ಮೈಸೂರು

ಶಿರಡಿ ಪ್ರವಾಸಕ್ಕೆ ಹೋಗಿದ್ದ ಮೈಸೂರಿನ ಮೂವರು ಸಾವು

Published On :

ಕ.ಪ್ರ. ವಾರ್ತೆ ್ಣ ಮೈಸೂರು ್ಣ ಮಾ.9
ಪೆಟ್ರೋಲ್ ಟ್ಯಾಂಕರ್‌ಗೆ ಕಾರು ಡಿಕ್ಕಿಯಾಗಿ ಮೈಸೂರಿನ ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರ ರಾಜ್ಯದ ಪುಣೆ ಸಮೀಪದ ಶಿರೂರ್ ಬಳಿ ಭಾನುವಾರ ಬೆಳಗಿನ ಜಾವ ನಡೆದಿದೆ.
ಮೈಸೂರಿನ ವಿದ್ಯಾನಗರದ ಗುರುರಾಜ ಕಾಲೋನಿ ನಿವಾಸಿ ವಿಶ್ವನಾಥ್(25), ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಮಾಂಬಳ್ಳಿ ನಿವಾಸಿ ಮನೋಜ್(28) ಹಾಗೂ ನಂಜನಗೂಡು ಪಟ್ಟಣದ ಅಭಿನಂದನ್(27) ಮೃತಪಟ್ಟವರು. ಇವರೊಂದಿಗಿದ್ದ ನಜರ್‌ಬಾದ್‌ನ ರಾಜು ಮತ್ತು ವೆಂಕಟೇಶ್ ಎಂಬುವರಿಗೆ ತೀವ್ರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ನೇಹಿತರ ಶಿರಡಿ ಪ್ರವಾಸ: ವಿಶ್ವನಾಥ್, ಮನೋಜ್, ಅಭಿನಂದನ್, ರಾಜು, ವೆಂಕಟೇಶ್, ಹರ್ಷ, ಭರತ್ ಮತ್ತು ಶ್ರೀನಿವಾಸ್ ಎಂಬವರು ಹಲವು ವರ್ಷಗಳ ಸ್ನೇಹಿತರು. ಈ 8 ಜನರ ತಂಡವು ಎರಡು ಸ್ವಿಫ್ಟ್ ಕಾರಿನಲ್ಲಿ ಗುರುವಾರ ಮೈಸೂರಿನಿಂದ ಶಿರಡಿ ಪ್ರವಾಸಕ್ಕೆ ತೆರಳಿದ್ದಾರೆ. ಶಿರಡಿ ಪ್ರವಾಸ ಮುಗಿಸಿ ವಾಪಸ್ ಬರುತ್ತಿದ್ದಾಗ ಒಂದು ಕಾರಿನಲ್ಲಿ ವಿಶ್ವನಾಥ್, ಮನೋಜ್, ಅಭಿನಂದನ್, ರಾಜು ಮತ್ತು ವೆಂಕಟೇಶ್ ಪ್ರಯಾಣಿಸುತ್ತಿದ್ದರು. ಮತ್ತೊಂದು ಕಾರಿನಲ್ಲಿ ಹರ್ಷ, ಭರತ್ ಮತ್ತು ಶ್ರೀನಿವಾಸ್ ಪ್ರಯಾಣಿಸುತ್ತಿದ್ದರು.
ಪುಣೆಗೆ 50 ಕಿ.ಮೀ. ದೂರದಲ್ಲಿರುವ ಶಿರೂರ್ ಬಳಿ ಬರುತ್ತಿದ್ದಾಗ ವಿಶ್ವನಾಥ್ ಸೇರಿದಂತೆ ಐವರಿದ್ದ ಕಾರು ಯು ಟರ್ನ್ ತೆಗೆದುಕೊಳ್ಳುತ್ತಿದ್ದ ಪೆಟ್ರೋಲ್ ಟ್ಯಾಂಕರ್‌ಗೆ ಡಿಕ್ಕಿಯಾಗಿದೆ. ಈ ವೇಳೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ರಸ್ತೆಯಲ್ಲಿ ಬಿದ್ದಿದ ಮೊಬೈಲ್‌ನಿಂದ ವಿಶ್ವನಾಥ ತಮ್ಮ ಹರ್ಷ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಪಘಾತ ಸ್ಥಳದಿಂದ 30 ಕಿ.ಮೀ. ಹಿಂದೆ ಬರುತ್ತಿದ್ದ ಹರ್ಷ ಮತ್ತಿಬ್ಬರು ಸ್ಥಳಕ್ಕೆ ಧಾವಿಸಿ, ಮೃತರು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಅಪಘಾತದಲ್ಲಿ ಮೂವರು ಮೃತಪಟ್ಟಿರುವ ವಿಚಾರವನ್ನು ತಮ್ಮ ಕುಟುಂಬದವರು ಮತ್ತು ಸ್ನೇಹಿತರಿಗೆ ತಿಳಿಸಿದ್ದಾರೆ.

