ಗುತ್ತಿಗೆ 'ಕಾಯಂ'
ಡಿ.ಎನ್. ಮಹೇಂದ್ರ
ಮೈಸೂರು: ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನೀಡಿದ ತೀರ್ಪಿನ ಅನ್ವಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆ ನೌಕರರನ್ನು ಸರ್ಕಾರ ಕಾಯಂಗೊಳಿಸಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯ ಮೈಸೂರು ನಗರ ಪಾಲಿಕೆ ಗುತ್ತಿಗೆ ನೌಕರರಿಗೆ ಸರ್ಕಾರದ ಈ ಆದೇಶ ಅನ್ವಯಿಸಿಲ್ಲ.
ಇಷ್ಟಕ್ಕೂ ನ್ಯಾಯಾಲಯ ನಿರ್ದೇಶನ ನೀಡಿರುವುದು ಮೈಸೂರು ನಗರ ಪಾಲಿಕೆ ಗುತ್ತಿಗೆ ನೌಕರರ ಕಾಯಂಗೆ. 1986-87ನೇ ಸಾಲಿನಲ್ಲಿ ನಗರ ಪಾಲಿಕೆಯು ಮೊದಲು ದಿನಗೂಲಿ ಆಧಾರದ ಮೇಲೆ 212 ಮಂದಿ ನೌಕರರನ್ನು ನೇಮಿಸಿಕೊಂಡಿತ್ತು. 1996 ರಲ್ಲಿ ದಿನಗೂಲಿ ನೌಕರರು ಎಂಬ ಪದ ತೆಗೆದುಹಾಕಿ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನೀತಿ ಅನ್ವಯ ಗುತ್ತಿಗೆ ಆಧಾರದ ಮೇಲೆ ಇವರನ್ನು ಮುಂದುವರಿಸಿತು. ಆದರೆ ಅದೆ ವೇಳೆಗೆ 1985ಕ್ಕೂ ಮುನ್ನ ದಿನಗೂಲಿ ಆಧಾರದ ಮೇಲೆ ನೇಮಕವಾಗಿದ್ದ ನೌಕರರನ್ನು ಕಾಯಂಗೊಳಿಸಿತು. ಆದರೆ 1986 ರಿಂದ ಈಚೆಗೆ ನೇಮಿಸಿಕೊಂಡ ನೌಕರರನ್ನು ಈ ಹಿಂದೆ ನಿಗದಿಪಡಿಸಿದ್ದ ವೇತನಕ್ಕೆ ಸೀಮಿತಗೊಳಿಸಿ ಉಳಿಸಿಕೊಂಡಿದೆ.
ಅಲ್ಲದೆ ಸೆಲ್ವಕುಮಾರ್ ಅವರು ಜಿಲ್ಲಾಧಿಕಾರಿ ಆಗಿದ್ದ ವೇಳೆ ಕಾಯಂಗೊಳಿಸುವ ಸಂಬಂಧ ತಮ್ಮ ವ್ಯಾಪ್ತಿಯ ನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯ ಗುತ್ತಿಗೆ ನೌಕರರ ವಿವರವನ್ನು ಸರ್ಕಾರ ಕೇಳಿತ್ತು. ಇಲ್ಲಿಯೂ ನಗರ ಪಾಲಿಕೆಯ ಗುತ್ತಿಗೆ ನೌಕರರಿಗೆ ಅದೃಷ್ಟ ಕೈಕೊಟ್ಟಿತೋ ಏನೋ, ನಗರ ಪಾಲಿಕೆಯ 212 ಮಂದಿ ಹೆಸರು ಸೇರಲೇ ಇಲ್ಲ. ಈಗ 212 ಮಂದಿಯಲ್ಲಿ ಕೆಲವರು ಮೃತಪಟ್ಟಿದ್ದಾರೆ. ಮತ್ತೆ ಕೆಲವರು ನಿವೃತ್ತರಾಗಿ ಬರಿಗೈಯಲ್ಲಿ ಮನೆಗೆ ಹೋಗಿದ್ದಾರೆ. ಪ್ರಸ್ತುತ ನಗರ ಪಾಲಿಕೆಯಲ್ಲಿ 198 ಮಂದಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ.
2001ರಲ್ಲೇ ಶಿಫಾರಸು: ಬಿ.ಕೆ. ಪ್ರಕಾಶ್ ಮೇಯರ್ ಆಗಿದ್ದ ಅವಧಿಯಲ್ಲಿ ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಎಂದು 2001ರ ನವೆಂಬರ್ 23ರ ಸಭೆ ನಿರ್ಣಯಿಸಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಾಜ್ಯ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಅವರೂ ಕಾನೂನಿನ ಅನ್ವಯ ಕಾಯಂಗೊಳಿಸಹುದು ಎಂಬ ಆದೇಶ ನೀಡಿದ್ದಾರೆ. ಈ ಎಲ್ಲಾ ಆದೇಶದನ್ವಯ ನಗರ ಪಾಲಿಕೆ ಆಯುಕ್ತರು ಗುತ್ತಿಗೆ ನೌಕರರ ಪರವಾಗಿ ಸರ್ಕಾರಕ್ಕೆ ಕಾಯಂಗೊಳಿಸುವ ಶಿಫಾರಸು ಪತ್ರ ಬರೆಯುತ್ತಲೆ ಇದ್ದಾರೆ. ಆದರೆ ಇದುವರೆಗೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.
