ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಕ.ಪ್ರ.ವಾರ್ತೆ , ಪಿರಿಯಾಪಟ್ಟಣ , ಮಾ.6
ಬಿಜೆಪಿ ಕೋಮುವಾದಿ ಪಕ್ಷವಾಗಿದ್ದು, ನರೇಂದ್ರ ಮೋದಿ ಆರ್ಎಸ್ಎಸ್ನಿಂದ ತರಬೇತಿ ಪಡೆದವರು. ಆರ್ಎಸ್ಎಸ್ ಮಹಾತ್ಮಗಾಂಧಿ ಅವರನ್ನು ಗುಂಡಿಕ್ಕಿ ಕೊಂದ ಗೋಡ್ಸೆ ಪರಂಪರೆಗೆ ಸೇರಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಭಾಷಣದುದ್ದಕ್ಕೂ ರಾಜ್ಯದಲ್ಲಿ ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವುದರೊಂದಿಗೆ ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರದ 9 ತಿಂಗಳ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಸಾಧನೆಗಳನ್ನು ತಿಳಿಸಿ, ಪರೋಕ್ಷವಾಗಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ತವರು ಜಿಲ್ಲೆಯಿಂದಲೇ ರಣಕಹಳೆ ಮೊಳಗಿಸಿದರು.
ಈ ಬಾರಿಯ ಲೋಕಸಭಾ ಚುನಾವಣೆಯು ದೇಶದ ಹಿತದೃಷ್ಟಿಯಿಂದ ಮಹತ್ವ ಪಡೆದಿದೆ. ಬಿಜೆಪಿ ಮೇಲ್ವರ್ಗದ ಬಂಡವಾಳಶಾಹಿಗಳ ಪಕ್ಷ. ಕಾಂಗ್ರೆಸ್ ಬಡವರ, ಮಹಿಳೆಯರ, ಶೋಷಿತ ಸಮುದಾಯಗಳ ಹಾಗೂ ಹಿಂದುಳಿದ ವರ್ಗಗಳ ಪಕ್ಷವಾಗಿದೆ. ಜೆಡಿಎಸ್ಗೆ 3-4 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶವಿದೆ. ಅವರಿಗೆ ಇನ್ನೂ ಮೈಸೂರು ಭಾಗದಲ್ಲಿ ಅಭ್ಯರ್ಥಿ ಸಿಕ್ಕಿಲ್ಲ, ಜೆಡಿಎಸ್ ಗೆಲ್ಲಲ್ಲ. ಗೆದ್ದರೆ ಎಲ್ಲೋ ಒಂದು ಕ್ಷೇತ್ರದಲ್ಲಿ. ಅವರು ಈ ಭಾಗದಲ್ಲಿ ಮತ ಕೀಳಲು ಯತ್ನಿಸುತ್ತಾರೆ. ಜೆಡಿಎಸ್ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ನಾವು ಎಂದೂ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ. ಬಿಜೆಪಿಯವರು ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ನಡೆಯುತ್ತಿದ್ದಾರೆ. ಮೋದಿ ಪ್ರಧಾನಿ ಆಗಬಾರದು. ಆರ್ಎಸ್ಎಸ್ನವರು ಹಿಟ್ಲರ್ ಮಾದರಿ ಆಡಳಿತದಲ್ಲಿ ನಂಬಿಕೆ ಇಟ್ಟಿರುವವರು. ಒಂದು ಸುಳ್ಳನ್ನು 100 ಬಾರಿ ಹೇಳಿ ಅದನ್ನೆ ನಿಜ ಎಂದು ನಿರೂಪಿಸುವರು ಎಂದು ಅವರು ಗೇಲಿ ಮಾಡಿದರು.
