ಮೈಸೂರು

ಸಹಕಾರ ಕ್ಷೇತ್ರ ಕಡೆಗಣಿಸಿದ ಸರ್ಕಾರ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಮಾ. 5
ಸಹಕಾರ ಕ್ಷೇತ್ರವನ್ನು ಸರ್ಕಾರವೂ ಕಡೆಗಣಿಸಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಗುರುನಾಥ ಜಾಂತಿಕರ ಹೇಳಿದರು.
ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಸೌಹಾರ್ದ ಸಂಯುಕ್ತ ಸಹಕಾರಿ ಮತ್ತು ಮೈಸೂರು ವಿವಿ ಅರ್ಥಶಾಸ್ತ್ರ ಹಾಗೂ ಸಹಕಾರ ವಿಭಾಗ ಸಂಯುಕ್ತವಾಗಿ ಆಯೋಜಿಸಿದ್ದ ಯುವಜನ ಹಾಗೂ ಸಹಕಾರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಮೆರಿಕ, ಥೈಲ್ಯಾಂಡ್ ಮುಂತಾದ ರಾಷ್ಟ್ರಗಳು ಸಹಕಾರಿ ಕ್ಷೇತ್ರದ ಮೂಲಕ ಸಾಕಷ್ಟು ಅಭಿವೃದ್ಧಿ ಹೊಂದಿವೆ. ಆದರೆ ಭಾರತದಲ್ಲಿ ಸರ್ಕಾರ ತಾನು ಮಾಡಲಾಗದ ಕಾರ್ಯವನ್ನು ಖಾಸಗೀಕರಣಗೊಳಿಸುತ್ತಿದೆ. ಬದಲಿಗೆ ಅದನ್ನು ಸಹಕಾರಿ ಕ್ಷೇತ್ರಕ್ಕೆ ನೀಡಬೇಕು ಎಂದರು.
ಯುವಕರು ಸಹಕಾರಿ ಕ್ಷೇತ್ರ ವಯಸ್ಸಾದವರಿಗೆ ಎಂದು ತಿಳಿದಿದ್ದಾರೆ. ಇನ್ನು ಸರ್ಕಾರ ಸಹಕಾರ ಕ್ಷೇತ್ರವನ್ನು ಕಡೆಗಣಿಸಿದೆ. ಆದರೆ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದ ಬಳಿಕ ಸಾಕಷ್ಟು ಬದಲಾವಣೆಯಾಗಿದ್ದು, ಯುವಕರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆದರೂ ಮತ್ತಷ್ಟು ಮಂದಿ ಯುವಕರು ಸಹಕಾರ ಕ್ಷೇತ್ರಕ್ಕೆ ಬಂದರೆ ಪಾರದರ್ಶಕ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದರು.
ದೇಶದಲ್ಲಿ ಲಕ್ಷಾಂತರ ಸಹಕಾರ ಸಂಘಗಳು ನೋಂದಣಿಯಾಗಿವೆ. 25 ಕೋಟಿ ಮಂದಿ ಸದಸ್ಯರಾಗಿದ್ದಾರೆ. ಅಲ್ಲದೆ ಸುಮಾರು 10 ಕೋಟಿ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಇದೊಂದು ಉದ್ಯೋಗ ಕಲ್ಪಿಸುವ ಬಹುದೊಡ್ಡ ಕ್ಷೇತ್ರವಾಗಿದೆ. ಉದಾರೀಕರಣದ ಬಳಿಕ ಸಹಕಾರಿ ಕ್ಷೇತ್ರಕ್ಕೆ ಯುವಕರು ಬರುವುದು ಹೆಚ್ಚಾಗಿದೆ. ರಾಜ್ಯದಲ್ಲಿ 20 ಲಕ್ಷ ಮಂದಿ ಸದಸ್ಯರಿದ್ದು, 30 ಸಾವಿರ ಮಂದಿಗೆ ಉದ್ಯೋಗ ದೊರಕಿದೆ. ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳು ಪಡೆಯುವ ಸಂಬಳವನ್ನು ಸಹಕಾರಿ ಸಂಸ್ಥೆಗಳ ಸಿಇಒಗಳು ಪಡೆಯುತ್ತಿದ್ದಾರೆ. ಬೆಳಗಾವಿಯ ಅನೇಕ ಸಹಕಾರಿ ಸಂಸ್ಥೆಗಳು ತಯಾರಿಸುವ ಉತ್ಪನ್ನ ಇಂದು ದೇಶ- ವಿದೇಶದಲ್ಲಿ ಮಾರಾಟವಾಗುತ್ತಿದೆ ಎಂದರು.
ಎಂಬಿಎ ವಿಭಾಗದ ಸಹಕಾರ ಆಡಳಿತ ನಿರ್ವಹಣಾ ಸಂಸ್ಥೆಯ ನಿರ್ದೇಶಕ ಡಾ.ಎಸ್.ಎ. ಸಿದ್ಧಾಂತಿ ಮುಖ್ಯ ಭಾಷಣ ಮಾಡಿ, ಕ್ರಿಯಾಶೀಲ ಯುವಕರ ಒಳಗೊಳ್ಳುವಿಕೆಯಿಂದ ಮಾತ್ರ ಸಹಕಾರಿ ಚಳವಳಿ ಬಲಗೊಳ್ಳಲು ಸಾಧ್ಯ. ಯಾವುದೇ ದೇಶದ ಭಾವೈಕ್ಯತೆ ಮತ್ತು ಅಭಿವೃದ್ಧಿ ಸಹಕಾರ ಕ್ಷೇತ್ರದ ಮೇಲೆ ನಿಂತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಕುಲಸಚಿವ ಪ್ರೊ.ಸಿ. ಬಸವರಾಜು ಮಾತನಾಡಿ, ಸಹಕಾರ ಕ್ಷೇತ್ರ ಕೇವಲ ಲಾಭ ಗಳಿಕೆಯ ವಿಷಯವಾಗಿರದೆ ಸಮಾಜದ ಸಮಸ್ಯೆ ಸರಿಪಡಿಸುವ ಕ್ಷೇತ್ರವಾಗಿದೆ. ಆರ್ಥಿಕವಾಗಿ ದುರ್ಬಲರಾದವರನ್ನು ಮೇಲೆತ್ತುವ ಕಾರ್ಯ ಮತ್ತಷ್ಟು ನಡೆಯಬೇಕಿದೆ ಎಂದರು.
ವಿಭಾಗದ ಮುಖ್ಯಸ್ಥೆ ಪ್ರೊ.ಎಚ್.ಎಸ್. ಲೀಲಾವತಿ, ಪ್ರಾಧ್ಯಾಪಕ ಪ್ರೊ.ಎ.ಆರ್. ವಿಶ್ವನಾಥ, ಪ್ರೊ.ಎಸ್. ಮಹೇಂದ್ರಕುಮಾರ, ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಸಿ.ಎನ್. ಪರಶಿವಮೂರ್ತಿ, ಜಂಟಿ ನಿಬಂಧಕಿ ಕೆ.ಎಂ. ಆಶಾ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ್, ನಿರ್ದೇಶಕ ದಿನೇಶ್‌ಗುಪ್ತಾ, ಶಶಿಧರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.