ನಗರ ಪಾಲಿಕೆಯ ಎಲ್ಲಾ 198 ಮಂದಿ ಗುತ್ತಿಗೆ ನೌಕರರು ಕನಿಷ್ಠ ವೇತನ ಪಡೆದು ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇದುವರೆಗೂ ಅವರಿಗೆ ವೇತನ ಪರಿಷ್ಕರಣೆ ಆಗಿಲ್ಲ. ವರ್ಷಕ್ಕೆ ಕೇವಲ ಹದಿನಾಲ್ಕು ದಿನ ಮಾತ್ರ ರಜೆ. ಉಳಿದ ಎಲ್ಲಾ ದಿನ ಕೆಲಸ ಮಾಡಬೇಕು. ಅವರ ಸೇವಾ ಭದ್ರತೆಗೆ ಪಿಎಫ್ ಇಲ್ಲ. ಇಎಸ್ಐ ಇಲ್ಲ, ಆರೋಗ್ಯ ವಿಮೆಯೂ ಇಲ್ಲ. ಆದರೂ ಅವರು ನಗರ ಪಾಲಿಕೆಯಲ್ಲಿ ಇನ್ನಿಲ್ಲದ ನರಕ ಯಾತನೆ ಅನುಭವಿಸುವಂತಾಗಿದೆ. ನಿವೃತ್ತರಾಗಿ ಹೋಗುವ ದಿನ ಬಿಡಿಗಾಸೂ ಇಲ್ಲದೆ ಮನೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಪಂ ದಿನಗೂಲಿ ನೌಕರರು ಕಾಯಂ: 1997 ರಲ್ಲಿ ಮೈಸೂರು ಸುತ್ತಲಿನ ಮೂರ್ನಾಲ್ಕು ಗ್ರಾಪಂಗಳನ್ನು ನಗರ ಪಾಲಿಕೆಗೆ ಸೇರಿಸಲು ಸರ್ಕಾರ ತೀರ್ಮಾನಿಸಿತು. ಅದರಂತೆ ಆ ಗ್ರಾಪಂಗಳ ದಿನಗೂಲಿ ನೌಕರರನ್ನು ಸರ್ಕಾರ ಕಾಯಂಗೊಳಿಸಿತೆ ಹೊರತು, ನಗರ ಪಾಲಿಕೆಯಲ್ಲಿ ಗುತ್ತಿಗೆ ನೌಕರರನ್ನು ಕಾಯಂಗೊಳಿಸಲು ಮುಂದಾಗಲಿಲ್ಲ. ಇಷ್ಟಕ್ಕೂ ಪಾಲಿಕೆಯಲ್ಲಿ ಹತ್ತಾರು ಹುದ್ದೆಗಳು ಖಾಲಿ ಇವೆ. ಆ ಎಲ್ಲಾ ಹುದ್ದೆಗೂ ಹೊಸಬರನ್ನು ನೇಮಿಸಿಕೊಂಡರೆ ಕಾಯಂ ನೌಕರರಾಗಿ ನೇಮಕ ಮಾಡಿಕೊಳ್ಳುತ್ತಾರೆ. ಆದರೆ ಹಾಲಿ 28 ವರ್ಷ ಸೇವೆ ಸಲ್ಲಿಸಿರುವವರ ನಿರ್ಲಕ್ಷ್ಯ ಮುಂದುವರಿದಿದೆ.
ಒಂದು ಖಾಸಗಿ ಏಜೆನ್ಸಿ ಮೂಲಕ ನಗರ ಪಾಲಿಕೆಗೆ ಗುತ್ತಿಗೆ ಪೌರ ಕಾರ್ಮಿಕರನ್ನು ಪೂರೈಸಲಾಗಿತ್ತು. ಅವರ ಕಾಯಂಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ ನೇರವಾಗಿ ನಗರ ಪಾಲಿಕೆಯೇ ಗುತ್ತಿಗೆ ನೌಕರರನ್ನು ನೇಮಿಸಿಕೊಂಡು, 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರನ್ನು ಸರ್ಕಾರ ಕಾಯಂಗೊಳಿಸಬೇಕು. ಈ ನಿಟ್ಟಿನಲ್ಲಿ ಸ್ಥಳೀಯರೆ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀರ್ಮಾನಿಸಬೇಕು ಎಂಬುದು ಗುತ್ತಿಗೆ ನೌಕರರ ಆಶಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

