ಮೈಸೂರು

ಕಿರುನಾಟಕೋತ್ಸವದಲ್ಲಿ ನಾದಬ್ರಹ್ಮನ ಹುಟ್ಟುಹಬ್ಬ

Published On :

ಮೈಸೂರು: ಆದಿಕವಿ ಪಂಪನ ಊರಾದ ಅಣ್ಣಿಗೇರಿಯಲ್ಲಿ ಆರಂಭಿಸಿದ ಕಿರು ನಾಟಕೋತ್ಸವದ ರಥವನ್ನು ಮೈಸೂರಿಗೆ ಎಳೆದು ತಂದಿದ್ದ ನಾದಬ್ರಹ್ಮ ಎಂದೇ ಖ್ಯಾತನಾಮರಾಗಿರುವ ಹಂಸಲೇಖ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.
ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಹಂಸಲೇಖ ಅವರನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ನಾಡೋಜ ಡಾ.ದೇಜಗೌ ಅಭಿಮಾನದಿಂದ, ಮೈಸೂರಿಗರ ಪರವಾಗಿ ಅಭಿನಂದಿಸಿದರು. ಪತಿಯ ಸಂಭ್ರಮದಲ್ಲಿ ಪತ್ನಿಯೂ ಮಿಂದೆದ್ದರು.
ಹಂಸಲೇಖ ದೇಸಿ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ಕಿರು ನಾಟಕೋತ್ಸವನ್ನು ಮೈಸೂರಿನಲ್ಲಿ ಸಮಾರೋಪಗೊಳಿಸಬೇಕೆಂಬ ಉದ್ದೇಶ ಹೊಂದಲಾಗಿತ್ತು. ಆದರೆ, ಇದು ಇಲ್ಲಿಗೆ ನಿಲ್ಲಬಾರದು ಎಂಬ ಅಭಿಲಾಷೆಯಿಂದ ಕಿರು ನಾಟಕೋತ್ಸವದ ಸಮಾರೋಪದ ಆಶಯವನ್ನು ಮುಂದುವರಿಸಿ ದ್ವಿತೀಯ ವರ್ಷಾಭಿಯಾನ ಎಂಬ ಶೀರ್ಷಿಕೆಯೊಂದಿಗೆ ವರ್ಷಪೂರ್ತಿ ಆಚರಿಸಲು ಸೋಮವಾರ ನಗರದ ಜಗನ್ಮೋಹನ ಅರಮನೆಯಲ್ಲಿ ಚಾಲನೆ ನೀಡಲಾಯಿತು.
ಸಹಕಾರ ನೀಡುತ್ತೇವೆ: ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ದೇಸೀಯತೆ ಉಳಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ಹಂಸಲೇಖ ದೇಸಿ ಕಾಲೇಜು ಪಾರಂಪರಿಕ ವಿವಿಯಾದ ಮೈಸೂರು ವಿವಿಯೊಂದಿಗೆ ಕೈಜೋಡಿಸಿದರೆ ನಾವು ಸಹಕಾರ ನೀಡುತ್ತೇವೆ. ಈ ಕಾರ್ಯಕ್ಕೆ ಸಂಗೀತ ನಿರ್ದೇಶಕ ಹಂಸಲೇಖ ಅವರು ಸಹಾಯ ಮಾಡಬೇಕು. ಜತೆಗೆ ಅವರ ಕಾಲೇಜನ್ನು ಮುಂದುವರಿಸಬೇಕು ಎಂದರು ತಿಳಿಸಿದರು.
ನಂತರ ಮಾತನಾಡಿದ ಹಂಸಲೇಖ, ರಾಜ್ಯದಲ್ಲಿ ಕನ್ನಡ ಉಳಿಸಲು ಡಾ.ರಾಜ್‌ಕುಮಾರ್ ಮತ್ತು ಕುವೆಂಪು ಅವರನ್ನು ಬಿಟ್ಟರೆ ನಮಗೆ ಮಕ್ಕಳೆ ದಿಕ್ಕು. ಹೀಗಾಗಿ ರಾಜ್ಯಾದ್ಯಂತ ಮಕ್ಕಳ ಮೂಲಕ ಕಿರು ನಾಟಕ ಆಡಿಸಲು ಚಿಂತಿಸಿ ಕಾರ್ಯರೂಪಕ್ಕೆ ತಂದೆ. ಇದರಿಂದ ಕನ್ನಡ ಕಲಿಸುವ, ಉಳಿಸಿ ಬೆಳೆಸುವ ಇರಾದೆ ನಮ್ಮದಾಗಿದೆ ಎಂದರು.
ಉದ್ಯೋಗ ಭರವಸೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲಾದ ಎಂಬ ಕಾರಣಕ್ಕೆ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಶರಣಾಗುತ್ತಿದ್ದಾರೆ. ಜೀವನ ದೊಡ್ಡದಿದ್ದು ಯಾವುದೇ ಸಮಸ್ಯೆಗೆ ಎದೆಗುಂದಬಾರದು. ಆತ್ಮಸ್ಥೈರ್ಯ ಕಳೆದುಕೊಂಡ ಮಕ್ಕಳಿಗಾಗಿ ಹಂಸಲೇಖ ದೇಸಿ ಕಾಲೇಜು ಸ್ಥಾಪಿಸಲಾಗಿದೆ. ಇಲ್ಲಿ ಕಲಿತವರಿಗೆ ಉದ್ಯೋಗ ನೀಡಲಾಗುತ್ತದೆ ಎಂದು ಭರವಸೆ ತುಂಬಿದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಎಲ್.ಬಿ.ಶೇಖ್, ರಂಗತಜ್ಞ ಪ್ರೊ.ಎಚ್.ಎಸ್. ಉಮೇಶ್, ಗುಬ್ಬಿಗೂಡು ರಮೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಚಂದ್ರಶೇಖರ್, ಅಕಾಡೆಮಿ ಸದಸ್ಯ ಬಿ.ಎಂ. ರಾಮಚಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.