧನ ಜನವರಿಯಿಂದ ರೈತರಿಗೆ ನೀಡಿಲ್ಲ. ತಕ್ಷಣವೇ ಇದರ ಪಾವತಿಗೆ ಸೂಚಿಸಬೇಕು. ತಾವು ಈ ಎಲ್ಲಾ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಕೂಡನಹಳ್ಳಿ ರಾಜಣ್ಣ, ಸಂಚಾಲಕ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಮುಖಂಡರಾದ ಕೆಂಡಗಣ್ಣಸ್ವಾಮಿ, ಬಿ.ಪಿ.ಪರಿಶಿವಮೂರ್ತಿ, ಕುರುಬೂರು ಸಿದ್ದೇಶ್, ಕೆ.ಎನ್. ಗೋಪಾಲಕೃಷ್ಣ, ಬಿ.ಎಂ. ನಂಜಪ್ಪ, ಪುರುಷೋತ್ತಮ್, ಲಿಂಗೇಗೌಡ, ಜಿ.ವಿ.ಲಕ್ಷ್ಮೀದೇವಿ, ಎಸ್. ಶಿವಪ್ಪ, ಮಂಜುನಾಥ್, ಪರಶಿವಯ್ಯ, ಟಿ.ಎಂ. ಮಹದೇವಪ್ಪ, ಬಿ.ರವಿ ಹಾಡ್ಯ ಹಾಗೂ ರವಿಕುಮಾರ್ ಮಗುಡ್ಲು ಮತ್ತಿತರರು ಇದ್ದರು.
ಜಿಲ್ಲಾಧಿಕಾರಿ ಕಚೇರಿಗೆ ರೈತರು ಮುತ್ತಿಗೆ ಹಾಕಬಹುದು ಎಂಬ ಹಿನ್ನೆಲೆಯಲ್ಲಿ ಪೊಲೀಸರು ಬಾರೀ ಬಂದೋಬಸ್ತ್ ಏರ್ಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

