ಮೈಸೂರು

ವಿಶ್ವ ಜಲ ದಿನಾಚರಣೆ ಅಂಗವಾಗಿ ಬೈಕ್ ರ್ಯಾಲಿ

Published On :

ಮೈಸೂರು: ಸರ್ ಎಂ. ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳ ಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೈಕ್ ರ್ಯಾಲಿ ನಡೆಸಿದರು.
ವಿಶ್ವ ಜಲ ಹಾಗೂ ಕೊಳಾಯಿ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಮಳೆ ನೀರು ಸಂಗ್ರಹಣೆ ಮತ್ತು ಒಳ ಚರಂಡಿ ಶುದ್ಧೀಕರಣ ಜಾಗೃತಿಗಾಗಿ ಆಯೋಜಿಸಿದ್ದ ಈ ಬೈಕ್ ರ್ಯಾಲಿಯು ಕುವೆಂಪುನಗರದ ಶಾಂತಿಸಾಗರ್ ಬಳಿಯಿಂದ ಆರಂಭಗೊಂಡಿತು.
ಸಂಘದ ಪದಾಧಿಕಾರಿಗಳು ಮಳೆ ನೀರನ್ನು ಸದುಪಯೋಗಪಡಿಸಿಕೊಳ್ಳಿ, ಬಳಸದಿದ್ದಾಗ ನಲ್ಲಿಯನ್ನು ನಿಲ್ಲಿಸಿ, ನೀರು ಉಳಿಸಿ ಮುಂತಾದ ಘೋಷಣೆ ಒಳಗೊಂಡ ಫ್ಲೆಕ್ಸ್‌ಗಳನ್ನು ಹಿಡಿದು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದರು. ಬೈಕ್ ರ್ಯಾಲಿಯು ಕುವೆಂಪುನಗರ ಕಾಂಪ್ಲೆಕ್ಸ್ ಬಳಿಯಿಂದ ಆರಂಭಗೊಂಡು, ಅಕ್ಷಯ ಭಂಡಾರ, ಅಶೋಕವೃತ್ತ, ರಾಮಸ್ವಾಮಿ ವೃತ್ತ, ಎಂಡಿಎ ಕಚೇರಿ, ರೇಲ್ವೆ ನಿಲ್ದಾಣ, ಕೇಂದ್ರ ಅಂಚೆ ಕಚೇರಿ, ಅಶೋಕ ರಸ್ತೆಯ ಮೂಲಕ ಸಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಅಂತ್ಯಗೊಂಡಿತು.
ಈ ರ್ಯಾಲಿಯಲ್ಲಿ ಸಂಘದ ಅಧ್ಯಕ್ಷ ಎನ್.ಚಂದ್ರು, ಕಾರ್ಯದರ್ಶಿ ಬಲ್ಲೇಗೌಡ, ಖಜಾಂಚಿ ಟಿ. ಗೋವಿಂದೇಗೌಡ ಇದ್ದರು.
'ಅಡ್ಡ ದಾರಿಯಲ್ಲಿ ಗುರಿ ತಲುಪಿದರೆ ತೃಪ್ತಿ ಸಿಗಲ್ಲ'
ಮೈಸೂರು: ಅಡ್ಡದಾರಿಯಲ್ಲಿ ಅನೈತಿಕ ಮೌಲ್ಯಗಳಿಂದ ಗುರಿ ತಲುಪಿದರೂ ಅವು ಯಶಸ್ವಿ ಮತ್ತು ತೃಪ್ತಿ ತಂದುಕೊಡಲಾರದು ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಅವರು ತಿಳಿಸಿದರು.
ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಸತ್ಪ್ರಜಾ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರೂ ಸರಾಸರಿ ಜೀವನಕ್ಕಿಂತ ಅರ್ಥಪೂರ್ಣ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು. ಕನಸುಗಳನ್ನು ಸಾಕಾರ ಮಾಡಿಕೊಳ್ಳುವ ಗುರಿಗಳನ್ನು ಆಯ್ಕೆ ಮಾಡಿ ನೇರ ದಾರಿಯಲ್ಲಿ ಶ್ರಮದಿಂದ ಯಶಸ್ವಿ ಕಾಣಬೇಕು ಎಂದು ಸಲಹೆ ನೀಡಿದರು. ಸತ್ಪ್ರಜೆಗಳು ಸಮಾಜದಲ್ಲಿ ಅವರದೇ ಆದ ಸೂಕ್ತ ಪಾತ್ರಗಳಲ್ಲಿ ಶ್ರಮಿಸಬೇಕು. ಲೋಕಸೇವಾ ಆಯೋಗವು 26 ಕೇಂದ್ರ ನಾಗರೀಕ ಸೇವೆಗಳಿಗೆ ವರ್ಷಕ್ಕೊಮ್ಮೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಇದರಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಭಾಗವಹಿಸಬೇಕು. ನಮ್ಮ ಸಮಾಜ, ಕಾನೂನು, ಪರಿಸರವನ್ನು ಕಾಪಾಡಿಕೊಳ್ಳುವುದರಲ್ಲೂ ಸಹ ಎಲ್ಲರೂ ಭಾಗವಹಿಸಬೇಕು ಎಂದು ಕರೆ ನೀಡಿದರು. ಕಾಲೇಜು ಪ್ರಾಂಶುಪಾಲ ಎಸ್. ಉದಯಶಂಕರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಆರ್. ಮಂಜುಳ ಸ್ವಾಗತಿಸಿದರು. ಡಾ.ಬಾಲಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎಸ್. ದಿಲೀಪ್ ನಿರೂಪಿಸಿದರು. ರಂಜಿನಿ ವಂದಿಸಿದರು.
ವಿವಿಧ ಶಿಬಿರಗಳಿಗೆ ಅರ್ಜಿ ಆಹ್ವಾನ
ಮೈಸೂರು: ವಾಣಿವಿಲಾಸ ರಸ್ತೆಯಲ್ಲಿರುವ ಪ್ರೀತಿ ಕ್ಯಾನ್ಸರ್ ಸೆಂಟರ್‌ನಲ್ಲಿ ಮಾ.13 ರಂದು ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದ್ದು, ಒಂದು ತಿಂಗಳಿಗೂ ಮೇಲ್ಪಟ್ಟು ವಾಸಿಯಾಗದ ಗಾಯ, ರಕ್ತಸ್ರಾವ, ಊತ, ಗಡಸುತನ, ನುಂಗುವಾಗಿನ ತೊಂದರೆ ಅನುಭವಿಸುತ್ತಿರುವವರು ಶಿಬಿರದಲ್ಲಿ ಭಾಗವಹಿಸಬಹುದು. ದೂ. 0821- 4259259 ಸಂಪರ್ಕಿಸಬಹುದು.
ರಾಮಸ್ವಾಮಿ ವೃತ್ತದ ಬಳಿ ಇರುವ ಮೈಸೂರು ಸ್ಕೂಲ್ ಆಫ್ ಬ್ಯಾಂಕಿಂಗ್‌ನಲ್ಲಿ ಐಬಿಪಿಎಸ್ ಮತ್ತು ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗೆ ತರಬೇತಿ ನೀಡಲಿದ್ದು, ಈ ಅವಧಿಯಲ್ಲಿ ತಾರ್ಕಿಕ ಗಣಿತ, ಅರ್ಥಶಾಸ್ತ್ರ, ಮಾರ್ಕೆಟಿಂಗ್, ಕಂಪ್ಯೂಟರ್, ಇಂಗ್ಲಿಷ್ ಮತ್ತು ಸಾಮಾನ್ಯ ಜ್ಞಾನ, ಮಾನವಿಕ ವಿಜ್ಞಾನ ವಿಷಯಗಳ ಬಗ್ಗೆ ಬೋಧಿಸಲಾಗುವುದು. ಆಸಕ್ತರು ಮೊ. 81231 83649 ಸಂಪರ್ಕಿಸಬಹುದು.
