ಪುರಸಭೆ ಉಪಚುನಾವಣೆ; ಶಾಂತಿಯುತ ಮತದಾನ
ಪಿರಿಯಾಪಟ್ಟಣ: ಪಟ್ಟಣದ ಪುರಸಭೆಯ ಎರಡು ವಾರ್ಡುಗಳಿಗೆ ಭಾನುವಾರ ನಡೆದ ಉಪ ಚುನಾವಣೆಯ ಮತದಾನವು ಶಾಂತಿಯುತವಾಗಿ ನಡೆಯಿತು. 15ನೇ ವಾರ್ಡಿನಲ್ಲಿ ಶೆ.78 ಮತದಾನ ನಡೆದಿದ್ದು, 998 ಮತದಾರರ ಪೈಕಿ 776 ಹಾಗೂ 18ನೇ ವಾರ್ಡಿನಲ್ಲಿ ಶೇ. 77 ಮತದಾನವಾಗಿದೆ. 1931 ಮತದಾರರ ಪೈಕಿ, 792 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಬೆಳಗ್ಗೆ 7 ಘಂಟೆಗೆ ಆರಂಭವಾದ ಮತದಾನ ಮೊದಲು ನೀರಸವಾಗಿತ್ತು. ಮಧ್ಯಾಹ್ನದ ವೇಳೆಗೆ ಶೇ.60 ಮತದಾನ ನಡೆದಿತ್ತು. ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮನೆ ಮನೆಗೆ ತೆರಳಿ ಮತದಾರರನ್ನು ಮತದಾನ ಕೇಂದ್ರಕ್ಕೆ ಕರೆದು ತರುತ್ತಿದ್ದುದು ಸಾಮಾನ್ಯವಾಗಿತ್ತು. ಪಟ್ಟಣದ ಪುರಸಭೆಯ ಎರಡು ವಾರ್ಡುಗಳಿಗೆ ಚುನಾವಣೆ ನಡೆಯುತ್ತಿದ್ದುದರಿಂದ ಇತರ ವಾರ್ಡುಗಳ ಮುಖಂಡರು, ಕಾರ್ಯಕರ್ತರು ಮತ್ತು ಪುರಸಭಾ ಸದಸ್ಯರು ಮತ ಕೇಂದ್ರಗಳ ಬಳಿ ಜಮಾಯಿಸಿ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಮತದಾನ ಮಾಡುವಂತೆ ಮನವೊಲಿಸುತ್ತಿದ್ದರು. ಮತ ಪಟ್ಟಿಯಲ್ಲಿ ಹೆಸರಿದ್ದ ಕೆಲವರು ಮೈಸೂರು, ಬೆಂಗಳೂರು ಸೇರಿದಂತೆ ಇತರ ಭಾಗಗಳಲ್ಲಿ ವಾಸವಿದ್ದು ಅಂಥವರನ್ನು ಕರೆ ತಂದು ಮತ ಚಲಾಯಿಸುವ ಕೆಲಸ ನಡೆಯಿತಲ್ಲದೆ ವಯೋವೃದ್ಧರು ಮತ್ತು ಅಂಗವಿಕಲ ಮತದಾರರಿಗೆ ಪಕ್ಷ ಭೇದ ಮರೆತು ಮತ ಚಲಾಯಿಸಲು ಸಹಾಯ ಮಾಡಲಾಯಿತು. ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ನಗರಾಧ್ಯಕ್ಷ ಡಿ.ಸಿ. ಮಂಜುನಾಥ್, ಯುವ ಘಟಕದ ಅಧ್ಯಕ್ಷ ಉಮೇಶ್, ತಾಪಂ ಮಾಜಿ ಉಪಾಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಿತ್ ವಿ. ದೇವರಹಟ್ಟಿ, ಮುಖಂಡ ದೊಡ್ಡಸ್ವಾಮೇಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಮಲ್ಲಕಾರ್ಜುನಪ್ಪ ಮತದಾನ ಕೇಂದ್ರಕ್ಕೆ ಭೇಟಿ ನೀಡಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಎರಡು ಮತ ಕೇಂದ್ರಗಳ ಬಳಿ ಸಿಪಿಐ ಎಚ್.ಎನ್. ಸಿದ್ದಯ್ಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತಲ್ಲದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು.
ಪ್ಲಾಸ್ಟಿಕ್ ವಿಶಲ್ ನುಂಗಿ ಬಾಲಕ ಸಾವು
ನಂಜನಗೂಡು: ತಾಲೂಕಿನ ಮುದ್ದಹಳ್ಳಿ ಗ್ರಾಮದಲ್ಲಿ ಪ್ಲಾಸ್ಟಿಕ್ ಸಿಲ್ಪಿಯನ್ನು (ವಿಶಲ್ ) ನುಂಗಿ ಬಾಲಕನೊಬ್ಬ ಸಾವಿಗೀಡಾಗಿರುವ ಘಟನೆ ಭಾನುವಾರ ನಡೆದಿದೆ. ಮುದ್ದಹಳ್ಳಿ ಗ್ರಾಮದ ಲೇಟ್ ಮಹದೇವಸ್ವಾಮಿ ಎಂಬವರ ಮಗನಾದ ಮೋಹನ (6) ಮೃತಪಟ್ಟವನು. ಪಟ್ಟಣದ ಸಿಟಿಜನ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮನೆಯ ಮುಂದೆ ಆತ ಆಟ ಆಡುತ್ತಾ ಶಬ್ದ ಮಾಡುವ ಪ್ಲಾಸ್ಟಿಕ್ ಸಿಲ್ಪಿ ಊದುವಾಗ ಆಕಸ್ಮಿಕವಾಗಿ ಗಂಟಲಲ್ಲಿ ಸಿಕ್ಕಿಕೊಂಡು ಪ್ರಜ್ಞಾಶೂನ್ಯನಾದ. ತಕ್ಷಣ ಆತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದ. ಮಗುವಿನ ತಾಯಿಯ ರೋದನ ಮನ ಕಲಕುವಂತಿತ್ತು. ಅಂತ್ಯಕ್ರಿಯೆ ಸ್ವಗ್ರಾಮ ಮುದ್ದಹಳ್ಳಿಯಲ್ಲಿ ನೆರವೇರಿತು. ಮೋಹನ್ ಸಾವಿನ ಹಿನ್ನೆಲೆಯಲ್ಲಿ ಸಿಟಿಜನ್ ಶಾಲೆಗೆ ರಜೆ ಘೋಷಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