ಈಜಲು ಹೋಗಿ ಇಬ್ಬರು ನದಿಪಾಲು
ಬೆಳ್ತಂಗಡಿ: ಸ್ನಾನ ಮಾಡಲು ನದಿಗಿಳಿದ ವಿದ್ಯಾರ್ಥಿಗಳಿಬ್ಬರು ಮುಳುಗಿ ಮೃತಪಟ್ಟ ಘಟನೆ ಉಜಿರೆ ಸಮೀಪದ ನಿಡ್ಗಲ್ ಎಂಬಲ್ಲಿ ಭಾನುವಾರ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೂದ್ವಳ್ಳಿಯ ಮಾವಿನಹಳ್ಳಿ ನಿವಾಸಿ ಎಂ.ಪಿ. ನಟರಾಜ್ ಎಂಬವರ ಪುತ್ರ ಎಂ.ಎನ್. ಆದಿತ್ಯ (15) ಹಾಗೂ ಮೂಡಿಗೆರೆ ನಿಡುವಾಳೆ ಗ್ರಾಮದ ಎನ್.ವಿ. ಸುರೇಶ್ ಎಂಬವರ ಪುತ್ರ ಸೂರಜ್ (15) ಮೃತರು. ಇವರಿಬ್ಬರೂ ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು.
ಖಾಸಗಿ ಮೆಸ್ ಒಂದರಲ್ಲಿ ವಾಸ್ತವ್ಯವಿದ್ದ ಇವರನ್ನು ಹಾಗೂ ಉಳಿದ ವಿದ್ಯಾರ್ಥಿಗಳನ್ನು ಶನಿವಾರ ಓದಿಕೊಳ್ಳಲು ಸೂಚಿಸಲಾಗಿತ್ತು. ಹಾಜರಾತಿ ತೆಗೆಯುವ ವೇಳೆ ಇವರಿಬ್ಬರು ಇಲ್ಲದ್ದು ಗಮನಕ್ಕೆ ಬಂತು. ಕೂಡಲೇ ಹುಡುಕಾಟ ನಡೆಸಲಾಯಿತಲ್ಲದೆ ವಿದ್ಯಾರ್ಥಿಗಳ ಹೆತ್ತವರಿಗೆ ಮಾಹಿತಿ ನೀಡಲಾಯಿತು.  ಭಾನುವಾರ ಬೆಳಗ್ಗೆ ನಿಡ್ಗಲ್ ಬಳಿ ಹರಿಯುತ್ತಿರುವ ನೇತ್ರಾವತಿ ಹೊಳೆಯಲ್ಲಿ ಶವವೊಂದು ತೇಲುತ್ತಿರುವುದು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿದಾಗ ಸೂರಜ್‌ನ ಶವವೆಂದು ತಿಳಿದು, ಇನ್ನೊಬ್ಬ ಬಾಲಕನಿಗಾಗಿ ಹುಡುಕಾಟ ನಡೆಸಲಾಯಿತಾದರೂ ಪ್ರಯೋಜನವಾಗಲಿಲ್ಲ. ನಂತರ ಹೊತ್ತೇರುತ್ತಿದ್ದಂತೆ ಆದಿತ್ಯನ ಶವವೂ ನದಿಯಲ್ಲಿ ತೇಲುತ್ತಿರುವುದು ಕಂಡು ಬಂತು. ನದಿ ದಡದಲ್ಲಿ ಬಾಲಕರಿಬ್ಬರ ಬಟ್ಟೆಬರೆಗಳೂ ಇದ್ದವು.
ಆಳವಾದ ನೀರಿದ್ದ ಕಡೆಯೇ ಈಜಲು ಗೊತ್ತಿಲ್ಲದ ಬಾಲಕರು ಇಳಿದಿದ್ದರಿಂದ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಕಲುಷಿತ ಆಹಾರ ಸೇವನೆ; ವಿದ್ಯಾರ್ಥಿನಿಯರು ಅಸ್ವಸ್ಥ
ಬೆಳ್ತಂಗಡಿ: ಕಲುಷಿತ ಆಹಾರ ಸೇವಿಸಿ 26 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ನಡೆದಿದೆ. ಭಾನುವಾರ ಬೆಳಿಗ್ಗೆ 9.30ರ ಸುಮಾರಿಗೆ ವಿದ್ಯಾರ್ಥಿನಿಯರು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ ರಾತ್ರಿಯ ಊಟಕ್ಕೆ ಬಾಲಕಿಯರು ಜಿಲೇಬಿ ಸೇವಿಸಿದ್ದರು. ರಾತ್ರಿಯೇ 5 ಮಂದಿಗೆ ಜ್ವರ, ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿತ್ತು. ಆದರೆ ಬೆಳಗ್ಗೆ ಗಂಜಿ-ಚಟ್ನಿ ಸ್ವೀಕರಿಸಿದ ಇನ್ನಿತರ ವಿದ್ಯಾರ್ಥಿಯರು ಅಸ್ವಸ್ಥಗೊಂಡರು. ಪ್ರಥಮ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಕೊನೆಗೆ ಎಲ್ಲ ವಿದ್ಯಾರ್ಥಿನಿಯರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಅಸ್ವಸ್ಥಗೊಳ್ಳಲು ಕಾರಣವಾದ ಆಹಾರವನ್ನು ಪರೀಕ್ಷೆಗಾಗಿ ಕಳುಹಿಸಲಾಗುವುದು ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.