ಮೋದಿ ಮುಖ್ಯಮಂತ್ರಿ ಆದ ಮೇಲೆ ಗುಜರಾತ್ನಲ್ಲಿ ನರಮೇಧ ನಡೆಯಿತು. ಅವರನ್ನು ಪ್ರಧಾನಿಯನ್ನಾಗಿಸಬೇಕೆ? ಗುಜರಾತ್ ಬಜೆಟ್ 1.28 ಸಾವಿರ ಕೋಟಿ. ಅಲ್ಲಿನ ಸಾಲ 1.53 ಸಾವಿರ ಕೋಟಿ. ನಮ್ಮ ರಾಜ್ಯದ್ದು 1.38 ಸಾವಿರ ಕೋಟಿ ಬಜೆಟ್ ಆದರೆ 1.57 ಸಾವಿರ ಕೋಟಿ ಸಾಲ. ಇನ್ನು ನೀವೆ ತೀರ್ಮಾನಿಸಿ ಅವರು ಎಷ್ಟು ಅಭಿವೃದ್ಧಿ ಹೊಂದಿದ್ದಾರೆಂದು. ಬಿಜೆಪಿಯವರು ಹಿಂದೆ ರಾಮಮಂದಿರ ಕಟ್ಟುತ್ತೇವೆಂದು ಇಟ್ಟಿಗೆ, ಹಣ ಪಡೆದು ಇಟ್ಟಿಗೆಗಳನ್ನು ಎಸೆದು ಹಣವನ್ನು ಜೇಬಿಗೆ ಬಿಟ್ಟುಕೊಂಡರು. ಲೆಕ್ಕಪತ್ರ ನೀಡಲಿಲ್ಲ. ಈಗ ನರೇಂದ್ರ ಮೋದಿ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಟೀಕಿಸಿದರು.
ಜನರ ಬಳಿ ಹೋಗಲು ಮುಖ ಇಲ್ಲ; ರಾಜ್ಯ ಬಿಜೆಪಿಯವರಿಗೆ ಜನರ ಬಳಿ ಹೋಗಲು ಮುಖ ಇಲ್ಲ. ಹಾಲಪ್ಪ, ಕೃಷ್ಣಯ್ಯಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯನಾಯ್ಡು, ಜನಾರ್ಧನ ರೆಡ್ಡಿ, ಯಡಿಯೂರಪ್ಪ ಜೈಲಿಗೆ ಹೋದರು. ಅವರು ಜೈಲಿಗೆ ನೆಂಟಸ್ಥನ ಮಾಡಲು ಹೋದವರಲ್ಲ, ಲೂಟಿ ಮಾಡಿ ಹೋದವರು. ನರೇಂದ್ರಮೋದಿ ರಾಜ್ಯದಲ್ಲಿ ನಡೆದ ಸಮಾವೇಶದಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಕಟ್ಟಾ ಸುಬ್ರಹ್ಮಣ್ಯನಾಯ್ಡು ಅವರನ್ನು ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಭಾಷಣ ಮಾಡುತ್ತಾರೆ. ಅವರಿಗೆ ಮತ ನೀಡಬೇಕೆ? ಕಾಂಗ್ರೆಸ್ 65 ವರ್ಷಗಳ ಕಾಲ ಮಾಡದ್ದನ್ನು 5 ವರ್ಷದಲ್ಲಿ ಮಾಡಿ ತೋರಿಸುತ್ತೀವಿ ಎನ್ನುತ್ತಿದ್ದ ಯಡಿಯೂರಪ್ಪ, ಜೈಲಿಗೆ ಹೋಗುವ ಮೂಲಕ ಸಾಧನೆ ಮಾಡಿ ತೋರಿಸಿದ್ದಾರೆ. ವಿಧಾನ ಸಭೆಯಲ್ಲಿ ಬ್ಲೂಫಿಲಂ ನೋಡುವ ಬಿಜೆಪಿ ಶಾಸಕರದೂ ಒಂದು ಪಕ್ಷವೇ ಎಂದು ಲೇವಡಿ ಮಾಡಿದರು.
