ಮೈಸೂರು

ಮೈಸೂರು- ಮಡಿಕೇರಿಗೆ ಸಿಗುವುದೇ ಮಾರ್ಗ?

Published On :

 ಅಂಶಿ ಪ್ರಸನ್ನಕುಮಾರ್
ಮೈಸೂರು: ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರದ ಚೊಚ್ಚಲ ರೇಲ್ವೆ ಬಜೆಟ್ ಅನ್ನು ಕರ್ನಾಟಕದವರೇ ಆದ ಡಿ.ವಿ.ಸದಾನಂದಗೌಡ ಅವರು ಜು.8 ರಂದು ಮಂಡಿಸಲಿದ್ದಾರೆ. ಹೀಗಾಗಿ ರಾಜ್ಯದ ಜನತೆ ಅಪಾರ ನಿರೀಕ್ಷೆಗಳನ್ನು ಹೊಂದಿದ್ದಾರೆ. ಇವುಗಳಲ್ಲಿ ಮೈಸೂರು- ಕುಶಾಲನಗರ- ಮಡಿಕೇರಿ ಮಾರ್ಗವೂ ಒಂದು.
ಸಾಂಸ್ಕೃತಿಕ ನಗರಿ ಮೈಸೂರಿಗೆ ಮಂಜಿನ ನಗರಿ ಮಡಿಕೇರಿ ಹತ್ತಿರದಲ್ಲಿದೆ. ಎರಡೂ ದೇಶದ ಪ್ರಮುಖ ಪ್ರವಾಸೋದ್ಯಮ ತಾಣಗಳು. ಆದರೆ ಈ ಎರಡೂ ನಗರಗಳ ಮಧ್ಯೆ ರೇಲ್ವೆ ಸಂಪರ್ಕವಿಲ್ಲ. ಈ ಕೊರತೆ ನೀಗಿಸಬೇಕು ಎಂಬುದು ಬಹುದಿನಗಳ ಬೇಡಿಕೆ. ಮೈಸೂರು- ಕೊಡಗು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಹಿಂದಿನ ಸಂಸದ ಎಚ್.ವಿಶ್ವನಾಥ್ ಅವರು ಈ ಸಂಬಂಧ ಪ್ರಯತ್ನ ನಡೆಸಿದ್ದರು. ಯುಪಿಎ ಸರ್ಕಾರದಲ್ಲಿ ರೇಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ, ನಂತರ ಸಂಪುಟ ದರ್ಜೆಯ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಒತ್ತಡ ಹೇರಿ, ಮೈಸೂರಿನಿಂದ ಕುಶಾಲನಗರದವರೆಗೆ ಸಮೀಕ್ಷಾ ಕಾರ್ಯ ಆಗುವಂತೆ ನೋಡಿಕೊಂಡಿದ್ದರು. ಈಗ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಪ್ರತಾಪ್ ಸಿಂಹ ಅವರು ಕೂಡ ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರನ್ನು ಭೇಟಿ ಮಾಡಿ, ಈ ಮಾರ್ಗದ ಅಗತ್ಯತೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಮಂಗಳೂರಿನ ಸುಪುತ್ರ ಹಾಗೂ ಕೊಡಗಿನ ಅಳಿಯನೂ ಆಗಿರುವ ಸದಾನಂದಗೌಡರ ಮುಂದೆ ಈ ಮಾರ್ಗ ಕಾರ್ಯಗತ ಮಾಡುವ ಸವಾಲಿದೆ. ಅಲ್ಲದೇ ಮೈಸೂರಿಂದ ಮಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸುವ ಹೊಣೆಗಾರಿಕೆಯೂ ಇದೆ.

