ಐತಿಹಾಸಿಕ ವೈಶಿಷ್ಟ್ಯದ ಹರವು ಕೋದಂಡರಾಮ ದೇಗುಲ
ಕ.ಪ್ರ. ವಾರ್ತೆ ಟಿ ಮೈಸೂರು ಟಿ ಜೂ.9
ಹರವು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಪುಟ್ಟ ಗ್ರಾಮ. ಆದರೆ ಇಲ್ಲಿನ ಐತಿಹಾಸಿಕ ಶ್ರೀ ಕೋದಂಡರಾಮ ದೇವಸ್ಥಾನದಿಂದ ರಾಜ್ಯ ಪ್ರಾಚ್ಯವಸ್ತು ಭೂಪಟದಲ್ಲಿ ವಿಶೇಷ ಸ್ಥಾನ ಪಡೆದಿದೆ.
ಹರವು ಅಕ್ಕಪಕ್ಕದಲ್ಲಿ ಡಿಂಕ ಹಾಗೂ ಉಕ್ಕಡ ಗ್ರಾಮಗಳಿದ್ದು, ಈ ಎರಡೂ ಊರಿನ ಶಕ್ತಿದೇವತೆಗಳ ದೇವಸ್ಥಾನಕ್ಕೆ ಶುಕ್ರವಾರ ಹಾಗೂ ಭಾನುವಾರಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವುದುಂಟು. ಆದರೆ ಈ ಎರಡೂ ಊರುಗಳಿಗೆ ಸಮೀಪದಲ್ಲೇ ಇರುವ ಹರವು, ಐತಿಹಾಸಿಕ ಮಹತ್ವದ ದೇವಸ್ಥಾನ ಹೊಂದಿದ್ದಾಗ್ಯೂ ಹೆಚ್ಚಿನ ಭಕ್ತಾದಿಗಳ ಗಮನ ಸೆಳೆದಿಲ್ಲ.
ಈ ಬೃಹತ್ ಸ್ಮಾರಕ 14ನೇ ಶತಮಾನಕ್ಕೆ ಸಂಬಂಧಿಸಿದ್ದು, ಕ್ರಿ.ಶ. 1369 ರಲ್ಲಿ ವಿಜಯನಗರದ ಮೊದಲನೇ ವೀರಬುಕ್ಕಣ್ಣ ಒಡೆಯರ್ ಈ ದೇಗುಲವನ್ನು ನಿರ್ಮಿಸಿದನೆಂದು ಸ್ಥಳೀಯ ಶಾಸನದಲ್ಲಿ ಉಲ್ಲೇಖವಿದೆ. ಎಪಿಗ್ರಾಫಿಯಾ ಕರ್ನಾಟಕ ಸಂಪುಟ 6 ಪುಟ 114ರಲ್ಲಿ ಶಾಸನ ಸಂಖ್ಯೆ 17ರಲ್ಲಿ ವಿವರಗಳಿವೆ.
ಜೀರ್ಣೋದ್ದಾರ ಕಾರ್ಯ: ಶಿಥಿಲಾವಸ್ಥೆಯಲ್ಲಿದ್ದ ಈ ಸ್ಮಾರಕವನ್ನು ಹರವು ಗ್ರಾಮಸ್ಥರ ಸಹಕಾರದಿಂದ ರಾಜ್ಯ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ 1996ರ ಅ. 28ರಂದು ತನ್ನ ಸುಪರ್ದಿಗೆ ತೆಗೆದುಕೊಂಡು ಜೀರ್ಣೋದ್ದಾರ ಕಾರ್ಯ ಆರಂಭಿಸಿದೆ. 2002ರ ಅ. 29ರಂದು ದೊರೆತ ಬೆಳ್ಳಿ ನಾಣ್ಯಗಳನ್ನು ಗ್ರಾಮಸ್ಥರು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದರೆಂದು ದೇವಸ್ಥಾನದ ಆವರಣದ ಮಾಹಿತಿ ಫಲಕ ತಿಳಿಸುತ್ತದೆ. ಶ್ರೀ ಕೋದಂಡರಾಮ ಸ್ವಾಮಿ ದೇವಾಲಯದ ಸಂರಕ್ಷಣಾ ಕೆಲಸವನ್ನು ಎರಡು ಹಂತದಲ್ಲಿ ರಾಜ್ಯ ಸರ್ಕಾರದ ಅನುದಾನದಡಿ 2011-12ರಿಂದ ಕೈಗೊಳ್ಳಲಾಗಿದೆ.
ಒಂದನೇ ಹಂತದಲ್ಲಿ ಪ್ರಾಕಾರ ಗೋಡೆಯ ಸಂರಕ್ಷಣೆ ಮತ್ತು ಮುಖಮಂಟಪದ ಸಂರಕ್ಷಣೆ ಮಾಡಲಾಗಿದೆ. ದೇವಾಲಯಕ್ಕೆ ಹವಾನಿಯಂತ್ರಕ ಪದರವನ್ನು ಹಾಕಿ ಯಲಹಂಕ ಟೈಲ್ಸ್ ಅಳವಡಿಸಲಾಗಿದೆ.
ಎರಡನೇ ಹಂತದಲ್ಲಿ ದೇವಾಲಯದ ಅಂಗಳಕ್ಕೆ ಗ್ರಾನೈಟ್ ಕಲ್ಲಿನ ನೆಲಹಾಸು ಹಾಕಲಾಗಿದೆ. ದೇವಾಲಯದ ಮುಂಭಾಗಕ್ಕೆ ಹಾಗೂ ಗರುಡಗಂಬಕ್ಕೆ ಗ್ರಾನೈಟ್ ಕಲ್ಲಿನ ನೆಲಹಾಸು ಹಾಕುವ ಕೆಲಸ ಮತ್ತು ಪ್ರಭಾವಳಿಗಳನ್ನು ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಈ ಕಾಮಗಾರಿಯನ್ನು 2014-15ರ ಸಾಲಿನಲ್ಲಿಯೇ ಪೂರ್ಣಗೊಳಿಸಲಾಗುತ್ತದೆ ಎನ್ನುತ್ತಾರೆ ಸಿ.ಜೆ. ಬೆಟಸೂರಮಠ್ ತಿಳಿಸಿದ್ದಾರೆ.
ಎರಡು ಹಂತದ ಕಾಮಗಾರಿಗಳನ್ನು ರು. 65 ಲಕ್ಷಗಳ ಅಂದಾಜಿನಲ್ಲಿ ಕೈಗೊಳ್ಳಲಾಗುತ್ತಿದೆ. ಎಲ್ಲ ಬಗೆಯ ಔಷಧೀಯ ಸಸ್ಯಗಳನ್ನು ಇಲ್ಲಿ ಬೆಳೆಸಲಾಗುತ್ತದೆ.
ಸುಂದರ ವಿಗ್ರಹದಿಂದಾಗಿ ಸಮೀಪದ ಕಲ್ಲಹಳ್ಳಿಯ ಭೂವರಾಹನಾಥ ಸ್ವಾಮಿ ದೇವಸ್ಥಾನಕ್ಕೆ ಇತ್ತೀಚಿಗೆ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು, ಹರವು ಕೂಡ ಸದ್ಯದಲ್ಲೇ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

