ಮೈಸೂರು

ಪ್ರತ್ಯೇ'ಕಸ'ಲು ಮನೆಮನೆಗೆ ಬಣ್ಣದ ತೊಟ್ಟಿ

Published On :

ಕ.ಪ್ರ.ವಾರ್ತೆ  ಮೈಸೂರು  ಮಾ. 2
ದೇಶದಲ್ಲಿಯೇ ಎರಡನೇ ಸ್ವಚ್ಛ ನಗರಿ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದ ಸಾಂಸ್ಕೃತಿಕ ಮೈಸೂರು ಇದೀಗ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದು, ನಗರಪಾಲಿಕೆಯು ಕಸದ ನಿರ್ವಹಣೆಗಾಗಿ ನಗರವಾಸಿಗಳಿಗೆ ಬಣ್ಣದ ತೊಟ್ಟಿಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಭಾನುವಾರ ನಗರದ ಜ್ಯೋತಿ ನಗರದ ಪೌರಕಾರ್ಮಿಕ ಕಾಲೋನಿಯಲ್ಲಿ ಶಾಸಕ ತನ್ವೀರ್ ಸೇಠ್ ತೊಟ್ಟಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮೈಸೂರು ನಗರವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ.
ಪ್ರವಾಸಿಗರನ್ನು ಆಕರ್ಷಿಸುವ ಶಕ್ತಿಯುಳ್ಳ ಮೈಸೂರಿನಲ್ಲಿ ಕಸದ ನಿರ್ವಹಣೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಮನೆಯಲ್ಲಿಯೇ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ ಎಂದರು.
ಕಸದಲ್ಲಿಯೇ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಪ್ರತ್ಯೇಕ ತೊಟ್ಟಿಗಳಲ್ಲಿ ನೀಡುವುದರಿಂದ ಕಸ ವಿಲೇವಾರಿ ಸರಾಗವಾಗುತ್ತದೆ. ಹಸಿರು ತೊಟ್ಟಿಯಲ್ಲಿ ಹಸಿ ಕಸ, ಕೆಂಪು ತೊಟ್ಟಿಯಲ್ಲಿ ಒಣ ಕಸ ಹಾಕಲು ಪಾಲಿಕೆ ಸೂಚಿಸಿದೆ. ಎಲ್ಲ ಮನೆಗಳಿಗೆ 2 ಡಸ್ಟ್‌ಬಿನ್‌ಗಳನ್ನು ನೀಡಲಾಗುತ್ತಿದೆ. 2008-09ನೇ ಸಾಲಿನಲ್ಲಿ ನಗರಾದ್ಯಂತ 3 ಸಾವಿರ ಪ್ಲಾಸ್ಟಿಕ್ ಕಸದ ತೊಟ್ಟಿಗಳನ್ನು ಅಳವಡಿಸಲಾಗಿತ್ತು. ಇದರ ಬದಲು ಮನೆ ಮನೆಗೆ ತೊಟ್ಟಿಗಳನ್ನು ನೀಡುವುದರಿಂದ ಜನರಿಗೆ ಅನುಕೂಲವಾಗುವುದರ ಜತೆಗೆ ಜನರ ತೆರಿಗೆ ಹಣ ಪೋಲಾಗುವುದು ತಪ್ಪುತ್ತದೆ ಎಂದರು.
ಮಾಜಿ ಮೇಯರ್ ಎಚ್.ಎನ್. ಶ್ರೀಕಂಠಯ್ಯ ಮಾತನಾಡಿ, ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಂಗಡಿಸಬೇಕು. ಕೊಳೆಯುವ ಕಸ, ಕೊಳೆಯದ ಕಸ ಎಂದು ಬೇರ್ಪಡಿಸಿ ನೀಡಬೇಕು. ಕೊಳೆಯುವ ಕಸವನ್ನು ಗೊಬ್ಬರ ಮಾಡಲು ಬಳಸಬಹುದು. ಕೊಳೆಯದ ಕಸವನ್ನು ಮೆಟಾಲಿಕ್ ಕಸವನ್ನಾಗಿ ಪರಿವರ್ತಸಿ ಗುಂಡಿ ಮುಚ್ಚುವುದಕ್ಕೆ ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಮಾತನಾಡಿ, ನಗರದಲ್ಲಿ 1.5 ಲಕ್ಷ ಮನೆಗಳಿದ್ದು, ಒಟ್ಟು 2.95 ಕೋಟಿ ವೆಚ್ಚದಲ್ಲಿ ಈ ತೊಟ್ಟಿಗಳನ್ನು ನೀಡಲಾಗುತ್ತಿದೆ. 10 ಲೀ. ಸಾಮರ್ಥ್ಯದ ಡಸ್ಟ್‌ಬಿನ್‌ಗಳಲ್ಲಿ ಪ್ರತಿನಿತ್ಯ ಕಸ ಸಂಗ್ರಹಿಸಿ ಬೆಳಗ್ಗೆ ಪೌರಕಾರ್ಮಿಕರು ಬಂದಾಗ ಕಸ ನೀಡಬೇಕು. ಕಸವನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲು ಒಟ್ಟಿಗೆ ಸಂಗ್ರಹಿಸಿ ಕೊಟ್ಟರೆ ವಿಲೇವಾರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಉಪಮೇಯರ್ ವಿ. ಶೈಲೇಂದ್ರ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಪ್ರಸಾದ್, ಸದಸ್ಯರಾದ ಶಿವಕುಮಾರ್, ಸ್ವಾಮಿ, ಶೌಕತ್ ಪಾಷ, ಹಸೀನಾ ತಾಜ್, ಸಮೀನಾ ತಾಜ್, ಅನುಸೂಯ, ಪೈರೋಜ್‌ಖಾನ್, ಸ್ನೇಕ್ ಶ್ಯಾಮ್, ಬಿ.ವಿ. ಮಂಜುನಾಥ್, ಪರಿಸರ ಎಂಜಿನಿಯರುಗಳಾದ ಗಿರಿಜಾ, ಮಮತಾ, ತೇಜಸ್ವಿನಿ, ಮೈತ್ರಾ, ವಿಜಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.