ಜ್ಞಾನಬುತ್ತಿ ಸಂಸ್ಥೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ದೈಹಿಕ ಮತ್ತು ಲಿಖಿತ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಿದ್ದು, ಆಸಕ್ತರು ಮಾ.17 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೊ. 94481 17455 ಸಂಪರ್ಕಿಸಬಹುದು. ಜಗನ್ಮೋಹನ ಅರಮನೆ ಬಳಿ ಇರುವ ನೇತಾಜಿ ಎಜುಕೇಷನ್ ಫೌಂಡೇಷನ್‌ನಲ್ಲಿ ಪೊಲೀಸ್ ಪೇದೆ, ಎಸ್‌ಐ ನೇಮಕಾತಿ ಹುದ್ದೆಗಳ ಲಿಖಿತ ಮತ್ತು ದೈಹಿಕ ಪರೀಕ್ಷೆಗೆ ತರಬೇತಿ ನೀಡಲಿದ್ದು, ಮೊ. 87479 73808 ಸಂಪರ್ಕಿಸಬಹುದು. ಚಾಮರಾಜ ಮೊಹಲ್ಲಾದ ನವೋದಯ ಫೌಂಡೇಷನ್‌ನಲ್ಲಿ ಪಿಎಸ್‌ಐ, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಿದ್ದು, ಮೊ. 96860 72224 ಸಂಪರ್ಕಿಸಬಹುದು.
ಟಿ.ಕೆ. ಲೇಔಟ್‌ನಲ್ಲಿರುವ ಯೂನಿಕಾನ್ ಕಂಪ್ಯೂಟರ್ ಸೆಂಟರ್‌ನಲ್ಲಿ ಎನ್‌ಎಸ್‌ಡಿಸಿ ಸ್ಟಾರ್ ಕಂಪ್ಯೂಟರ್ ಉಚಿತ ತರಬೇತಿ ನೀಡಲಿದ್ದು, ಕೇಂದ್ರ ಸರ್ಕಾರದ ಸರ್ಟಿಫಿಕೇಟ್ ಮತ್ತು ಸಹಾಯಧನದ ಅನುಕೂಲತೆ ಒದಗಿಸಲಾಗುವುದು. ಮೊ. 90350 40340 ಸಂಪರ್ಕಿಸಬಹುದು.
ಅಂಬೇಡ್ಕರ್ ಸಮಾಜವಾದಿ ಪಕ್ಷ ಸ್ಪರ್ಧೆ
ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಡಾ.ಅಂಬೇಡ್ಕರ್ ಸಮಾಜವಾದಿ ಡೆಮೋಕ್ರಾಟಿಕ್ ಪಾರ್ಟಿಯು ಸ್ಪರ್ಧಿಸಲಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಸಿ.ಎಂ. ನಾಗರಾಜ್ ತಿಳಿಸಿದರು.
