ರಾಜಕಾರಣಿಗೆ ಲೋಹಿಯಾ ಚಿಂತನೆ ಅಗತ್ಯ: ಮುಖ್ಯಮಂತ್ರಿ
ಮೈಸೂರು: ಉತ್ತಮ ರಾಜಕಾರಣಿ ಆಗಬೇಕಾದರೆ ಲೋಹಿಯಾ ಚಿಂತನೆ ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿಯು ಮುಕ್ತ ಗಂಗೋತ್ರಿಯ ಆವರಣದಲ್ಲಿರುವ ಕಾವೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಆಡಳಿತ ಭವನ ಹಾಗೂ ವಿಜ್ಞಾನ ಭವನಗಳ ನೂತನ ಕಟ್ಟಡ ಹಾಗೂ ಡಾ.ರಾಮಮನೋಹರ್ ಲೋಹಿಯಾ ಅಧ್ಯಯನ ಪೀಠ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಕಂಡ ಮಹಾನ್ ಚಿಂತಕ ಡಾ.ರಾಮಮನೋಹರ ಲೋಹಿಯಾ. ಕರ್ನಾಟಕದಲ್ಲಿ ಬಹಳ ಜನರ ಮೇಲೆ ಅವರ ಪ್ರಭಾವ ಬೀರಿದ್ದು, ನಾನು ಸಹ ಪ್ರೊ.ನಂಜುಂಡಸ್ವಾಮಿ ಅವರಿಂದಾಗಿ ಸಮಾಜವಾದಿ ಪಕ್ಷ ಸೇರಿದ್ದೆ ಎಂದರು. ಹಿಂದುಳಿದವರಿಗೆ, ದಲಿತರಿಗೆ ಹಾಗೂ ಮಹಿಳೆಯರಿಗೂ ರಾಜಕಾರಣಿದಲ್ಲಿ ಶೇ.60 ಮೀಸಲಾತಿ ನೀಡಬೇಕೆಂಬ ಮಹಾನ್ ಚಿಂತಕರಾಗಿದ್ದ ಲೋಹಿಯಾ ಅವರ ಆಶಯದಂತೆ ಸಮಾನತೆಯ ಆಧಾರದ ಮೇಲೆ ಎಲ್ಲರಿಗೂ ಸಮಾನ ಅವಕಾಶ ದೊರಕಬೇಕು. ಜಾತಿ ನಿಮೂರ್ಲನೆ ಅಷ್ಟು ಸುಲಭವಿಲ್ಲ. ಅದನ್ನು ಹೋಗಲಾಡಿಸ ಬೇಕಾದರೆ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು ಎಂದು ಆಶಿಸಿದರು.
ಬೆಳವಣಿಗೆ ನೋಡಿ ಸಂತಸ: 1996 ರಲ್ಲಿ ಆರಂಭವಾದ ಈ ಮುಕ್ತ ವಿವಿಯನ್ನು ಬೇರೆ ಯಾವ ಜಿಲ್ಲೆಯಲ್ಲಿ ತೆರೆಯಬೇಕು ಎಂಬ ವಿಷಯ ಅಂದಿನ ಸಚಿವ ಸಂಪುಟದಲ್ಲಿ ಚರ್ಚೆಗೆ ಬಂದಿತ್ತು. ಆಗ ನಾನು ಉಪಮುಖ್ಯಮಂತ್ರಿಯಾಗಿದ್ದೆ. ಮೈಸೂರು ವಿವಿಯಿಂದ ಜಾಗ ಕೊಡಿಸುವ ಭರವಸೆ ನೀಡಿ ಮುಕ್ತ ವಿವಿಯನ್ನು ಇಲ್ಲಿಗೆ ತರಲಾಯಿತು. ಇಂದಿನ ಬೆಳವಣಿಗೆ ನೋಡಿದರೆ ತಂದದ್ದು ಸಾರ್ಥಕವಾಯಿತು ಎನ್ನಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
23 ಕೋಟಿ ವೆಚ್ಚದ ಆಡಳಿತ ಭವನ, 20 ಕೋಟಿ ವೆಚ್ಚದ ವಿಜ್ಞಾನ ಭವನ ನಿರ್ಮಿಸಲಾಗಿದೆ. ಇದೊಂದು ಶ್ರೀಮಂತ ವಿವಿ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್, ಅನೇಕ ಸವಾಲುಗಳ ನಡುವೆ ಸುಮಾರು 30 ಎಕರೆ ಪ್ರದೇಶದಲ್ಲಿ ಇಂತಹ ಭವ್ಯ ಕಟ್ಟಡಗಳ ಸುಂದರ ಆವರಣ ನಿರ್ಮಾಣವಾಗಿರುವುದು ಶ್ಲಾಘನೀಯ. ಇಂತಹ ಪರಿಕಲ್ಪನೆಯಲ್ಲಿ ವಿವಿಯ ನಿರ್ಮಾತೃ ಪ್ರೊ.ರಂಗಪ್ಪ ಹಾಗೂ ಅವರ ಆಶಯವನ್ನು ಮುಂದುವರಿಸಿದ ಪ್ರೊ.ಎಂ.ಜಿ. ಕೃಷ್ಣನ್ ಅಭಿನಂದನಾರ್ಹರು ಎಂದರು. ಗುತ್ತಿಗೆದಾರ ಶ್ರೀನಿವಾಸ್ ಹಾಗೂ ವಿನ್ಯಾಸಕಾರ ಗಿರೀಶ್ ಎಂ. ಸ್ವಾಮಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು. ಚಾಮರಾಜ ಕ್ಷೇತ್ರದ ಶಾಸಕ ವಾಸು, ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ.ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಪಿ.ಎಸ್. ನಾಯಕ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

