ರಾಧಾ ಮಲ್ಲಪ್ಪರ ಕಲಾ ವಸ್ತು ಸಂಗ್ರಹಾಲಯ ನೋಡ ಬನ್ನಿ...
ಮೈಸೂರಿನ ಬನ್ನಿಮಂಟಪದ ಹನುಮಂತನಗರ ಬಡಾವಣೆಯ ರಾಧಾ ಮಲ್ಲಪ್ಪ ಅವರ ಮನೆಯ ಮಹಡಿಯಲ್ಲಿ ಮೈದಳೆದಿರುವ ಕಲಾವಸ್ತು ಸಂಗ್ರಹಾಲಯ. ಇದು ಅವರ ಕರಕುಶಲ ಪ್ರತಿಭೆಯ ದ್ಯೋತಕವಾಗಿದೆ. ಸಂಗೀತ, ಸಾಹಿತ್ಯ, ವಿಜ್ಞಾನ, ಕಲೆ ಮುಂತಾದ ಪ್ರಕಾರಗಳಲ್ಲಿ ಹೆಸರುವಾಸಿಯಾಗಿರುವ, ಪಾರಂಪರಿಕ ನಗರ ಎಂಬ ಅಭಿಧಾನಕ್ಕೆ ಪಾತ್ರರಾಗಿರುವ ಮೈಸೂರಿನಲ್ಲಿ ರಾಧಾ ಮಲ್ಲಪ್ಪ ಅವರ ನಿವಾಸದ ಹೆಸರು ಕಲಾಶ್ರೀ ಇವರು ಬಾಲಭವನದಲ್ಲಿ ಕರಕುಶಲಕಲಾ ಶಿಕ್ಷಕಿಯಾಗಿ ಸುಮಾರು ಹತ್ತು ವರ್ಷಗಳು ಸೇವೆ ಸಲ್ಲಿಸಿರ್ದಾರೆ.
ರಾಧಾ ಮಲ್ಲಪ್ಪ ಅವರು ಸುಗಮ ಸಂಗೀತ ಕಲಾವಿದೆಯೂ ಹೌದು. ಅನೇಕ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮೈಸೂರು ದಸರಾ ಅರಮನೆ ಸಂಗೀತೋತ್ಸವ, ದಸರಾ ವಸ್ತುಪ್ರದರ್ಶನ, ಗಣಪತಿ ಉತ್ಸವಗಳು ಹೀಗೆ ಅನೇಕ ಕಡೆಗಳಲ್ಲಿ ತಮ್ಮ ಸಂಗೀತ ನೈಪುಣ್ಯ ಪ್ರದರ್ಶಿಸಿದ್ದಾರೆ. ನಗರದ ಹಿರಿಯ ಗಮಕಿ ವಿಲಾಸಕುಮಾರಿ ಶರ್ಮ ಅವರಿಂದ ಸುಗಮ ಸಂಗೀತಾಭ್ಯಾಸ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಸಾಗರಜನ್ಯ ವಸ್ತು ವಿಶೇಷಗಳು ಎನಿಸಿರುವ ವಿವಿಧ ಆಕಾರದ, ಗಾತ್ರದ, ಬಣ್ಣದ ಚಿಪ್ಪುಗಳನ್ನು ಸಂಗ್ರಹಿಸಿ, ನಾನಾ ಬಗೆಯ ಶಂಕುಗಳನ್ನು ಸಂಗ್ರಹಿಸಿ, ಅವುಗಳ ಆಂತರಿಕ ಹಾಗೂ ಬಾಹ್ಯ ಸೌಂದರ್ಯಕ್ಕೆ ವಿನೂತನ ಆಕಾರ ನೀಡಿ ಅವನ್ನು ನಾವು ಇಂದು ಕಾಣುವ ಹಲವಾರು ಭೌತವೈಶಿಷ್ಟಗಳಾಗಿ ರೂಪಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ನಿರ್ಮಿಸಿರುವ 12 ಅಡಿ ವಿಸ್ತೀರ್ಣವುಳ್ಳ ಶಿವಾಲಯ ಹಾಗೂ 10 ಅಡಿ ವಿಸ್ತೀರ್ಣವುಳ್ಳ ತಾಜ್ಮಹಲ್ ಅತಿದೊಡ್ಡ ಕಲಾಕೃತಿಗಳಾಗಿವೆ. ರಾಧಾ ಮಲ್ಲಪ್ಪ ಅವರ ಕರಕುಶಲ ಪರಿಪೂರ್ಣತೆಯನ್ನು ತಿಳಿದುಕೊಳ್ಳಬೇಕಾದರೆ ಸಾಕ್ಷಾತ್ ಅವರ ಮನೆಯ ಮಹಡಿಯಲ್ಲಿರುವ ಕಲಾಕೃತಿಗಳ ನೈಜದರ್ಶನ ಮಾಡಬೇಕು. ವಿವಿಧ ಬಗೆಯ ದೈವದ ಕಲಾಕೃತಿಗಳು, ದೀಪಗಳು, ದೋಣಿಗಳು, ನಾನಾ ಗಾತ್ರದ ಚಿಪ್ಪುಗಳು, ಶಂಖುಗಳು, ತೂಗು ಕಲಾಕೃತಿಗಳು, ಬೇರೆ ಬೇರೆ ಗಿಡಗಳ ಬೀಜ, ಕಾಯಿ ಎಲೆಗಳನ್ನು ಬಳಸಿ ನಿರ್ಮಿಸಿರುವ ಕಲಾವಸ್ತುಗಳು, ಚಿಪ್ಪು ಮೀನುಗಳು ಹೀಗೆ ಈ ವಿವರಗಳ ಪಟ್ಟಿಯನ್ನು ಬೆಳೆಸಿಕೊಂಡು ಹೋಗಬಹುದು.
