ಕುಡಿವ ನೀರಿನ ಸಮಸ್ಯೆ ಎದುರಿಸಲು ಸಿದ್ಧರಾಗಿ
ನಾಗಮಂಗಲ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಕಕವಾಗಿ ಎದುರಿಸಲು ಸನ್ನದ್ಧರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮರನಾರಾಯಣ ಸೋಮವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಸಿಲ್ದಾರ್ಗಳು, ತಾಪಂ ಇಒಗಳು ಹಾಗೂ ಪಂಚಾಯತ್ ರಾಜ್ ಇಲಾಖೆಯ ಎ.ಇ.ಇ.ಗಳು ತಾಲೂಕು ಮಟ್ಟದಲ್ಲಿ ತುರ್ತು ಸಭೆ ನಡೆಸಿ, ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ಕಂಡು ಹಿಡಿಯಲು ಕ್ರಮಕೈಗೊಳ್ಳಬೇಕು ಎಂದರು.
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ನಡೆಸುವ ಸಭೆಗಳಿಗೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಬೇಸಿಗೆ ಮುಗಿವವರೆಗೂ ಜಿಲ್ಲೆಯ ಬರಪೀಡಿತ ಪ್ರದೇಶಕ್ಕೆ ಸಿಲುಕಿರುವ ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಟ್ಯಾಂಕರ್ಗಳಿಗೆ ನೀರುಕೊಡಲು ಖಾಸಗಿ ಕೊಳವೆ ಬಾವಿ ಮಾಲೀಕರು ಅಥವಾ ರೈತರೊಂದಿಗೆ ಒಂದು ಟ್ಯಾಂಕರ್ ನೀರಿಗೆ ಇಂತಿಷ್ಟು ಎಂದು ದರ ನಿಗಧಿಪಡಿಸಿಕೊಳ್ಳಬೇಕು. ಕೆಲವರು ಉಚಿತವಾಗಿ ನೀರು ಕೊಡಲು ಮುಂದಾಗಬಹುದು ಅಥವಾ ವಿದ್ಯುತ್ ಶುಲ್ಕದ ಬೇಡಿಕೆಯಿಡಬಹುದು. ಒಟ್ಟಾರೆ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿಲ್ಲ ಎನ್ನುವ ಪರಿಸ್ಥಿತಿ ಎದುರಾಗಬಾರದು ಎಂದರು.
ಬೇಸಿಗೆಯಲ್ಲಿ ಕಾಲರಾದ ಭೀತಿ ಎದುರಾಗಲಿದೆ. ಮಲೇರಿಯಾ, ಡೆಂಘೀ ರೋಗಗಳನ್ನು ತಡೆಗಟ್ಟುವ ದೃಷ್ಟಿಯಿಂದ ಗ್ರಾಮೀಣ ಪ್ರದೇಶದ ನೀರಿನ ಟ್ಯಾಂಕರ್ಗಳಿಗೆ ಡಿ.ಡಿ.ಟಿ. ಸಿಂಪಡಿಸಿ ನೀರು ಪೂರೈಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕ್ರಮವಹಿಸಬೇಕು. ವಿದ್ಯುತ್ ಸಮಸ್ಯೆಯಿಂದ ಜನರಿಗೆ ನೀರಿಗೆ ತೊಂದರೆಯಾಗದಂತೆ ಎಚ್ಚರವಹಿಸಿ ಎಂದು ಹೇಳಿದರು.
ನಾಗಮಂಗಲ ತಾಲೂಕಿನ ಪಿ. ನೇರಲಕೆರೆ, ನರಗನಹಳ್ಳಿ, ಮಾಟನಕೊಪ್ಪಲು, ಕಾರಗೆರೆ, ಹೆತ್ತಗೋನಹಳ್ಳಿ, ರಮಾನಂದನಗರ, ತೊಳಲಿ, ಬುಡಬುಡಕೆಕಾಲೋನಿ, ರಾಮದೇವನಹಳ್ಳಿ, ಲಾಳನಕೆರೆ, ಬಾಣನಹಳ್ಳಿ ಗ್ರಾಮಗಳಲ್ಲಿ ಕೆಲ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ ಎಂದು ತಹಸೀಲ್ದಾರ್ ಸಿ.ಎಂ. ಶಿವಣ್ಣ ತಿಳಿಸಿದರು.
ಮಳವಳ್ಳಿ ತಾಲೂಕಿನ ಕೆಲ ಗ್ರಾಮಗಳಿಗೆ ಕಳೆದ ಹದಿನೈದು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಪಾಂಡವಪುರ ತಾಲೂಕಿನ 16 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಕೆ.ಆರ್. ಪೇಟೆ, ಮದ್ದೂರು ತಾಲುಕುಗಳಲ್ಲಿಯೂ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆಯಿದೆ ಎಂದು ಆಯಾ ತಾಲೂಕು ತಹಸೀಲ್ದಾರರು ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳ ನೋಡಲ್ ಅಧಿಕಾರಿಗಳು ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಭೇಟಿ ನೀಡಿ ವರದಿ ಸಿದ್ದಪಡಿಸಬೇಕು. ಒಬ್ಬ ವ್ಯಕ್ತಿಗೆ ದಿನಕ್ಕೆ ಎಷ್ಟು ಲೀ. ನೀರಿನ ಅವಶ್ಯಕತೆಯಿದೆ ಎಂಬುದನ್ನು ಅರಿತು, ಗ್ರಾಮದ ಜನಸಂಖ್ಯೆಗನುಗುಣವಾಗಿ ನೀರು ಪೂರೈಸಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ಅಮರನಾರಾಯಣ ಮತ್ತು ಜಿಲ್ಲಾಧಿಕಾರಿ ಅಜಯ್ನಾಗಭೂಷಣ್ ಸೂಚಿಸಿದರು.
ಜಿಲ್ಲೆಯ ಬರಪೀಡಿತ ತಾಲೂಕುಗಳಲ್ಲಿ ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಎಲ್ಲ ತಾಲೂಕುಗಳಲ್ಲಿಯೂ ಸಾಕಷ್ಟು ಮೇವು ದಾಸ್ತಾನಿಡಲಾಗಿದೆ. ಪ್ರಾಣಿ ಪಕ್ಷಿಗಳಿಗೆ ನೀರು ಒದಗಿಸುವ ಸಲುವಾಗಿ ವಿಶೇಷ ಯೋಜನೆ ರೂಪಿಸಿ ಗ್ರಾಮೀಣ ಭಾಗದ ಅವಶ್ಯವಿರುವ ಸ್ಥಳಗಳಲ್ಲಿ ಸಣ್ಣ ಪುಟ್ಟ ಕಟ್ಟೆಗಳನ್ನು ನಿರ್ಮಿಸಿ ನೀರು ತುಂಬಿಸಲು ಅಧಿಕಾರಿಗಳು ಕ್ರಮವಹಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಬಿ. ವಾಣಿ, ಮಂಡ್ಯ ಉಪವಿಭಾಗಾಧಿಕಾರಿ ಶಾಂತ ಹುಲ್ಮನಿ, ಜಿಪಂ ಉಪಕಾರ್ಯದರ್ಶಿ (ಅಡಳಿತ) ಬಿ.ಆರ್. ಪೂರ್ಣಿಮಾ, ತಹಸೀಲ್ದಾರ್ಗಳು, ಅಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