ಚಾಮರಾಜನಗರ ಮತ್ತು ಕೋಲಾರ ಲೋಕಸಭಾ ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಲಾಗಿದ್ದು, ರಾಜ್ಯದ ಉಳಿದ ಲೋಕಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಲು ಬಯಸುವವರು ಪಕ್ಷವನ್ನು ಸಂಪರ್ಕಿಸಬಹುದಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕ ಕಳೆದಿದ್ದರೂ, ಬಡತನ ಹಾಗೂ ಅಸಮಾನತೆ ಇನ್ನೂ ನಿವಾರಣೆಯಾಗಿಲ್ಲ. ಯಾವುದೇ ರಾಜಕೀಯ ಪಕ್ಷಗಳು ಬಡತನ ಮತ್ತು ಅಸಮಾನತೆ ನಿವಾರಣೆಗೆ ಹೆಚ್ಚಿನ ಮಹತ್ವ ನೀಡಿಲ್ಲ. ಈ ಕಾರಣದಿಂದಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ನಿರ್ಧರಿಸಿದೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯ ಹಾಗೂ ಸವಲತ್ತುಗಳನ್ನು ಸಮಾಜದ ಪ್ರತಿಯೊಬ್ಬ ನಾಗರಿಕರಿಗೂ ತಲುಪಿಸಬೇಕು ಎಂಬುದು ಪಕ್ಷದ ಉದ್ದೇಶವಾಗಿದೆ. ಭಾರತೀಯ ಚುನಾವಣಾ ಆಯೋಗವು 2013 ರಲ್ಲಿ ಪಕ್ಷಕ್ಕೆ ಮಾನ್ಯತೆ ನೀಡಿದೆ. ಬೇರೆ ಪಕ್ಷಗಳಿಂದ ಬರುವ ಮುಖಂಡರು ಹಾಗೂ ಎಲ್ಲಾ ಜನಾಂಗದ ಪ್ರತಿನಿಧಿಗಳು ಪಕ್ಷಕ್ಕೆ ಸೇರಬಹುದಾಗಿದೆ. ಪಕ್ಷದ ಸದಸ್ಯತ್ವ ಪಡೆಯುವವರು ನಾಚನಹಳ್ಳಿಪಾಳ್ಯದಲ್ಲಿರುವ ಪಕ್ಷ ಕಚೇರಿ ಸಂಪರ್ಕಿಸಬಹುದು ಎಂದು ತಿಳಿಸಿದರು. ಮುಖಂಡರಾದ ಗೋಪಾಲಸ್ವಾಮಿ, ಕಾತವರಾಯ, ಚಿನ್ನಸ್ವಾಮಿ ಹಾಗೂ ಹಂಸ ಇದ್ದರು.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಮೈಸೂರು: ಬೆಂಗಳೂರಿನ ಶ್ರೀ ಮಾರೇಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ಕೈಂಕರ್ಯ ಸಭಾವು 2012-13ನೇ ಸಾಲಿನಲ್ಲಿ ಅತ್ಯುನ್ನತ ಅಂಕ ಗಳಿಸಿದ ಅರ್ಹ ಶ್ರೀವೈಷ್ಣವ ಅಭ್ಯರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಅಂಗೀಕರಿಸಿದ ಯಾವುದೇ ವಿವಿಯಿಂದ ಪದವಿ, ಡಿಪ್ಲೊಮಾ, ವೈದ್ಯಕೀಯ ಅಥವಾ ತಾಂತ್ರಿಕ ಪದವಿ ಪಡೆದಿರುವ ಅಭ್ಯರ್ಥಿ ಅರ್ಜಿ ಸಲ್ಲಿಸಲು ಅರ್ಹತೆ ಉಳ್ಳವರಾಗಿದ್ದಾರೆ. ಆಸಕ್ತರು ಅಧ್ಯಕ್ಷರು, ಶ್ರೀ ಮಾರೇಹಳ್ಳಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಕೈಂಕರ್ಯ ಸಭಾ, ನಂ.29 (ಹಳೇ ನಂ. 15), 7ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಮಲ್ಲೇಶ್ವರಂ, ಬೆಂಗಳೂರು- 3. ಅಧ್ಯಕ್ಷರು, ಶ್ರೀ ಮಾರೇಹಳ್ಳಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಕೈಂಕರ್ಯ ಸಭಾ, ನಂ.2878, ನ್ಯಾಯಾಲಯ ಹಿಂಭಾಗ, ಪಂಪಾಪತಿ ರಸ್ತೆ, ಸರಸ್ವತಿಪುರಂ, ಮೈಸೂರು- 9 ಇಲ್ಲಿಗೆ ಸಲ್ಲಿಸಬಹುದು. ಮೊ. 94488 71127, 77609 68463 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.