ದೇಶ ಇರುವವರೆಗೆ ಕಾಂಗ್ರೆಸ್ ಇರುತ್ತದೆ. ಭಾರತ ಎಂದರೆ ಕಾಂಗ್ರೆಸ್. ಕಾಂಗ್ರೆಸ್ ಎಂದರೆ ಭಾರತ. ಭಾರತವನ್ನು ಹಸಿವು ಮುಕ್ತ ರಾಷ್ಟ್ರವನ್ನಾಗಿಸುವುದೇ ಕಾಂಗ್ರೆಸ್ ಧ್ಯೇಯ ವಾಕ್ಯ. ದೇಶದ 80 ಕೋಟಿ ಜನರಿಗೆ ಆಹಾರ ಭದ್ರತಾ ಯೋಜನೆ ನೀಡಲಾಗಿದೆ ಎಂದು ಸರ್ಕಾರದ ಅಭಿವೃದ್ಧಿ ಕೆಲಸಗಳ ಬಗ್ಗೆ ಹಾಗೂ ಜಾರಿಗೆ ತರಲಾಗಿರುವ ಯೋಜನೆಗಳ ಮಾಹಿತಿ ನೀಡಿದರು. ಸಂಸದ ಎಚ್.ವಿಶ್ವನಾಥ್ ಅವರೇ ಅಭ್ಯರ್ಥಿಯಾಗಲಿದ್ದು, ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಶಾಸಕ ವೆಂಕಟೇಶ್ ಚಳಿಬಿಟ್ಟು ಓಡಾಡುತ್ತಿದ್ದಾರೆ
ಶಾಸಕ ಕೆ. ವೆಂಕಟೇಶ್ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಅಲ್ಪಮತಗಳಿಂದ ಗೆಲ್ಲಿಸಿದ್ದೀರಿ. ಇದು ಸರೀನಾ ಎಂದು ಪ್ರಶ್ನಿಸಿದ ಅವರು, ವೆಂಕಟೇಶ್ ಚಳಿ ಬಿಟ್ಟು ಓಡಾಡುತ್ತಿದ್ದಾರೆ. ಎಷ್ಟು ಕೆಲಸ ಮಾಡಿದ್ದಾರೆ, ಮತ ಏಕೆ ಇಷ್ಟು ಕಡಿಮೆ ನೀಡಿದ್ದೀರಿ ಎಂದು ಪ್ರಶ್ನಿಸಿದ್ದು ಸಭೆಯಲ್ಲಿ ನಗೆಗಡಲಿಗೆ ಕಾರಣವಾಯಿತು.
ಮಂತ್ರಿ ಮಾಡಿ; ಆಶ್ವಾಸನೆ ಕೊಡೋಲ್ಲ
ಕಳೆದ ವಿಧಾನಸಭಾ ಚುನಾವಣೆ ವೇಳೆ ಶಾಸಕ ಕೆ. ವೆಂಕಟೇಶ್ ಅವರನ್ನು ಕ್ಷೇತ್ರದ ಜನತೆ ಗೆಲ್ಲಿಸಿ ಕಳುಹಿಸಿದಲ್ಲಿ ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಭರವಸೆ ನೀಡಿದ ನೀವು, ಅದನ್ನು ಈಡೇರಿಸಿಲ್ಲ. ಶಾಸಕ ವೆಂಕಟೇಶ್ ಅವರನ್ನು ಮಂತ್ರಿ ಮಾಡಿ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ಚುನಾವಣೆ ಇರುವುದರಿಂದ ಯಾವುದೇ ಆಶ್ವಾಸನೆ ನೀಡಲು ಸಾಧ್ಯವಿಲ್ಲ. ಚುನಾವಣಾ ಆಯೋಗದವರು ಇರುತ್ತಾರೆ. ಈ ಬಗ್ಗೆ ಪ್ರಸ್ತಾಪಿಸುವ ಕಾಲ ಇದಲ್ಲ ಎಂದು ಮುಖ್ಯಮಂತ್ರಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ವೆಂಕಟೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತರೆ ರಾಜಕಾರಣಿಗಳಂತಲ್ಲ, ಹೇಳಿದ್ದನ್ನು ಮಾಡುವ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ರಾಜಕಾರಣಿಯಾಗಿದ್ದು, ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿರುವುದು ಈ ಭಾಗದ ಜನತೆಗೆ ಸಂತಸ ತಂದಿದೆ ಎಂದರು.
