ಮೈಸೂರು

ಗ್ರಾಮೀಣ ಪರಿಸರ ಪ್ರೀತಿಸಿ ಸಮಾಜಕ್ಕೆ ಹತ್ತಿರವಾಗಿ

Published On :

ಸುತ್ತೂರು: ಅಭಿವೃದ್ಧಿ ಕಲ್ಪನೆಯೇ ಗೊಂದಲದಿಂದ ಕೂಡಿದ್ದು ಅದಕ್ಕೆ ಸರಳ ಜೀವನವೇ ಪರಿಹಾರ ಎಂದು ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನದ ನಿರ್ದೇಶಕ ಎಚ್.ಎಸ್.ಅಶೋಕಾನಂದ್ ಅಭಿಪ್ರಾಯಪಟ್ಟರು. ಸುತ್ತೂರು ಶ್ರೀಕ್ಷೇತ್ರದಲ್ಲಿ ಗುರುವಾರ ನಡೆದ ಗ್ರಾಮೀಣ ಯುವಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಖವಾಡದ ಸಂಸ್ಕೃತಿಯಿಂದ ಹೊರಬರುವ ಮೂಲಕ ಗ್ರಾಮೀಣ ಯುವಕರು ಸ್ವಾಭಾವಿಕ ಬದುಕಿನತ್ತ ಮುಖ ಮಾಡಬೇಕಾಗಿದೆ ಎಂದರು.
ಗ್ರಾಮೀಣ ಪರಿಸರವನ್ನು ಪ್ರೀತಿಸುವುದರೊಂದಿಗೆ ಸಮಾಜಕ್ಕೆ ಹತ್ತಿರವಾಗಬೇಕು. ಪರಸ್ಪರ ಸಂಬಂಧಗಳು ಬೆಳೆಯಬೇಕು. ಹಂಚುವ ಸಂಸ್ಕೃತಿ ನಮ್ಮದಾಗಬೇಕು. ಅಧ್ಯಯನ ಮತ್ತು ಜೀವನ ವಿಧಾನದಲ್ಲಿ ಮಾತ್ರ ವಿದೇಶಿಯರನ್ನು ಅನುಸರಿಸಬೇಕೆ ವಿನಃ ಅವರ ತಿಂಡಿ-ಆಹಾರ, ಬಟ್ಟೆ-ಫ್ಯಾಷನ್‌ಗಳ ವಿಚಾರದಲ್ಲ ಎಂದು ಯುವಕರಿಗೆ ಕಿವಿಮಾತು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಪಟ್ಟಣದ ಬಗ್ಗೆ ಭ್ರಮೆ ಇಟ್ಟುಕೊಂಡಿರುವ ಗ್ರಾಮೀಣರು ಸಂಕಲ್ಪ ಮಾಡುವ ಮೂಲಕ ತಾವಿರುವೆಡೆಯೇ ಸಂಪದ್ಭರಿತವಾಗಬಹುದು ಎಂಬುದನ್ನು ಅರಿತುಕೊಳ್ಳಬೇಕು. ಇಂತಹ ಭಾವನೆಗಳ ಕೊರತೆಯಿಂದಾಗಿ ಅನೇಕ ಜ್ವಲಂತ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಯುವ ಜಾಗೃತಿಯಿಂದ ಗ್ರಾಮಗಳಷ್ಟೇ ಅಲ್ಲ ಇಡೀ ವ್ಯವಸ್ಥೆಯನ್ನೇ ಸರಿಪಡಿಸಲು ಸಾಧ್ಯವಿದೆ ಎಂದು ತಿಳಿಸಿದರು. ಬಿಜಾಪುರ ಜ್ಞಾನಯೋಗಾಶ್ರವುದ ಸಿದ್ಧೇಶ್ವರ ಸ್ವಾಮೀಜಿ, ನಿವೃತ್ತ ಪ್ರಾಧ್ಯಾಪಕ ಎಸ್.ನಂಜುಂಡಯ್ಯ, ಶಿಬಿರದ ಸಂಚಾಲಕ ಸಂಪತ್ತು, ವಿ.ಮಲ್ಲಿಕಾರ್ಜುನಸ್ವಾಮಿ, ಎಂ. ಲಿಂಗರಾಜು, ಪ್ರಕಾಶ್ ಇದ್ದರು.



ಗುರುತಿನ ಚೀಟಿ ವಿತರಣೆ
ಮೈಸೂರು: ಅಂಗವಿಕಲ ಫಲಾನುಭವಿಗಳಿಗೆ ಶಾಶ್ವತ ಗುರುತಿನ ಚೀಟಿ ವಿತರಿಸುವ ಯೋಜನೆ ಜಾರಿಯಲ್ಲಿದ್ದು, 2013-14ನೇ ಸಾಲಿಗೆ 3,757 ಅಂಗವಿಕಲರು ಹಾಗೂ 5,368 ಜನ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಅಂಗವಿಕಲ ಮಕ್ಕಳಿಗಾಗಿ 2 ಸರ್ಕಾರಿ ಹಾಗೂ 4 ಅನುದಾನಿತ ವಿಶೇಷ ಶಾಲೆಗಳನ್ನು ನಡೆಸಲಾಗುತ್ತಿದೆ. 2013-14ನೇ ಸಾಲಿನಲ್ಲಿ ಆಧಾರ ಸ್ವಯಂ ಉದ್ಯೋಗ ಯೋಜನೆಯಡಿ 12 ಮಂದಿ ಫಲಾನುಭವಿಗಳಿಗೆ ತಲಾ 20 ಸಾವಿರದಂತೆ ಬಡ್ಡಿರಹಿತ ಮರುಪಾವತಿ ಸಾಲ ಹಾಗೂ 15 ಸಾವಿರ ಗೂಡಂಗಡಿಗಳನ್ನು ವಿತರಿಸಲಾಗಿದೆ. ಅಲ್ಲದೆ ವಿಕಲ ಚೇತನ ಫಲಾನುಭವಿಗಳಿಗೆ 2013-14ನೇ ಸಾಲಿನಲ್ಲಿ 1,671 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 102 ಮಂದಿ ಫಲಾನುಭವಿಗಳಿಗೆ ಸಾಧನ- ಸಲಕರಣೆ ವಿತರಿಸಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.