ರೈತರ ಪರವಾನಗಿ ರದ್ದು ಆದೇಶ ಹಿಂದಕ್ಕೆ
ಹುಣಸೂರು: ತಂಬಾಕು ಬೆಳೆಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ 24 ಗಂಟೆಯಲ್ಲೇ ತಂಬಾಕು ಮಂಡಳಿ ನಿಗದಿಪಡಿಸಿದಷ್ಟು ತಂಬಾಕು ಮಾರಾಟ ಮಾಡದ ಎಲ್ಲ ರೈತರ ಲೈಸೆನ್ಸ್ ನವೀಕರಣ ರದ್ದುಪಡಿಸಿದ್ದ ಆದೇಶವನ್ನು ಹಿಂಪಡೆದಿದ್ದು ರೈತರು ನಿಟ್ಟುಸಿರು ಬಿಡುವಂತಾಗಿದೆ. ಮಂಡಳಿಯ ಅನೀತಿಯಿಂದ ರಾಜ್ಯದಲ್ಲಿ ಹಾಲಿ ಲೈಸೆನ್ಸ್ ಹೊಂದಿರುವ 55 ಸಾವಿರ ಬೆಳೆಗಾರರ ಪೈಕಿ 4,003 ಮಂದಿಯ ಲೈಸೆನ್ಸ್ ನವೀಕರಣವಾಗದೆ ಬ್ಯಾಂಕ್ನಲ್ಲಿ ಬೆಳೆ ಸಾಲ ಹಾಗೂ ಮಂಡಳಿಯಿಂದ ರಸಗೊಬ್ಬರ ಪಡೆಯಲು ತೊಂದರೆ ಅನುಭವಿಸುವಂತಾಗಿ ಅತಂತ್ರ ಸ್ಥಿತಿ ಎದುರಿಸುತ್ತಿದ್ದರು. ಕಳೆದ ವರ್ಷ ಲೈಸನ್ಸ್ ಅನ್ನು ನವೀಕರಣ ಮಾಡದಂತೆ ಆದೇಶ ಹೊರಡಿಸಿತ್ತು. ಈ ಅನೀತಿ ವಿರುದ್ಧ ರೈತ ಸಂಘ ಹಾಗೂ ಕ್ಷೇಮಾಭಿವೃದ್ಧಿ ಸಂಘ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದವು. ಈ ನಡುವೆ ಹುಣಸೂರು ತಾಲೂಕಿನ ಮೊದೂರು ಪಿ.ಕೊಪ್ಪಲಿನ ನಾಗರಾಜ ಎಂಬ ರೈತ ಬ್ಯಾಂಕಿನಲ್ಲಿ 4.50 ಲಕ್ಷ ಸಾಲ ಮಾಡಿ ತೀರಿಸಲಾರದೆ ಲೈಸೆನ್ಸ್ ನವೀಕರಣವಾಗದೆ ಇದೇ ಕಾರಣಕ್ಕಾಗಿ ಆತ್ಮಹತ್ಯೆ ಹಾದಿ ಹಿಡಿದಿದ್ದರು ಎಂದು ಮಂಡಳಿಯ ಮೈಸೂರು ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ ವೇಣುಗೋಪಾಲ್ ಮಾಹಿತಿ ನೀಡಿದರು.
ಭೂಚೇತನ ಯೋಜನೆ ಸದ್ಬಳಕೆಯಾಗಲಿ: ರಘುನಾಥ್
ಪಿರಿಯಾಪಟ್ಟಣ: ಮಣ್ಣಿನ ಫಲವತ್ತತೆ ಹೆಚ್ಚಿಸುವ ಸಲುವಾಗಿ ಭೂಚೇತನ ಯೋಜನೆ ರೂಪಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಉಪಾಧ್ಯಕ್ಷ ರಘುನಾಥ್ ಹೇಳಿದರು. ತಾಲೂಕಿನ ನಂದೀಪುರ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಹೋಬಳಿ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಕೃಷಿ ಮತ್ತು ಕೃಷಿಯೇತರ ಇಲಾಖೆಗಳಾದ ತೋಟಗಾರಿಕೆ, ಪಶುಪಾಲನೆ, ರೇಷ್ಮೆ, ಮೀನುಗಾರಿಕೆ ಇಲಾಖೆಗಳಿಂದ ರಿಯಾಯಿತಿ ದರದಲ್ಲಿ ದೊರೆಯುವ ಸವಲತ್ತುಗಳನ್ನು ಪಡೆದುಕೊಂಡು ತಮ್ಮ ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದರು. ಸಹಾಯಕ ಕೃಷಿ ನಿರ್ದೇಶಕ ಕೆ.ರಾಜು ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಭೂಮಿಯಲ್ಲಿ ಮಣ್ಣಿನ ಪೋಷಕಾಂಶಗಳ ಕೊರತೆ ಇದೆ. ಇದರ ನಿರ್ವಹಣೆಗೆ ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿ ಅದರ ಆಧಾರದ ಮೇಲೆ ಭೂಮಿಗೆ ಬೇಕಾಗುವ ಲಘು ಪೋಷಕಾಂಶಗಳಾದ ಜಿಪ್ಸಮ್, ಜಿಂಕ್ ಸಲ್ಫೇಟ್, ಬೋರಾನ್, ಪಿಎಸ್ಪಿ, ಡ್ರೈಕೋಡರ್ಮವನ್ನು ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಭೂಮಿಗೆ ಹಾಕಿದರೆ ಮಣ್ಣು ಫಲವತ್ತಾಗುತ್ತದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