ಕುಕ್ಕೆ ಸುಬ್ರಹ್ಮಣ್ಯವರೆಗೆ ಮುಂದುವರಿಸಿ
ಮೈಸೂರಿನಿಂದ ಕುಶಾಲನಗರಕ್ಕೆ ಆರಂಭಿಸುವ ರೈಲು ಮಾರ್ಗವನ್ನು ಕುಕ್ಕೆ ಸುಬ್ರಹ್ಮಣ್ಯವರಿಗೆ ಮುಂದುವರಿಸಬೇಕು. ಬೆಳಗೊಳ, ಗೊಮ್ಮಟಗಿರಿ, ಹುಣಸೂರು, ಪಿರಿಯಾಪಟ್ಟಣ, ಕುಶಾಲನಗರ, ಸೋಮವಾರಪೇಟೆ, ಶಾಂತಳ್ಳಿ, ಕುಂದಳ್ಳಿ ಮಾರ್ಗವಾಗಿ 130 ಕಿ.ಮೀ. ಇರುವ ಸುಬ್ರಹ್ಮಣ್ಯ ತಲುಪಿದರೆ ಮಾರ್ಗ ಹೆಚ್ಚು ಲಾಭದಾಯಕವಾಗುತ್ತದೆ ಎಂದು ಗುಂಡೂರಾವ್ ಹೇಳಿದ್ದಾರೆ. ಇದಕ್ಕಾಗಿ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಎಂ.ಸಿ. ನಾಣಯ್ಯ, ಎಂ.ಎನ್. ನಾಣಯ್ಯ ಮೊದಲಾದವರ ಸಲಹೆ- ಸಹಕಾರ ಪಡೆಯಬೇಕು ಎಂದು ಹೇಳಿದ್ದಾರೆ. ಮೈಸೂರಿನಿಂದ ಹಾಸನ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ 273 ಕಿ.ಮೀ. ಆದರೆ ಕುಶಾಲನಗರ ಮಾರ್ಗ ಕೇವಲ 130ಕಿ.ಮೀ. ಒಟ್ಟಾರೆ 143 ಕಿ.ಮೀ. ಉಳಿತಾಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

666 ಕೋಟಿ ವೆಚ್ಚ
ರೇಲ್ವೆ ಇಲಾಖೆಯ ಮೂಲಗಳ ಪ್ರಕಾರ, ಡಿ.ವಿ. ಸದಾನಂದಗೌಡ ಅವರಿಗೆ ಈ ಸಂಬಂಧ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೈಸೂರು- ಕುಶಾಲನಗರ- ಮಡಿಕೇರಿ 130 ಕಿ.ಮೀ. ರೈಲು ಮಾರ್ಗಕ್ಕೆ 666.77 ಕೋಟಿ ಅಂದಾಜುಪಟ್ಟಿ ರೂಪಿಸಲಾಗಿದೆ. ಇದನ್ನು ಒಪ್ಪುವುದು ಬಿಡುವುದು ರೇಲ್ವೆ ಮಂಡಳಿಗೆ ಸೇರುತ್ತದೆ. ಅದೇ ರೀತಿ ಬೆಂಗಳೂರಿನ ಹೆಜ್ಜಾಲದಿಂದ- ಚಾಮರಾಜನಗರಕ್ಕೆ ರೈಲು ಮಾರ್ಗಕ್ಕೆ ಹಿಂದಿನ ಯುಪಿಎ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಈ ಯೋಜನೆ ಕಾರ್ಯಗತವಾಗಬೇಕಿದೆ. ಈ ಮಾರ್ಗವನ್ನು ತಮಿಳುನಾಡಿನ ಸತ್ಯಮಂಗಲಂವರೆಗೂ ವಿಸ್ತರಿಸುವ ಉದ್ದೇಶವಿದೆ. ಬೆಂಗಳೂರು- ಮೈಸೂರು ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣ ಹಲವು ವರ್ಷಗಳ ಕನಸು. ರಾಮನಗರದಿಂದ ಮೈಸೂರುವರೆಗಿನ 93 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಪಾಂಡವಪುರದಿಂದ ಶ್ರೀರಂಗಪಟ್ಟಣ- ನಾಗನಹಳ್ಳಿವರೆಗೆ ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್, ಯಲಿಯೂರು- ಬ್ಯಾಡರಹಳ್ಳಿ ನಡುವಿನ ಕಾಮಗಾರಿಯನ್ನು ಮುಂದಿನ ವರ್ಷದ ಜನವರಿಗೆ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಇನ್ನೂ ಆರಂಭಆಗದ ರೈಲು
ಹಿಂದಿನ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭಾ ಚುನಾವಣೆಗೂ ಮುನ್ನಾ ಮಂಡಿಸಿದ ಬಜೆಟ್‌ನಲ್ಲಿ ವಾರಣಸಿ- ಮೈಸೂರು ನಡುವೆ ವಾರಕ್ಕೆ ಎರಡು ದಿನ ರೈಲು ಸಂಚಾರ ಪ್ರಕಟಿಸಿದ್ದರು. ಆದರೆ ಇದು ಇನ್ನೂ ಆರಂಭವಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.