ರಾಧಾ ಮಲ್ಲಪ್ಪ ಅವರ ಕಲಾಶ್ರೀ ಗೃಹಕ್ಕೆ ಅನೇಕ ಕಲಾಭಿಮಾನಿಗಳು, ಕಲಾ ರಸಿಕರು, ಗಣ್ಯಾತಿಗಣ್ಯರು, ಸಂಘ ಸಂಸ್ಥೆಗಳು, ವಿವಿಧ ಕಲಾಶಾಲಾ ವಿದ್ಯಾರ್ಥಿಗಳು ಭೇಟಿ ನೀಡಿದ್ದಾರೆ. ತಮ್ಮ ಮನ-ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇವರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 2011- ಕಿತ್ತೂರುರಾಣಿ ಚನ್ನಮ್ಮ ಕರ್ನಾಟಕ ರಾಜ್ಯಪ್ರಶಸ್ತಿ, 2002- ಸಾಧನೆಯ ಶಿಖರದತ್ತ ವನಿತೆ ದಸರಾ ವಿಶೇಷ ಪ್ರಶಸ್ತಿ, 2003- ಶಿಲ್ಪಾಚಾರ್ಯ ನೇತಾರೆ ಕರ್ನಾಟಕ ರಾಜ್ಯ ಪ್ರಶಸ್ತಿ, ಮೈಸೂರು ರೋಟರಿ ರಾಜ್ಯೋತ್ಸವ ಪ್ರಶಸ್ತಿ, ನೆಹರು ಯುವ ಕೇಂದ್ರ ಮತ್ತು ಕ್ರೀಡಾ ಇಲಾಖೆಯ ಶ್ರೇಷ್ಠ ಯುವತಿ ಪಶಸ್ತಿ, 2006- ಶ್ರೀ ವಿಶ್ವೇಶ್ವರಯ್ಯ ಪ್ರಶಸ್ತಿ, 2008- ಅಮೋಘ ವರ್ಷ ನೃಪತುಂಗ ಪ್ರಶಸ್ತಿ, ಭಾರತ ಜ್ಯೋತಿರಾಷ್ಟ್ರ ಪ್ರಶಸ್ತಿ, ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಕಾಯಕರತ್ನ ಪ್ರಶಸ್ತಿ, ಯಾದವಗಿರಿ ಲೇಡೀಸ್ ಕ್ಲಬ್ ಪುರಸ್ಕಾರ, 2009- ಹೊಯ್ಸಳ ಪ್ರಶಸ್ತಿ, 2010- ಕಲಾ ಸರಸ್ವತಿ ಪ್ರಶಸ್ತಿ, ವಿಪ್ರ ಮಹಿಳಾ ಸಂಘದ ಪುರಸ್ಕಾರಗಳು, ಶ್ರೀ ಶಾರದಾ ಮಹಿಳಾ ಸಮಾಜದ ಪುರಸ್ಕಾರ ಹಾಗೂ ಮಹಾಲಕ್ಷ್ಮಿ ಸಮಾಜದ ಪುರಸ್ಕಾರ ಹೀಗೆ ಹಲವಾರು ಪ್ರಶಸ್ತಿಗಳ ಸರಮಾಲೆ ಇವರ ಕೊರಳನ್ನು ಅಲಂಕರಿಸಿವೆ. 2013- ಕರ್ನಾಟಕ ಜನಪರ ಶಕ್ತಿ ವೇದಿಕೆ ವಾರ್ಷಿಕೋತ್ಸವದಲ್ಲಿ ಜನಪರ ಶಿಲ್ಪಿ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
ವೈದ್ಯ ಚಿಕಿತ್ಸೆ: ಕಲಾಸರಸ್ವತಿಯ ಸೇವೆಯನ್ನು ತನ್ನ ಮನದಾಳದ ಇಚ್ಛೆಯಿಂದ ಮಾಡುತ್ತಾ ಬಂದಿದ್ದರೂ ಸಾಮಾಜಿಕ ಕಳಕಳಿಯನ್ನು ಸಮುದಾಯ ಪ್ರಜ್ಞೆಯನ್ನು ಅರಿತೆ ರಾಧಾ ಮಲ್ಲಪ್ಪ ಅವರು ತಮ್ಮ ಸ್ವಂತ ಆರೋಗ್ಯವನ್ನು ಕಾಪಾಡಿಕೊಳ್ಳುತ್ತ ಕೇರಳದ ಕೊಟ್ಟಾಯಮ್ ವೈದ್ಯ ಗುರು ರಾಘವನ್ ಅವರ ಬಳಿಯಲ್ಲಿ ಸುಮಾರು 8 ತಿಂಗಳು ಆಯುರ್ವೇದದಲ್ಲಿ ತರಬೇತಿ ಪಡೆದು ತಮ್ಮ ಕಾಯಿಲೆಗಳಿಗೆ ಆಯುರ್ವೇದ ಪದ್ದತಿಯ ಚಿಕಿತ್ಸೆಯನ್ನೂ ಪರಿಹಾರೋಪಾಯ ಮಾರ್ಗದರ್ಶನವನ್ನೂ ನೀಡುತ್ತಾ ಬಂದಿದ್ದಾರೆ. ಸಾವಿರಾರು ಮಂದಿ ಇವರ ಕೈಗುಣದ ಪ್ರಯೋಜನ ಪಡೆದಿದ್ದಾರೆ. ಗುಣ ಹೊಂದಿದ್ದಾರೆ. ಒಳಿತನ್ನು ಕಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

