ರಸ್ತೆಬದಿ ವ್ಯಾಪಾರಿಗಳ ಸಮಿತಿ ಅಸ್ತಿತ್ವಕ್ಕೆ
ಹುಣಸೂರು: ರಾಷ್ಟ್ರೀಯ ನಗರ ಬೀದಿ ವ್ಯಾಪಾರಿಗಳ ಕಾಯ್ದೆ- 2009ರ ಅನ್ವಯ ಪುರಸಭೆ ಶುಕ್ರವಾರ ಪಟ್ಟಣದಲ್ಲಿ ರಸ್ತೆಬದಿ ವ್ಯಾಪಾರಿಗಳ ಸಂಘವನ್ನು ಅಸ್ತಿತ್ವಕ್ಕೆ ತರಲಾಯಿತು.
ಪುರಸಭೆ ಮುಖ್ಯಾಧಿಕಾರಿ ರಮೇಶ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಮಿತಿ ರಚಿಲಾಗಿದೆ. ಪಟ್ಟಣದ ಎಸ್ಐ, ತಾಲೂಕು ಆರೋಗ್ಯಾಧಿಕಾರಿಗಳು, ಅಗ್ನಿಶಾಮಕ ದಳದ ಮುಖ್ಯಸ್ಥರು, ಪುರಸಭೆಯ ಕಂದಾಯ ಅಧಿಕಾರಿ, ಕಾರ್ಮಿಕ ನಿರೀಕ್ಷಕ, ಆಹಾರ ನಿರೀಕ್ಷಕರು ಹಾಗೂ ಸರ್ಕಾರೇತರ ಸಂಘಗಳಾದ ಚಿಗುರು, ಸ್ಫೂರ್ತಿ, ಸೇವ್ ಅವರ್ ಅರ್ಥ್ ಕ್ಲಬ್ ಹಾಗೂ ಡೀಡ್ ಸಂಸ್ಥೆಯ ಮುಖ್ಯಸ್ಥರು ಸಮಿತಿಯ ಸದಸ್ಯರಾಗಿದ್ದಾರೆ. ರಸ್ತೆಬದಿ ವ್ಯಾಪಾರಿಗಳ ಪ್ರತಿನಿಧಿಗಳಾಗಿ ಆರ್ಆರ್ ಫಾಸ್ಟ್ ಫುಡ್ನ ರಂಗನಾಥ್, ಪಾನೀಪುರಿ ಅಂಗಡಿಯ ಎಸ್. ಲೋಕೇಶ್, ಹೂವಿನ ವ್ಯಾಪಾರಿ ಸಯ್ಯದ್ ಅಸ್ಲಮ್, ಹಣ್ಣಿನ ವ್ಯಾಪಾರಿ ಸುಬ್ರಮಣ್ಯ, ಚಪ್ಪಲಿ ವ್ಯಾಪಾರಿ ನಾಗರಾಜು, ಬಟ್ಟೆ ವ್ಯಾಪಾರಿ ಮೀರ್ ಷಹೀಲ್ ಅಸ್ಲಂ, ಮಹಿಳಾ ವ್ಯಾಪಾರಿಗಳಾದ ಸತ್ಯಮ್ಮ, ಪುಷ್ಪಾಬಾಯಿ ಹಾಗೂ ಸರಸ್ವತಿಯ ಅವರನ್ನು ಪ್ರತಿನಿಧಿಗಳಾಗಿ ನೇಮಿಸಲಾಗಿದೆ.
ಪುರಸಭೆ ಮುಖ್ಯಾಧಿಕಾರಿ ಎ. ರಮೇಶ್ ಮಾತನಾಡಿ, 2009ರ ಕಾಯ್ದೆ ಬೀದಿ ಬದಿಯ ವ್ಯಾಪಾರಿಗಳ ಬದುಕನ್ನು ಹಸನಾಗಿಸಲು ಕೇಂದ್ರ ಸರ್ಕಾರ ರೂಪಿಸಿದೆ. ಪಟ್ಟಣದಲ್ಲಿ ಬೀದಿ ಬದಿಯ ವ್ಯಾಪಾರಿಗಳ ಸಮಗ್ರ ಮಾಹಿತಿಯನ್ನೊಳಗೊಂಡ ಸಮೀಕ್ಷಾ ಕಾರ್ಯ ಜೂ. 20 ರಿಂದ ಪ್ರಾರಂಭಗೊಂಡು ಜು.15ರ ಒಳಗೆ ಪೂರ್ಣಗೊಳ್ಳಲಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಆ. 10 ರೊಳಗೆ ಪಟ್ಟಣದ ಎಲ್ಲ ರಸ್ತೆಬದಿಯ ವ್ಯಾಪಾರಿಗಳಿಗೂ ಗುರುತಿನ ಚೀಟಿ ನೀಡಲಾಗುವುದು. ಈಗ ರಚಿಸಿರುವ ಸಮಿತಿಯಲ್ಲಿ ನಾಲ್ಕೈದು ರಾಷ್ಟ್ರೀಕೃತ ಬ್ಯಾಂಕುಗಳನ್ನು ಸದಸ್ಯರನ್ನಾಗಿಸಿ ಅವರ ಮೂಲಕ ಪುರಸಭೆ ವತಿಯಿಂದ ವ್ಯಾಪಾರಿಗಳಿಗೆ ಸಾಲಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