ಭಾಷಣದಲ್ಲಿ ತಮ್ಮ ಕ್ಷೇತ್ರಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸವಾಗಿಲ್ಲ ಎಂಬರ್ಥದಲ್ಲಿ ಮಾಡನಾಡಿದ ಶಾಸಕರು, ತಾಲೂಕಿನ ರಸ್ತೆಗಳು ತುಂಬಾ ಹಾಳಾಗಿದ್ದು, ರಸ್ತೆಗಳ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ. ತಾಲೂಕಿನ ಶೇ. 75ರಷ್ಟು ಕೆರೆಕಟ್ಟೆಗಳು ಬ್ತತಿದ್ದು, ಜಾನುವಾರಿಗೆ ಕುಡಿಯಲು ನೀರಿಲ್ಲ. ತಾಲೂಕಿನ ರಸ್ತೆ ಹಾಗೂ ನೀರಿನ ಸೌಲಭ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಸಹಕಾರ ಸಚಿವ ಎಚ್.ಎಸ್.ಮಹದೇವ್ಪ್ರಸಾದ್, ಸಂಸದ ಎಚ್. ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ಶಾಸಕರಾದ ಎಚ್.ಪಿ. ಮಂಜುನಾಥ್, ಎಂ.ಕೆ. ಸೋಮಶೇಖರ್, ಮಾಜಿ ಶಾಸಕ ಎಚ್.ಸಿ. ಬಸವರಾಜು ಮಾತನಾಡಿದರು.
ಜಿಪಂ ಸದಸ್ಯರಾದ ಮಂಜುಳಾರಾಜ್, ಕಾವೇರಿಶೇಖರ್, ತಾಪಂ ಸದಸ್ಯರಾದ ಬಿ.ವಿ. ಅನಿತಾ, ಸರಸ್ವತಿ, ಮೈಸೂರು ಮಹಾನಗರ ಪಾಲಿಕೆ ಸದಸ್ಯ ಪ್ರಶಾಂತ್ಗೌಡ, ಮುಖಂಡರಾದ ಬಸವೇಗೌಡ, ಗೋವಿಂದೇಗೌಡ, ಡಾ. ಬಿ.ಜೆ. ಬಸವರಾಜು, ಮಾನ್ಸೂನ್ಚಂದ್ರು ಇದ್ದರು.
ನಿದ್ದೆಗೆ ಜಾರಿದರು
ವೇದಿಕೆಯಲ್ಲಿ ಸಚಿವರು, ಸಂಸದರು, ಶಾಸಕರು ಮಾತನಾಡುವ ವೇಳೆ ಬಳಲಿದಂತೆ ಕಂಡುಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಳಿತಲ್ಲಿಯೇ ನಿದ್ದೆಗೆ ಜಾರಿದರು. ಈ ದೃಶ್ಯವನ್ನು ಸೆರೆ ಹಿಡಿಯಲು ಮುಂದಾದ ಮಾಧ್ಯಮದವರತ್ತ ಶಾಸಕ ಕೆ.ವೆಂಕಟೇಶ್ ನಿದ್ದೆ ಹೋಗಲಿ ಬಿಡಿ ಎಂಬರ್ಥದಲ್ಲಿ ಕೈಬೀಸಿದ ಸನ್ನಿವೇಶ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

