ಹನ್ನೊಂದು ಗ್ರಾಮಗಳಿಗೆ ಕುಡಿವ ನೀರು
ಮೈಸೂರು: ಕಪಿಲಾ ನದಿಯಿಂದ ನಗರಕ್ಕೆ ನೀರು ಪೂರೈಸುವ ನರ್ಮ್ ಯೋಜನೆಯಡಿ ಮೈಸೂರು ಮತ್ತು ನಂಜನಗೂಡು ತಾಲೂಕುಗಳ ಮಾರ್ಗಮಧ್ಯದ ಇನ್ನೂ 11 ಗ್ರಾಮಗಳಿಗೂ ನೀರು ಪೂರೈಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮೂಲಕ 12 ಕೋಟಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ಇದರಲ್ಲಿ ಐದು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕೂಡ ಸೇರಿದೆ. ಈ ಸಂಬಂಧ ಮೈಸೂರು ಜಿಪಂ ಸಿಇಒ, ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗದ ಮುಖ್ಯ ಎಂಜಿನಿಯರ್ ಸಲ್ಲಿಸಿದ್ದ ಪ್ರಸ್ತಾವನೆ ಮೇರೆಗೆ ಗ್ರಾಮೀಣ ಪ್ರದೇಶಗಳ ಜನವಸತಿಗೆ ಸಾಕಷ್ಟು ಪ್ರಮಾಣದಲ್ಲಿ ಶಾಶ್ವತ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ದೊರೆಯುವುದರಿಂದ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಉಪ ಕಾರ್ಯದರ್ಶಿ ರಾಮಕೃಷ್ಣ ತಿಳಿಸಿದ್ದಾರೆ.
ಉದ್ದೇಶಿತ ಮಾರ್ಗ ಮಧ್ಯದ 30 ಗ್ರಾಮಗಳ ಜೊತೆಗೆ ಈ 11 ಗ್ರಾಮಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಅಂದಾಜು ವೆಚ್ಚ ಅಧಿಕವಾಗದಂತೆ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಈ ಯೋಜನೆ ವ್ಯಾಪ್ತಿಯ ಗ್ರಾಮಗಳು ಬೇರೆ ಯೋಜನೆಯಡಿ ಸೇರ್ಪಡೆಯಾಗಿರಬಾರದು. ಕಾಮಗಾರಿಯನ್ನು ಮೂರನೇ ವ್ಯಕ್ತಿಯ ತಪಾಸಣೆಗೆ ಒಳಪಡಿಸಬೇಕು. ಯೋಜನೆ ಪೂರ್ಣಗೊಂಡ ನಂತರ ನಿರ್ವಹಣಾ ವೆಚ್ಚಕ್ಕೆ ಅನುಗುಣವಾಗಿ ನೀರಿನ ಶುಲ್ಕ ಸಂಗ್ರಹಿಸಬೇಕು. ಬಲ್ಕ್ ನೀರಿನ ಮಾಪನ ಅಳವಡಿಸಬೇಕು. ಮನೆ ಮನೆ ಸಂಪರ್ಕಕ್ಕೂ ಮಾಪನ ಅಳವಡಿಸಬೇಕು. ಇದಕ್ಕಾಗಿ ಠೇವಣಿಯನ್ನು ಆಯಾ ಗ್ರಾಪಂ ನಿರ್ಣಯದಂತೆ ಸಂಗ್ರಹಿಸಬೇಕು.
ಈಗ ಆಯ್ಕೆಯಾಗಿರುವ 11 ಗ್ರಾಮಗಳು: ಮೈಸೂರು ತಾಲೂಕು- ಚಿಕ್ಕ ಕಾನ್ಯ, ದೊಡ್ಡ ಕಾನ್ಯ, ಆನಗಳ್ಳಿ, ತಿಬ್ಬಯ್ಯನಹುಂಡಿ, ಮೂಗನಹುಂಡಿ, ಬ್ಯಾತಹಳ್ಳಿ, ದೇವಗಳ್ಳಿ ನಂಜನಗೂಡು ತಾಲೂಕು- ಏಚಗಳ್ಳಿ, ಹಳ್ಳಿದಿಡ್ಡಿ, ಮರಳೂರು, ಗೊದ್ದನಪುರ.
ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

